Asianet Suvarna News Asianet Suvarna News

ರೆಪೋ ದರ ಸ್ಥಿರ: ಹೂಡಿಕೆ, ಸಾಲ ಮರುಪಾವತಿಗೆ ಇದು ಸೂಕ್ತ ಸಮಯವೇ?

ಇತ್ತೀಚೆಗೆ ನಡೆದ ಆರ್ ಬಿಐ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ರೆಪೋದರದಲ್ಲಿ ಯಾವುದೇ ಏರಿಕೆ ಮಾಡಿಲ್ಲ. ಹೀಗಾಗಿ ರೆಪೋದರ ಸ್ಥಿರವಾಗಿದ್ದು, ಈ ಸಮಯದಲ್ಲಿ ಹೂಡಿಕೆ ಮಾಡೋದು ಸೂಕ್ತವೇ? ಹಾಗೆಯೇ ಸಾಲ ಮರುಪಾವತಿ ಮಾಡಬಹುದಾ? ಎಂಬ ಪ್ರಶ್ನೆಗಳು ಕಾಡಬಹುದು. ಅವುಗಳಿಗೆ ಇಲ್ಲಿವೆ ಉತ್ತರ.

Repo Rate Unchanged Is this the right time to invest and prepay your loan anu
Author
First Published Aug 16, 2023, 1:10 PM IST

Business Desk: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಸತತ ಮೂರು ಹಣಕಾಸು ಸಮಿತಿ ಸಭೆಗಳಲ್ಲಿ ರೆಪೋ ದರ ಏರಿಕೆ ಮಾಡಿಲ್ಲ. ದೇಶದ ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡಲು ಹಾಗೂ ಸಾಲಗಾರರು ಹಾಗೂ ಹೂಡಿಕೆದಾರರಿಗೆ ಅನುಕೂಲಕರ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಆರ್ ಬಿಐ ಈ ನಿರ್ಧಾರ ಕೈಗೊಂಡಿದೆ. ರೆಪೋ ದರ ಏರಿಕೆಯಾಗಿಲ್ಲವೆಂದ್ರೆ ಬಡ್ಡಿದರದಲ್ಲಿ ಸ್ಥಿರತೆ ನಿರ್ವಹಣೆ ಮಾಡಲು ಆರ್ ಬಿಐ ನಿರ್ಧರಿಸಿದೆ ಎಂದರ್ಥ. ಹೀಗಿರುವಾಗ ರೆಪೋ ದರ ಯಥಾಸ್ಥಿತಿಯಲ್ಲಿರುವ ಸಮಯದಲ್ಲಿ ಹೂಡಿಕೆ ಮಾಡೋ ನಿರ್ಧಾರ ಕೈಗೊಳ್ಳಬಹುದಾ ಎಂಬ ಪ್ರಶ್ನೆ ಹೂಡಿಕೆದಾರರನ್ನು ಕಾಡಬಹುದು. ಹಾಗೆಯೇ ಗೃಹಸಾಲ ಸೇರಿದಂತೆ ವಿವಿಧ ಸಾಲಗಳನ್ನು ಹೊಂದಿರೋರಿಗೆ ಸಾಲದ  ಮರುಪಾವತಿಗೆ ಇದು ಸೂಕ್ತ ಸಮಯವೇ ಎಂಬ ಪ್ರಶ್ನೆ ಮೂಡಬಹುದು. ಫ್ಲೋಟಿಂಗ್ ಬಡ್ಡಿದರ ಹೊಂದಿರುವ ಸಾಲಗಾರರಿಗೆ ರೆಪೋ ದರ ಏರಿಕೆಯಾಗದ ಕಾರಣ ಈ ಬಾರಿ ಬಡ್ಡಿದರ ಅಥವಾ ಇಎಂಐ ಹೆಚ್ಚಳದಂತಹ ಸಮಸ್ಯೆಯೇನೂ ಅಲ್ಲ. ಆದರೂ ಈ ರೆಪೋ ದರ ಎಷ್ಟು ಸಮಯ ಹೀಗೆ ಸ್ಥಿರವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಿರುವಾಗ ಈ ಸಮಯದಲ್ಲಿ ಹೂಡಿಕೆ ಹಾಗೂ ಸಾಲ ಮರುಪಾವತಿ ಕುರಿತು ಯಾವ ರೀತಿಯ ನಿರ್ಧಾರ ಕೈಗೊಳ್ಳಬೇಕು? ಇಲ್ಲಿದೆ ಮಾಹಿತಿ.

ಹೂಡಿಕೆ, ಸಾಲಕ್ಕೆ ಸಂಬಂಧಿಸಿ ನಿರ್ಧಾರ ಹೀಗಿರಲಿ
*ಪ್ರಸಕ್ತವಿರುವ ಸಾಲ ಹಾಗೂ ಹೂಡಿಕೆಗಳನ್ನು ಪರಿಶೀಲಿಸಿ

ಪ್ರಸಕ್ತ ಸಂದರ್ಭದಲ್ಲಿ ನಿಮ್ಮ ಬಳಿ ಸಾಲವಿದ್ದು, ಅದರು ಫ್ಲೋಟಿಂಗ್ ಬಡ್ಡಿದರ ಹೊಂದಿದ್ದರೆ ಈ ಅವಧಿಯಲ್ಲಿ ನಿಮ್ಮ ಬಡ್ಡಿ ವೆಚ್ಚದಲ್ಲಿ ಯಾವುದೇ ಏರಿಕೆಯಾಗೋದಿಲ್ಲ. ಆದರೂ ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಅವಲೋಕಿಸಲು ಇದು ಉತ್ತಮ ಅವಕಾಶವಾಗಿದೆ. ನಿಮ್ಮ ಬಳಿ ಹಣವಿದ್ದರೆ ಅಧಿಕ ಬಡ್ಡಿದರ ಹೊಂದಿರುವ ಸಾಲಗಳನ್ನು ಮರುಪಾವತಿಸೋದು ಒಳ್ಳೆಯದು.  ಇದರಿಂದ ಮುಂದಿನ ದಿನಗಳಲ್ಲಿ ರೆಪೋ ದರದಲ್ಲಿ ಹೆಚ್ಚಳವಾದ್ರೆ ಆಗ ಹೆಚ್ಚಿನ ಬಡ್ಡಿದರ ಪಾವತಿಸಲೇಬೇಕಾಗುತ್ತದೆ. ಹೀಗಾಗಿ ನಿಮ್ಮ ಬಳಿ ಹಣವಿದ್ದರೆ ಸಾಲವನ್ನು ಕ್ಲೋಸ್ ಮಾಡೋದು ಉತ್ತಮ ನಿರ್ಧಾರವೇ ಆಗಿದೆ.

ಇನ್ನು ಹೂಡಿಕೆದಾರರು ತಮ್ಮ ಹೂಡಿಕೆ ಪೋರ್ಟ್ ಫೋಲಿಯೋವನ್ನು ಪರಿಶೀಲಿಸೋದು ಉತ್ತಮ. ಮುಖ್ಯವಾಗ ಬಾಂಡ್ಸ್ ಅಥವಾ ಡೆಟ್ ಫಂಡ್ಸ್ ನಲ್ಲಿ ಹೂಡಿಕೆ ಮಾಡಿರೋರು ಮರುಪರಿಶೀಲನೆ ನಡೆಸಲು ಇದು ಸೂಕ್ತ ಸಮಯ. ಏಕೆಂದರೆ ಬಡ್ಡಿದರದಲ್ಲಿ ಏರಿಕೆಯಾಗದ ಕಾರಣ ಈಗಿರುವ ಸ್ಥಿರ ಆದಾಯದ ಹೂಡಿಕೆಗಳಿಂದ ಬರುವ ಗಳಿಕೆ ಕೂಡ ಯಥಾಸ್ಥಿತಿಯಲ್ಲಿರುತ್ತವೆ. ಇದರಲ್ಲಿ ಯಾವುದೇ ಏರಿಕೆಯಾಗೋದಿಲ್ಲ. ಹೀಗಾಗಿ ನಿಮ್ಮ ಅಪಾಯ ಸಹಿಷ್ಣುತೆ ಹಾಗೂ ಗುರಿಗಳ ಆಧಾರದಲ್ಲಿ ಹೂಡಿಕೆ ಪ್ಲ್ಯಾನ್ ನಲ್ಲಿ ಬದಲಾವಣೆ ಮಾಡಿ.

ವಿಳಂಬ ಐಟಿಆರ್ ಸಲ್ಲಿಕೆ ವೇಳೆ ದಂಡ ಪಾವತಿಸೋದು ಹೇಗೆ? ಎಲ್ಲಿ? ಇಲ್ಲಿದೆ ಮಾಹಿತಿ

*ಹಣಕಾಸಿನ ಗುರಿಗಳನ್ನು ಅವಲೋಕಿಸಿ
ಈ ಅವಧಿಯಲ್ಲಿ ನಿಮ್ಮ ಸಣ್ಣ ಅವಧಿಯ ಹಾಗೂ ದೀರ್ಘಾವಧಿಯ ಹಣಕಾಸಿನ ಗುರಿಗಳನ್ನು ಇನ್ನೊಮ್ಮೆ ಅವಲೋಕಿಸಿ ನೋಡಿ. ಯಾವುದೋ ಮುಖ್ಯವಾದ ಖರೀದಿ, ನಿವೃತ್ತಿ ಅಥವಾ ಶಿಕ್ಷಣಕ್ಕೆ ನೀವು ಸಾಕಷ್ಟು ಪ್ರಮಾಣದಲ್ಲಿ ಉಳಿತಾಯ ಮಾಡುತ್ತಿದ್ದೀರಾ ಎಂಬುದನ್ನು ನೋಡಿಕೊಳ್ಳಿ. ನಿಮ್ಮ ಗುರಿಗಳಿಗೆ ಅನುಗುಣವಾಗಿ ಉಳಿತಾಯ ಹಾಗೂ ಹೂಡಿಕೆ ತಂತ್ರ ಬದಲಾಯಿಸಿಕೊಳ್ಳಿ.

*ದೀರ್ಘಾವಧಿ ಸಾಲ ಪಡೆಯಬಹುದು
ಒಂದು ವೇಳೆ ನೀವು ಗೃಹಸಾಲ ಅಥವಾ ಬ್ಯುಸಿನೆಸ್ ಸಾಲದಂತಹ ದೀರ್ಘಾವಧಿ ಸಾಲ ಪಡೆಯಲು ಬಯಸಿದ್ದರೆ ಈಗ ಬಡ್ಡಿದರ ಸ್ಥಿರವಾಗಿರುವ ಕಾರಣ ತೆಗೆದುಕೊಳ್ಳಬಹುದು. 

*ಉಳಿತಾಯ ಹಾಗೂ ಹೂಡಿಕೆ ಮೇಲೆ ಗಮನ ಕೇಂದ್ರೀಕರಿಸಿ
ಬಡ್ಡಿದರಗಳು ಸ್ಥಿರವಾಗಿರುವ ಕಾರಣ ನಿಮ್ಮ ಉಳಿತಾಯಗಳು ಹಾಗೂ ಹೂಡಿಕೆಯನ್ನು ಇನ್ನಷ್ಟು ಬಲಗೊಳಿಸುವ ಕಡೆಗೆ ಗಮನ ಕೇಂದ್ರೀಕರಿಸಿ. ಹೂಡಿಕೆ ಹಾಗೂ ಉಳಿತಾಯ ಖಾತೆಗೆ ಹೆಚ್ಚಿನ ಕೊಡುಗೆ ನೀಡುವ ಮೂಲಕ ಬಡ್ಡಿದರ ಸ್ಥಿರವಾಗಿರುವ ಈ ಪರಿಸ್ಥಿತಿಯ ಲಾಭ ಪಡೆಯಿರಿ.

RBI ರೆಪೋ ದರ ಏರಿಕೆ ಮಾಡದಿದ್ರೂ ಸಾಲದ ಬಡ್ಡಿದರ ಹೆಚ್ಚಿಸಿವೆ ಈ ಬ್ಯಾಂಕ್ ಗಳು; ಸಾಲಗಾರರ ಮೇಲೆ ಹೆಚ್ಚಿದ ಇಎಂಐ ಹೊರೆ

*ಒಂದೇ ಕಡೆ ಹೂಡಿಕೆ ಬೇಡ
ಸ್ಥಿರವಾದ ಬಡ್ಡಿದರ ಹೊಂದಿರುವ ಪರಿಸ್ಥಿತಿ ವಿವಿಧ ವಲಯಗಳಲ್ಲಿ ಹೂಡಿಕೆ ಮಾಡಲು ಉತ್ತಮ ಅವಕಾಶ ಕಲ್ಪಿಸುತ್ತದೆ. ಹೀಗಾಗಿ ಈಕ್ವಿಟಿ, ರಿಯಲ್ ಎಸ್ಟೇಟ್ ಅಥವಾ ಅಂತಾರಾಷ್ಟ್ರೀಯ ಹೂಡಿಕೆಗಳು ಸೇರಿದಂತೆ ವಿವಿಧ ವಲಯಗಳಲ್ಲಿ ಹೂಡಿಕೆ ಮಾಡುವ ಮೂಲಕ ಅಪಾಯ ತಗ್ಗಿಸಿಕೊಳ್ಳಿ ಹಾಗೂ ರಿಟರ್ನ್ಸ್ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿ.

*ತುರ್ತು ನಿಧಿ ನಿರ್ವಹಿಸಿ
ಬಡ್ಡಿದರ ಎಷ್ಟೇ ಇರಲಿ, ತುರ್ತುನಿಧಿ ನಿರ್ವಹಣೆ ಮಾಡೋದು ಅತ್ಯಗತ್ಯ. ಹೀಗಾಗಿ ಕನಿಷ್ಠ 3-6 ತಿಂಗಳ ವೆಚ್ಚಕ್ಕೆ ಸಾಕಾಗುವಷ್ಟು ಹಣವನ್ನು ಉಳಿತಾಯ ಮಾಡಿಟ್ಟುಕೊಳ್ಳಿ. 


 

Follow Us:
Download App:
  • android
  • ios