ಇನ್ನೂ 1 ವರ್ಷ ಗೃಹ ಸಾಲದ ಬಡ್ಡಿಗೆ 1.5 ಲಕ್ಷ ಹೆಚ್ಚುವರಿ ತೆರಿಗೆ ವಿನಾಯ್ತಿ!
ಇನ್ನೂ 1 ವರ್ಷ ಗೃಹ ಸಾಲದ ಬಡ್ಡಿಗೆ .1.5 ಲಕ್ಷ ಹೆಚ್ಚುವರಿ ತೆರಿಗೆ ವಿನಾಯ್ತಿ| ಕೊರೋನಾದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಇದು ಉತ್ತೇಜನ
ನವದೆಹಲಿ(ಫೆ.02): ಗೃಹ ಸಾಲದ ಬಡ್ಡಿಗೆ ನೀಡುತ್ತಿದ್ದ 1.5 ಲಕ್ಷ ರು. ಹೆಚ್ಚುವರಿ ತೆರಿಗೆ ವಿನಾಯ್ತಿಯನ್ನು ಈ ಬಾರಿಯ ಬಜೆಟ್‌ನಲ್ಲಿ 2022ರ ಮಾಚ್‌ರ್ 31ರವರೆಗೂ ವಿಸ್ತರಿಸಲಾಗಿದೆ. ಕೊರೋನಾದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಇದು ಉತ್ತೇಜನ ನೀಡುವ ಸಾಧ್ಯತೆಯಿದೆ.
ಮೊದಲ ಬಾರಿ ಮನೆ ಕೊಳ್ಳುವವರು 45 ಲಕ್ಷ ರು.ಗಿಂತ ಕಡಿಮೆ ಗೃಹಸಾಲ ಮಾಡಿದ್ದರೆ ಅದಕ್ಕೆ ಪ್ರತಿ ವರ್ಷ ಪಾವತಿಸುವ ಬಡ್ಡಿಯಲ್ಲಿ 2 ಲಕ್ಷ ರು.ಗೆ ತೆರಿಗೆ ವಿನಾಯ್ತಿ ಸಿಗುತ್ತದೆ. 2019ರ ಬಜೆಟ್‌ನಲ್ಲಿ ಇನ್ನೂ 1.5 ಲಕ್ಷ ರು. ಹೆಚ್ಚುವರಿ ಬಡ್ಡಿಗೆ ತೆರಿಗೆ ವಿನಾಯ್ತಿ ನೀಡಲಾಗಿತ್ತು. ಅದನ್ನು ಕಳೆದ ವರ್ಷಕ್ಕೂ ವಿಸ್ತರಿಸಲಾಗಿತ್ತು. ಈಗ ಈ ವರ್ಷಕ್ಕೂ ವಿಸ್ತರಿಸುವ ಘೋಷಣೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿದ್ದಾರೆ. ಅಂದರೆ 2022ರ ಮಾಚ್‌ರ್ 31ರೊಳಗೆ ಮೊದಲ ಮನೆ ಖರೀದಿಸಲು 45 ಲಕ್ಷ ರು.ಗಿಂತ ಕಡಿಮೆ ಗೃಹಸಾಲ ಪಡೆಯುವವರಿಗೆಲ್ಲ ಒಟ್ಟು 3.5 ಲಕ್ಷ ರು.ನಷ್ಟುಬಡ್ಡಿಗೆ ತೆರಿಗೆ ವಿನಾಯ್ತಿ ಸಿಗಲಿದೆ.
ಇನ್ನು, ಕೈಗೆಟಕುವ ಮನೆಗಳ ಲಭ್ಯತೆ ಹೆಚ್ಚುವಂತೆ ಮಾಡಲು ಗೃಹ ನಿರ್ಮಾಣ ಯೋಜನೆಗಳಿಗೆ 2022ರ ಮಾಚ್‌ರ್ 31ರವರೆಗೂ ತೆರಿಗೆ ವಿನಾಯ್ತಿ ನೀಡಲಾಗಿದೆ. ‘ಎಲ್ಲರಿಗೂ ಸೂರು ಲಭಿಸುವಂತೆ ಮಾಡುವ ಯೋಜನೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಹಾಗೆಯೇ, ವಲಸೆ ಕಾರ್ಮಿಕರಿಗೆ ಕೈಗೆಟಕುವ ದರದಲ್ಲಿ ಬಾಡಿಗೆ ಮನೆ ಒದಗಿಸುವ ಯೋಜನೆಯನ್ನೂ ಜಾರಿಗೊಳಿಸಲಾಗುತ್ತಿದೆ. ಇಂತಹ ಬಾಡಿಗೆ ಮನೆ ಯೋಜನೆಗಳಿಗೂ ತೆರಿಗೆ ವಿನಾಯ್ತಿ ನೀಡಲಾಗುವುದು’ ಎಂದು ನಿರ್ಮಲಾ ಹೇಳಿದ್ದಾರೆ.
ಕೊರೋನಾದಿಂದಾಗಿ 2020ರಲ್ಲಿ ದೊಡ್ಡ ದೊಡ್ಡ ನಗರಗಳಲ್ಲಿ ಮನೆ ಖರೀದಿ ಪ್ರಮಾಣ ಶೇ.40-50ರಷ್ಟುಕುಸಿತವಾಗಿತ್ತು. ಈಗ ನಿಧಾನವಾಗಿ ಏರಿಕೆಯಾಗುತ್ತಿದೆ.