ವರದಿ : ಲಿಂಗರಾಜು ಕೋರಾ

 ಬೆಂಗಳೂರು (ಏ.02): ‘1ರಿಂದ 5ನೇ ತರಗತಿ ಮಕ್ಕಳಿಗೆ ಪರೀಕ್ಷೆ ಇಲ್ಲದೆ ಪಾಸು ಮಾಡುವುದು, 6ರಿಂದ 8ನೇ ತರಗತಿ ಮಕ್ಕಳಿಗೆ ಲಿಖಿತ ಪರೀಕ್ಷೆ ಬದಲು ಮೌಲ್ಯಾಂಕನ (ಅಸೆಸ್ಮೆಂಟ್‌) ಮಾದರಿಯಲ್ಲಿ ಮೌಲ್ಯಮಾಪನ ನಡೆಸುವುದು, 9ನೇ ತರಗತಿ ಮಕ್ಕಳಿಗೂ ಮೌಲ್ಯಾಂಕನ ಇಲ್ಲವೇ ಬಹು ಉತ್ತರ ಆಯ್ಕೆ ಮಾದರಿ (ಮಲ್ಟಿಪಲ್‌ ಚಾಯ್ಸ್) ಪರೀಕ್ಷೆ ನಡೆಸುವುದು.’

ಕೋವಿಡ್‌ 2ನೇ ಅಲೆ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಸರ್ಕಾರಿ ಶಾಲೆಗಳಲ್ಲಿನ 1ರಿಂದ 9ನೇ ತರಗತಿ ಮಕ್ಕಳ ಪರೀಕ್ಷಾ ಪದ್ಧತಿಯಲ್ಲಿ ಈ ಮೂರು ರೀತಿಯ ಪರಿಷ್ಕರಣೆಗೆ ಶಿಕ್ಷಣ ಇಲಾಖೆ ಗಂಭೀರ ಚಿಂತನೆ ನಡೆಸಿದೆ. ಈ ಬಗ್ಗೆ ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಂಡು ಮುಂದಿನ ಸೋಮವಾರ ಅಥವಾ ನಂತರದ ಒಂದೆರಡು ದಿನಗಳಲ್ಲಿ ಅಧಿಕೃತ ಆದೇಶ ಮಾಡುವ ಸಾಧ್ಯತೆ ಇದೆ ಎಂದು ಇಲಾಖೆಯ ಉನ್ನತ ಮೂಲಗಳು  ಖಚಿತಪಡಿಸಿವೆ.

ಈಗಾಗಲೇ ರಾಜ್ಯದ ಬಹುತೇಕ ಖಾಸಗಿ ಶಾಲೆಗಳು 1ರಿಂದ 9ನೇ ತರಗತಿವರೆಗಿನ ಮಕ್ಕಳಿಗೆ ಆನ್‌ಲೈನ್‌ನಲ್ಲೇ ಪರೀಕ್ಷೆ ನಡೆಸುತ್ತಿವೆ. ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳಲ್ಲಿ ಪರೀಕ್ಷೆಗಳು ಬಹುತೇಕ ಮುಗಿದಿದ್ದು, ಫಲಿತಾಂಶ ಪ್ರಕಟಣೆಯಷ್ಟೇ ಬಾಕಿ ಇದೆ. ಉಳಿದ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ಈಗಾಗಲೇ ಮೂರ್ನಾಲ್ಕು ವಿಷಯಗಳ ಪರೀಕ್ಷೆಗಳು ನಡೆದಿವೆ. ಮಾ.10ರೊಳಗೆ ಉಳಿದ ಎರಡು ವಿಷಯಗಳ ಪರೀಕ್ಷೆಗಳೂ ಮುಗಿಯಲಿವೆ ಎನ್ನುತ್ತಾರೆ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘದ ಪ್ರತಿನಿಧಿಗಳು.

ಕೊರೋನಾ ಹೆಚ್ಚಳ; 6 ರಿಂದ 9ನೇ ತರಗತಿ ಬಂದ್ ...

ಹಾಗಾಗಿ ಇನ್ನು ಬಾಕಿ ಇರುವುದು ಸರ್ಕಾರಿ ಶಾಲಾ ಮಕ್ಕಳ ಪರೀಕ್ಷೆ ಮಾತ್ರ. ಸರ್ಕಾರಿ ಶಾಲಾ ಮಕ್ಕಳಿಗೆ ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸಲು ಅಗತ್ಯ ತಾಂತ್ರಿಕ ಹಾಗೂ ಮೂಲ ಸೌಕರ್ಯಗಳು ಇಲಾಖೆಯಲ್ಲಿ ಲಭ್ಯವಿಲ್ಲ. ಪ್ರತಿ ವರ್ಷದಂತೆ ಆಯಾ ಶಾಲಾ ಮಟ್ಟದಲ್ಲೇ ಪರೀಕ್ಷೆ ನಡೆಸಲು ಕೋವಿಡ್‌ 2ನೇ ಅಲೆ ತೀವ್ರಗೊಳ್ಳುತ್ತಿರುವ ಆತಂಕ. ಹಾಗಾಗಿ ಇದುವರೆಗೆ ಶಾಲೆ ಆರಂಭಿಸದೆ ತರಗತಿ ಚಟುವಟಿಕೆ ನಡೆಯದ 1ರಿಂದ 5ನೇ ತರಗತಿ ಮಕ್ಕಳಿಗೆ ಯಾವುದೇ ಪರೀಕ್ಷೆ ಇಲ್ಲದೆ ತೇರ್ಗಡೆ ಮಾಡಲು ತೀರ್ಮಾನಿಸಲಾಗಿದೆ. 6ರಿಂದ 8ನೇ ತರಗತಿ ಮಕ್ಕಳಿಗೆ ಲಿಖಿತ ಪರೀಕ್ಷೆ ಬದಲು ತರಗತಿಯಲ್ಲಿ ಮಕ್ಕಳ ಚಟುವಟಿಕೆ, ಕಲಿಕಾ ಆಸಕ್ತಿ, ಸಾಮರ್ಥ್ಯ, ಮೌಖಿಕ ಪರೀಕ್ಷೆ, ಹಿಂದಿನ ಕಿರು ಪರೀಕ್ಷೆಗಳಲ್ಲಿ ಪಡೆದಿರುವ ಅಂಕಗಳನ್ನು ಆಧರಿಸಿ ಮೌಲ್ಯಾಂಕನ ಮಾಡಿ ಆ ಮೌಲ್ಯಮಾಪನದ ಆಧಾರದಲ್ಲಿ ಮುಂದಿನ ತರಗತಿಗೆ ತೇರ್ಗಡೆ ಮಾಡಲು ಇಲಾಖೆ ಚಿಂತಿಸಿದೆ.

ಆದರೆ, 9ನೇ ತರಗತಿ ಮಕ್ಕಳು ಮುಂದಿನ ವರ್ಷ 10ನೇ ತರಗತಿಯ ಮಂಡಳಿ ಪರೀಕ್ಷೆ ಎದುರಿಸಬೇಕಿರುವುದರಿಂದ ಅವರಿಗೆ ಮೌಲ್ಯಾಂಕನ ನಡೆಸುವುದೋ ಅಥವಾ ಬಹು ಆಯ್ಕೆ ಉತ್ತರ ಮಾದರಿ ಪ್ರಶ್ನೆಗಳಿಗೆ ಪರೀಕ್ಷೆ ನಡೆಸುವುದೋ ಎಂಬ ಚರ್ಚೆ ಇಲಾಖಾ ಮಟ್ಟದಲ್ಲಿ ನಡೆದಿದೆ. ಈ ಬಗ್ಗೆ ಇನ್ನಷ್ಟೇ ತೀರ್ಮಾನವಾಗಬೇಕಿದೆ. ಒಟ್ಟಾರೆ 1ರಿಂದ 9ನೇ ತರಗತಿ ಮಕ್ಕಳ ಪರೀಕ್ಷಾ ಪದ್ಧತಿ ಪರಿಷ್ಕರಣೆ ಬಗ್ಗೆ ಬರುವ ಸೋಮವಾರ ಅಥವಾ ನಂತರದ ಒಂದೆರಡು ದಿನಗಳಲ್ಲಿ ಸ್ಪಷ್ಟನಿರ್ಧಾರ ಕೈಗೊಂಡು ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಖಚಿತ ಮಾಹಿತಿ ನೀಡಿದ್ದಾರೆ.

ಇತ್ತೀಚೆಗಷ್ಟೆಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರು 1ರಿಂದ 9ನೇ ತರಗತಿ ಮಕ್ಕಳಿಗೆ ಪರೀಕ್ಷೆ ಇಲ್ಲದೆ ತೇರ್ಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದರು. ಇದನ್ನು ಅಲ್ಲಗಳೆದಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅಂತಹ ಯಾವುದೇ ನಿರ್ಧಾರ ಇದುವರೆಗೂ ಮಾಡಿಲ್ಲ ಎಂದಿದ್ದರು. ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರತಿಕ್ರಿಯೆ ನೀಡಿ ಪರೀಕ್ಷೆ ಇಲ್ಲದೆ ಪಾಸು ಮಾಡುವ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದೀಗ ಲಿಖಿತ ಪರೀಕ್ಷೆ ಇಲ್ಲದಿದ್ದರೂ ಪರ್ಯಾಯ ಮಾರ್ಗ ಬಳಸಿ ವಿದ್ಯಾರ್ಥಿಗಳ ಮೌಲ್ಯಮಾಪನ ನಡೆಸುವ ಚಿಂತನೆಯಲ್ಲಿ ಇಲಾಖೆಯಿದೆ.

6ರಿಂದ 9ನೇ ತರಗತಿ ಮಕ್ಕಳಿಗೆ ಪರೀಕ್ಷೆ ನಡೆಸಬೇಕೇ, ಬೇಡವೇ? ನಡೆಸುವುದಾದರೆ ಯಾವ ಮಾದರಿಯಲ್ಲಿ ನಡೆಸಬೇಕೆಂಬ ಬಗ್ಗೆ ಇದುವರೆಗೂ ಶಾಲೆಗಳಿಗೆ ಇಲಾಖೆಯಿಂದ ಮಾಹಿತಿ ಬಂದಿಲ್ಲ. ಕೋವಿಡ್‌ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಪ್ರಕ್ರಿಯೆ ಬಗ್ಗೆ ಸರ್ಕಾರ ಆದಷ್ಟುಬೇಗ ನಿರ್ಧಾರ ಕೈಗೊಳ್ಳುವುದು ಒಳ್ಳೆಯದು.

- ಮಂಜುನಾಥ್‌, ರಾಜ್ಯ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ
 

- ಬಹುತೇಕ ಖಾಸಗಿ ಶಾಲೆಗಳು 1ರಿಂದ 9ನೇ ತರಗತಿಗೆ ಆನ್‌ಲೈನ್‌ನಲ್ಲೇ ಪರೀಕ್ಷೆ ನಡೆಸುತ್ತಿವೆ

- ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳಲ್ಲಿ ಪರೀಕ್ಷೆ ಬಹುತೇಕ ಮುಗಿದಿದ್ದು, ಫಲಿತಾಂಶ ಬಾಕಿ ಇದೆ

- ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲೂ 3-4 ವಿಷಯಗಳ ಪರೀಕ್ಷೆಗಳು ಈಗಾಗಲೇ ಮುಗಿದಿವೆ

- ಸರ್ಕಾರಿ ಶಾಲೆಗಳಲ್ಲಿ ಪರೀಕ್ಷೆ ಆಗಿಲ್ಲ. ಅಲ್ಲಿ ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸಲು ಆಗುವುದಿಲ್ಲ

- ಹೀಗಾಗಿ 1ರಿಂದ 5ನೇ ತರಗತಿ ಮಕ್ಕಳನ್ನು ಯಾವುದೇ ಪರೀಕ್ಷೆ ನಡೆಸದೆ ಪಾಸ್‌ ಮಾಡಲು ಚಿಂತನೆ

- 6ರಿಂದ 8ನೇ ತರಗತಿ ಮಕ್ಕಳ ಕಲಿಕಾ ಆಸಕ್ತಿ, ಚಟುವಟಿಕೆ ಆಧರಿಸಿ ತೇರ್ಗಡೆ ಮಾಡುವ ಉದ್ದೇಶ

- 9ನೇ ತರಗತಿ ಮಕ್ಕಳು ಮರು ವರ್ಷ 10ನೇ ತರಗತಿಯ ಮಂಡಳಿ ಪರೀಕ್ಷೆ ಎದುರಿಸಬೇಕಿದೆ

- ಅವರಿಗೆ ಮೌಲ್ಯಾಂಕನ/ಬಹುಆಯ್ಕೆ ಮಾದರಿ ಪೈಕಿ ಯಾವ ಪರೀಕ್ಷೆ ನಡೆಸಬೇಕೆಂಬ ಬಗ್ಗೆ ಚರ್ಚೆ ನಡೆದಿದೆ

- ಸೋಮವಾರ ಅಥವಾ ನಂತರದ ಒಂದೆರಡು ದಿನಗಳಲ್ಲಿ ನಿರ್ಧರಿಸಿ ಸರ್ಕಾರ ಆದೇಶ ಹೊರಡಿಸಲಿದೆ

ಸಮಸ್ಯೆಯಾಗದು

ಬಹುತೇಕ ಖಾಸಗಿ ಶಾಲೆಗಳು ಆನ್‌ಲೈನ್‌ನಲ್ಲೇ ಪರೀಕ್ಷೆಗಳನ್ನು ಮಾಡುತ್ತಿವೆ. 1ರಿಂದ 9ನೇ ತರಗತಿ ಮಕ್ಕಳಿಗೆ ಹೆಚ್ಚು ಕಡಿಮೆ ಮೌಲ್ಯಾಂಕನ ಮಾದರಿಯಲ್ಲೇ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಹಾಗಾಗಿ ಸರ್ಕಾರದ ಆದೇಶದಿಂದ ಖಾಸಗಿ ಶಾಲೆಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ.

- ಲೋಕೇಶ್‌ ತಾಳಿಕಟ್ಟೆ, ಮಾನ್ಯತೆ ಪಡೆದ ಖಾಸಗಿ ಶಾಲಾ ಸಂಘಟನೆಗಳ ಒಕ್ಕೂಟದ (ರುಪ್ಸಾ) ಅಧ್ಯಕ್ಷ