
ಬೆಂಗಳೂರು (ಏ.01): ರಾಜ್ಯದಲ್ಲಿ ಇದೀಗ ಬೇಸಿಗೆ ಆರಂಭವಾಗಿದ್ದು, ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಪೂರೈಕೆಗೂ ಸಮಸ್ಯೆ ಎದುರಾಗಲಿದೆ. ಆದ್ದರಿಂದ ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಹಾಗೂ ಉಜ್ಜಿನಿ ಜಲಾಶಯದಿಂದ ಭೀಮಾ ನದಿಗೆ ಕ್ರಮವಾಗಿ 2 ಟಿಎಂಸಿ ಹಾಗೂ 1 ಟಿಎಂಸಿ ನೀರು ಹರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಮನವಿ ಪತ್ರ ಬರೆದಿದ್ದಾರೆ.
ಮನವಿ ಪತ್ರದಲ್ಲಿ ಏನಿದೆ?
ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳು ಮಾರ್ಚ್ 2025 ರ ಆರಂಭದಿಂದಲೂ ಕುಡಿಯುವ ನೀರಿನ ತೀವ್ರ ಕೊರತೆಯನ್ನು ಎದುರಿಸುತ್ತಿವೆ. ಈ ಹಿಂದಿನ ಸಂದರ್ಭಗಳಲ್ಲಿ, ಬೇಸಿಗೆಯ ಋತುಗಳಲ್ಲಿ, ಮಾನವರು ಮತ್ತು ಜಾನುವಾರುಗಳ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಕೃಷ್ಣಾ ನದಿಯಿಂದ ನೀರನ್ನು ಬಿಡುಗಡೆ ಮಾಡಲು ಮಹಾರಾಷ್ಟ್ರ ಸರ್ಕಾರವು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿತ್ತು. ಕರ್ನಾಟಕ ಸರ್ಕಾರವು ಈ ಮೂಲಕ ಮಹಾರಾಷ್ಟ್ರ ರಾಜ್ಯಕ್ಕೆ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತದೆ.
ಇದನ್ನೂ ಓದಿ: ರಾಜ್ಯದ ಜನರಿಗೆ ತೊಳ್ಕೊಳ್ಳೋಕೆ ನೀರಿಲ್ಲ, ತೆಲಂಗಾಣಕ್ಕೆ ಕದ್ದುಮುಚ್ಚಿ 10 ಟಿಎಂಸಿ ನೀರು ಬಿಟ್ಟಿತಾ ಕಾಂಗ್ರೆಸ್?
ಪ್ರಸ್ತುತ, ಪರಿಸ್ಥಿತಿಯು ಹೆಚ್ಚು ಗಂಭೀರವಾಗುತ್ತಿದೆ. ಹೆಚ್ಚುತ್ತಿರುವ ತಾಪಮಾನ ಮತ್ತು ಹಿಪ್ಪರಗಿ ಬ್ಯಾರೇಜ್ ಮತ್ತು ಇತರ ಸ್ಥಳೀಯ ಜಲಾಶಯಗಳಲ್ಲಿನ ಅಸ್ತಿತ್ವದಲ್ಲಿರುವ ಸಂಗ್ರಹಣಾ ಮಟ್ಟಗಳು 2025ರಲ್ಲಿ ಮಳೆಗಾಲ ಪ್ರಾರಂಭವಾಗುವವರೆಗೆ ಕೃಷ್ಣಾ ಜಲಾನಯನ ಪ್ರದೇಶದ ಉತ್ತರ ಕರ್ನಾಟಕ ಜಿಲ್ಲೆಗಳ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಸಾಕಾಗುವುದಿಲ್ಲ. ಆದ್ದರಿಂದ, ಕರ್ನಾಟಕದ ಉತ್ತರ ಭಾಗದ ಜಿಲ್ಲೆಗಳ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ವಾರಣಾ/ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಕನಿಷ್ಠ 2.00 ಟಿಎಂಸಿ ನೀರನ್ನು ಮತ್ತು ಉಜ್ಜಿನಿ ಜಲಾಶಯದಿಂದ ಭೀಮಾ ನದಿಗೆ 1.00 ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ನಾನು ವಿನಂತಿಸುತ್ತೇನೆ' ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ತೆಲಂಗಾಣಕ್ಕೆ 1.25 ಟಿಎಂಸಿ ನೀರು ಹರಿಸಿದ ಕರ್ನಾಟಕ: ಬೇಸಿಗೆ ಆರಂಭಕ್ಕೂ ಮುನ್ನವೇ ಕನ್ನಡಿಗರಿಗಾಗಿ ಕುಡಿಯಲು ಇಟ್ಟುಕೊಂಡಿದ್ದ ನೀರಿನಲ್ಲಿ ಕೃಷ್ಣಾ ನದಿಯಿಂದ ತೆಲಂಗಾಣಕ್ಕೆ 1.25 ಟಿಎಂಸಿ ನೀರನ್ನು ಹರಿಸಲಾಗಿತ್ತು. ಈ ವೇಳೆ ವಿಪಕ್ಷ ನಾಯಕರು ಪ್ರಶ್ನೆ ಮಾಡಿದರೆ ಸಹಕಾರ ತತ್ವದ ಮೇಲೆ ಈ ನೀರು ಹರಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಧಾನಸಭೆಯಲ್ಲಿ ಉತ್ತರ ನೀಡಿದ್ದರು. ಆದರೆ, ಸ್ಥಳೀಯ ರೈತರು ತೆಲಂಗಾಣಕ್ಕೆ 7 ಟಿಎಂಸಿ ನೀರು ಹರಿಸಲಾಗಿದೆ ಎಂದು ಆರೋಪ ಮಾಡಿದ್ದರು. ಇದೀಗ ಕೃಷ್ಣ ನದಿ ತೋರದ ಜನರೇ ನೀರಿಗಾಗಿ ಹಾಹಾಕಾರ ಎದುರಿಸುವ ಪ್ರಸಂಗ ಬರಲಿದೆ. ನೀರು ಬಿಟ್ಟ ಮೇಲೆ ಮಹರಾಷ್ಟ್ರದಿಂದ ನೀರು ಬಿಡುವಂತೆ ಸಿದ್ದರಾಮಯ್ಯ ಅವರು ಪತ್ರ ಬರೆದು ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ