BBMPಯ ದುಂದುವೆಚ್ಚ: ಅಂಡರ್‌ಪಾಸ್‌ ಲೈಟಿಂಗ್‌ಗೆ ₹3 ಕೋಟಿ ಖರ್ಚು!

Published : Apr 07, 2025, 04:19 AM ISTUpdated : Apr 07, 2025, 06:42 AM IST
BBMPಯ ದುಂದುವೆಚ್ಚ: ಅಂಡರ್‌ಪಾಸ್‌ ಲೈಟಿಂಗ್‌ಗೆ ₹3 ಕೋಟಿ ಖರ್ಚು!

ಸಾರಾಂಶ

ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಹಣವಿಲ್ಲ ಎನ್ನುವ ಬಿಬಿಎಂಪಿ, ಮಾಗಡಿ ರಸ್ತೆಯ ಅಂಡರ್‌ಪಾಸ್‌ಗೆ ಎಲ್‌ಇಡಿ ದೀಪಗಳನ್ನು ಅಳವಡಿಸಲು 3 ಕೋಟಿ ರೂ. ಖರ್ಚು ಮಾಡುತ್ತಿದೆ. ಕೇವಲ 180 ಮೀಟರ್ ಉದ್ದದ ಅಂಡರ್‌ಪಾಸ್‌ಗೆ ಇಷ್ಟೊಂದು ಹಣ ಖರ್ಚು ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು (ಏ.7): ‘ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು’ ಎಂಬ ಗಾದೆ ಮಾತು ನಮ್ಮ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಅನ್ವಯವಾಗಬಹುದು.
ರಸ್ತೆ ಗುಂಡಿ ಮುಚ್ಚುವುದಕ್ಕೆ, ಮಳೆಗಾಲದಲ್ಲಿ ನೀರು ತುಂಬಿಕೊಳ್ಳುವ ಅಂಡರ್‌ ಪಾಸ್‌ ದುರಸ್ತಿಗೆ ನೂರು ನೆಪ ಹೇಳುವ ಬಿಬಿಎಂಪಿಯ ಅಧಿಕಾರಿಗಳು, ಮಾಗಡಿ ರಸ್ತೆಯ ಟೋಲ್‌ಗೇಟ್‌ ಅಂಡರ್ ಪಾಸ್‌ನ ಥಳಕು ಬಳುಕಿನ ಎಲ್‌ಇಡಿ ವಿದ್ಯುದೀಕರಣಕ್ಕಾಗಿ ಬರೋಬ್ಬರಿ ಮೂರು ಕೋಟಿ ರು. ವೆಚ್ಚ ಮಾಡುತ್ತಿದ್ದಾರೆ.

ಬೆಂಗಳೂರಿನ ರಸ್ತೆಯ ಗುಂಡಿ ಮುಚ್ಚುವುದಕ್ಕೆ, ದುರಸ್ತಿಗೆ ಮತ್ತು ಮಳೆ ನೀರಿಗೆ ತುಂಬುವ ಅಂಡರ್‌ ಪಾಸ್‌ ದುರಸ್ತಿಗೆ ದುಡ್ಡಿಲ್ಲ ಎಂದು ಹೇಳುವ ಬಿಬಿಎಂಪಿಯ ಅಧಿಕಾರಿಗಳು ಕೇವಲ ಒಂದು ಅಂಡರ್‌ ಪಾಸ್‌ನ ಅಂದ ಚಂದ ಹೆಚ್ಚಿಸಲು ಕೋಟಿ ಕೋಟಿ ರು. ವೆಚ್ಚ ಮಾಡುತ್ತಿದ್ದಾರೆ. ಅದರ ಅಗತ್ಯವಿದೆಯೇ ಎಂಬುದನ್ನು ಕೂಡ ಯೋಚಿಸಿಲ್ಲ ಎಂದು ಸಾರ್ವಜನಿಕರ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ.
ರಾಜಾಜಿನಗರ, ಮಲ್ಲೇಶ್ವರ, ವಿಜಯನಗರ ಮತ್ತು ಗೋವಿಂದರಾಜನಗರದ ನಡುವೆ ಸಂಪರ್ಕ ಕಲ್ಪಿಸುವ ಈ ಅಂಡರ್‌ ಪಾಸ್‌ ಕೇವಲ 180 ಮೀಟರ್ ಉದ್ದವಿದೆ. ದುಬೈ, ದೆಹಲಿ, ಹೈದರಾಬಾದ್‌ ಸೇರಿದಂತೆ ಬೇರೆ ಬೇರೆ ನಗರಗಳ ಮಾದರಿ ತೋರಿಸಿ ಸಾರ್ವಜನಿಕರ ಹಣ ದುಂದು ವೆಚ್ಚ ಮಾಡಲಾಗುತ್ತಿದೆ ಎಂದು ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: BBMP ಬಜೆಟ್: 20 ಸಾವಿರ ಕೋಟಿ ರು.ದಾಟಿದ ಪಾಲಿಕೆ ಬಜೆಟ್‌ ಗಾತ್ರ!

ಕೇವಲ 180 ಮೀಟರ್‌ ಉದ್ದದ ಅಂಡರ್‌ ಪಾಸ್‌ಗೆ ವಿದ್ಯುತ್ ದೀಪ ಅಳಡಿಕೆ ಮಾಡುವುದಕ್ಕೆ, ಬಣ್ಣ ಬಳಿಯುವುದಕ್ಕೆ ಮತ್ತು ಪಾದಚಾರಿ ಪುಟ್‌ಪಾತ್‌ ಅಭಿವೃದ್ಧಿಪಡಿಸುವುದಕ್ಕೆ ಬರೋಬ್ಬರಿ 3 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ ಎನ್ನುವುದು ಆಶ್ಚರ್ಯ ಉಂಟು ಮಾಡಿದೆ.

ಚಾಲಕರ ಕಣ್ಣಿಗೆ ಚುಚ್ಚುವ ಲೈಟ್‌

ಈಗಾಗಲೇ ಅಂಡರ್‌ ಪಾಸ್‌ನ ಒಂದು ಕಡೆಯ ಗೋಡೆಗೆ ಎಲ್‌ಇಡಿ ಪ್ರೋಪೈಲ್‌ ಲೈಟಿಂಗ್‌ ವ್ಯವಸ್ಥೆ ಮಾಡಲಾಗಿದೆ. ಇದು ರಾತ್ರಿ ವೇಳೆಯಲ್ಲಿ ವಾಹನ ಚಾಲನೆ ಮಾಡುವ ಚಾಲಕರ ಕಣ್ಣಿಗೆ ಚುಚ್ಚುತ್ತಿದೆ. ಇದರಿಂದ ಅಪಘಾತ ಉಂಟಾಗುವ ಸಾಧ್ಯತೆ ಎಂದು ಬೈಕ್‌ ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮೆಟ್ರೋ, ಹಾಲು ದರ ಹೆಚ್ಚಳ ಬೆನ್ನಲ್ಲೇ ಮತ್ತೊಂದು ಬೆಲೆ ಏರಿಕೆ ಬರೆ; ಇಂದಿನಿಂದ ಕಸ ವಿಲೇವಾರಿಗೂ ಬಿಬಿಎಂಪಿ ಶುಲ್ಕ ವಸೂಲಿ!

ದುಬೈ ಮಾದರಿ ಅಭಿವೃದ್ಧಿ

ರಾತ್ರಿ ವೇಳೆಯಲ್ಲಿ ಅಂಡರ್‌ ಪಾಸ್‌ಗಳು ಅಂದವಾಗಿ ಕಾಣಬೇಕೆಂದು ದುಬೈ ಸೇರಿದಂತೆ ದೇಶದ ವಿವಿಧ ನಗರದಲ್ಲಿ ಕ್ರಿಸ್‌ ಕ್ರಾಸ್‌ ಎಲ್ಇಡಿ ಪ್ರೋಪೈಲ್‌ ಲೈಟ್‌ಗಳನ್ನು ಅಂಡರ್‌ ಪಾಸ್‌ನ ಗೋಡೆಗಳಿಗೆ ಅಳವಡಿಕೆ ಮಾಡಲಾಗುತ್ತಿದೆ. ಜತೆಗೆ, ಅಂಡರ್‌ ಪಾಸ್‌ ಗೋಡೆಗಳಿಗೆ ಪ್ರತಿ ವರ್ಷ ಬಣ್ಣ ಬಳಿಯುವುದನ್ನು ತಪ್ಪಿಸುವುದಕ್ಕೆ ಎಸಿಪಿ ಬಣ್ಣ ಬಳಿಯಲಾಗುತ್ತಿದ್ದು, ಕನಿಷ್ಠ 10 ವರ್ಷ ಬಾಳಿಕೆ ಬರಲಿದೆ. ಹೊಗೆ, ಧೂಳು ಹಾಗೂ ನೀರಿಗೆ ಈ ಬಣ್ಣ ಹಾಳಾಗುವುದಿಲ್ಲ. ಪ್ರಾಯೋಗಿಕವಾಗಿ ಕಾಮಗಾರಿ ನಡೆಸಲಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕಾರ್ಯಪಾಲಕ ಎಂಜಿನಿಯರ್‌ ಪ್ರಕಾಶ್‌ ವಿವರಿಸಿದ್ದಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!