ಪರೀಕ್ಷೆ ರದ್ದು, ಪಿಯು ಫೇಲಾದವರೂ ಪಾಸ್‌: ಶೀಘ್ರ ಸರ್ಕಾರದ ತೀರ್ಮಾನ!

* ಪಿಯು ಫೇಲಾದವರೂ ಪಾಸ್‌ ಪರೀಕ್ಷೆ ರದ್ದು

* ತಜ್ಞರ ಸಮಿತಿ ಶಿಫಾರಸು ಆಧರಿಸಿ ಶೀಘ್ರ ಸರ್ಕಾರದ ತೀರ್ಮಾನ

* ಪುನರಾವರ್ತಿತರ ಉತ್ತೀರ್ಣಕ್ಕೆ ನಿರ್ಧಾರ? ಖಾಸಗಿ ಅಭ್ಯರ್ಥಿಗಳಿಗಿಲ್ಲ ಭಾಗ್ಯ

Karnataka PU board decides to award grace marks pass repeaters without exams pod

ಬೆಂಗಳೂರು(ಜು.05): ದ್ವಿತೀಯ ಪಿಯುಸಿಯ ಪುನರಾವರ್ತಿತ ಅಭ್ಯರ್ಥಿಗಳನ್ನೂ ಪರೀಕ್ಷೆ ಇಲ್ಲದೆ ಪಾಸು ಮಾಡಲು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ ಎನ್ನಲಾಗಿದೆ. ಆದರೆ, ಖಾಸಗಿ ಅಭ್ಯರ್ಥಿಗಳಿಗೆ ಈ ಸೌಲಭ್ಯ ನೀಡದಿರಲು ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ.

ಪುನರಾವರ್ತಿತ ವಿದ್ಯಾರ್ಥಿಗಳಿಗೂ ಪರೀಕ್ಷೆ ರದ್ದುಮಾಡಿ ಪಾಸು ಮಾಡುವ ಕುರಿತು ಸಾಧ್ಯಾಸಾಧ್ಯತೆ ಪರಿಶೀಲಿಸಲು ರಚಿಸಿದ್ದ ತಜ್ಞರ ಸಮಿತಿಯು ಆ ವಿದ್ಯಾರ್ಥಿಗಳನ್ನೂ ಪರೀಕ್ಷೆ ಇಲ್ಲದೆ ಪಾಸು ಮಾಡಲು ಶಿಫಾರಸು ಮಾಡಿದೆ. ಅದರಂತೆ ಇಲಾಖೆಯು ಪುನರಾವರ್ತಿತ ವಿದ್ಯಾರ್ಥಿಗಳಿಗೂ ಪರೀಕ್ಷೆ ರದ್ದು ನಿರ್ಧಾರ ವಿಸ್ತರಿಸಲು ತೀರ್ಮಾನಿಸಿದೆ ಎನ್ನಲಾಗುತ್ತಿದೆ.

ಕೋವಿಡ್‌ ಹಿನ್ನೆಲೆಯಲ್ಲಿ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಪಡಿಸಿದ ಸರ್ಕಾರ, ಹೊಸ (ಫ್ರೆಷ​ರ್‍ಸ್) ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ರದ್ದು ಮಾಡಿ ಸಾಮೂಹಿಕ ಉತ್ತೀರ್ಣಕ್ಕೆ ಆದೇಶ ಮಾಡಿತ್ತು. ಪುನರಾವರ್ತಿತ ವಿದ್ಯಾರ್ಥಿಗಳಿಗೆ ಕೋವಿಡ್‌ ತಹಬದಿಗೆ ಬಂದ ಬಳಿಕ ಪರೀಕ್ಷೆ ನಡೆಸುವುದಾಗಿ ಹೇಳಿತ್ತು. ಆದರೆ, ಇದನ್ನು ಪ್ರಶ್ನಿಸಿ ಪುನರಾವರ್ತಿತ ಅಭ್ಯರ್ಥಿಗಳು ಕೋರ್ಟ್‌ ಮೆಟ್ಟಿಲೇರಿದ್ದರು.

ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಪುನರಾವರ್ತಿತ ವಿದ್ಯಾರ್ಥಿಗಳಿಗೂ ಪರೀಕ್ಷೆ ರದ್ದುಪಡಿಸುವ ಬಗ್ಗೆ ಸಾಧ್ಯಾಸಾಧ್ಯತೆ ಪರಿಶೀಲಿಸುವಂತೆ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಪಿಯು ಇಲಾಖೆ ಸಾಧ್ಯಾಸಾಧ್ಯತೆ ಪರಿಶೀಲನೆಗೆ ತಜ್ಞರ ಸಮಿತಿ ರಚಿಸಿತ್ತು.

ನಿರ್ಧಾರ ಏಕೆ ಬದಲು?

ಈ ಹಿಂದೆ ಫ್ರೆಷರ್‌ಗಳನ್ನು ಮಾತ್ರ ಉತ್ತೀರ್ಣಗೊಳಿಸಿ ಪುನರಾವರ್ತಿತರಿಗೆ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ಕೆಲವರು ಕೋರ್ಟ್‌ಗೆ ಹೋಗಿದ್ದರು. ಕೋರ್ಟ್‌, ಪುನರಾವರ್ತಿತರನ್ನೂ ಪರೀಕ್ಷೆಯಿಲ್ಲದೆ ಪಾಸ್‌ ಮಾಡುವ ಬಗ್ಗೆ ಪರಿಶೀಲಿಸಲು ಸೂಚಿಸಿತ್ತು. ಅದರಂತೆ ತಜ್ಞರ ಸಮಿತಿಯು ಇವರನ್ನು ಪಾಸ್‌ ಮಾಡಲು ಶಿಫಾರಸು ಮಾಡಿದೆ.

Latest Videos
Follow Us:
Download App:
  • android
  • ios