ಫೇಸ್ಬುಕ್ - ವಾಟ್ಸಪ್- ಟಿಕ್‌ಟಾಕ್‌ನಲ್ಲಿ ಹೊಸ ಫೀಚರ್‌ಗಳ ಹವಾ!

By Suvarna NewsFirst Published Apr 19, 2020, 6:02 PM IST
Highlights

ಸೋಷಿಯಲ್ ಮೀಡಿಯಾ ಎಂಬ ಜಗತ್ತಿನೊಳಗೆ ಒಮ್ಮೆ ಪ್ರವೇಶಿಸಿದರೆ ಚಕ್ರವ್ಯೂಹದೊಳಗೆ ನುಗ್ಗಿದಂತೆ. ಒಮ್ಮೆ ಒಳಹೊಕ್ಕವರು ವಾಪಸ್ ಬರುವ ಮಾತೇ ಇಲ್ಲ. ಒಂದರ ಹಿಂದೊಂದು ಹೊಸ ಹೊಸ ಫೀಚರ್‌ಗಳನ್ನು ಬಿಡುತ್ತಿದ್ದರೆ ಯಾವುದನ್ನು ಬಳಸಬೇಕು, ಯಾವುದನ್ನು ಬಿಡಬೇಕು ಎಂಬ ಗೊಂದಲದ ಸರದಿ ಬಳಕೆದಾರರದ್ದಾಗಿರುತ್ತದೆ. ಇಂತಿಪ್ಪ ಸಂದರ್ಭದಲ್ಲಿ ಈಗ ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಪ್ ಹಾಗೂ ಟಿಕ್‌ಟಾಕ್ ತಲಾ ಒಂದೊಂದು ಫೀಚರ್‌ಗಳನ್ನು ಪರಿಚಯಿಸುತ್ತಿವೆ. ಅದೂ ಕೋವಿಡ್-19 ಇರುವ ಈ ಸಂದರ್ಭದಲ್ಲಿ ಎಷ್ಟರಮಟ್ಟಿಗೆ ಉಪಯೋಗಕ್ಕೆ ಬರುತ್ತದೆ ಎಂಬುದನ್ನು ಗಮನಿಸೋಣ. 

ಬೆಂಗಳೂರು (ಏ.19): ಈ ಮೊಬೈಲ್ ಎಂಬ ಅಂಗೈ ದುನಿಯಾದಲ್ಲಿ ಏನು ಸಿಗುವುದಿಲ್ಲ ಹೇಳಿ. ಅದರಲ್ಲೂ ಸೋಷಿಯಲ್ ಮೀಡಿಯಾ ಒಂದಿದ್ದರೆ ಸಾಕು, ಸಮಯ ಕಳೆದಿದ್ದೇ ಗೊತ್ತಾಗಲ್ಲ ಬಿಡಿ. ಈಗ ಬಹುತೇಕರ ದಿನಚರಿಯ ಬಹುಪಾಲು ಸಮಯವನ್ನು ಫೇಸ್ಬುಕ್, ವಾಟ್ಸಪ್ ಹಾಗೂ ಟಿಕ್‌ಟಾಕ್‌‌ಗಳು ನುಂಗಿಹಾಕುತ್ತಿವೆ. ಈಗ ವಿಷಯ ಏನಪ್ಪ ಅಂದ್ರೆ ಇವುಗಳು ಈಗಾಗಲೇ ಹಲವು ಒಳ್ಳೊಳ್ಳೇ ಫೀಚರ್‌ಗಳನ್ನು ಕೊಟ್ಟಿರುವ ಈ ಆ್ಯಪ್‌ಗಳು ಈಗ ಮತ್ತೆ ತಲಾ ಒಂದೊಂದು ಹೊಸ ಫೀಚರ್‌ಗಳನ್ನು ಕೊಡಲು ಮುಂದಾಗಿವೆ. 

ವಾಟ್ಸಪ್‌ನಲ್ಲಿ ಗ್ರೂಪ್ ಕಾಲ್‌ಗೆ ಬಲ:
ಈವರೆಗೆ ಕೇವಲ 4 ಮಂದಿವರೆಗೆ ಮಾತ್ರ ಇದ್ದ ಆಡಿಯೋ-ವಿಡಿಯೋ ಕಾಲಿಂಗ್ ಸೌಲಭ್ಯವನ್ನು ಇನ್ನಷ್ಟು ಅಪ್‌ಗ್ರೇಡ್ ಮಾಡುವ ಮೂಲಕ ಹೆಚ್ಚಿನ ಮಂದಿ ಪಾಲ್ಗೊಳ್ಳುವಂತೆ ಮಾಡಲು ಹೊರಟಿದೆ ವಾಟ್ಸಪ್.

ಈ ಮೂಲಕ ಈಗಿನ ವರ್ಕ್ ಫ್ರಂ ಹೋಂ ಸೌಲಭ್ಯಕ್ಕೆ ಪೂರಕವಾಗುವಂತೆ ಮಾಡುವ ಚಿಂತನೆಯನ್ನು ಫೇಸ್ಬುಕ್ ಒಡೆತನದ ಈ ಆ್ಯಪ್ ಹೊಂದಿದೆ. ಈ ಮೂಲಕ ಸ್ಕೈಪ್, ಗೂಗಲ್ ಡ್ಯೂ ಮತ್ತು ಮೀಟ್, ಜೂಮ್ ಆ್ಯಪ್‌ಗಳಿಗೆ ಪೈಪೋಟಿ ನೀಡಲು ಸಜ್ಜಾಗಿದೆ.

ಇದನ್ನೂ ಓದಿ: ಇನ್ನು ನಿಮಗೆ ವರ್ಕ್ ಫ್ರಂ ಹೋಂ ಫಿಕ್ಸ್?

ಮುಂದಿನ ವಾರದೊಳಗೆ ಈ ನೂತನ ಫೀಚರ್ ನಿಮ್ಮ ಬಳಕೆಗೆ ಸಿಗಲಿದ್ದು, ನಿಮ್ಮ ಕುಟುಂಬದವರು ಹಾಗೂ ಹತ್ತಿರದವರ ಜೊತೆ ಆರಾಮಾಗಿ ಆ್ಯಪ್‌ನ ವಿಡಿಯೋ-ಆಡಿಯೋ ಕಾಲ್ ಮೂಲಕ ಮಾತನಾಡಬಹುದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಅಲ್ಲದೆ, ಈಗಾಗಲೇ ಜೂಮ್ ಆಪ್ ಹ್ಯಾಕ್ ಆಗುತ್ತಿರುವ ಪ್ರಕರಣಗಳು ಬಂದ ಬೆನ್ನಲ್ಲಿ ವಾಟ್ಸಪ್‌ನ ಈ ಪ್ರಯತ್ನ ಎಷ್ಟರ ಮಟ್ಟಿಗೆ ಸಕ್ಸಸ್ ಕಾಣಲಿದೆ ಎಂಬುದನ್ನು ನೋಡಬೇಕಿದೆ. 

ಮಕ್ಕಳನ್ನು ಕಟ್ಟಿಹಾಕಿದ ಟಿಕ್‌‌ಟಾಕ್:
ಬಳಕೆಗೆ ಬಂದ ಕೆಲವೇ ಸಮಯದಲ್ಲಿ ಭಾರಿ ಜನಪ್ರಿಯತೆ ಗಳಿಸಿದ ಟಿಕ್‌ಟಾಕ್ ಆ್ಯಪ್ ಈಗ ಪಾಲಕರ ಪರ ನಿಂತಿದೆ. ಈಚೆಗಷ್ಟೇ “ಫ್ಯಾಮಿಲಿ ಪೇರಿಂಗ್’ ಫೀಚರ್ ಅಳವಡಿಸುವ ಮೂಲಕ ಆ್ಯಪ್‌ನಲ್ಲಿ ಮಕ್ಕಳ ಚಟುವಟಿಕೆ ಮೇಲೆ ಪಾಲಕರು ಹಿಡಿತ ಸಾಧಿಸಲು ಅನುವು ಮಾಡಿಕೊಟ್ಟಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಡಿಎಂ (ಡೈರೆಕ್ಟ್ ಮೆಸೇಜಿಂಗ್ ಫೀಚರ್) ಕಂಟ್ರೋಲ್ ಅನ್ನು ಪಾಲಕರಿಗೆ ನೀಡಿದೆ.

ಇದನ್ನೂ ಓದಿ: ಕೈಜೋಡಿಸಿದ ಟೆಕ್‌ ದಿಗ್ಗಜರು; ಕೊರೋನಾ ಟ್ರೇಸ್‌ಗೆ ಆ್ಯಪಲ್, ಗೂಗಲ್ ಗೂಗ್ಲಿ!

ಇಲ್ಲಿ ತಮ್ಮ ಮಕ್ಕಳಿಗೆ ಬೇರೆಯವರು ನೇರವಾಗಿ ಯಾವುದೇ ರೀತಿಯ ಸಂದೇಶಗಳನ್ನು ಕಳುಹಿಸಲು ಬಾರದಂತೆ ಸೆಟ್ಟಿಂಗ್ಸ್‌‌ನಲ್ಲಿ ಬದಲಾಯಿಸುವ ಅವಕಾಶ ಇತ್ತು. ಈಗ ಈ ಆಯ್ಕೆಯನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸುವ (ಡಿಸೇಬಲ್) ಆಯ್ಕೆಯನ್ನು ಪಾಲಕರಿಗೆ ಕೊಡಲಾಗಿದೆ. ಹೀಗಾಗಿ ಮಕ್ಕಳ ಜುಟ್ಟು ಸಂಪೂರ್ಣವಾಗಿ ಪಾಲಕರಿಗೆ ಸಿಕ್ಕಂತಾಗಿದೆ. 
ಇದರ ಜೊತೆಗೆ ಕಂಪನಿ ಸಹ ಕಠಿಣ ನಿರ್ಧಾರ ತಾಳಿದ್ದು, 16 ವರ್ಷಗಳಿಗಿಂತ ಕಡಿಮೆ ವಯಸ್ಸಿನವರಿಗೆ ಡಿಎಂ ಆಯ್ಕೆ ಬಳಸಲು ಬಾರದಂತೆ ಟಿಕ್‌ಟಾಕ್ ನಿಯಂತ್ರಣಕ್ಕೊಳಪಡಿಸಲಿದ್ದು, ಇದೇ ಏಪ್ರಿಲ್ 30ರಿಂದ ಜಾರಿಗೆ ಬರಲಿದೆ ಎಂದು ಕಂಪನಿ ಹೇಳಿಕೊಂಡಿದೆ. 

ನಿಮ್ಮ ಬಗ್ಗೆ ಫೇಸ್ಬುಕ್ ಕಾಳಜಿ:
ಫೇಸ್ಬುಕ್ ಅನ್ನು ನಾವು ಮುಖ ಪುಸ್ತಕ ಎಂದು ಕನ್ನಡದಲ್ಲಿ ಕರೆಯುವುದುಂಟು. ಇಲ್ಲಿ ನಮಗನ್ನಿಸಿದ್ದನ್ನೆಲ್ಲ ಬರೆದುಕೊಂಡು ಹಾಕಿಕೊಳ್ಳಬಹುದಾಗಿದೆ. ಇಲ್ಲಿ ನಮ್ಮ ಹತ್ತಿರದವರು, ಹಿತೈಷಿಗಳು ಹಾಗೂ ಸ್ನೇಹಿತರು ಪ್ರತಿಕ್ರಿಯೆಗಳನ್ನು ನೀಡುತ್ತಾರೆ. ಕೆಲವರು ಇಮೋಜಿಗಳ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಆದರೆ, ಭಾವನಾತ್ಮಕ ಅನ್ನಿಸುವಂತಹ ನಿಮ್ಮ ಸಂದೇಶಗಳಿಗೆ ಈವರೆಗೆ ಪೂರಕವಾಗಿ ಬಹಳಷ್ಟು ಇಮೋಜಿಗಳಿದ್ದರೂ ಸೂಕ್ತವಾದ ಇಮೋಜಿ ಇರಲಿಲ್ಲ. ಈಗ ಫೇಸ್‌‌ಬುಕ್ ಅದನ್ನೂ ತರುತ್ತಿದೆ. ಕೇರ್ ಇಮೋಜಿ (ಕಾಳಜಿ) ಅನ್ನು ಬಳಕೆದಾರರಿಗೆ ಕೊಡಲು ನಿರ್ಧರಿಸಿದೆ. 

ಇದನ್ನೂ ಓದಿ: ಡಾರ್ಕ್‌ವೆಬ್‌ನಲ್ಲಿ ಸೇಲಾಯ್ತು ಜೂಮ್ ಪ್ರೈವೆಸಿ!

ಈಗ ಎಲ್ಲಿ ನೋಡಿದರೂ ಕೊರೋನಾ ವೈರಸ್‌ನದ್ದೇ ಸುದ್ದಿ. ಇಂತಹ ಸಂದರ್ಭದಲ್ಲಿ ಅನೇಕರು ಉಪಯುಕ್ತ, ಕಾಳಜಿಯುಕ್ತ ಸಂದೇಶಗಳನ್ನು ಹಾಕಿಕೊಳ್ಳುತ್ತಿರುತ್ತಾರೆ. ಅಂಥವರಿಗೆ ಅದಕ್ಕೆ ಸರಿಹೊಂದುವಂತೆ ಈ ಕೇರ್ ಇಮೋಜಿಯನ್ನು ಲೈಕ್ ಬಟನ್‌ ಜೊತೆಯಲ್ಲಿ ಬಳಸಲು ಅನುವು ಮಾಡಿಕೊಡಲಾಗಿದೆ. ಈಗಾಗಲೇ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ವಿಭಿನ್ನವಾದ ಕಾಳಜಿಯುಕ್ತ ಪ್ರತಿಕ್ರಿಯೆಗಾಗಿ ಹಾರ್ಟ್ ಬೀಟಿಂಗ್‌ನ ಸಿಂಬಲ್ ಅನ್ನು ಬಳಸಲಾಗುತ್ತಿದೆ.

click me!