Asianet Suvarna News Asianet Suvarna News

ಅಂದು ದೇಶ ತೊರೆಯುತ್ತಿದ್ದರು ಇಂದು ಇಲ್ಲೇ ಸ್ಟಾರ್ಟ್ಅಪ್ ಸ್ಥಾಪಿಸ್ತಿದ್ದಾರೆ: ಐಐಟಿ ಕಾನ್ಪುರ ನಿರ್ದೇಶಕ

ಐಐಟಿ ಕಾನ್ಪುರದ ನಿರ್ದೇಶಕರಾದ ಅಭಯ್ ಕರಂಡಿಕರ್ ಅವರು 10 ವರ್ಷದ ಹಿಂದೆ ಭಾರತದಲ್ಲಿ ಉದ್ಯೋಗ ಕ್ಷೇತ್ರ ಹೇಗಿತ್ತು, ಈಗ ಹೇಗಾಗಿದೆ. ಮುಂದೆ ಎಂತಹಾ ಬದಲಾವಣೆ ಆಗಲಿದೆ ಎಂಬುದರ ಬಗ್ಗೆ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ನೀಡಿದ ಸಂದರ್ಶನ ಇಲ್ಲಿದೆ.

Back then graduates were leaving the country for job today they are setting up startups here: IIT Kanpur Director Abhay Karandikar akb
Author
First Published Jun 30, 2023, 11:24 AM IST

ನಿರ್ದೇಶಕರಾಗಿ ಐಐಟಿ ಕಾನ್ಪುರ ಭಾರತದ ಭವಿಷ್ಯಕ್ಕೆ ಹೇಗೆ ಕೊಡುಗೆ ನೀಡಲಿದೆ ಎಂದು ನಿಮಗನ್ನಿಸುತ್ತದೆ?

ನಮ್ಮದು ಪ್ರಾಥಮಿಕವಾಗಿ ತಂತ್ರಜ್ಞಾನ ಅವಲಂಬಿತ ಸಂಸ್ಥೆ. ದೇಶಿಯವಾಗಿ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವುದು ನಮ್ಮ ಜವಾಬ್ದಾರಿ ಮತ್ತು ದೂರದೃಷ್ಟಿಯಾಗಿದೆ. ನಾವು ಯಾವ ವಿಭಾಗದಲ್ಲಿ ತಜ್ಞರಾಗಿದ್ದೆವೆಯೋ ಆ ಎಲ್ಲಾ ವಿಭಾಗಗಳಲ್ಲೂ ಭಾರತವನ್ನು ದೇಶಿಯವಾಗಿ ಅಭಿವೃದ್ಧಿಪಡಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ನಮ್ಮ ಪಾತ್ರವೂ ಇದೆ. ಒಂದು ಸಂಸ್ಥೆಯಾಗಿ ನಮ್ಮ ಸಂಶೋಧನೆಗಳನ್ನು ಲ್ಯಾಬ್‌ನಿಂದ ಮಾರುಕಟ್ಟೆಗೆ ಕೊಂಡೊಯ್ಯಬೇಕು. ಇದು ರಾಷ್ಟ್ರ ಮಟ್ಟದಲ್ಲಿ ಪರಿಣಾಮ ಬೀರಲಿದೆ. 5ಜಿ ಯೋಜನೆ, ಸೈಬರ್‌ ಸೆಕ್ಯುರಿಟಿ, ವೈದ್ಯಕೀಯ ಉಪಕರಣಗಳು, ಔಷಧಗಳ ಸಂಶೋಧನೆ ಸೇರಿದಂತೆ ಹಲವು ವಿಭಾಗಗಳಿಗೆ ನಾವು ಕೊಡುಗೆ ನೀಡಿದ್ದೇವೆ. ಮುಂದಿನ ದಿನಗಳಲ್ಲೂ ನಾವು ದೇಶೀಯವಾಗಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ಹೆಚ್ಚಿನ ಕೆಲಸ ಮಾಡುತ್ತೇವೆ.

ಐಐಟಿ ಕಾನ್ಪುರದಲ್ಲಿ ವೈದ್ಯಕೀಯ ಶಾಲೆಗಳನ್ನು ತೆರೆಯಲು ಹೇಗೆ ಸಾಧ್ಯವಾಯಿತು?

ಪ್ರಸ್ತುತ ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ. ಎಂಜಿನಯರಿಂಗ್‌ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲೂ ಇದು ಕಂಡುಬರುತ್ತಿದೆ. ಆದರೆ ಸಂಪೂರ್ಣವಾಗಿ ವೈದ್ಯಕೀಯ ಕ್ಷೇತ್ರವನ್ನು ಗಮನಿಸಿದಾಗ ದೇಶದಲ್ಲಿರುವ ಎಲ್ಲಾ ವೈದ್ಯಕೀಯ ಸಂಸ್ಥೆಗಳು ಕೇವಲ ವೈದ್ಯಕೀಯ ಕಾಲೇಜುಗಳಷ್ಟೇ ಆಗಿವೆ. ಅಮೆರಿಕ ಮತ್ತು ಯುರೋಪ್‌ಗಳಲ್ಲಿರುವಂತೆ ಇವು ವಿಜ್ಞಾನದ ವಿಭಾಗಗಳನ್ನು ಒಳಗೊಂಡಿರುವ ವಿಶ್ವವಿದ್ಯಾಲಯಗಳಾಗಿಲ್ಲ. ಹಾಗಾಗಿ ಎಂಜಿನಿಯರಿಂಗ್‌ ಕ್ಷೇತ್ರದಲ್ಲಿರುವ ನಮ್ಮ ಪ್ರಾಭಲ್ಯವನ್ನು ಗಮನಿಸಿ ಇದನ್ನು ವೈದ್ಯಕೀಯ ಕ್ಷೇತ್ರದಲ್ಲೂ ಕೈಗೊಳ್ಳಲು ನಾವು ಮುಂದಾದೆವು. ದಿನ ಕಳೆದಂತೆ ವೈದ್ಯಕೀಯ ಸಂಶೋಧನೆಗಳು ಹೆಚ್ಚಿನ ತಂತ್ರಜ್ಞಾನವನ್ನು ಅವಲಂಬಿಸುವುದರಿಂದ ಮೆಡಿಕಲ್‌ ಸ್ಕೂಲ್‌ ತೆಗೆದು, ಸಂಶೋಧನೆ ಆಧಾರಿತ ಶಿಕ್ಷಣ ನೀಡಲು ಆರಂಭಿಸಿದೆವು.

ಚಾಟ್‌ ಜಿಪಿಟಿಯಂತಹ ಎಐ ಕಾಲದಲ್ಲಿ ಐಐಟಿ ಕಾನ್ಪುರದ ಕೊಡುಗೆಯೇನು?

ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಚಾಟ್‌ ಜಿಪಿಟಿ ಕೇವಲ ಒಂದು ಸಾಧನವಷ್ಟೇ, ಈ ಹಿಂದೆಯೂ ಹಲವು ಸಾಧನಗಳನ್ನು ಕಂಡುಹಿಡಿಯಲಾಗಿತ್ತು. ಮುಂದೆಯೂ ಹಲವಾರು ಸಾಧನಗಳನ್ನು ಕಂಡುಹಿಡಿಯಲಾಗುತ್ತದೆ. ಆದರೆ ಅವುಗಳನ್ನು ಸರಿಯಾಗಿ ಬಳಸಿಕೊಳ್ಳುವುದನ್ನು ನಾವು ಕಲಿಯಬೇಕಿದೆ. ನಾವು ಭಾರಿ ಪ್ರಮಾಣದಲ್ಲಿ ಕೃತಕ ಬುದ್ಧಿಮತ್ತೆ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿದ್ದೇವೆ. ಜನರಿಗೆ ದೂರು ಸಲ್ಲಿಸಲು ಅನುಕೂಲ ಒದಗಿಸುವಂತಹ ಕೇಂದ್ರ ಸರ್ಕಾರದ ಪೋರ್ಟಲ್‌ ಆದಂತಹ ‘ಸಿಪಿಗ್ರಾಂ’ ವ್ಯವಸ್ಥೆ ಸರಿಯಾಗಿ ಕೆಲಸ ನಿರ್ವಹಿಲು ಬೇಕಾದ ಎಐ ವ್ಯವಸ್ಥೆಯನ್ನು ನಾವು ಅಭಿವೃದ್ಧಿ ಪಡಿಸಿದ್ದೇವೆ. ಇದು ಜನರು ನೀಡುವ ದೂರುಗಳನ್ನು ಅವುಗಳ ಸಂದರ್ಭಗಳನ್ನು ಆಧರಿಸಿ ಈ ಎಐ ವ್ಯವಸ್ಥೆ ವಿಭಾಗ ಮಾಡಲಿದೆ. ಇದು ಒಂದು ದೊಡ್ಡ ಕೃತಕ ಬುದ್ಧಮತ್ತೆಯ ಕೊಡುಗೆಯಾಗಿದೆ. ಇದೀಗ ನಾವು ಆರೋಗ್ಯ ಕ್ಷೇತ್ರದಲ್ಲೂ ಎಐ ವ್ಯವಸ್ಥೆಯ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇವೆ. ದೇಶದಲ್ಲೇ ಅತಿ ದೊಡ್ಡ ಆರೋಗ್ಯ ಮಿಶನ್‌ನ್ನು ಕೈಗೊಂಡಿದ್ದೇವೆ. ಇದರಲ್ಲೂ ಎಐ ಪ್ರಮುಖ ಪಾತ್ರ ವಹಿಸಲಿದೆ.

ವಿದ್ಯಾಭ್ಯಾಸಕ್ಕಾಗಿ ವಿದೇಶಗಳಿಗೆ ಹೋಗುವುದು ನಮ್ಮ ದೇಶದ ಪ್ರಗತಿಯ ಮೇಲೆ ಪರಿಣಾಮ ಬೀರಲಿದೆಯೇ?

ಜನ ಕಲಿಯಲು ಉತ್ತಮ ಅವಕಾಶಕ್ಕಾಗಿ ಎದುರು ನೋಡುತ್ತಿರುತ್ತಾರೆ. ಹಾಗಾಗಿ ನಾವು ಮಾಡಬೇಕಿರುವುದೇನೆಂದರೆ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವುದು. ಅದೇ ನಿಟ್ಟಿನಲ್ಲಿ ನೂತನ ಶಿಕ್ಷಣ ನೀತಿ ಕೆಲಸ ಮಾಡುತ್ತಿದೆ. ಇದರ ಮೂಲ ಗುರಿ ಉತ್ತಮ, ವಿಸ್ತಾರವಾದ ಮತ್ತು ಉತ್ತಮ ಗುಣಮಟ್ಟದ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದಾಗಿದೆ. ಶಿಕ್ಷಕರ ಮಟ್ಟದಲ್ಲೂ ಇದನ್ನು ಕೈಗೊಳ್ಳಲಾಗುತ್ತಿದೆ. ಒಂದು ವೇಳೆ ನಮ್ಮ ಶಿಕ್ಷಣದ ಗುಣಮಟ್ಟಅಭಿವೃದ್ಧಿಯಾದರೆ, ನಮ್ಮ ವಿದ್ಯಾರ್ಥಿಗಳು ಇಲ್ಲೇ ವಿದ್ಯಾಭ್ಯಾಸ ಕೈಗೊಳ್ಳಲಿದ್ದಾರೆ. ಈಗ ದೇಶದಲ್ಲಿ ಹಲವು ಉದ್ಯೋಗದ ಅವಕಾಶಗಳಿವೆ. 10 ವರ್ಷಗಳ ಹಿಂದೆ ಶೇ.90ರಷ್ಟುಐಐಟಿ ಪದವೀಧರರು ವಿದೇಶಗಳಿಗೆ ಹೋಗುತ್ತಿದ್ದರು. ಆದರೆ ಈಗ ಶೇ.90ರಷ್ಟುಮಂದಿನ ಇಲ್ಲೇ ಉಳಿದುಕೊಳ್ಳುತ್ತಿದ್ದಾರೆ. ಶೇ.10ರಷ್ಟುಮಾತ್ರ ಹೊರ ಹೋಗುತ್ತಿದ್ದಾರೆ. ಇದರಲ್ಲಿ ಬಹಳಷ್ಟುಜನ ತಮ್ಮದೇ ಆದ ಸ್ಟಾರ್ಚ್‌ಅಪ್‌ಗಳನ್ನು ಹೊಂದಿದ್ದಾರೆ. ಶೇ.90ರಷ್ಟುಐಐಟಿ ಪದವೀಧರರು ದೇಶದಲ್ಲೇ ಉಳಿದುಕೊಳ್ಳುತ್ತಿರುವುದು, ಕೆಲಸ ಮತ್ತು ದೇಶದಲ್ಲಿ ಬೆಳವಣಿಗೆ ಉಂಟಾಗಿರುವ ಲಕ್ಷಣವಾಗಿವೆ. 30 ವರ್ಷಗಳ ಹಿಂದೆ ಎಲ್ಲಾ ಐಐಟಿ ಪದವೀಧರರು ವಿದೇಶಕ್ಕೆ ಹೋಗುತ್ತಿದ್ದರು. ಈ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲೇ ಇದೆ.

ವಿದೇಶಿ ವಿಶ್ವವಿದ್ಯಾಲಯಗಳ ದೇಶಕ್ಕೆ ಬರುತ್ತಿರುವುದು ಯುವ ಭಾರತದ ಮೇಲೆ ಬೀರುವ ಪರಿಣಾಮವೇನು?

ಐಐಟಿ ಕಾನ್ಪುರ ಹಲವು ವಿದೇಶಿ ವಿಶ್ವವಿದ್ಯಾಲಯಗಳ ಜೊತೆಗೆ ಸಹಭಾಗಿತ್ವವನ್ನು ಹೊಂದಿದೆ. ವಿದೇಶದ ವಿಶ್ವವಿದ್ಯಾಲಯಗಳು ನಮ್ಮ ದೇಶಕ್ಕೆ ಬರುತ್ತಿರುವುದನ್ನು ನಾವು ಸ್ವಾಗತಿಸುತ್ತೇವೆ. ನ್ಯೂಯಾರ್ಕ್ ವಿಶ್ವವಿದ್ಯಾಲಯದ ಜೊತೆಗೆ ನಾವು ಜಂಟಿ ಪಿಎಚ್‌ಡಿಯನ್ನು ಆರಂಭಿಸಿದ್ದೇವೆ. ಇದರ ಪ್ರಕಾರ ವಿದ್ಯಾರ್ಥಿಗಳು ತಮ್ಮ ಸಮಯವನ್ನು ಐಐಟಿ ಕಾನ್ಪುರ ಮತ್ತು ನ್ಯೂಯಾರ್ಕ್ ವಿವಿಯಲ್ಲಿ ಅಧ್ಯಯನ ಮಾಡಲು ಬಳಸಿಕೊಳ್ಳಬಹುದು. ಒಂದೇ ಸಮಯದಲ್ಲಿ 2 ಕಡೆಯೂ ಪದವಿ ಪಡೆದುಕೊಳ್ಳಬಹುದು. ಇದಲ್ಲದೇ ರೈಸ್‌ ವಿಶ್ವವಿದ್ಯಾಲಯದ ಜೊತೆಗೂ ನಾವು ಸಹಭಾಗಿತ್ವ ಹೊಂದಿದ್ದೇವೆ. ಲ್ಯಾಟ್ರೋಬ್‌ ವಿಶ್ವವಿದ್ಯಾಲಯ ಮತ್ತು ಮೆಲ್ಬರ್ನ್‌ ವಿಶ್ವವಿದ್ಯಾಲಯಗಳ ಜೊತೆ ನಾವು ಸಹಭಾಗಿತ್ವ ಹೊಂದಿದ್ದೇವೆ. ಒಂದು ಸಂಸ್ಥೆಯಾಗಿ ನಾವು ಜಾಗತಿಕವಾಗಿ ಸ್ಪರ್ಧೆ ನೀಡಲು ಸಿದ್ಧರಾಗಬೇಕಿದೆ. ಹಾಗಾಗಿ ನಾವು ಜಾಗತಿಕ ಮಟ್ಟದ ವಿಶ್ವವಿದ್ಯಾಲಯಗಳ ಜೊತೆ ಕೆಲಸ ಮಾಡಬೇಕಿದೆ. ಹಾಗಾಗಿ ವಿದೇಶಿ ವಿಶ್ವವಿದ್ಯಾಲಯಗಳು ಭಾರತಕ್ಕೆ ಬರುವುದರಿಂದ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ.

ನೀವು 6ಜಿ ತಂತ್ರಜ್ಞಾನ ತಂಡದ ಭಾಗವಾಗಿದ್ದಿರಿ. ಇದರ ರೋಡ್‌ಮ್ಯಾಪ್‌ ಬಗ್ಗೆ ಏನು ಹೇಳಲು ಬಯಸುವಿರಿ?

ನಾನು 6ಜಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಸರ್ಕಾರ ನೇಮಕ ಮಾಡಿದ್ದ ತಂಡದ ಭಾಗವಾಗಿದ್ದೆ. ಅಲ್ಲದೇ 6ಜಿ ಸ್ಪೆಕ್ಟ್ರಂ ಪಾಲಿಸಿ ಟಾಸ್‌್ಕಫೋರ್ಸ್‌ನ ಮುಖ್ಯಸ್ಥನಾಗಿದ್ದೆ. ನಾವು ನಮ್ಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ಧೇವೆ. ಈ ವರದಿಯನ್ನು ಪ್ರಧಾನಿಗಳು ಬಿಡುಗಡೆ ಮಾಡಿದ್ದು, ಸರ್ಕಾರ ಇದೀಗ 6ಜಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಹೊಸ ತಂಡವನ್ನು ರಚನೆ ಮಾಡಿದೆ. ನನ್ನ ಅಭಿಪ್ರಾಯವೇನೆಂದರೆ 6ಜಿ ತಂತ್ರಜ್ಞಾನವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬೇಕು. ಈಗಾಗಲೇ ದೇಶದಲ್ಲಿ 5ಜಿ ತಂತ್ರಜ್ಞಾನವಿದ್ದು, ಇದು ಕೇವಲ ವೇಗದ ಇಂಟರ್ನೆಟ್‌ ನೀಡುವುದಷ್ಟೇ ಅಲ್ಲದೇ ಹಲವು ಕ್ಷೇತ್ರಗಳ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ. ಇ-ಗವರ್ನನ್ಸ್‌, ಆರೋಗ್ಯ, ಶಿಕ್ಷಣ, ಕೃಷಿ, ಸಾರಿಗೆ ಕ್ಷೇತ್ರಗಳಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಉಂಟುಮಾಡಲಿದೆ. ಎಲ್ಲಾ ಡಿಜಿಟಲ್‌ ಕ್ಷೇತ್ರಗಳು ಒಂದು ಮೇಲ್ಪಟ್ಟಕ್ಕೆ ತಲುಪಲು 5ಜಿ ಸಹಾಯ ಮಾಡಲಿದೆ.

ಜಾಗತಿಕವಾಗಿ ಹಲವು ಸಂಸ್ಥೆಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿವೆ. ಭಾರತದ ಪರಿಸ್ಥಿತಿಯೇನು?

ಪ್ರಸ್ತುತ ನಾವು ದೇಶಿಯವಾಗಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದ್ಧೇವೆ. ಭಾರತ ತಂತ್ರಜ್ಞಾನದ ಬಹುದೊಡ್ಡ ಮಾರುಕಟ್ಟೆಯಾಗಿದೆ. ಇದನ್ನು ನಾವು ದೇಶಿಯವಾಗಿ ತಯಾರು ಮಾಡುವುದಲ್ಲದೇ ಹಲವು ದೇಶಗಳಿಗೆ ರಫ್ತು ಸಹ ಮಾಡುತ್ತಿದ್ದೇವೆ. ಉದಾಹರಣೆಯಾಗಿ ಕೋವಿಡ್‌ ಸಮಯವನ್ನು ತೆಗೆದುಕೊಳ್ಳಬಹುದು. ನಾವು ನಮ್ಮದೇ ಆದ ಕೋವಿಡ್‌ ಲಸಿಕೆಯನ್ನು ತಯಾರಿಸಿದೆವು. ಜಾಗತಿಕವಾಗಿ ಪೂರೈಕೆ ಮಾಡಿದೆವು. 5ಜಿ ಮತ್ತು 6ಜಿ ತಂತ್ರಜ್ಞಾನದ ಅಭಿವೃದ್ಧಿ ವೈದ್ಯಕೀಯ ಉಪಕರಣಗಳು, ಕೃತಕ ಅಂಗಾಂಗಗಳ ಅಭಿವೃದ್ಧಿ, ಈಗಾಗಲೇ ನಾವು ಕೃತಕ ಹೃದಯ ಸೃಷ್ಟಿಮಾಡುವತ್ತ ಕೆಲಸ ಮಾಡುತ್ತಿದ್ದೇವೆ. ಇವುಗಳು ದೇಶದಲ್ಲಿ ಸದ್ಯಕ್ಕೆ ಉಪಯೋಗಕ್ಕೆ ಬಾರದಿರಬಹುದು. ಆದರೆ ಜಾಗತಿಕವಾಗಿ ನಾವು ಇದನ್ನು ರಫ್ತು ಮಾಡಲು ಸಾಧ್ಯವಿದೆ. ಕೇಂದ್ರ ಸರ್ಕಾರ ಈ ಸೆಮಿಕಂಡಕ್ಟರ್‌ ಮಿಶನ್‌ ಅನ್ನು ಆರಂಭಿಸಿದೆ. ಇದಕ್ಕಾಗಿ ಸರ್ಕಾರ ಹೂಡಿಕೆಯನ್ನು ಮಾಡುತ್ತಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಉತ್ಪಾದನಾ ವಲಯದಲ್ಲಿ ಇದು ಕ್ರಾಂತಿ ಮಾಡಲಿದೆ.

ಶಿಕ್ಷಣ ಕೇತ್ರದಲ್ಲಿ ಕೇರಳ ರಾಜ್ಯದ ಸಾಧನೆಯನ್ನು ನೀವು ಹೇಗೆ ಗುರುತಿಸುತ್ತೀರಿ?

ಕೇರಳದ ಉನ್ನತ ಶಿಕ್ಷಣದ ಬಗ್ಗೆ ನನಗೆ ಹೆಚ್ಚಿನದೇನೂ ಗೊತ್ತಿಲ್ಲ. ಕೇರಳದಲ್ಲಿ ನಾವು ಐಐಟಿಯನ್ನು ಹೊಂದಿದ್ದೇವೆ. ಕೇರಳ ಕಲೆ ಮತ್ತು ಸಂಶೋಧನಾ ಕೇಂದ್ರಗಳನ್ನು ಹೊಂದಿದೆ. ಉದಾಹರಣೆಗೆ ವಿಕ್ರಮ ಸಾರಾಭಾಯಿ ಸ್ಪೇಸ್‌ ಸೆಂಟರ್‌, ಅಲ್ಲದೇ ಶೈಕ್ಷಣಿಕ ಕ್ಷೇತ್ರದಲ್ಲೂ ಹಲವು ಉತ್ತಮ ಸಂಶೋಧನಾ ಕೇಂದ್ರಗಳನ್ನು ಹೊಂದಿದೆ. ಶಿಕ್ಷಣದ ಪೂರ್ಣ ವ್ಯವಸ್ಥೆ ಅಭಿವೃದ್ಧಿ ಹೊಂದುತ್ತಿದೆ. ಈ ಎಲ್ಲಾ ಸಂಸ್ಥೆಗಳು ದೇಶದ ಅಭಿವೃದ್ಧಿಯನ್ನು ಪ್ರಮುಖವಾದ ಕೊಡುಗೆಯನ್ನು ನೀಡುತ್ತಿವೆ.

ಭಾರತ ಈ ವರ್ಷ ಜಿ20 ಸಮ್ಮೇಳನ ಆಯೋಜಿಸುತ್ತಿದೆ. ಇದರಲ್ಲಿ ನಿಮ್ಮ ಹಾಗೂ ಐಐಟಿ ಕಾನ್ಪುರದ ಪಾತ್ರವೇನು?

ಐಐಟಿ ಕಾನ್ಪುರದ ಹಲವು ಸಿಬ್ಬಂದಿಗಳನು ಹಲವು ಸಮ್ಮೇಳನಗಳಲ್ಲಿ ಭಾಗಿಯಾಗಿದ್ದಾರೆ. ಸೈನ್ಸ್‌-20 ಸಭೆಯನ್ನು ನಾವು ಆಯೋಜನೆ ಮಾಡಿದ್ದೆವು. ಪ್ರೊ.ಆಶುತೋಷ್‌ ಶರ್ಮಾ ಅವರು ಈ ಎಸ್‌-20ಯಲ್ಲಿ ನಡೆದ ಚರ್ಚೆಗಳನ್ನು ಮುನ್ನಡೆಸಿದರು. ಇದು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೊಡುಗೆ ನೀಡಿದವು. ಅಲ್ಲದೇ ಇ-20 (ಎಜುಕೇಶನ್‌20) ಸಮ್ಮೇಳನಕ್ಕೂ ನಾವು ಕೊಡುಗೆ ನೀಡಿದ್ದೇವೆ. ಒಂದು ಸಂಸ್ಥೆಯಾಗಿ ನಾವು ಶಿಕ್ಷಣ, ತಂತ್ರಜ್ಞಾನ, ವಿಜ್ಞಾನ ಕ್ಷೇತ್ರಗಳಲ್ಲಿ ನಾವು ಕೊಡುಗೆ ನೀಡಿದ್ದೇವೆ. ಇವೆಲ್ಲವೂ ಸೆಪ್ಟೆಂಬರ್‌ನಲ್ಲಿ ನಡೆಯುವ ಅಂತಿಮ ಸಭೆಯತ್ತ ನಮ್ಮನ್ನು ಕರೆದೊಯ್ಯುತ್ತವೆ.

Latest Videos
Follow Us:
Download App:
  • android
  • ios