ಪುಣೆ ಮೂಲದ ಮಹಿಳೆ ನೀಲಾ ಪಂಚ್‌ಪೋರ್ ಮಣ್ಣನ್ನು ಬಳಸದೆ ಕೇವಲ ಅಡುಗೆ ಮನೆಯ ತ್ಯಾಜ್ಯ ಹಾಗೂ ಒಣಎಲೆಗಳಿಂದಲೇ ತಮ್ಮ ಮನೆಯ ಟೆರೇಸ್‌ನಲ್ಲಿ ಹಣ್ಣು ತರಕಾರಿಗಳಷ್ಟೇ ಅಲ್ಲ, ಕಬ್ಬನ್ನೂ ಬೆಳೆದು ಸೈ ಎನಿಸಿಕೊಂಡಿದ್ದಾರೆ.
ಪರಿಸರಸ್ನೇಹಿಯಾಗಿ ತಮ್ಮನ್ನು ತಾವು ಕಾಣುತ್ತಿದ್ದ ಪುಣೆಯ ನೀಲಾ ಪಂಚ್‌ಪೋರ್‌ಗೆ ತಲೆಬಿಸಿಯಾಗಿದ್ದು ಅಡುಗೆಮನೆಯಿಂದ ದೊಡ್ಡ ಮಟ್ಟದಲ್ಲಿ ಶೇಖರವಾಗುತ್ತಿದ್ದ ತ್ಯಾಜ್ಯ. ಇದಕ್ಕಾಗಿ ಅವರು ಹಲವೆಡೆ ಪರಿಹಾರ ಹುಡುಕಿ ಕಡೆಗೆ ಕಂಡುಕೊಂಡಿದ್ದು ಟೆರೇಸ್ ಗಾರ್ಡನಿಂಗ್. ಅದೂ ಮಣ್ಣಿಲ್ಲದೆ.
ಹೌದು, ನೀಲಾ ತಮ್ಮ 450 ಚದರ ಅಡಿಯ ಟೆರೇಸ್‌ನಲ್ಲಿ 100ಕ್ಕೂ ಹೆಚ್ಚು ಪಾಟ್‌ಗಳಲ್ಲಿ ವಿಧವಿಧದ ಹಣ್ಣು ತರಕಾರಿಗಳನ್ನು, ಔಷಧೀಯ ಸಸ್ಯಗಳನ್ನು ಬೆಳೆದಿದ್ದಾರೆ. ಆದರೆ ಯಾವ ಪಾಟ್‌ಗೂ ಮಣ್ಣು ಬಳಸಿಲ್ಲ. ಬದಲಿಗೆ ಒಣಎಲೆಗಳು, ಅಡುಗೆಮನೆಯ ತ್ಯಾಜ್ಯ ಹಾಗೂ ಸಗಣಿಯನ್ನು ಬಳಸಿದ್ದಾರೆ.
undefined
ವೃತ್ತಿಯಲ್ಲಿ ಕಾಸ್ಟ್ ಅಕೌಟೆಂಟ್ ಆಗಿರುವ ಈಕೆ ವೃತ್ತಿಪರ ಮ್ಯಾರಥಾನ್ ರನ್ನರ್ ಕೂಡಾ. 'ಮಣ್ಣಿಲ್ಲದ ಪಾಟಿಂಗ್ ಮಿಕ್ಸ್ ನೀರನ್ನು ಹೆಚ್ಚು ಹಿಡಿದಿಟ್ಟುಕೊಳ್ಳುವ ಜೊತೆಗೆ ಒಳಗೆ ಗಾಳಿಯಾಡಲೂ ಹೆಚ್ಚು ಅವಕಾಶ ಮಾಡಿಕೊಡುತ್ತದೆ. ಅಡುಗೆಮನೆಯ ತ್ಯಾಜ್ಯ ಹಾಗೂ ಸಗಣಿಯು ಸಸ್ಯಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಅಷ್ಟೇ ಅಲ್ಲ, ಎರೆಹುಳುಗಳು ಬೆಳೆಯಲೂ ಸಾಧ್ಯ ಮಾಡಿಕೊಡುತ್ತದೆ' ಎನ್ನುತ್ತಾರೆ ನೀಲಾ. 10 ವರ್ಷಗಳಿಂದ ಅವರ ಈ ಟೆರೇಸ್ ಗಾರ್ಡನ್ ಫಲ ಕೊಡುತ್ತಲೇ ಬಂದಿದೆ.
ಮಣ್ಣುರಹಿತ ಗಾರ್ಡನಿಂಗ್- ಲಾಭಗಳೇನು?
ಮಣ್ಣು ಬಳಸದೆ ಬೆಳೆಸುವ ಈ ಗಾರ್ಡನಿಂಗ್‌ನಿಂದಾಗಿ ಮಣ್ಣಿನ ಮೂಲಕ ಬರುವ ಕಾಯಿಲೆಗಳಾದ ಫಂಗಸ್, ರೂಟ್ ರಾಟ್‌ಗಳಿಂದ ಸಸ್ಯಗಳು ದೂರವಿರುತ್ತವೆ. ಹೆಚ್ಚಾಗಿ ಮಣ್ಣಿದ್ದಲ್ಲಿ ಹುಟ್ಟುವ ಕಳೆಗಿಡಗಳು ಈ ರೀತಿಯಾಗಿ ಬೆಳೆಸುವ ಪಾಟ್‌ಗಳಲ್ಲಿ ಹುಟ್ಟುವುದಿಲ್ಲ. ಹೀಗಾಗಿ, ಪೆಸ್ಟಿಸೈಡ್ ಹಾಗೂ ಫರ್ಟಿಲೈಸರ್ ಬಳಕೆ ಮಿತಿಗೊಳಿಸಲು ಸಾಧ್ಯವಾಗುತ್ತದೆ. ಮಣ್ಣಿನಲ್ಲಿ ಬೆಳೆಸುವ ಗಿಡಗಳಲ್ಲಿ ಸಸ್ಯವು ನ್ಯೂಟ್ರಿಶನ್ ಹಾಗೂ ನೀರನ್ನು ಹುಡುಕಿಕೊಂಡು ತನ್ನ ಬೇರನ್ನು ಉದ್ದಗಲಕ್ಕೆ ಚಾಚಬೇಕಾಗುತ್ತದೆ. ಈ ರೀತಿ ಕಿಚನ್ ವೇಸ್ಟ್ ಹಾಗೂ ಒಣಎಲೆಗಳನ್ನು ಬಳಸಿದಾಗ ಬೇರಿದ್ದಲ್ಲಿಗೇ ನ್ಯೂಟ್ರಿಶನ್ ಸಪ್ಲೈ ಆಗುತ್ತಿರುತ್ತದೆ. ಹಾಗಾಗಿ, ಬಹಳ ಬೇಗ ಸಸ್ಯವು ಬೆಳೆದು ಫಲ ಕೊಡುತ್ತದೆ.
ನೀಲಾ ಈ ಮಣ್ಣುರಹಿತ ಗಾರ್ಡನಿಂಗ್ ಬಗ್ಗೆ ಎಲ್ಲವನ್ನೂ ಇಂಟರ್ನೆಟ್ ಮೂಲಕ ಕಲಿತಿದ್ದಾರೆ. ಸಸ್ಯಗಳಿಗೆ ಬೆಡ್ ಹುಟ್ಟುಹಾಕುವುದು ಹೇಗೆ, ಅವಕ್ಕೆ ಎಂಥ ಗೊಬ್ಬರ ಬಳಸಬೇಕು, ನೀರು ಎಷ್ಟು ಹೇಗೆ ಒದಗಿಸಬೇಕು ಎಂಬುದನ್ನೆಲ್ಲ ಅಂತರ್ಜಾಲದಲ್ಲಿ ತಡಕಾಡಿ ಪ್ರಯೋಗಿಸಿ ಯಶಸ್ವಿಯಾಗಿದ್ದಾರೆ.
ಗೊಬ್ಬರ ಹೀಗೆ ತಯಾರಿಸುತ್ತಾರೆ..
ಗೊಬ್ಬರ ತಯಾರಿಸಲು ನೀಲಾ ದೊಡ್ಡ ಡಬ್ಬದಲ್ಲಿ ಸಂಗ್ರಹಿಸಿದ ಒಳಎಲೆಗಳನ್ನು ಹಾಕುತ್ತಾರೆ. ಅದಕ್ಕೆ ಸಗಣಿಯನ್ನು ಸೇರಿಸುತ್ತಾರೆ. ನಂತರ ಕೆಲ ವಾರಗಳ ಕಾಲ ತಮ್ಮ ಅಡುಗೆಮನೆಯಲ್ಲಿ ಸಂಗ್ರಹವಾದ ತ್ಯಾಜ್ಯವನ್ನೆಲ್ಲ ಅದಕ್ಕೆ ಸುರಿಯುತ್ತಾರೆ. ತಿಂಗಳಾಗುವಷ್ಟರಲ್ಲಿ ಗೊಬ್ಬರ ರೆಡಿಯಾಗಿರುತ್ತದೆ.
ಪಾಟ್‌ಗಾಗಿ ವ್ಯಯಿಸುವುದಿಲ್ಲ
ನೀಲಾ ಗಾರ್ಡನ್‌ನಲ್ಲಿ ನೂರಕ್ಕೂ ಹೆಚ್ಚು ವಿವಿಧ ಗಿಡಗಳನ್ನು ಬೆಳೆಸಿದ್ದರೂ ಪಾಟ್‌ಗೆಂದು ಹಣ ವ್ಯರ್ಥ ಮಾಡಿಲ್ಲ. ಬದಲಿಗೆ ಮನೆಯಲ್ಲೇ ಹಳೆಯದಾದ, ಮುರಿದ ಬಕೆಟ್‌ಗಳು, ಪ್ಲ್ಯಾಸ್ಟಿಕ್ ಬಾಟಲ್‌ಗಳು, ಬ್ಯಾಗ್‌ಗಳು ಇತ್ಯಾದಿಯನ್ನು ಬಳಸಿದ್ದಾರೆ. ಮನೆಯ ಈ ಬೇಡದ ಕಂಟೇನರ್‌ಗಳೆಲ್ಲ ಬಳಕೆಯಾದ ಬಳಿಕ ಅಕ್ಕಪಕ್ಕದವರಿಗೆ ಬೇಡದ ಕಂಟೇನರ್‌ಗಳನ್ನು ಕೇಳಿ ಪಡೆಯುತ್ತಾರಂತೆ.
ಗಾರ್ಡನ್‌ನಲ್ಲಿ ಏನೆಲ್ಲಾ ಇದೆ?
ಹಲವಾರು ವೆರೈಟಿಯ ಹಣ್ಣು, ತರಕಾರಿಗಳು, ಹೂವುಗಳು ನೀಲಾ ಅವರ ಗಾರ್ಡನ್‌ನಲ್ಲಿವೆ. ಆಲೂಗಡ್ಡೆ, ಗೆಣಸು, ದೊಣ್ಣೆಮೆಣಸು ಮುಂತಾದವನ್ನು ದೊಡ್ಡ ಬಕೆಟ್ ಹಾಗೂ ಪ್ಲ್ಯಾಸ್ಟಿಕ್ ಬ್ಯಾಗ್‌ಗಳಲ್ಲಿ ಬೆಳೆಸಿದ್ದಾರೆ. ಕ್ಯಾರೆಟ್ ಹಾಗೂ ಸ್ಪ್ರಿಂಗ್ ಆನಿಯನ್‌ಗಳನ್ನು ಟೆರೇಸ್ ಸುತ್ತ ನೇತು ಹಾಕಿದ ಬಾಟಲ್‌ಗಳಲ್ಲಿ ಬೆಳೆಯುತ್ತಿದ್ದಾರೆ. ಕೋಸು, ಹೂಕೋಸು ಹಾಗೂ ಇತರೆ ಲೀಫೀ ತರಕಾರಿಗಳನ್ನು ಥರ್ಮಾಕೋಲ್ ಬಾಕ್ಸ್‌ಗಳಲ್ಲಿ ಬೆಳೆದಿದ್ದಾರೆ. ಇನ್ನು ಬಾಟಲ್‌ಗಳಲ್ಲಿ ಹೂವಿನ ಸಸ್ಯಗಳು ನಳನಳಿಸುತ್ತಿವೆ. ಸಿಮೆಂಟ್‌ನಿಂದ ತಯಾರಿಸಿ ಗೋಡೆಗೆ ಫಿಕ್ಸ್ ಮಾಡಿದ ಪಾಟ್‌ಗಳಲ್ಲಿ ಡ್ರ್ಯಾಗನ್ ಫ್ರೂಟ್, ಪ್ಯಾಶನ್ ಫ್ರೂಟ್, ಚೆರಿಗಳನ್ನು ಬೆಳೆಯುತ್ತಿದ್ದಾರೆ. ಅಷ್ಟೇ ಅಲ್ಲ, ಕಬ್ಬನ್ನು ಸಹ ಸಲೀಸಾಗಿ ಬೆಳೆಸುತ್ತಿದ್ದಾರೆ.
ಎರೆಹುಳಗಳು
ನೀಲಾ ಅವರ ಗಾರ್ಡನ್‌ನಲ್ಲಿ ಮುಖ್ಯ ಪಾತ್ರ ವಹಿಸುತ್ತಿರುವುದು ಎರೆಹುಳುಗಳು. ಅವು ಸಸ್ಯಗಳು ಆರೋಗ್ಯಕರವಾಗಿ ಬೆಳೆವಂತೆ ನೋಡಿಕೊಳ್ಳುವುದಷ್ಟೇ ಅಲ್ಲ, ಮಣ್ಣಿನಲ್ಲಿ ರಂಧ್ರಗಳನ್ನು ಹೆಚ್ಚಿಸಿ ಸಸ್ಯಗಳಿಗೆ ಸುಲಭವಾಗಿ ಉಸಿರಾಡಲು ನೆರವಾಗುತ್ತವೆ. ಈ ಎರೆಹುಳಗಳು ಆರೋಗ್ಯವಾಗಿರುವಂತೆ ನೋಡಿಕೊಳ್ಳಲು ನೀಲಾ ಅವುಗಳಿಗೆ ಅಡುಗೆಮನೆಯ ತ್ಯಾಜ್ಯದಲ್ಲಿರುವ ಹಣ್ಣು, ತರಕಾರಿ ತ್ಯಾಜ್ಯವನ್ನೇ ನೀಡುತ್ತಾರೆ. ವಾರಕ್ಕೊಮ್ಮೆ ಹಣ್ಣು ತರಕಾರಿಗಳನ್ನು ಕೊಯಿಲು ಮಾಡುತ್ತಾರೆ. ಮನೆಗೆ ಅಗತ್ಯವಿರುವುದಕ್ಕಿಂತ ಹೆಚ್ಚಿನ ಹಣ್ಣು ತರಕಾರಿಗಳು ಸಿಗುತ್ತವೆ. ಹೆಚ್ಚಿನದನ್ನು ಅಕ್ಕಪಕ್ಕದ ಮನೆಯವರಿಗೆ ಹಂಚುತ್ತಾರೆ.
ಈಗ ನೀಲಾ ಆರ್ಗ್ಯಾನಿಕ್ ಗಾರ್ಡನಿಂಗ್ ಗ್ರೂಪನ್ನು ಫೇಸ್‌ಬುಕ್‌ನಲ್ಲಿ ತೆರೆದಿದ್ದು, 30,000ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಈಗ ಪ್ರತಿ ಭಾನುವಾರ ಎರಡು ಗಂಟೆಗಳ ಕಾಲ ಗಾರ್ಡನಿಂಗ್ ಆಸಕ್ತರಿಗೆ ನೀಲಾ ವರ್ಕ್‌ಶಾಪ್ ಕೂಡಾ ನಡೆಸುತ್ತಿದ್ದಾರೆ.