Asianet Suvarna News Asianet Suvarna News

ನೀಟ್‌ ಅಕ್ರಮದಿಂದ ಪರೀಕ್ಷಾ ಪಾವಿತ್ರ್ಯಕ್ಕೆ ಧಕ್ಕೆ: ಸುಪ್ರೀಂ ಕೋರ್ಟ್‌

ಅಕ್ರಮದ ಆರೋಪಗಳನ್ನು ಗಮನಿಸಿದ ನ್ಯಾ। ವಿಕ್ರಮ್ ನಾಥ್ ಮತ್ತು ನ್ಯಾ। ಅಹ್ಸಾನುದ್ದೀನ್ ಅಮಾನುಲ್ಲಾ ಅವರ ರಜಾಕಾಲದ ಪೀಠ, ‘ನೀವು ಮಾಡಿದ್ದೀರಿ ಎನ್ನುವ ಕಾರಣಕ್ಕಾಗಿ ಇದನ್ನು ಪವಿತ್ರವಾದುದು ಎಂದು ಸುಲಭವಾಗಿ ಹೇಳಲಾಗದು. ಇಲ್ಲಿ ಪಾವಿತ್ರ್ಯಕ್ಕೆ ಧಕ್ಕೆ ಆಗಿದೆ. ಆದ್ದರಿಂದ ನಮಗೆ ಉತ್ತರಗಳು ಬೇಕಾಗುತ್ತವೆ’ ಎಂದು ಮೊನಚಾಗಿ ನುಡಿಯಿತು. ಆದಾಗ್ಯೂ, ಪಾಸಾಗಿರುವ ಅಭ್ಯರ್ಥಿಗಳ ಎಂಬಿಬಿಎಸ್, ಬಿಡಿಎಸ್ ಮತ್ತು ಇತರ ಕೋರ್ಸ್‌ಗಳ ಪ್ರವೇಶ ಕೌನ್ಸೆಲಿಂಗ್‌ಗೆ ತಡೆ ನೀಡಲು ನಿರಾಕರಿಸಿತು.

Exam Sanctity Impairment by NEET Irregularities Says Supreme Court grg
Author
First Published Jun 12, 2024, 8:35 AM IST

ನವದೆಹಲಿ(ಜೂ.12):  ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಗ್ರೇಸ್‌ ಅಂಕ ಹಾಗೂ ಇತರ ಆರೋಪಗಳಿಗೆ ತುತ್ತಾಗಿರುವ ವೈದ್ಯಕೀಯ ಪ್ರವೇಶ ಪರೀಕ್ಷೆ ‘ನೀಟ್‌ ಯುಜಿ-2024’ ಅನ್ನು ರದ್ದುಪಡಿಸಿ, ಹೊಸದಾಗಿ ಪರೀಕ್ಷೆ ನಡೆಸುವಂತೆ ಕೋರಿ ಸಲ್ಲಿಸಲಾದ ಮನವಿಗಳ ಕುರಿತು ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗಳಿಂದ ಪ್ರತಿಕ್ರಿಯೆ ಕೇಳಿ ನೋಟಿಸ್‌ ಜಾರಿ ಮಾಡಿದೆ.

ಇದೇ ವೇಳೆ ಅಕ್ರಮದ ಆರೋಪಗಳನ್ನು ಗಮನಿಸಿದ ನ್ಯಾ। ವಿಕ್ರಮ್ ನಾಥ್ ಮತ್ತು ನ್ಯಾ। ಅಹ್ಸಾನುದ್ದೀನ್ ಅಮಾನುಲ್ಲಾ ಅವರ ರಜಾಕಾಲದ ಪೀಠ, ‘ನೀವು ಮಾಡಿದ್ದೀರಿ ಎನ್ನುವ ಕಾರಣಕ್ಕಾಗಿ ಇದನ್ನು ಪವಿತ್ರವಾದುದು ಎಂದು ಸುಲಭವಾಗಿ ಹೇಳಲಾಗದು. ಇಲ್ಲಿ ಪಾವಿತ್ರ್ಯಕ್ಕೆ ಧಕ್ಕೆ ಆಗಿದೆ. ಆದ್ದರಿಂದ ನಮಗೆ ಉತ್ತರಗಳು ಬೇಕಾಗುತ್ತವೆ’ ಎಂದು ಮೊನಚಾಗಿ ನುಡಿಯಿತು. ಆದಾಗ್ಯೂ, ಪಾಸಾಗಿರುವ ಅಭ್ಯರ್ಥಿಗಳ ಎಂಬಿಬಿಎಸ್, ಬಿಡಿಎಸ್ ಮತ್ತು ಇತರ ಕೋರ್ಸ್‌ಗಳ ಪ್ರವೇಶ ಕೌನ್ಸೆಲಿಂಗ್‌ಗೆ ತಡೆ ನೀಡಲು ನಿರಾಕರಿಸಿತು.

ನೀಟ್‌ ರದ್ದು ಮಾಡಿ 12ನೇ ತರಗತಿ ಅಂಕ ಆಧರಿಸಿ ವೈದ್ಯ ಸೀಟು ಕೊಡಿ: ತಮಿಳುನಾಡು ಸರ್ಕಾರಕ್ಕೆ ಆಯೋಗದ ವರದಿ

ಇದೇ ವೇಳೆ, ನೀಟ್-ಯುಜಿ ನಡೆಸುವ ಕೇಂದ್ರ ಮತ್ತು ಎನ್‌ಟಿಎ ಜೊತೆಗೆ ಪೀಠವು ಬಿಹಾರ ಸರ್ಕಾರಕ್ಕೂ ನೋಟಿಸ್ ಜಾರಿ ಮಾಡಿದೆ. ಏಕೆಂದರೆ ರಾಜ್ಯದಲ್ಲಿ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು.
ನೀಟ್‌ನಲ್ಲಿ ಅಕ್ರಮ ನಡೆದಿದೆ ಎಂದು ಶಿವಾಂಗಿ ಮಿಶ್ರಾ ಮತ್ತು ಇತರ 10 ಎಂಬಿಬಿಎಸ್ ಆಕಾಂಕ್ಷಿಗಳು ಸಲ್ಲಿಸಿದ ಪ್ರತ್ಯೇಕ ಮನವಿಗಳನ್ನು ಸುಪ್ರೀಂ ಕೋರ್ಟ್‌ ಒಂದು ಅರ್ಜಿಯಾಗಿ ಟ್ಯಾಗ್‌ ಮಾಡಿತು. ಈಗ ಮೇ 20ರಿಂದ ಸುಪ್ರೀಂ ಕೋರ್ಟ್‌ ಬೇಸಿಗೆ ರಜೆಯಲ್ಲಿದೆ. ಹೀಗಾಗಿ ಬೇಸಿಗೆ ರಜೆಯ ನಂತರ ಜುಲೈ 8ರಂದು ನಿಯಮಿತ ವಿಚಾರಣೆ ಆರಂಭವಾಗಲಿದ್ದು, ಆಗ ನೀಟ್‌ ವಿಚಾರಣೆಯೂ ನಡೆಯಲಿದೆ.

ಏನಿದು ವಿವಾದ?:

ನೀಟ್‌-ಯುಜಿ 2024, ಮೇ 5ರಂದು ನಡೆದಿತ್ತು ಮತ್ತು ಫಲಿತಾಂಶಗಳನ್ನು ಜೂನ್ 4 ರಂದು ಘೋಷಿಸಲಾಗಿತ್ತು. ಜೂನ್ 14ರಂದು ಫಲಿತಾಂಶ ಘೋಷಣೆ ನಿರೀಕ್ಷೆ ಇದ್ದರೂ 10 ದಿನ ಮುಂಚಿತವಾಗೇ, ಅದೂ ಲೋಕಸಭಾ ಚುನಾವಣೆ ಫಲಿತಾಂಶದ ದಿನ ಫಲಿತಾಂಶವನ್ನು ಎನ್‌ಟಿಎ ಪ್ರಕಟಿಸಿ ನಾನಾ ಸಂದೇಹಗಳಿಗೆ ನಾಂದಿ ಹಾಡಿತ್ತು.

ಇದೇ ವೇಳೆ, ಹಿಂದೆಂದೂ ಕಂಡು ಕೇಳರಿಯದ ರೀತಿ 67 ವಿದ್ಯಾರ್ಥಿಗಳಿಗೆ 720ಕ್ಕೆ 720 ಅಂಕ ಬಂದಿತ್ತು. ನೀಟ್‌ನಲ್ಲಿ ಪ್ರತಿ ಪ್ರಶ್ನೆ 4 ಅಂಕದ್ದಾದರೂ ಕೆಲವು ವಿದ್ಯಾರ್ಥಿಗಳಿಗೆ 718-719 ಅಂಕ ಬಂದಿರುವುದು ಸಂದೇಹಗಳಿಗೆ ಇಂಬು ನೀಡಿತ್ತು. ಇನ್ನು ಉತ್ತರ ಭಾರತದ 6 ಆಯ್ದ ಕೇಂದ್ರಗಳ 1500 ವಿದ್ಯಾರ್ಥಿಗಳಿಗೆ ‘ಪ್ರಶ್ನೆಪತ್ರಿಕೆ ನೀಡಿಕೆಯಲ್ಲಿ ವಿಳಂಬವಾಗಿದೆ’ ಎಂಬ ಕಾರಣ ನೀಡಿ 45 ಗ್ರೇಸ್‌ ಅಂಕ ನೀಡಲಾಗಿತ್ತು. ‘ಇದು ಅಕ್ರಮ. ಇದರಿಂದ ಇಡೀ ರ್‍ಯಾಂಕಿಂಗ್‌ ವ್ಯವಸ್ಥೆಯೇ ಬುಡಮೇಲಾಗಿದೆ’ ಎಂದು ಪರೀಕ್ಷಾರ್ಥಿಗಳು, ಕಾಂಗ್ರೆಸ್ ಪಕ್ಷ ಹಾಗೂ ಆಪ್‌ ಆಕ್ರೋಶ ವ್ಯಕ್ತಪಡಿಸಿ, ಸುಪ್ರೀಂ ಕೋರ್ಟ್‌ ಮೇಲುಸ್ತುವಾರಿಯ ತನಿಖೆಗೆ ಆಗ್ರಹಿಸಿದ್ದವು.

Latest Videos
Follow Us:
Download App:
  • android
  • ios