Asianet Suvarna News Asianet Suvarna News

ಬೆಂಗಳೂರಿನ ಕೆಲ ರಸ್ತೆಗಳಲ್ಲಿ ತಗ್ಗಿದ ಟ್ರಾಫಿಕ್‌ ಜಾಮ್‌: ಇದಕ್ಕೆ ಕಾರಣವೇನು?

ಕೋವಿಡ್‌ ಲಾಕ್‌ಡೌನ್‌ ನಂತರ ಉಂಟಾಗಿದ್ದ ಭಾರಿ ಟ್ರಾಫಿಕ್‌ ಜಾಮ್‌ನಲ್ಲಿ ಸುಧಾರಣೆ
ಸಂಚಾರ ನಿಯಂತ್ರಣಕ್ಕೆ ಸರ್ಕಾರ, ಪೊಲೀಸ್‌ ಇಲಾಖೆ ಕೈಗೊಂಡ ಕ್ರಮಗಳೇನು?
ನಗರ ಸಂಚಾರ ವಿಭಾಗಕ್ಕೆ ನೇಮಕವಾದ ವಿಶೇಷ ಆಯುಕ್ತ  ಡಾ. ಎಂ.ಎ.ಸಲೀಂ ಜಾರಿಗೊಳಿಸಿದ ಸೂತ್ರಗಳೇನು? 

A huge improvement in traffic jams on some roads in the capital What is the reason
Author
First Published Dec 3, 2022, 11:20 AM IST

ಬೆಂಗಳೂರು (ಡಿ.3) : ರಾಜ್ಯ ರಾಜಧಾನಿಯಲ್ಲಿ ಕಳೆದ ಆರು ತಿಂಗಳಿಂದ ಟ್ರಾಫಿಕ್‌ ಜಾಮ್‌ ನಿಯಂತ್ರಣ ಉದ್ದೇಶದಿಂದ ಮುಖ್ಯ ಕಾರ್ಯದರ್ಶಿ ಹಾಗೂ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆಸಿ 10 ಪ್ರಮುಖ ಜಂಕ್ಷನ್‌ಗಳನ್ನು ಪ್ರಮುಖ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇತ್ತೀಚೆಗೆ ಟ್ರಾಫಿಕ್‌ ಸಮಸ್ಯೆ ನಿವಾರಣೆಗೆ ನಗರ ಸಂಚಾರ ವಿಭಾಗಕ್ಕೆ ಎಡಿಜಿಪಿ ದರ್ಜೆಯ ವಿಶೇಷ ಆಯುಕ್ತರ ಹುದ್ದೆಯನ್ನು ಹೊಸದಾಗಿ ಸೃಷ್ಟಿಸಲಾಗಿತ್ತು. ಐಪಿಎಸ್ ಅಧಿಕಾರಿ ಡಾ. ಎಂ.ಎ.ಸಲೀಂ ಅವರನ್ನು ವಿಶೇಷ ಆಯುಕ್ತರನ್ನಾಗಿ ನೇಮಿಸಿದ ಬಳಿಕ ಬೆಂಗಳೂರು ಸಂಚಾರ ವವ್ಯಸ್ಥೆಯಲ್ಲಿ ಸುಧಾರಣೆ ಕಂಡುಬಂದಿದೆ.

ಸಿಲಿಕಾನ್‌ ಸಿಟಿಯಲ್ಲಿ ಕಳೆದ ಮೂರು ವರ್ಷಗಳಿಂದ ಟ್ರಾಪಿಕ್‌ ಜಾಮ್‌ ನಿರ್ವಹಣೆಯಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ. 2020ರಲ್ಲಿ ಕೋವಿಡ್‌ ಸಾಂಕ್ರಾಮಿಕ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ವೇಳೆ ಟ್ರಾಪಿಕ್‌ ಸಮಸ್ಯೆ ಇರಲಿಲ್ಲ. ಈ ಟ್ರಾಫಿಕ್‌ ರಹಿತ ವಾತಾವರಣದ ಪರಿಸ್ಥಿತಿ 2021ರವರೆಗೂ ಮುಂದುವರೆದಿತ್ತು. ಇನ್ನು 2022ರ ಆರಂಭದಿಂದಲೇ ಕೊರೊನಾ ನಿಯಂತ್ರಣಕ್ಕೆ ಬಂದ ನಂತರ ಗ್ರಾಮೀಣ ಪ್ರದೇಶಕ್ಕೆ ತೆರಳಿದ್ದ ಜನರು ಪುನಃ ನಗರಕ್ಕೆ ಆಗಮಿಸಿದರು. ಇನ್ನು ಐಟಿ ಬಿಟಿ ಕಂಪನಿಗಳು ಸೇರಿ ಬಹುತೇಕ ಸಾಫ್ಟ್ ವೇರ್‍‌ ಕಂಪನಿಗಳು ವರ್ಕ ಫ್ರಮ್ ಹೋಮ್‌ ತೆರವುಗೊಳಿಸಿ ಕಚೇರಿಗೆ ಬರುವಂತೆ ಸೂಚನೆ ನೀಡಿದವು. ಹೀಗಾಗಿ, ಪುನಃ 2022ರ ಮೇ ತಿಂಗಳಿಂದ ಭಾರಿ ಪ್ರಮಾಣದಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗತೊಡಗಿತು. ಇದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಬಿಬಿಎಂಪಿ, ಬಿಟಿಪಿ, ಬಿಎಂಟಿಸಿ ಸೇರಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡರೂ ನಿಯಂತ್ರಣ ಆಗಲಿಲ್ಲ. ನಂತರ ಪ್ರಮುಖ 10 ಟ್ರಾಫಿಕ್‌ ಜಂಕ್ಷನ್‌ಗಳನ್ನು ಗುರುತಿಸಿ ಸುಧಾರಣಾ ಕ್ರಮ ಕೈಗೊಳ್ಳುವಂತೆ ಸರ್ಕಾರದಿಂದ ಸೂಚನೆ ನೀಡಲಾಗಿತ್ತು. ಜೊತೆಗೆ ವಿಶೇಷ ಆಯುಕ್ತರ ನೇಮಕವನ್ನೂ ಮಾಡಲಾಗಿತ್ತು.

ಸ್ಪೆಷಲ್ ಕಮೀಷನರ್ ರೂಲ್ಸ್, ಒಂದೇ ವಾರದಲ್ಲಿ ಬೆಂಗಳೂರು ಟ್ರಾಫಿಕ್ ಸಮಸ್ಯೆ ಕಂಟ್ರೋಲ್!

ಟ್ರಾಫಿಕ್‌ ನಿಯಂತ್ರಣಕ್ಕೆ ವಿಶೇಷ ಆಯುಕ್ತರ ನೇಮಕ: ನಗರದಲ್ಲಿ ಕಡಿಮೆ ಆಗೋದೆ ಇಲ್ಲ ಎಂದುಕೊಂಡಿದ್ದ ಟ್ರಾಫಿಕ್ ಜಾಮ್ ಈಗ ರಾಜ್ಯ ರಾಜಧಾನಿಯಲ್ಲಿ ಕೊಂಚ ಸರಳವಾಗಿದೆ. ಟ್ರಾಫಿಕ್ ಕಡಿಮೆ ಮಾಡಲು ಬೆಂಗಳೂರಿಗೆ ಭೇಟಿ ನೀಡಿದ್ದ ವೇಳೆ ಪ್ರಧಾನಿ ಮೋದಿ ಕೂಡ ಸೂಚಿಸಿದ್ದರು. ಇದೀಗ ವಿಶೇಷ ಆಯುಕ್ತರ ನೇಮಕ ಬಳಿಕ, ಕೊಂಚ ಮಟ್ಟಿಗೆ ಟ್ರಾಫಿಕ್‌ನಿಂದ ಮುಕ್ತಿ ಸಿಕ್ಕಿದಂತಾಗಿದೆ. ಇದಕ್ಕೆ ಮುಖ್ಯ ಕಾರಣ ನಗರ ಸಂಚಾರ ವಿಭಾಗಕ್ಕೆ ಎಡಿಜಿಪಿ ದರ್ಜೆಯ ವಿಶೇಷ ಆಯುಕ್ತರ ಹುದ್ದೆಯನ್ನು ಹೊಸದಾಗಿ ಸೃಷ್ಟಿಸಲಾಗಿತ್ತು. ನಂತರ ಈ ಹುದ್ದೆಗೆ ಐಪಿಎಸ್ ಅಧಿಕಾರಿ ಡಾ. ಎಂ.ಎ.ಸಲೀಂ ಅವರನ್ನು ನೇಮಕ ಮಾಡಲಾಗಿದ್ದು, ಇವರು ಕೈಗೊಂಡ ಸುಧಾರಣಾ ಕ್ರಮಗಳಿಂದ ಕೆಲವು ರಸ್ತೆಗಳಲ್ಲಿ ನಿಯಂತ್ರಣಕ್ಕೆ ಬಂದಿರುವುದು ಗೋಚರವಾಗುತ್ತಿದೆ. 

ವಿಶೇಷ ಆಯುಕ್ತರ 3 ಸುಧಾರಣಾ ಸೂತ್ರಗಳು:
1) ಸರಕು ವಾಹನಗಳು ನಿರ್ಬಂಧ : ಬೆಳಗ್ಗೆ 8 ರಿಂದ 11 ಗಂಟೆವರೆಗೆ ಹಾಗೂ ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ಸರಕು ವಾಹನಳಿಗೆ ನಗರಕ್ಕೆ ನಿರ್ಬಂಧಿಸಲಾಗಿದೆ.
2) ಸಿಗ್ನಲ್ ಸಿಂಕ್ರೋನೈಜ್: ಈ ಹಿಂದೆ ಒಂದು ಸಿಗ್ನಲ್‌ ಓಪನ್‌ ಆದರೆ, ಮುಂದಿನ ಸಿಗ್ನಲ್‌ ಮುಚ್ಚಿಕೊಳ್ಳುತ್ತಿತ್ತು. ಆದರೆ, ಈಗ ಒಂದು ಸಿಗ್ನಲ್‌ ಓಪನ್‌ ಆದಲ್ಲಿ ಅದೇ ರಸ್ತೆಗಳಲ್ಲಿನ ಮುಂದಿನ ಭಾಗದಲ್ಲಿರುವ ಸಿಗ್ನಲ್‌ಗಳು ಕೂಡ ಓಪನ್ ಆಗಲಿದೆ. ಹೀಗಾಗಿ ವಾಹನಗಳು ಸುಲಭವಾಗಿ ಮುಂದಕ್ಕೆ ಹೋಗುತ್ತವೆ. ಒಂದೇ ರಸ್ತೆಯಲ್ಲಿ 3-4 ಸಿಗ್ನಲ್ ಇದ್ದರೆ, ಅವುಗಳು ಒಂದೇ ಬಾರಿಗೆ ಓಪನ್ ಕ್ಲೋಸ್ ಆಗುವಂತೆ ಸಿಂಕ್ರೋನೈಸ್‌ ಮಾಡಲಾಗುತ್ತಿದೆ.
3) ಬೆಳಗ್ಗೆಯಿಂದಲೇ ಸಂಚಾರಿ ಪೊಲೀಸರ ಸೇವೆ: ಇನ್ನು ಬೆಳಗ್ಗೆ8 ಗಂಟೆಗೆ ಮೊದಲೇ ಪೀಕ್‌ ಹವರ್‍‌ನಲ್ಲಿ ಸಂಚಾರಿ ಪೊಲೀಸ್ ಅಧಿಕಾರಿಗಳು ರಸ್ತೆಗೆ ಇಳಿದು ಟ್ರಾಫಿಕ್ ಕಂಟ್ರೋಲ್ ಮಾಡುತ್ತಿದ್ದಾರೆ. ಈ ಎಲ್ಲ ಕಾರಣದಿಂದ ನಗರದಲ್ಲಿ ಟ್ರಾಫಿಕ್ ಸದ್ಯ ಕಡಿಮೆಯಾಗುತ್ತಿದೆ. ಮುಖ್ಯವಾಗಿ ಪೀಕ್ ಹವರ್‌ನಲ್ಲೇ ಹಿರಿಯ ಅಧಿಕಾರಿಗಳು ಫೀಲ್ಡ್ ನಲ್ಲಿರಬೇಕೆಂದು ಸೂಚಿಸಲಾಗಿದೆ.

ಪೀಕ್ ಅವರ್‌ನಲ್ಲಿ ಬೆಂಗಳೂರು ಟ್ರಾಫಿಕ್ ಜಾಮ್ ತಪ್ಪಿಸಲು ಪೊಲೀಸರ ಮಾಸ್ಟರ್‌ ಪ್ಲ್ಯಾನ್‌..!

ಯಾವ ರಸ್ತೆಗಳಲ್ಲಿ ಸುಧಾರಣೆ ಆಗಿದೆ:
ನಗರ ಟ್ರಾಫಿಕ್‌ ವಿಭಾಗದ ವಿಶೆಷ ಆಯುಕ್ತರ ಸುಧಾರಣಾ ಕ್ರಮಗಳಿಂದಾಗಿ ಸಂಚಾರ ದಟ್ಟಣೆ ಕಡಿಮೆ ಆಗಿರುವುದು ಗೋಚರವಾಗುತ್ತಿದೆ. ಇದರಲ್ಲಿ ಮುಖ್ಯವಾಗಿ ಅತಿ ಹೆಚ್ಚು ಟ್ರಾಫಿಕ್‌ ಉಂಟಾಗುತ್ತಿದ್ದ ಹೆಬ್ಬಾಳ ಫೈಓವರ್‌ನಲ್ಲೂ ಸುಧಾರಣೆ ಕಾಣುತ್ತಿದೆ. ಇನ್ನು ನಾಯಂಡಹಳ್ಳಿಯಿಂದ ಮೈಸೂರು ರಸ್ತೆಯಲ್ಲೂ ಸಹ ವಾಹನಗಳು ವೇಗವಾಗಿ ಸಾಗುತ್ತಿವೆ. ಮಾರತಹಳ್ಳಿ ರಿಂಗ್ ರೋಡ್, ವೈಟ್ ಫೀಲ್ಡ್ ಸೇರಿದಂತೆ ಕೆಲ ಭಾಗಗಳಲ್ಲಿ ಸಮಸ್ಯೆಗಳು ಇನ್ನೂ ಇವೆ. ಅವುಗಳನಗನ್ನು ಹಂತ ಹಂತವಾಗಿ ಸುಧಾರಣೆ ತರಲು ಪೊಲೀಸ್‌ ಇಲಾಖೆ ಕ್ರಮ ಕೈಗೊಂಡಿದೆ.

ಕೆ.ಆರ್. ಮಾರುಕಟ್ಟೆಯಲ್ಲಿ ಪಾದಚಾರಿಗಳ ನಿಯಂತ್ರಣ:
ಇನ್ನು ನಗರದ ಸಿಟಿ ಮಾರ್ಕೆಟ್‌ ಜಂಕ್ಷನ್‌ನಲ್ಲಿ ರಸ್ತೆಯ ಮೇಲೆ ವಾಹನಗಳ ಸಂಚಾರಕ್ಕೆ ಅವಕಾಶ ಸಿಗದಂತೆ ಅಡ್ಡಾದಿಡ್ಡಿಯಾಗಿ ಸಂಚಾರ ಮಾಡುವ ಪಾದಚಾರಿಳಿಂದ ಸಮಸ್ಯೆ ಉಂಟಾಗುತ್ತಿದೆ. ಈಗ ಅಲ್ಲಿ ಸ್ಮಾರ್ಟ ಸಿಟಿ ವತಿಯಿಂದ ೬ ದ್ವಾರಗಳುಳ್ಳ ಹಾಗೂ ಎಸ್ಕಲೇಟ್‌ ಅಳವಡಿತ ಪಾದಚಾರಿ ಸುರಂಗ ಮಾರ್ಗ (ಸಬ್ ವೇ) ನಿರ್ಮಿಸಲಾಗಿದೆ. ಈ ಸುರಂಗ ಮಾರ್ಗದಲ್ಲಿ ಪಾದಚಾರಿಗಳು ಸಂಚಾರ ಮಾಡುವಂತೆ ಅರಿವು ಮೂಡಿಸಲು ಮತ್ತು ಈ ಕುರಿತ ಕ್ರಮವಹಿಸಲು ಹೆಚ್ಚುವರಿ ಪೊಲೀಸ್‌ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 

ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆಯದ್ದೇ ಹೆಚ್ಚು ಸಮಸ್ಯೆ. ಕಾಮಗಾರಿ ಕೆಲಸಗಳಿಂದಲೂ ತೊಡಕಾಗಿರುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಇದನ್ನು ಸುಧಾರಿಸುವುದಕ್ಕೆ ನಮ್ಮ ಸಂಚಾರಿ ಇಲಾಖೆ ಮುಂದಾಗಿದ್ದು, ಒಳ್ಳೆಯ ಸ್ಪಂದನೆ ಸಹ ದೊರೆಯುತ್ತಿದೆ.
- ಡಾ.ಎಂ.ಎ ಸಲೀಂ, ಸಂಚಾರಿ ವಿಭಾಗದ ವಿಶೇಷ ಆಯುಕ್ತ

Follow Us:
Download App:
  • android
  • ios