ಚಂಡೀಗಡ್(ಮಾ.30): ಡ್ರಗ್ ಅಂಡ್ ಫುಡ್ ಕೆಮಿಕಲ್ ಲ್ಯಾಬೊರೇಟರಿ ಇನ್ಸಪೆಕ್ಟರ್ ಓರ್ವರನ್ನು ಯುವಕನೋರ್ವ ಗುಂಡು ಹಾರಿಸಿ ಹತ್ಯೆ ಮಾಡಿದ ಘಟನೆ ಪಂಜಾಬ್‌ನ ಖರಾರ್‌ನಲ್ಲಿ ನಡೆದಿದೆ.

ಡ್ರಗ್ ಅಂಡ್ ಫುಡ್ ಕೆಮಿಕಲ್ ಲ್ಯಾಬೊರೇಟರಿಯಲ್ಲಿ ಇನ್ಸಪೆಕ್ಟರ್ ಆಗಿದ್ದ ನೇಹಾ ಶೋರಿ ಅವರನ್ನು ಯುವಕನೋರ್ವ ಆಕೆಯ ಕಚೇರಿಯಲ್ಲೇ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ.

ನೇಹಾ ಶೋರಿ ಮೇಲೆ ಎರಡು ಗುಂಡು ಹಾರಿಸಿದ ಯುವಕ, ನಂತರ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಪೊಲೀಸರು ಆತನನ್ನು ಹಿಡಿಯುವಲ್ಲಿ ಸಫಲರಾದಾಗ ಗುಂಡು ಹಾರಿಸಿಕೊಂಡು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಆದರೆ ಕೂಡಲೇ ಆರೋಪಿಯಿಂದ ಪಿಸ್ತೂಲು ಕಸಿದುಕೊಂಡ ಪೊಲೀಸರು, ಆತನನ್ನು ಜೀವಂತ ಸೆರೆಹಿಡಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೊಲೆಗೆ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು ನೇಹಾ ಶೋರಿ ಹತ್ಯೆಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಸಿಎಂ ಅಮರೀಂದರ್ ಸಿಂಗ್, ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.