Asianet Suvarna News Asianet Suvarna News

New Year 2023: ಶುಭಕೃತ ಮತ್ತು ಶೋಭಾಕೃತನಾಮ ಸಂವತ್ಸರದ ದ್ವಾದಶರಾಶಿಗಳ ಫಲಾಫಲಗಳು

ಹೊಸ ವರ್ಷವೇನೋ ಆರಂಭವಾಯಿತು. ಆದರೆ ಈ ವರ್ಷ ನಮ್ಮ ಪಾಲಿಗೆ ಹೇಗಿದೆ ಅನ್ನೋದನ್ನು ತಿಳ್ಕೋಬೇಕಲ್ಲಾ. ಶುಭಕೃತ ಮತ್ತು ಶೋಭಾಕೃತನಾಮ ಸಂವತ್ಸರದ ದ್ವಾದಶರಾಶಿಗಳ ಫಲಾಫಲಗಳ ಮಾಹಿತಿ ಇಲ್ಲಿದೆ.

New Year 2023, Astrology As per Shubhakrit and Shobhakritnama Samvathsara Vin
Author
First Published Jan 1, 2023, 5:12 PM IST | Last Updated Jan 1, 2023, 5:18 PM IST

-ವೀಣಾ ಚಿಂತಾಮಣಿ

ಈ ವರ್ಷದ ಆವಧಿಯಲ್ಲಿ ಅಂದರೆ ಜನವರಿ 17, 2023ರಂದು ಶನಿ ತಾನು ಇದುವರೆಗೂ ಇದ್ದ ಮಕರರಾಶಿಯನ್ನು ಬಿಟ್ಟು ಕುಂಭರಾಶಿಗೆ ಪ್ರವೇಶ ಮಾಡುತ್ತಾನೆ. ತಾ. 22.04.23ರಂದು ಗುರು ತಾನು ಇದುವರೆಗೂ ಇದ್ದ ಮೀನರಾಶಿಯನ್ನು ಬಿಟ್ಟು ಮೇಷರಾಶಿಗೆ ಪ್ರವೇಶ ಮಾಡುತ್ತಾನೆ. ರಾಹುಕೇತುಗಳು 30.10.23 ರಂದು ತಾವು ಇದುವರೆಗೂ ಇದ್ದ ಮೇಷ-ತುಲಾ ರಾಶಿಯನ್ನು ಬಿಟ್ಟು ಮೀನ-ಕನ್ಯಾರಾಶಿಗೆ ಪ್ರವೇಶ ಮಾಡುತ್ತಾರೆ. 

ವಿ.ಸೂ: ಈ ಏಪ್ರಿಲ್ 22ರಂದು ಗುರು ಮೇಷರಾಶಿಗೆ ಪ್ರವೇಶವಾಗಿ ರಾಹುನ ಜೊತೆ ಯುತಿ ಯೋಗದಲ್ಲಿ ಅಕ್ಟೋಬರ್ ವರೆಗೂ ಇರುತ್ತಾನೆ. ಗುರು ರಾಹುನ ಜೊತೆ ಇರುವಷ್ಟು ಸಮಯ ಲೋಕಕಲ್ಯಾಣಕ್ಕೆ ಅಷ್ಟು ಒಳ್ಳೆಯದಲ್ಲ. ರಾಹು ಗುರುನ ಈ ಸಂಯೋಗ ಗುರುನ ಸ್ಥಾನದಲ್ಲಿ ಇರುವವರಿಗೆ ಕೊಂಚ ಮಾರಕ. ಜೊತೆಗೆ ಶನಿ ಕೂಡ ಕುಂಭರಾಶಿಗೆ ಪ್ರವೇಶಿಸಿದ ನಂತರ ಮೇಷ ರಾಶಿಯನ್ನು ವೀಕ್ಷಿಸುತ್ತಾನೆ. ಇದು ಕೂಡ ಲೋಕ ಕಲ್ಯಾಣ ಕಾರ್ಯಗಳಲ್ಲಿ ಅಡೆತಡೆ ಉಂಟುಮಾಡುತ್ತದೆ.

ಶುಭಫಲಗಳು: ಮೇಷ, ಕನ್ಯಾ, ಧನಸ್ಸು
ಮಧ್ಯಮ ಫಲ: ವೃಷಭ, ಮಿಥುನ, ಸಿಂಹ, ಮಕರ
ಕ್ಷೀಣಫಲ: ಕಟಕ, ತುಲಾ, ಕುಂಭ, ಮೀನ
ದ್ವಾದಶರಾಶಿಗಳ ಗೋಚಾರ ಫಲ:

ಮೇಷರಾಶಿ: ಮೇಷರಾಶಿಗೆ ಈಗ ಶನಿ ಹತ್ತನೇ ಮನೆಯಿಂದ ಹನ್ನೊಂದನೇ ಮನೆಗೆ ಪ್ರವೇಶವಾಗುತ್ತಾನೆ. ಹನ್ನೊಂದರ ಶನಿ ಶುಭಕಾರಕ. ಮೇಷ ರಾಶಿಯವರು ಈಗ ಎರಡು ಮೂರು ವರ್ಷಗಳಿಂದ ಬಹಳ ಕಷ್ಟ ಪಟ್ಟಿದ್ದಾರೆ. ಹಣವನ್ನು ಕಳೆದುಕೊಂಡಿದ್ದಾರೆ. ಮಾನಸಿಕ ಶಾಂತಿಯನ್ನು ಕಳೆದುಕೊಂಡಿದ್ದಾರೆ. ಈಗ ಅವರಿಗೆ ಶುಭ ಸಮಯ. ಹನ್ನೊಂದನೇ ಮನೆಗೆ ಬರುವ ಶನಿ ಅವರಿಗೆ ಅನೇಕ ಶುಭಫಲಗಳನ್ನು ಕೊಡುತ್ತಾನೆ. ಉನ್ನತ ಅಧಿಕಾರ ಮತ್ತು ಹಣಕಾಸಿನ ಬಲವನ್ನು ಕೊಡಿಸುತ್ತಾನೆ. ಈ ಹಿಂದೆ ಯಾವುದೇ ಕೆಲಸ ಕಾರ್ಯಗಳು ವಿಳಂಬಗತಿಯಲ್ಲಿ ಸಾಗುತ್ತಿತ್ತು. ಈಗ ಅವರು ಎಣಿಸಿದ ಕಾರ್ಯಗಳು ಸುಲಭವಾಗಿ ನೆರವೇರುತ್ತದೆ. ಆಸ್ತಿಕೊಳ್ಳುವ ಯೋಗ ಇದೆ. ಮನೆ ಕಟ್ಟಬಹುದು. ಹೊಸ ಉದ್ಯಮ ಪ್ರಾರಂಭಿಸಬಹುದು. ಹೊಸ ಉದ್ಯೋಗಾವಕಾಶವೂ ದೊರೆಯುತ್ತದೆ. ದೇಶ ಪ್ರಯಾಣ ಯೋಗ ಇದೆ. ಏಪ್ರಿಲ್‌ನಲ್ಲಿ ಗುರು ಮೇಷರಾಶಿಗೆ ಪ್ರವೇಶವಾಗುತ್ತಾನೆ. ಗುರು ನಿಮ್ಮ ರಾಶಿಯ ಪ್ರವೇಶ ನಿಮಗೆ ಅಷ್ಟು ಲಾಭ ತರದಿದ್ದರೂ ಶನಿಯ ಕೃಪಾಕಟಾಕ್ಷದಿಂದ ನೀವು ಅಂದುಕೊಂಡ ಕೆಲಸಕಾರ್ಯಗಳು ಸುಲಭವಾಗಿ ನೆರೆವೇರುತ್ತದೆ. ಅಕ್ಟೋಬರ್ ನಂತರ ರಾಹುಕೇತುಗಳು ಮೀನ ಹಾಗೂ ಕನ್ಯಾರಾಶಿಗೆ ಪ್ರವೇಶವಾಗಲಿದ್ದಾರೆ. ರಾಹು ೧೨ನೇ ಮನೆಗೆ ಬರುವುದು ನಿಮಗೆ ನಿಗೂಢ ಖರ್ಚುವೆಚ್ಚಗಳನ್ನು ತೋರಿಸಿದರೆ ಕೇತುನ ಆರನೇ ಮನೆ ಪ್ರವೇಶ ನಿಮಗೆ ಧೈರ್ಯ ಛಲ ಹಾಗೂ ಧನಲಾಭವನ್ನು ಸೂಚಿಸುತ್ತದೆ. ನೀವು ಶೇರ್ಸ್‌ನಲ್ಲಿ ಬಂಡವಾಳ ಹೂಡುವ ಅಭ್ಯಾಸ ಇದ್ದರೆ ಅಕ್ಟೋಬರ್ ನಂತರ ಜಾಗ್ರತೆಯಿಂದ ಹಣ ಹೂಡಿ. ನಷ್ಟವಾಗುವ ಸಾಧ್ಯತೆ ಇದೆ. ಆರೋಗ್ಯ ಉತ್ತಮವಾಗಿದೆ.
ಶುಭವರ್ಣ: ಕೆಂಪು ಶುಭ ಸಂಖ್ಯೆ: 9 ಶುಭರತ್ನ: ಹವಳ

New Year 2023: ಸಂಖ್ಯಾಶಾಸ್ತ್ರದ ಪ್ರಕಾರ ಈ ವರ್ಷ ನಿಮ್ಮ ಭವಿಷ್ಯ ಹೇಗಿದೆ ?

ವೃಷಭರಾಶಿ: ನಿಮಗೆ ಈಗ 11ನೇ ಮನೆಯಲ್ಲಿ ಗುರು ಇದ್ದು ಸಂಪೂರ್ಣ ಗುರುಬಲ ಏಪ್ರಿಲ್ 2023ರ ವರೆಗೂ ಇರುತ್ತದೆ. ನಂತರ ಗುರುನ ಮೇಷರಾಶಿ ಪ್ರವೇಶ ನಿಮಗೆ 12ನೇ ಮನೆ ಆಗುವುದರಿಂದ ಸ್ಥಳ ಬದಲಾವಣೆ ಸಾಧ್ಯತೆ ಇದೆ. ಖರ್ಚುಗಳು ಹೆಚ್ಚಾಗಿ ಆಗುತ್ತದೆ. ಹೆಚ್ಚನಂಶ ಶುಭಕಾರ್ಯಕ್ಕೆ ಖರ್ಚುಗಳು ಆಗುತ್ತವೆ. ಶನಿಯ ಹತ್ತನೇ ಮನೆ ಪ್ರವೇಶ ನಿಮಗೆ ನಷ್ಟವಾಗದಿದ್ದರೂ ಲಾಭಲ್ಲ. ಯಥಾಸ್ಥಿತಿ. ನಿಮ್ಮದು ತಾಳ್ಮೆಯ ಸ್ವಭಾವ ಅಂದರೆ ಒಳ್ಳೆಯ ದಿನಗಳು ಬರುವವವರೆಗೂ ಕಾಯುತ್ತೀರಿ ದುಡುಕುವುದಿಲ್ಲ. ಹೀಗಾಗಿ ನಿಮಗೆ ಕಷ್ಟ ಎನಿಸುವುದಿಲ್ಲ. ಗುರು ಹನ್ನೊಂದರಲ್ಲಿ ಇರುವಾಗ ನಿಮಗೆ ವೈಯುಕ್ತಿಕವಾಗಿ ಅನೇಕ ಶುಭಫಲಗಳು ಸಿಗುತ್ತವೆ. ಅರ್ಹರಿಗೆ ವಿವಾಹಯೋಗ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ಬಡ್ತಿ, ನಿಮಗೆ ಬೇಕಾದ ಸ್ಥಳಕ್ಕೆ ವರ್ಗಾವಣೆ, ಆಸ್ತಿ ಮನೆ ಕೊಂಡುಕೊಳ್ಳುವುದು ಸಂತಾನ ಅಪೇಕ್ಷೆ ಇರುವವರಿಗೆ ಸಂತಾನಭಾಗ್ಯ ಎಲ್ಲವೂ ಇದೆ. ವಿದ್ಯಾರ್ಥಿಗಳಿಗೆ ಸುಸಮಯ; ಉನ್ನತ ವ್ಯಾಸಂಗಕ್ಕಾಗಿ ಪ್ರಯತ್ನ ಪಡುತ್ತಿದ್ದರೆ ಈ ವರ್ಷ ನೆರವೇರುತ್ತದೆ. ದೇಶ ಪ್ರವಾಸ ಅಥವಾ ದೇಶ ವ್ಯಾಸಂಗ ಯೋಗವೂ ಇದೆ. ಅಕ್ಟೋಬರ್‌ನಲ್ಲಿ ರಾಹುಕೇತುಗಳ ಸ್ಥಾನ ಬದಲಾವಣೆ ನಿಮಗೆ ಲಾಭವನ್ನು ತಂದುಕೊಡುತ್ತದೆ. ಲಾಭಸ್ಥಾನಕ್ಕೆ ರಾಹುನ ಪ್ರವೇಶ ನಿಮಗೆ ಧನಲಾಭ ಮಾಡಿಸುತ್ತದೆ. ನಿಮ್ಮ ಧೈರ್ಯ ಹೆಚ್ಚಾಗುತ್ತದೆ. ಮುನ್ನುಗ್ಗಿ ಕೆಲಸ ಸಾಧಿಸುತ್ತೀರಿ. ಕೇತುನ ಐದನೇ ಮನೆ ಪ್ರವೇಶ ದ್ಯಾರ್ಥಿಗಳಿಗೆ ಕೊಂಚ ಹಿನ್ನಡೆ. ಆರೋಗ್ಯ ಮಧ್ಯಮ.
ಶುಭವರ್ಣ: ಬಿಳಿ ಶುಭರತ್ನ: ವಜ್ರ ಶುಭಸಂಖ್ಯೆ: 6

ಮಿಥುನರಾಶಿ: ನೀವು ಕಳೆದ ಮೂರು ವರ್ಷದಿಂದ ಅಷ್ಠಮ ಶನಿಯ ಪ್ರಭಾವಕ್ಕೆ ಒಳಪಟ್ಟು ಜೀವನದಲ್ಲಿ ಬಹಳ ಏರಿಳಿತಗಳನ್ನು ಅನುಭಸಿದ್ದೀರಿ. ಅಕ್ಷರಶಃ ಜೀವನವನ್ನೇ ಕಳೆದುಕೊಂಡಿದ್ದೀರಿ. ಈಗ ನಿಮಗೆ ಎಲ್ಲ ಕಷ್ಟನಷ್ಟಗಳಿಂದ ಮುಕ್ತಿ ಸಿಗಲಿದೆ. ಜನವರಿ 17ಕ್ಕೆ ಶನಿ ನಿಮ್ಮ ರಾಶಿಯಿಂದ ಅಷ್ಠಮ ಸ್ಥಾನ ಬಿಟ್ಟು ನವಮಕ್ಕೆ ಪ್ರವೇಶವಾಗುತ್ತಾನೆ. ಇದು ನಿಮ್ಮ ಜೀವನದಲ್ಲಿ ಬಹುದೊಡ್ಡ ಬದಲಾವಣೆ ತರಲಿದೆ. ಹಣಕಾಸಿನ ನಷ್ಟ ಅನುಭಸಿದ್ದೀರಿ. ಬರಬೇಕಾಗಿದ್ದ ಬಾಕಿ ವಸೂಲಾಗದೆ ಬಹಳ ಕಷ್ಟ ಪಟ್ಟಿದ್ದೀರಿ. ಸಂಸಾರ ಸುಖವನ್ನೂ ಕಳೆದುಕೊಂಡವರೂ ಇದ್ದಾರೆ. ಮನೆಯಲ್ಲಿ ಜಗಳ ಮನಸ್ತಾಪ ಅನುಭವಿಸಿ ಹೈರಾಣಾಗಿದ್ದೀರಿ. ಮನೆಯವರಿಂದ ದೂರ ಇರುವಂಥ ಸಂದರ್ಭವೂ ಬಂದಿದೆ. ಈಗ ಜನವರಿ 17ರ ನಂತರ ಎಲ್ಲವೂ ಹಂತಹಂತವಾಗಿ ಸರಿಹೋಗುತ್ತದೆ. ಶನಿ ತಾನು ಹೋಗುವಾಗ ಒಳ್ಳೆಯ ಫಲಗಳನ್ನು ಕೊಟ್ಟು ಹೋಗುತ್ತಾನೆ. ಏಪ್ರಿಲ್ 22ರ ನಂತರ ಗುರು ಲಾಭಸ್ಥಾನ ಪ್ರವೇಶ ಕೂಡ ನಿಮಗೆ ಶುಭಫಲ ಕೊಡುತ್ತದೆ. ಅವಿವಾಹಿತರಿಗೆ ಏಪ್ರಿಲ್ ನಂತರ ವಿವಾಹಯೋಗ ಇದೆ. ಉನ್ನತ ವ್ಯಾಸಂಗಕ್ಕೆ ಪ್ರಯತ್ನ ಪಡುತ್ತಿರುವವರು ಕೂಡ ಏಪ್ರಿಲ್ ನಂತರ ನಿಮ್ಮ ಪ್ರಯತ್ನ ಫಲ ಕೊಡುತ್ತದೆ. ಉದ್ಯೋಗದಲ್ಲಿ ಒಳ್ಳೆಯ ಸ್ಥಾನಮಾನ ಸಿಗುತ್ತದೆ. ಬಡ್ತಿ ಸಂಬಳ ಹೆಚ್ಚಾಗುವುದು ಮುಂತಾದ ಒಳ್ಳೆಯ ಸಂಗತಿಗಳು ನಡೆಯುತ್ತದೆ. ಪ್ರವಾಸ, ದೇಶ ಪ್ರಯಾಣ ಮೊದಲಾದ ಮನಸ್ಸಿಗೆ ತವಾಗುವ ಸಂಗತಿಗಳನ್ನು ಅನುಭಸುತ್ತೀರಿ. ಅಕ್ಟೋಬರ್ 2023ರ ವರೆಗೂ ಲಾಭಸ್ಥಾನದಲ್ಲಿ ರಾಹು ಇದ್ದು ನಿಮಗೆ ಬಹಳ ಸಹಕಾರಿ ಆಗಿರುತ್ತಾನೆ. ಈಗಿರುವ ಲಾಭಸ್ಥಾನದ ರಾಹು ಹಣವನ್ನು ಕೊಡಿಸುತ್ತಾನೆ. ಧೈರ್ಯ ಕೊಡುತ್ತಾನೆ. ಶತ್ರುಗಳನ್ನು ದೂರ ಮಾಡುತ್ತಾನೆ. ಇವುಗಳೆಲ್ಲದರ ಶುಭಫಲಗಳು ನಿಮಗೇ ಅನುಭವಕ್ಕೆ ಬರುತ್ತದೆ. ಆರೋಗ್ಯ ಕೂಡ ಉತ್ತಮವಾಗಿರುತ್ತದೆ.
ಶುಭವರ್ಣ: ಹಸಿರು ಶುಭರತ್ನ: ಪಚ್ಚೆ ಶುಭಸಂಖ್ಯೆ:5

ಕಟಕರಾಶಿ: ನಿಮಗೆ ಏಪ್ರಿಲ್ರ 2023ರ ವರೆಗೂ ಸಂಪೂರ್ಣ ಗುರುಬಲ ಇದೆ. ನೀವು ಕೈಹಾಕಿದ ಕೆಲಸಕಾರ್ಯಗಳಲ್ಲಿ ಜಯ ಸಿಗುತ್ತದೆ, ಹಣಕಾಸಿನ ಹರಿವು ಉತ್ತಮವಾಗಿದೆ. ಮನೆಯಲ್ಲಿ ಸಂತೋಷ ಸಮಾರಂಭಗಳು ನಡೆಯುತ್ತದೆ. ಅವಿವಾಹಿತರಿಗೆ ವಿವಾಹಯೋಗ ಇದೆ. ವರ್ಷದ ಪ್ರಾರಂಭದಲ್ಲೇ ನೀವು ಅಷ್ಠಮ ಶನಿಯ ಪ್ರಭಾವಕ್ಕೆ ಒಳಗಾಗಲಿದ್ದೀರಿ. ಅಷ್ಠಮ ಶನಿ ಎಂದರೆ ಕಷ್ಟನಷ್ಟಗಳ ಸಾಲೇ ಆದರೂ ಭಯಪಡಬೇಡಿ. ಶನಿ ನಮ್ಮ ಪಾಪಕರ್ಮವನ್ನು ತೊಳೆದು ಸ್ವಚ್ಛಗೊಳಿಸುತ್ತಾನೆ. ನಮ್ಮವರು ಯಾರು ಪರರು ಯಾರು ಎಂಬುದನ್ನು ನಮಗೆ ಮನವರಿಕೆ ಮಾಡಿಕೊಡುತ್ತಾನೆ. ಏಕೆಂದರೆ ಶನಿ ನಮ್ಮ ಸಹನೆಯನ್ನು ನಮ್ಮ ಕ್ಷಮತೆಯನ್ನು ಒರೆಗೆ ಹಚ್ಚುತ್ತಾನೆ. ನಮ್ಮವರೇ ನಮ್ಮ ವಿರುದ್ಧ ತಿರುಗಿ ಬೀಳುತ್ತಾರೆ. ನಮ್ಮವರೇ ನಮಗೆ ದ್ರೋಹ ಮಾಡುತ್ತಾರೆ. ಬೆನ್ನಹಿಂದೆ ಚೂರಿ ಹಾಕುತ್ತಾರೆ. ಇವೆಲ್ಲವನ್ನು ಶನಿ ನಮಗೆ ತೋರಿಸಿಕೊಡುತ್ತಾನೆ. ಹೀಗಾಗಿ ಅಷ್ಟಮಶನಿ ಕೊಂಚ ಕಠಿಣವೇ ಆದರೂ ಭಯ ಬೇಡ. ಆದಷ್ಟು ದೇವರ ಧ್ಯಾನ ಮಾಡಿ ಹಾಗೂ ಸತ್ಯದ ದಾರಿಯಲ್ಲಿ ನಡೆಯಿರಿ. ನಿಮ್ಮ ಅಂತರಾತ್ಮ ಮೆಚ್ಚುವ ಹಾಗೆ ನಡೆದುಕೊಳ್ಳಿ. ಏಪ್ರಿಲ್ ನಂತರ ಗುರು ಹತ್ತನೇ ಮನೆಗೆ ಪ್ರವೇಶವಾಗುತ್ತಾನೆ. ವೃತ್ತಿಯಲ್ಲಿ ಒತ್ತಡಗಳು ಇರುತ್ತದೆ. ಎಲ್ಲದಕ್ಕೂ ತಾಳ್ಮೆಯೇ ಮುಖ್ಯ ಅಸ್ತ್ರ. ಹಣಕಾಸು ಹರಿವು ದುರ್ಬಲವಾಗುತ್ತದೆ. ಕೌಟುಂಬಿಕ ಸಾಮರಸ್ಯಕ್ಕೂ ಧಕ್ಕೆ ಬರಬಹುದು. ಯಾರೊಂದಿಗೂ ವಾದ ಮಾಡಲು ಹೋಗಬೇಡಿ. ಆದಷ್ಟು ನೀವಾಯಿತು ನಿಮ್ಮ ಕೆಲಸವಾಯಿತು ಎಂಬಂತೆ ಇರಿ. ಅಕ್ಟೋಬರ್ 2023ರ ನಂತರ ರಾಹುಕೇತುಗಳ ಸ್ಥಾನ ಬದಲಾವಣೆಯಲ್ಲಿ ನಿಮಗೆ ಕೇತು ಶುಭಫಲಗಳನ್ನು ಕೊಡುತ್ತಾನೆ.
ಶುಭವರ್ಣ: ಬಿಳಿ ಶುಭರತ್ನ: ಮುತ್ತು ಶುಭಸಂಖ್ಯೆ: 2

ಸಿಂಹರಾಶಿ: ನಿಮಗೆ ಈಗ ಗುರುಬಲ ಇಲ್ಲ. ಆದರೆ ಶನಿಬಲ ಜನವರಿ ೧೭ರ ತನಕ ಇರುತ್ತದೆ. ಶನಿ ಇದುವರೆಗೂ ನಿಮಗೆ ಆರನೇ ಮನೆಯಲ್ಲಿ ಇದ್ದು ಧನಲಾಭ, ಅಧಿಕಾರ ಲಾಭ ಸಾಮಾಜಿಕ ಸ್ಥಾನಮಾನ ಎಲ್ಲವನ್ನೂ ಕೊಡಿಸಿದ್ದಾನೆ. 17ರ ನಂತರ ಶನಿ ಏಳನೇ ಮನೆಗೆ ಪ್ರವೇಶವಾಗುತ್ತಾನೆ. ನಷ್ಟವಾಗದಿದ್ದರೂ ಅರ್ಧಕ್ಕೆ ಅರ್ಧದಷ್ಟು ಲಾಭಾಂಶ ಕಡಿಮೆಯಾಗುತ್ತದೆ. ಈಗ ಏಪ್ರಿಲ್‌ವರೆಗೂ ಗುರುಬಲವೂ ಇಲ್ಲ. ಆದ್ದರಿಂದ ಏಪ್ರಿಲ್ 22ರ ತನಕ ನಿಮಗೆ ಪರೀಕ್ಷಾಕಾಲ. ಜೊತೆಗೆ ರಾಹು ಒಂಬತ್ತನೇ ಮನೆಯಲ್ಲಿ ಇರುವುದು ಕೂಡ ನಿಮಗೆ ಲಾಭ ತರುವುದಿಲ್ಲ. ಒಂಬತ್ತನೇ ಮನೆ ಭಾಗ್ಯಸ್ಥಾನ. ಇಲ್ಲಿ ರಾಹು ಭಾಗ್ಯಸ್ಥಾನಕ್ಕೆ ಕಪ್ಪು ಮಸಿ ಬಳಿಯುತ್ತಾನೆ. ನೀವು ಒಳ್ಳೆಯ ಕೆಲಸಗಳನ್ನು ಮಾಡಬೇಕೆಂದುಕೊಂಡರೂ ಮಾಡಲಾಗುವುದಿಲ್ಲ. ನಿಮ್ಮ ವರ್ಚಸ್ಸಿಗೆ ಧಕ್ಕೆಯಾಗುವಂತೆ ಪರಿಸ್ಥಿತಿಗಳು ಬರುತ್ತದೆ. ನಿಮಗೆ ಕೆಟ್ಟ ಹೆಸರು ತರಬಹುದು. ಜಾಗ್ರತೆಯಿಂದ ವ್ಯವಹರಿಸಿ. ಏಪ್ರಿಲ್ ನಂತರ ಗುರುಬಲ ಬರುವುದರಿಂದ ಶುಭಫಲಗಳು ಇವೆ. ಒಂಬತ್ತನೇ ಮನೆಯ ಗುರು ಧರ್ಮದ ಕೆಲಸಗಳನ್ನು ದೇವರ ಕೆಲಸಗಳನ್ನು ಮಾಡಿಸುತ್ತಾನೆ. ಕುಲದೇವರ ದರ್ಶನಭಾಗ್ಯ ಇದೆ. ಆದರೂ ಗುರು ಒಂಬತ್ತನೇ ಮನೆಯಲ್ಲಿ ರಾಹುನ ಜೊತೆ ಇರುವುದು, ನೀವು ಎಣಿಸಿದಂತೆ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯುವುದಿಲ್ಲ. ಆದರೂ ಗುರು ನಿಮ್ಮನ್ನು ರಕ್ಷಿಸುತ್ತಾನೆ. ಒಂಬತ್ತನೇ ಮನೆಯಲ್ಲಿ ಇದ್ದು ನಿಮ್ಮ ರಾಶಿಯನ್ನು ವೀಕ್ಷಿಸುವುದರಿಂದ ಏನೇ ಅನಾಹುತಗಳಾದರೂ ಪರಿಣಾಮ ಅಲ್ಪದರಲ್ಲಿ ಮುಗಿಯುತ್ತದೆ. ಬೆಟ್ಟದಹಾಗೆ ಬರುವ ಕಷ್ಟ ನಿಮ್ಮ ಬಳಿ ಬರುವ ಹೊತ್ತಿಗೆ ತೀಕ್ಷ್ಣತೆ ಕಡಿಮೆ ಆಗಿರುತ್ತದೆ. ಅಕ್ಟೋಬರ್ ನಂತರ ರಾಹು ಎಂಟನೇ ಮನೆಗೆ ಕೇತು ಎರಡನೇ ಮನೆಗೆ ಬಂದಾಗಲೂ ನೀವು ಜಾಗ್ರತೆ ವಹಿಸಬೇಕು. ಇವೆರಡೂ ಗ್ರಹಗಳ ಸಂಚಾರ ನಿಮ್ಮ ಆರೋಗ್ಯಕ್ಕೆ ಹಾನಿ ತರುವಂಥದ್ದು. ಮಾತಿನಿಂದ ತೊಂದರೆ ಇದೆ. ೨೦೨೩ ನಿಮಗೆ ಬೇವು ಬೆಲ್ಲ ಎರಡೂ ಸಮಾನವಾಗಿ ಸಿಗುವ ಸಮಯ.
ಶುಭವರ್ಣ: ಕೇಸರಿ. ಶುಭರತ್ನ: ಮಾಣಿಕ್ಯ ಶುಭಸಂಖ್ಯೆ: 1

ಕನ್ಯಾರಾಶಿ: ನಿಮಗೆ ಈಗ ಸುಗ್ಗಿಯಕಾಲ. ನೀವು ಅಂದುಕೊಂಡದ್ದೆಲ್ಲ ನೆರವೇರುವ ಸಮಯ. ಈಗ ಏಪ್ರಿಲ್‌ವರೆಗೂ ಸಂಪೂರ್ಣ ಗುರುಬಲ ಇದೆ. ಜನವರಿ 17ಕ್ಕೆ ಶನಿಯ ಕುಂಭರಾಶಿ ಪ್ರವೇಶ ನಿಮ್ಮ ಭಾಗ್ಯದ ಬಾಗಿಲನ್ನೇ ತೆರೆಸುತ್ತದೆ. ಆರನೇ ಮನೆಯಲ್ಲಿ ಶನಿ ಶುಭಕಾರಕನಾಗಿದ್ದಾನೆ. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಕಾರ್ಯಗಳು ಈಗ ಚಾಲನೆ ಪಡೆದುಕೊಳ್ಳುತ್ತದೆ. ಅಧಿಕಾರ ಲಾಭ, ಧನಲಾಭ, ಸಾಮಾಜಿಕ ಸ್ಥಾನಮಾನ ಮನ್ನಣೆ ಎಲ್ಲವೂ ಸಿಗುವ ಕಾಲ. ಕನ್ಯಾರಾಶಿಯ ರಾಜಕೀಯ ವ್ಯಕ್ತಿಗಳಿಗೂ ಗೌರವ ಉನ್ನತ ಸ್ಥಾನಮಾನ ದೊರೆಯುತ್ತದೆ. ಏಳನೇ ಮನೆಯ ಗುರು ನಿಮ್ಮ ರಾಶಿಯನ್ನೇ ವೀಕ್ಷಿಸುವುದರಿಂದ ಆರೋಗ್ಯಭಾಗ್ಯ, ಪ್ರಶಸ್ತಿ ಗೌರವಗಳು ಸಿಗುತ್ತದೆ. ಅರ್ಹರಿಗೆ ವಿವಾಹ ಯೋಗ ಇದೆ. ಸಂತಾನಾಪೇಕ್ಷೆ ಇರುವವರಿಗೂ ಈಗ ಶುಭಸುದ್ದಿ ಇದೆ. ಆಸ್ತಿಪಾಸ್ತಿ ಕೊಳ್ಳುವುದು, ದೇಶಪ್ರಯಾಣ ಯೋಗ, ಕೋರ್ಟು ಕೇಸುಗಳಲ್ಲಿ ಜಯ ಸಿಗುವುದು ಮುಂತಾದ ಒಳ್ಳೆಯ ಫಲಗಳನ್ನು ನಿರೀಕ್ಷಿಸಬಹುದು. ಅಕ್ಟೋಬರ್ ವರೆಗೂ ರಾಹು ಎಂಟನೇ ಮನೆಯಲ್ಲಿ ಇರುವುದು ಕೊಂಚ ಅಪಾಯಕಾರಿಯೇ ಆದರೂ ಗುರುಬಲ ಇರುವುದರಿಂದ ಭಯ ಬೇಡ. ಅಕ್ಟೋಬರ್ ನಂತರ ರಾಹು ಏಳನೇ ಮನೆಗೆ ಕೇತು ನಿಮ್ಮ ರಾಶಿಗೇ ಪ್ರವೇಶಿಸುತ್ತಾರೆ. ಆರೋಗ್ಯ, ಹಣಕಾಸು ನಿಮ್ಮ ವರ್ಚಸ್ಸು ಮತ್ತು ಕುಟುಂಬ ಸೌಖ್ಯ ಎಲ್ಲದರ ಬಗ್ಗೆ ಜಾಗ್ರತೆ ವಹಿಸಿ. ಏಪ್ರಿಲ್ ನಂತರ ಗುರುಬಲವೂ ಕಡಿಮೆಯಾದರೂ ಶನಿಬಲ ನಿಮ್ಮನ್ನು ವರ್ಷಪೂರ್ತಿ ರಕ್ಷಿಸುತ್ತದೆ. ವಿದ್ಯಾರ್ಥಿಗಳಿಗೂ ಶುಭಸಮಯ.
ಶುಭವರ್ಣ: ಹಸಿರು. ಶುಭರತ್ನ: ಪಚ್ಚೆ ಶುಭಸಂಖ್ಯೆ: 5

ತುಲಾರಾಶಿ: ಈಗ ನಿಮಗೆ ಆರನೇ ಮನೆಯಲ್ಲಿ ಗುರು ಹಾಗೂ ಜನವರಿ 17ಕ್ಕೆ ಐದನೇ ಮನೆಗೆ ಶನಿ ಪ್ರವೇಶವಾಗುತ್ತಾನೆ. ಪಂಚಮ ಶನಿ ಶುಭಕಾರಕನಲ್ಲ. ಹಣಕಾಸು ಆರೋಗ್ಯ ಕುಟುಂಬ ಸೌಖ್ಯಕ್ಕೆ ಧಕ್ಕೆ ಆಗಬಹುದು. ಮನಸ್ಸಿಗೆ ಅನಿಶ್ಚಿಂತೆ ಕಳವಳ ಇರುತ್ತದೆ. ಕೆಲಸಕಾರ್ಯಗಳಿಗೆ ವಿಘ್ನ ಉಂಟಾಗುತ್ತದೆ. ವಿದ್ಯಾರ್ಥಿಗಳಿಗೂ ಸಮಯ ಚೆನ್ನಾಗಿಲ್ಲ. ಓದಿದ್ದು ಮರೆತು ಬಿಡುತ್ತೀರಿ. ಟೆಸ್ಟ್ ಅಥವಾ ಪರೀಕ್ಷೆಗಳಲ್ಲಿ ಕಡಿಮೆ ಅಂಕಗಳು ಬರುವುದು ಅನಾರೋಗ್ಯ ಆಗಿ ಶಾಲಾಕಾಲೇಜಿಗೆ ಹಾಜರಾಗಲು ತೊಂದರೆ ಆಗುವುದು ಇಂಥ ವ್ಯತಿರಿಕ್ತ ಪರಿಣಾಮ ಎದುರಿಸುತ್ತೀರಿ. ಏಪ್ರಿಲ್ 2023ರ ನಂತರ ಗುರು ಏಳನೇ ಮನೆಗೆ ಬಂದಾಗ ಈ ವರ್ಷಪೂರ್ತಿ ಗುರುಬಲ ಇದ್ದು ಪಂಚಮ ಶನಿಯ ಪ್ರಭಾವ ಅಷ್ಟಾಗಿ ಕಾಡಿಸುವುದಿಲ್ಲ. ಕಷ್ಟನಷ್ಟಗಳು ಎದುರಾದರೂ ಗುರುಬಲದಿಂದ ಅವೆಲ್ಲ ಹಗುರವಾಗಿ ನಿಮಗೆ ನಿರಾಳತೆ ಕೊಡುತ್ತದೆ. ಆದರೂ ಪಂಚಮ ಶನಿಯನ್ನು ನಿರ್ಲಕ್ಷಿಸಬೇಡಿ. ಏನೇ ಕೆಲಸ ಮಾಡಬೇಕಾದರೂ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ಹತ್ತುಬಾರಿ ಯೋಚಿಸಿ ಮುಂದುವರೆಯಿರಿ. ಅಕ್ಟೋಬರ್ ನಂತರ ರಾಹು ನಿಮ್ಮ ರಾಶಿಯಿಂದ ಆರನೇ ಮನೆಗೆ ಹಾಗೂ ಕೇತು ೧೨ನೇ ಮನೆಗೆ ಪ್ರವೇಶವಾದಾಗ ನಿಮಗೆ ಇನ್ನಷ್ಟು ಬಲ. ರಾಹುವಿನ ಆರನೇ ಮನೆ ಪ್ರವೇಶ ಧನಲಾಭವನ್ನು, ಮುನ್ನುಗ್ಗಿ ಕೆಲಸ ಮಾಡಿಕೊಂಡು ಬರುವ ಛಾತಿಯನ್ನು ಕೊಡುತ್ತದೆ. ಶತ್ರುಗಳು ದೂರವಾಗುತ್ತಾರೆ. ಸಾಲ ಸಿಗುತ್ತದೆ. ಸಾಲ ತೀರಿಸುವ ದಾರಿಯೂ ಕಾಣಿಸುತ್ತದೆ. ಕೇತು ಆಧ್ಯಾತ್ಮ ಗ್ರಹ 12ನೇ ಮನೆಯ ಪ್ರವೇಶದಿಂದ ನಿಮಗೆ ಸಾಧುಸಜ್ಜನರ ಸಹವಾಸ ದೊರೆಯುತ್ತದೆ. ಧಾರ್ಮಿಕ ಷಯಗಳತ್ತ ಆಸಕ್ತಿ ತೋರಿಸುತ್ತೀರಿ. ಏಪ್ರಿಲ್ ನಂತರ ಗುರುಬಲ ಬರುವುದರಿಂದ ಅರ್ಹರಿಗೆ ವಿವಾಹಯೋಗ ಇದೆ. ವೃತ್ತಿಯಲ್ಲಿ ಒತ್ತಡವಿದ್ದರೂ ಗುರುಬಲ ಇರುವುದರಿಂದ ನೀವು ಸವಾಲುಗಳನ್ನು ನಿಭಾಯಿಸಿಕೊಂಡು ಮುಂದುವರೆಯುತ್ತೀರಿ. ಮನೆ-ಆಸ್ತಿ ಕೊಳ್ಳುವ ವಿಷಯಗಳಿದ್ದರೆ ಏಪ್ರಿಲ್ ನಂತರ ಸುಲಭವಾಗುತ್ತದೆ. ಹಣದ ಹರಿವು ಉತ್ತಮವಾಗಿದೆ.
ಶುಭವರ್ಣ: ಬಿಳಿ ಶುಭರತ್ನ: ವಜ್ರ ಶುಭಸಂಖ್ಯೆ: 6 

ಇದು ರಾಜ್ಯ ರಾಜಕಾರಣದ ಸಂಕ್ರಮಣದ ಕಾಲ: ಹೇಗಿರಲಿದೆ ಹೊಸ ವರ್ಷದಲ್ಲಿ ನಾಯಕರ ಭವಿಷ್ಯ?

ವೃಶ್ಚಿಕರಾಶಿ: 2022 ಪೂರ್ತಿ ನಿಮಗೆ ಭಾಗ್ಯದ ಸಮಯ. ಶನಿ ಮೂರನೇ ಮನೆ, ಗುರು ಐದನೇ ಮನೆ ಹಾಗೂ ರಾಹು ಆರನೇ ಮನೆ. ಜಗತ್ತಿನ ಸುಖಸಂತೋಷಗಳೆಲ್ಲ ನಿಮ್ಮ ಕಾಲಬಳಿ ಇದ್ದಂತ ಅನುಭವ. ಆದರೆ ಈಗ ಜನವರಿ 17ಕ್ಕೆ ಶನಿ ನಾಲ್ಕನೇ ಮನೆಗೆ ಪ್ರವೇಶವಾಗುತ್ತಾನೆ. ಏಪ್ರಿಲ್ ೨೨ರಂದು ಗುರು ಐದನೇ ಮನೆಯಿಂದ ಆರನೇ ಮನೆಗೆ ಬರುತ್ತಾನೆ. ಅಕ್ಟೋಬರ್ 22ರಂದು ರಾಹುಕೇತುಗಳು ಐದನೇ ಹಾಗೂ ಹನ್ನೊಂದನೇ ಮನೆಗೆ ಪ್ರವೇಶವಾಗುತ್ತಾರೆ. ಶನಿಯ ನಾಲ್ಕನೇ ಮನೆ ಪ್ರವೇಶ, ಗುರುನ ಆರನೇ ಮನೆ ಪ್ರವೇಶ ಹಾಗೂ ರಾಹುವಿನ ಐದನೇ ಮನೆ ಪ್ರವೇಶ ನಿಮಗೆ ಅಷ್ಟೊಂದು ಶುಭಫಲ ನೀಡುವುದಿಲ್ಲ. ಗುರು ಆರನೇ ಮನೆ ಪ್ರವೇಶ ಕೆಲಸಕಾರ್ಯಗಳಲ್ಲಿ ಘ್ನಗಳು, ಹಣಕಾಸಿನ ಅಡಚಣೆ ಮುಂತಾದ ಋಣಾತ್ಮಕ ಫಲಗಳಿವೆ. ಯಾವುದೇ ಮುಖ್ಯನಿರ್ಧಾರಗಳನ್ನು ಹಲವಾರು ಬಾರಿ ಯೋಚಿಸಿ ತೆಗೆದುಕೊಳ್ಳಿ. ಮುಂದೂಡಿದರೂ ಉತ್ತಮ. ಆರೋಗ್ಯದಲ್ಲಿ ಜಾಗ್ರತೆ ಇರಲಿ. ಏಪ್ರಿಲ್ ನಂತರ ಮಿತ್ರರೂ ಶತ್ರುಗಳಾಗುವಂಥ ಸಮಯ. ಜಾಗರೂಕರಾಗಿರಿ. ಅಕ್ಟೋಬರ್‌ನಲ್ಲಿ ಕೇತು ಲಾಭಸ್ಥಾನಕ್ಕೆ ಪ್ರವೇಶವಾದ ನಂತರ ಹಣಕಾಸಿನ ಸ್ಥಿತಿ ಕೊಂಚ ಮಟ್ಟಿಗೆ ಸುಧಾರಿಸುತ್ತದೆ. ಮಕ್ಕಳಿಂದ ದೂರ ಇರುವ ಪ್ರಸಂಗ ಎದುರಾಗಬಹದು. ವೃತ್ತಿಯಲ್ಲಿ ಸವಾಲುಗಳು ಎದುರಾಗುತ್ತದೆ. ನೀವು ಸ್ವಭಾವತಃ ಸಾಹಸಿಗಳು ಆದ್ದರಿಂದ ಸವಾಲುಗಳನ್ನು ಧೈರ್ಯದಿಂದ ಎದುರಿಸುತ್ತೀರಿ. ವೃಶ್ಚಿಕರಾಶಿಯ ರಾಜಕೀಯ ವ್ಯಕ್ತಿಗಳಿಗೂ ಕೊಂಚ ಹಿನ್ನಡೆ ಇದೆ. ಈ ವರ್ಷ ಪೂರ್ತಿ ನಿಮಗೆ ಸವಾಲುಗಳ ವರ್ಷ.
ಶುಭವರ್ಣ: ಕೆಂಪು. ಶುಭರತ್ನ: ಹವಳ ಶುಭಸಂಖ್ಯೆ: 9

ಧನಸ್ಸುರಾಶಿ: ನೀವು ಈಗ ಏಳುವರೆ ವರ್ಷದ ಶನಿಕಾಟವನ್ನು ಪೂರೈಸಿದ್ದೀರಿ. ಈ ಸಮಯದಲ್ಲಿ ಬಹಳಷ್ಟು ಅವಮಾನ, ಹಣಕಾಸು ನಷ್ಟ, ಅನಾರೋಗ್ಯ, ಕುಟುಂಬದಲ್ಲಿ ವೈಮನಸ್ಸು ಆಪ್ತರ ಯೋಗ, ಮುಂತಾದ ಆಶುಭ ಫಲಗಳನ್ನು ಅನುಭಸಿದ್ದೀರಿ. ಮಾನಸಿಕ ನೆಮ್ಮದಿಗೆ ಸಾಕಷ್ಟು ಧಕ್ಕೆ ಆಗಿದೆ. ಜೀವನ ಏರುಪೇರು ಆಗಿದೆ. ನಾನಾ ವಿಧದ ಕಿರುಕುಳಗಳನ್ನು ಅನುಭವಿಸಿದ್ದೀರಿ. ಈಗ ಅವೆಲ್ಲಕ್ಕೂ ಉತ್ತರ ಕೊಡುವ ಸಮಯ ಬಂದಿದೆ. ಶನಿ ಜನವರಿ 17ಕ್ಕೆ ನಿಮ್ಮ ರಾಶಿಯಿಂದ ಮೂರನೇ ಮನೆಗೆ ಪ್ರವೇಶವಾಗುತ್ತಿದ್ದಾನೆ. ಮೂರನೇ ಮನೆ ಶನಿ ಕೆಚ್ಚನ್ನೂ ಧೈರ್ಯವನ್ನು ಅಡೆತಡೆಗಳನ್ನು ಮುರಿದು ಮುನ್ನುಗ್ಗುವ ಎದೆಗಾರಿಕೆಯನ್ನು ಕೊಡುತ್ತಾನೆ. ಧನಲಾಭ ಇದೆ. ಯಾವುದಾದರೂ ಬಾಕಿಯಾಗಿದ್ದ ಹಣ ಈಗ ವಸೂಲಾಗುತ್ತದೆ. ನಿಮಗೆ ಅಪಮಾನ ಮಾಡಿದವರ ಮುಂದೆ ನೀವು ತಲೆಯೆತ್ತಿ ನಿಲ್ಲುತ್ತೀರಿ. ಏಪ್ರಿಲ್ ನಂತರ ಗುರು ಸಹಾ ಐದನೇ ಮನೆಗೆ ಪ್ರವೇಶವಾಗುವುದರಿಂದ ನಿಮಗೆ ಇನ್ನಷ್ಟು ಶುಭಫಲಗಳು ದೊರೆಯಲಿದೆ. ಗುರು-ಶನಿ ಇಬ್ಬರೂ ಬಲಾಢ್ಯ ಗ್ರಹಗಳು. ಇವರಿಬ್ಬರ ಸಹಕಾರ ನಿಮಗೆ ಈ ವರ್ಷಪೂರ್ತಿ ಸಿಗಲಿರುವುದರಿಂದ ನಿಮ್ಮ ಅದೃಷ್ಟದ ಬಾಗಿಲು ತೆರೆದಂತೆಯೇ ಎಂದು ಭಾಸಿ. ದೊಡ್ಡ ಹುದ್ದೆ ಅಧಿಕಾರ ಸಾಮಾಜಿಕ ಸ್ಥಾನಮಾನ ಪ್ರಶಸ್ತಿ ಗೌರವ ಎಲ್ಲವೂ ದೊರೆಯುತ್ತದೆ. ಆರೋಗ್ಯ ವೃದ್ಧಿಯಾಗುತ್ತದೆ. ಏಪ್ರಿಲ್ ನಂತರ ಅವಿವಾತರಿಗೆ ವಿವಾಹ ಯೋಗ ಇದೆ. ವಿದೇಶ ಪ್ರಯಾಣ ಯೋಗ ಇದೆ. ಮಕ್ಕಳಿಂದ ಶುಭಸುದ್ದಿ ಇವೆ. ಮಕ್ಕಳ ಅಭಿವೃದ್ಧಿ ನಿಮಗೆ ಸಂತೋಷ ಕೊಡುತ್ತದೆ. ಮನೆ ಕಟ್ಟುವ ಆಸ್ತಿ ಖರೀದಿಸುವ ಯೋಗ ಇದೆ. ವೃತ್ತಿಯಲ್ಲಿ ಬಡ್ತಿ ಇದೆ. ಸಾಮಾಜಿಕವಾಗಿಯೂ ಒಳ್ಳೆಯ ಬೆಳವಣಿಗೆ ಇದೆ. ಧನಸ್ಸುರಾಶಿಯ ರಾಜಕೀಯ ವ್ಯಕ್ತಿಗಳಿಗೂ ಈ ವರ್ಷ ಯಶಸ್ಸು ಇದೆ.
ಶುಭವರ್ಣ: ಹಳದಿ ಶುಭರತ್ನ: ಕನಕ ಪುಷ್ಯರಾಗ ಶುಭಸಂಖ್ಯೆ: 3

ಮಕರರಾಶಿ: ಸುಮಾರು ಐದು ವರ್ಷಗಳಿಂದ ನೀವು ಜೀವನದಲ್ಲಿ ಬಹಳಷ್ಟು ಸವಾಲುಗಳನ್ನು ಎದುರಿಸಿದ್ದೀರಿ. ಜೀವನ ಕಳೆದುಕೊಳ್ಳುವ ಮಟ್ಟಿಗೆ ಅಥವಾ ಜೀವ ಕಳೆದುಕೊಳ್ಳುವ ಮಟ್ಟಕ್ಕೆ ಕಷ್ಟ ಪಟ್ಟಿದ್ದೀರಿ. ಈಗ ಸಾಡೆಸಾತಿ ಶನಿಯ ಐದು ವರ್ಷಗಳನ್ನು ಪೂರೈಸಿದ್ದೀರಿ. ಈ ಸಮಯದಲ್ಲಿ ವೃತ್ತಿಯಲ್ಲಿ ಏರುಪೇರು, ಹಣಕಾಸಿನ ಮುಗ್ಗಟ್ಟು, ಅನಾರೋಗ್ಯ, ಕುಟುಂಬದಲ್ಲಿ ಅಶಾಂತಿ, ಸಾಲ ಮೊದಲಾದ ನಕಾರಾತ್ಮಕ ಸಂಗತಿಗಳ ಪ್ರಭಾವಕ್ಕೆ ಒಳಗಾಗಿದ್ದೀರಿ. ಸವಾಲುಗಳು ನಿಮ್ಮ ಬೆನ್ನಟ್ಟಿ ಕಾಡಿದೆ. ಈ ಜನವರಿ 17ಕ್ಕೆ ಶನಿ ನಿಮ್ಮ ರಾಶಿಯನ್ನು ಬಿಟ್ಟು ಮುಂದಿನ ರಾಶಿಯಾದ ಕುಂಭಕ್ಕೆ ಪ್ರವೇಶಮಾಡುತ್ತಾನೆ. ಪೂರ್ತಿ ಸಾಡೆಸಾತಿ ಶನಿ ಕಳೆಯದಿದ್ದರೂ ಮೂರನೇ ಎರಡು ಭಾಗದಷ್ಟು ಪೂರ್ಣಗೊಳ್ಳುತ್ತದೆ. ಇದು ಬಹಳ ನಿರಾಳತೆಯನ್ನು ಕೊಡುತ್ತದೆ. ನಿರುದ್ಯೋಗಿಗಳಿಗೆ ಈಗ ಉದ್ಯೋಗಾವಕಾಶಗಳು ಕಾಣಿಸುತ್ತದೆ. ನೀವು ನಿರೀಕ್ಷಿಸಿದಷ್ಟು ಒಳ್ಳೆಯ ಅವಕಾಶ ಸಿಗದಿದ್ದರೂ ಅವಕಾಶಗಳ ಬಾಗಿಲು ತೆರೆಯುತ್ತದೆ. ಚಿಕ್ಕದು ಸಣ್ಣದು ಎಂಬ ನಿರಾಶೆಯನ್ನು ಬದಿಗೊತ್ತಿ ಬಂದ ಅವಕಾಶವನ್ನು ಬಾಚಿಕೊಳ್ಳಿ. ಚಿಕ್ಕ ಅವಕಾಶವೇ ನಾಳೆ ನಿಮಗೆ ಬಹುದೊಡ್ಡ ಮಾನ್ಯತೆಯನ್ನೂ ಅದೃಷ್ಟವನ್ನೂ ತಂದುಕೊಡುತ್ತದೆ. ಇಂದು ಬರುವ ಚಿಕ್ಕ ಅವಕಾಶಗಳೆ ಮುಂದೆ ದೊಡ್ಡ ಅಧಿಕಾರ ಹುದ್ದೆ ಕೊಡಿಸುತ್ತದೆ. ಏಪ್ರಿಲ್ ನಂತರ ಈಗ ಮೂರನೇ ಮನೆಯಲ್ಲಿ ಇರುವ ಗುರು ನಾಲ್ಕನೇ ಮನೆಗೆ ಪ್ರವೇಶವಾಗುತ್ತಾನೆ. ಇದು ನಿಮಗೆ ಹೇಳಿಕೊಳ್ಳುವಷ್ಟು ಹಿತ ಕೊಡದಿದ್ದರೂ ಅಕ್ಟೋಬರ್ ನಂತರ ರಾಹುನ ಮೂರನೇ ಮನೆ ಪ್ರವೇಶ ನಿಮಗೆ ಅದೃಷ್ಟವನ್ನು ತಂದುಕೊಡುತ್ತದೆ. ಧನಲಾಭ ಆಗುತ್ತದೆ. ಸಾಲಗಳನ್ನು ತೀರಿಸುತ್ತೀರಿ. ಮುನ್ನುಗ್ಗಿ ಕೆಲಸ ಸಾಧಿಸಿಕೊಳ್ಳುವ ಕೆಚ್ಚನ್ನು ರಾಹು ದಯಪಾಲಿಸುತ್ತಾನೆ. ಶತ್ರುಗಳು ದೂರವಾಗುತ್ತಾರೆ. ಸಾಡೆಸಾತಿ ಶನಿಪ್ರಭಾವ ಇನ್ನೂ ಎರಡೂವರೆ ವರ್ಷ ಇದೆ. ಹೀಗಾಗಿ ಆಗಾಗ ಸವಾಲುಗಳು ಒತ್ತಡಗಳು ಎದುರಾಗುತ್ತದೆ. ಆದರೂ ಚಿಂತೆ ಬೇಡ ಮುಂದೆ ಒಳ್ಳೆಯ ದಿನಗಳನ್ನು ಕಾಣುತ್ತೀರಿ.
ಶುಭವರ್ಣ: ನೀಲಿ ಶುಭರತ್ನ: ನೀಲ ಶುಭಸಂಖ್ಯೆ: 8

ಕುಂಭರಾಶಿ: ಸಾಡೆಸಾತಿ ಶನಿಯ ಮೊದಲ ಹಂತವನ್ನು ಪೂರೈಸಿದ್ದೀರಿ. ಈಗ ಶನಿಯ ಕುಂಭರಾಶಿಯ ಪ್ರವೇಶ ಸಾಡೆಸಾತಿ ಎರಡನೇ ಹಂತಕ್ಕೆ ಕಾಲಿಡುತ್ತಿದ್ದೀರಿ. ನಿಮ್ಮ ರಾಶಿಯಲ್ಲೇ ಶನಿ ಅಷ್ಟು ಶುಭಕಾರಕನಲ್ಲ. ಆದರೆ ಕುಂಭರಾಶಿ ಶನಿಯ ಸ್ವಂತ ಮನೆ. ಇಲ್ಲಿ ಶನಿ ಬಲಾಢ್ಯ. ಒತ್ತಡಗಳನ್ನು ಸವಾಲುಗಳನ್ನು ಕೊಡುತ್ತಾನೆ. ಶನಿ ಏನು ಕೊಟ್ಟರೂ ತೀವ್ರವಾಗಿಯೇ ಇರುತ್ತದೆ. ಏಪ್ರಿಲ್ ವರೆಗೂ ಗುರುಬಲ ಇರುವುದರಿಂದ ಅಲ್ಲಿಯವರೆಗೆ ಯೋಚಿಸಬೇಕಾಗಿಲ್ಲ. ಏಪ್ರಿಲ್ ನಂತರ ಗುರು ಮೂರನೇ ಮನೆಯ ಪ್ರವೇಶ ನಿಮಗೆ ಗುರುಬಲ ಕಡಿಮೆಯಾಗುತ್ತದೆ. ಇದುವರೆಗೂ ನಾಗಾಲೋಟದಲ್ಲಿದ್ದ ಜೀವನ ಈಗ ಮಂದಗತಿಯಲ್ಲಿ ಸಾಗುತ್ತದೆ. ಅಡೆತಡೆಗಳು ಎದುರಾಗುತ್ತದೆ. ಹಣಕಾಸಿನ ಅಭಾವ ತಲೆದೋರುತ್ತದೆ. ವೃತ್ತಿಯಲ್ಲಿ ಒತ್ತಡ ಇರುತ್ತದೆ. ಸಾಮಾಜಿಕ ಗೌರವಕ್ಕೆ ಧಕ್ಕೆ ಒದಗಬಹುದು. ನಿಮ್ಮ ವರ್ಚಸ್ಸಿಗೆ ಕುಂದು ಬರಬಹುದು. ಅಕ್ಟೋಬರ್ ನಂತರ ರಾಹುನ ಎರಡನೇ ಮನೆ ಪ್ರವೇಶ ಹಾಗೂ ಕೇತುನ ಎಂಟನೇ ಮನೆ ಪ್ರವೇಶ ಕೂಡ ನಿಮಗೆ ತಲ್ಲ. ಎರಡನೇ ಮನೆ ರಾಹು ಕುಟುಂಬದಲ್ಲಿ ಅಶಾಂತಿ ತರುತ್ತಾನೆ. ಎಂಟನೇ ಮನೆಯ ಕೇತು ಅನಾರೋಗ್ಯ ಕೊಡಬಹುದು. ವಾಹನ ಚಲಾಯಿಸುವಾಗ ಜಾಗ್ರತೆ ಇರಲಿ. ಬೇಡದ ಪ್ರಯಾಣ, ವೃಥಾ ಅಲೆದಾಟ ಇರುತ್ತದೆ. ಮನಸ್ಸಿನ ನೆಮ್ಮದಿಗೆ ಕೊರತೆ ಉಂಟಾಗುತ್ತದೆ. ಯಾವುದೇ ನಿರ್ಧಾರ ಮಾಡಬೇಕಾದರೂ ಹಲವು ಬಾರಿ ಯೋಚಿಸಿ. ಮಾತನಾಡುವಾಗಲೂ ಎಚ್ಚರಿಕೆ ಇರಲಿ. ಆರೋಗ್ಯದಲ್ಲೂ ಎಚ್ಚರಿಕೆ ವಹಿಸಿ.
ಶುಭವರ್ಣ: ನೀಲಿ ಶುಭರತ್ನ: ನೀಲ ಶುಭಸಂಖ್ಯೆ: 8

ಮೀನರಾಶಿ: ನಿಮಗೆ ಈಗ ಸಾಡೆಸಾತಿ ಶನಿ ಪ್ರಾರಂಭ. ಜನವರಿ 17ಕ್ಕೆ ಶನಿಯ ಕುಂಭರಾಶಿಯ ಪ್ರವೇಶ ನಿಮಗೆ ವ್ಯಯಸ್ಥಾನ. ಶನಿಯ ವ್ಯಯಸ್ಥಾದ ಪ್ರವೇಶದಿಂದ ಪರೀತ ಖರ್ಚುಗಳು ತಲೆದೋರುತ್ತದೆ. ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದೆ. ಸರ್ಕಾರದಿಂದ ತೊಂದರೆ ಬರಬಹುದು (ಐಟಿ-ಇಡಿ ದಾಳಿ) ಅನಾರೋಗ್ಯ ಕಾಣಿಸಿಕೊಳ್ಳಬಹುದು. ಸಾಮಾಜಿಕ ಗೌರವ ಸ್ಥಾನಮಾನಗಳಿಗೆ ಧಕ್ಕೆ ಉಂಟಾಗಬಹುದು. ಸಣ್ಣಪುಟ್ಟ ತಪ್ಪುಗಳೆ ಬೃಹದಾಕಾರವಾಗಿ ನಿಮ್ಮನ್ನು ಗೊಂದಲಗೊಳಿಸಬಹುದು. ಯಾವುದೇ ಮುಖ್ಯ ನಿರ್ಧಾರಗಳನ್ನು ಏಪ್ರಿಲ್ 2023ರ ವರೆಗೂ ಮುಂದೂಡಿ. ಏಪ್ರಿಲ್‌ನಲ್ಲಿ ಗುರು ಎರಡನೇ ಮನೆಗೆ ಪ್ರವೇಶವಾದಾಗ ನಿಮಗೆ ಕೊಂಚ ನಿರಾಳತೆ ಸಿಗುತ್ತದೆ. ಹಣಕಾಸಿನ ಹರಿವು ಸ್ವಲ್ಪಮಟ್ಟಿಗೆ ಉತ್ತಮಗೊಳ್ಳುತ್ತದೆ. ಆದರೂ ಸಾಡೆಸಾತಿಯ ಪ್ರಭಾವವನ್ನು ನೀವು ಅನುಭಸಲೇ ಬೇಕು. ಕೆಲಸಕಾರ್ಯಗಳಲ್ಲಿ ಅಡೆತಡೆಗಳು ಎದುರಾಗುತ್ತದೆ. ಶ್ರಮ ಹೆಚ್ಚು ಫಲ ಕಡಿಮೆ. ನಿಮ್ಮ ಸಹನೆಯ ಪರೀಕ್ಷೆ ಬಹಳ ಸಲ ನಡೆಯುತ್ತದೆ. ಈಗ ನಿಮಗೆ ತಾಳ್ಮೆಯೇ ದೇವರು. ಎಲ್ಲ ವಿಷಯಕ್ಕೂ ಸಹನೆಯಿಂದ ಇರಿ. ಯಾವ ವ್ಯತಿರಿಕ್ತ ಸಂಗತಿಗಳಿಗೂ ಪ್ರತಿಕ್ರಿಯಿಸಲು ಹೋಗಬೇಡಿ. ಅಕ್ಟೋಬರ್ ನಂತರ ರಾಹು ನಿಮ್ಮ ರಾಶಿಗೆ ಹಾಗೂ ಕೇತು ಏಳನೇ ಮನೆಗೆ ಪ್ರವೇಶ ಮಾಡುತ್ತಾರೆ. ಇದರಿಂದ ಕುಟುಂಬದಲ್ಲಿ ಅಶಾಂತಿ ತಲೆದೋರಬಹುದು. ಮನೆಯಿಂದ ದೂರ ಇರುವಂಥ ಪ್ರಸಂಗ ಬರಬಹುದು.
ಶುಭವರ್ಣ: ಹಳದಿ ಶುಭರತ್ನ: ಕನಕ ಪುಷ್ಯರಾಗ ಶುಭಸಂಖ್ಯೆ: 3

Latest Videos
Follow Us:
Download App:
  • android
  • ios