ಬೆಂಗಳೂರು(ಅ.17): ನಾನೇ ಭೂಗತ ಪಾತಕಿ ರವಿ ಪೂಜಾರಿ ಸಹಚರ ಹಾಗೂ ಬಾರ್‌ ಮಾಲೀಕ ಮನೀಶ್‌ ಶೆಟ್ಟಿನನ್ನು ಹತ್ಯೆ ಮಾಡಿಸಿದ್ದು ಎಂದು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಕರೆ ಮಾಡಿ ಕರಾವಳಿ ಮೂಲದ ಕುಖ್ಯಾತ ಪಾತಕಿ ವಿಕ್ಕಿ ಶೆಟ್ಟಿ ಹೆಸರಿನಲ್ಲಿ ವ್ಯಕ್ತಿಯೊಬ್ಬ ಪ್ರತಿಪಾದಿಸಿದ್ದಾನೆ.

ಈ ಮೂಲಕ ಶೆಟ್ಟಿ ಕೊಲೆಗೆ ಕರಾವಳಿ ಪಾತಕಲೋಕದ ನಂಟು ಎಂಬ ಪೊಲೀಸರ ಶಂಕೆ ಮತ್ತಷ್ಟು ಬಲವಾಗಿದೆ. ಇನ್ನೊಂದೆಡೆ ಆರೋಪಿಗಳ ಪತ್ತೆಗೆ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್‌.ಅನುಚೇತ್‌ ನೇತೃತ್ವದಲ್ಲಿ ಐದು ವಿಶೇಷ ತಂಡಗಳು ಕಾರ್ಯಾಚರಣೆಗಿಳಿದಿವೆ. ಬೆಂಗಳೂರು ಮಾತ್ರವಲ್ಲದೆ ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಿಗೆ ಸಹ ಪೊಲೀಸರು ಆರೋಪಿಗಳ ಬೆನ್ನಹತ್ತಿ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

ಮನೀಶ್‌ ಶೆಟ್ಟಿಹತ್ಯೆಗೆ ಕರಾವಳಿ ಮೂಲದ ಭೂಗತ ಲೋಕದ ವ್ಯಕ್ತಿಗಳ ಕೈವಾಡ ಇರುವುದು ಖಚಿತವಾಗಿದೆ. ಆದರೆ ಈ ಹತ್ಯೆಗೆ ಸ್ಥಳೀಯರ ಹುಡುಗರನ್ನೇ ಬಳಸಿರುವ ಸಾಧ್ಯತೆ ಕಡಿಮೆ ಇದ್ದು, ಮಂಗಳೂರಿನಿಂದ ಶೂಟ​ರ್‍ಸ್ಗಳು ಬಂದು ಕೃತ್ಯ ಎಸಗಿ ಪರಾರಿಯಾಗಿರುವ ಅನುಮಾನವಿದೆ. ಇದೊಂದು ಪಕ್ಕಾ ಅಂಡರ್‌ರ್‍ ವಲ್ಡ್‌ರ್‍ ಶೈಲಿಯ ಕೃತ್ಯವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚೆಲ್ಲಿದ ರಕ್ತ; ರೈ, ಬನ್ನಂಜೆ ರಾಜ, ರವಿ ಪೂಜಾರಿ ಆಪ್ತನಾಗಿದ್ದ ಮನೀಶ್ ಶೆಟ್ಟಿಗೆ ಗುಂಡಿಟ್ಟರು!

ಕಿಶನ್‌ ಹೆಗಡೆ ಹತ್ಯೆಗೆ ಪ್ರತೀಕಾರ?

ಸೆ.26 ರಂದು ಉಡುಪಿ ಸಮೀಪದ ಹಿರಿಯಡ್ಕದಲ್ಲಿ ಪಾತಕಿ ವಿಕ್ಕಿ ಶೆಟ್ಟಿಸಹಚರ ಮಂಗಳೂರಿನ ಕುಖ್ಯಾತ ರೌಡಿ ಕಿಶನ್‌ ಹೆಗಡೆ ಹತ್ಯೆ ನಡೆದಿತ್ತು. ಈ ಕೃತ್ಯಕ್ಕೆ ಮನೀಶ್‌ ಶೆಟ್ಟಿಹಣಕಾಸು ನೆರವು ನೀಡಿದ್ದ ಎಂಬ ಆರೋಪವಿದೆ. ಮಂಗಳೂರು ಹಾಗೂ ಉಡುಪಿಯಲ್ಲಿ ರಿಯಲ್‌ ಎಸ್ಟೇಟ್‌ ದಂಧೆಯಲ್ಲಿ ಕಿಶನ್‌ ತೊಡಗಿದ್ದ. ಹಲವು ತಿಂಗಳುಗಳಿಂದ ಸ್ಥಳೀಯ ಹವಾ ಸೃಷ್ಟಿಸುವ ವಿಚಾರದಲ್ಲಿ ಕಿಶನ್‌ ಮತ್ತು ಮನೀಶ್‌ ಮಧ್ಯೆ ಪೈಪೋಟಿ ಇತ್ತು. ಅಲ್ಲದೆ, ಹಣಕಾಸು ವಿಚಾರದಲ್ಲಿ ಅವರಲ್ಲಿ ಮನಸ್ತಾಪ ಹೆಚ್ಚಿತ್ತು. ಈ ನಡುವೆ ಪೊಲೀಸರ ಬಲೆಗೆ ರವಿಪೂಜಾರಿ ಬಿದ್ದ ಬಳಿಕ ಕರಾವಳಿ ಭಾಗದಲ್ಲಿ ವಿಕ್ಕಿ ಶೆಟ್ಟಿತಂಡದ ಹಾವಳಿ ಮತ್ತಷ್ಟುಶುರುವಾಯಿತು. ಇತ್ತ ಪೂಜಾರಿ ಸೆರೆಯಾದ ಬಳಿಕ ಮನೀಶ್‌ ಶೆಟ್ಟಿ ವ್ಯವಹಾರಗಳಿಗೂ ಕಿಶನ್‌ ಅಡ್ಡಿಪಡಿಸಲಾರಂಭಿಸಿದ್ದ. ಇದೇ ದ್ವೇಷದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪ ಕಿಶನ್‌ನನ್ನು ತನ್ನ ಸಹಚರರ ಮೂಲಕ ಶೆಟ್ಟಿಹತ್ಯೆ ಮಾಡಿಸಿದ್ದ. ಈ ಕೃತ್ಯದಿಂದ ಕೆರಳಿದ ವಿಕ್ಕಿ ಶೆಟ್ಟಿ, ಕೊನೆಗೆ ತನ್ನ ಶಿಷ್ಯನ ಹತ್ಯೆಗೆ ಮನೀಶ್‌ ಶೆಟ್ಟಿಮೇಲೆ ಪ್ರತೀಕಾರ ತೀರಿಸಿಕೊಂಡಿರುವ ಮಾಹಿತಿ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಾನೇ ಕೊಲೆ ಮಾಡಿದ್ದು ಎಂದ ವಿಕ್ಕಿ?

ಬ್ರಿಗೇಡ್‌ ರಸ್ತೆ ಬಳಿ ಮನೀಶ್‌ ಶೆಟ್ಟಿಹತ್ಯೆ ನಡೆದ ಕೆಲವೇ ತಾಸುಗಳಲ್ಲಿ ಗುರುವಾರ ರಾತ್ರಿ 11.15 ಗಂಟೆ ಸುಮಾರಿಗೆ ಕನ್ನಡದ ಸುದ್ದಿವಾಹಿನಿಯೊಂದಕ್ಕೆ ಕರೆ ಮಾಡಿದ್ದ ವಿಕ್ಕಿ ಶೆಟ್ಟಿಹೆಸರಿನ ಅಪರಿಚಿತ ವ್ಯಕ್ತಿ, ‘ಮನೀಶ್‌ ಶೆಟ್ಟಿಕೊಲ್ಲಿಸಿದ್ದು ನಾನೇ. ನನ್ನ ತಂಟೆಗೆ ಬಂದರೆ ಬಿಡುವುದಿಲ್ಲ’ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾನೆ. ಇಂಟರ್‌ ನೆಟ್‌ ಕರೆ ಮಾಡಿದ್ದರಿಂದ ನಂಬರ್‌ ಸಹ ಪತ್ತೆಯಾಗಿಲ್ಲ. ಹಲವು ವರ್ಷಗಳಿಂದ ಪೊಲೀಸರ ಬಂಧನ ಭೀತಿಯಿಂದ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಿಕ್ಕಿ ಶೆಟ್ಟಿ, ಅಪರಾಧ ಕೃತ್ಯಗಳು ಎಸಗಿದ ಬಳಿಕ ಮಾಧ್ಯಮ ಕಚೇರಿಗಳಿಗೆ ಕರೆ ಮಾಡಿ ಕ್ಲೇಮ್‌ ಮಾಡಿಕೊಳ್ಳುವ ಖಯಾಲಿ ಇದೆ. ಇದರಿಂದ ಪಾತಕ ಲೋಕದಲ್ಲಿ ಮಾರುಕಟ್ಟೆಸೃಷ್ಟಿಸಿಕೊಳ್ಳುವುದು ಆತನ ಉದ್ದೇಶವಾಗಿದೆ. ಅಂತೆಯೇ ಈಗ ಮನೀಶ್‌ ಹತ್ಯೆಯನ್ನು ಸಹ ತಾನೇ ಮಾಡಿಸಿದ್ದಾಗಿ ಆತ ಹೇಳಿಕೊಂಡಿರಬಹುದು ಎಂದು ಪೊಲೀಸರು ಹೇಳಿದ್ದಾರೆ.