ಝಾನ್ಸಿ(ಅ.14): ಅಪ್ರಾಪ್ತ ಸಹಪಾಠಿಯ ಮೇಲೆ ಅತ್ಯಾಚಾರ ಎಸಗಿ, ಆಕೆಯಿಂದಲೇ ಹಣವನ್ನೂ ಸುಲಿಗೆ ಮಾಡಿದ ಮೃಗೀಯ ಘಟನೆ ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್‌ನ 8 ಮಂದಿ ವಿದ್ಯಾರ್ಥಿಗಳು, ಅದೇ ಕಾಲೇಜಿನ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ಬೆದರಿಸಿ ಆಕೆಯಿಂದ 3000 ರು. ಹಣವನ್ನೂ ಸುಲಿಗೆ ಮಾಡಿದ್ದಾರೆ. ಘಟನೆ ಸಂಬಂಧ 8 ಮಂದಿಯನ್ನೂ ದಸ್ತಗಿರಿ ಮಾಡಲಾಗಿದೆ.

ಕಾಲೇಜಿಗಿಂತ ತುಸು ದೂರದಲ್ಲಿ ಹಾಸ್ಟೆಲ್‌ ಇದ್ದು, ಆರೋಪಿಗಳ ಪೈಕಿ ಓರ್ವ ಅತ್ಯಾಚಾರ ಎಸಗಿದ್ದಾನೆ. ಉಳಿದವರು ಹೊರಗೆ ಕಾವಲಿಗೆ ನಿಂತಿದ್ದರು. ಕಾಲೇಜಿನಲ್ಲಿ ಪರೀಕ್ಷೆಗಳು ನಡೆಯುತ್ತಿದ್ದರಿಂದ ಶಿಕ್ಷಕರೂ ಅದರ ಸಿದ್ಧತೆಯಲ್ಲಿ ತೊಡಗಿದ್ದರು. ಹೀಗಾಗಿ ಈ ಕೃತ್ಯಯಾರ ಗಮನಕ್ಕೂ ಬಂದಿರಲಿಲ್ಲ. ಸೋಮವಾರ ಸಂಜೆ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಅವರ ವಿರುದ್ದ ಐಪಿಸಿ ಹಾಗೂ ಪೋಕ್ಸೋ ಕಾಯ್ದಯಡಿ ಪ್ರಕರಣ ದಾಖಲಿಸಿಲಾಗಿದೆ. ಪ್ರಕರಣದ ಶೀಘ್ರ ತನಿಖೆಗೆ ತ್ವರಿತಗತಿ ನ್ಯಾಯಾಲಯ ಸ್ಥಾಪಿಸಲಾಗುವುದು. ಅನುಮತಿ ಇಲ್ಲದಿದ್ದರೂ ಅವರು ಹೇಗೆ ಹಾಸ್ಟೆಲ್‌ ಆವರಣದೊಳಗೆ ಪ್ರವೇಶ ಮಾಡಿದರು ಎನ್ನುವುದರ ಬಗ್ಗೆಯೂ ತನಿಖೆ ಸಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೇಳಿದ್ದಾರೆ.

ಆರೋಪಿಗಳನ್ನು ಕಾಲೇಜಿನಿಂದ ಹೊರ ಹಾಕಿ ಎಂದು ಜಿಲ್ಲಾಡಳಿತ ಕಾಲೇಜಿಗೆ ಆದೇಶಿಸಿದ್ದು, ಅವರ ವಿರುದ್ದ ರಾಷ್ಟ್ರೀಯ ಭದ್ರತಾ ಕಾಯ್ದೆ ಪ್ರಯೋಗಿಸುವ ಚಿಂತನೆಯಲ್ಲಿದೆ.