
ಬೆಂಗಳೂರು (ಏ.7): ಅಗತ್ಯವಸ್ತುಗಳ ಬೆಲೆ ಏರಿಕೆ, ಮುಸ್ಲಿಮರ ಓಲೈಕೆ, ಪರಿಶಿಷ್ಟರಿಗೆ ಮೀಸಲಾಗಿದ್ದ ಅನುದಾನ ಅನ್ಯ ಉದ್ದೇಶಕ್ಕೆ ಬಳಕೆ ಮತ್ತಿತರ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಪ್ರಮುಖ ಪ್ರತಿಪಕ್ಷ ಬಿಜೆಪಿ ಸೋಮವಾರದಿಂದ ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಆರಂಭಿಸಲಿದೆ.
ಈ ಯಾತ್ರೆ ಒಟ್ಟು ನಾಲ್ಕು ಹಂತಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಯಾತ್ರೆ ನಡೆಯಲಿದೆ. ಮೇ 3ಕ್ಕೆ ಅಂತ್ಯಗೊಳ್ಳಲಿದೆ.
ಸೋಮವಾರ ಮೈಸೂರಿನಲ್ಲಿ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ ಅವರು ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಉಭಯ ಸದನಗಳ ಪ್ರತಿಪಕ್ಷಗಳ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿ ಪಕ್ಷದ ಹಿರಿಯ ನಾಯಕರು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ವಿಧಾನಸೌಧದಲ್ಲಿ ಕೂತು ಲೂಟಿ; ಸಿದ್ದು ಡಿಕೆಶಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ!
ಮಧ್ಯಾಹ್ನ 3ಗಂಟೆಗೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಸಂಜೆ 4ಗಂಟೆಗೆ ಕೇಂದ್ರ ಅಂಚೆ ಕಚೇರಿ ವೃತ್ತದಿಂದ ಗಾಂಧಿ ಚೌಕ್‌ವರೆಗೆ ಪಾದಯಾತ್ರೆ ಮೂಲಕ ಜನಾಕ್ರೋಶ ಯಾತ್ರೆ ನಡೆಯಲಿದೆ.
ಕಳೆದ ಬುಧವಾರ ಬಿಜೆಪಿ ಇದೇ ವಿಷಯಗಳನ್ನು ಮುಂದಿಟ್ಟುಕೊಂಡು ನಗರದ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದು. ಆ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಸರಣಿ ಹೋರಾಟಕ್ಕೆ ಚಾಲನೆ ನೀಡಿತ್ತು. ಬಳಿಕ ಶನಿವಾರ ರಾಜ್ಯಾದ್ಯಂತ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಪ್ರತಿಭಟನೆ ನಡೆಸಿತ್ತು. ಇದೀಗ ಜನಾಕ್ರೋಶ ಯಾತ್ರೆ ಆರಂಭವಾಗುತ್ತಿದೆ.
ಜನಾಕ್ರೋಶ ಯಾತ್ರೆಯ ವಿವರ:
ಮೊದಲ ಹಂತ:
ಸೋಮವಾರ ಮೈಸೂರಿನಲ್ಲಿ ಚಾಲನೆ. ಮಂಗಳವಾರ (ಏ.8) ಮಂಡ್ಯ ಮತ್ತು ಹಾಸನ, ಬುಧವಾರ (ಏ.9) ಕೊಡಗು ಹಾಗೂ ಮಂಗಳೂರು, ಗುರುವಾರ (ಏ.10) ಉಡುಪಿ ಮತ್ತು ಚಿಕ್ಕಮಗಳೂರು, ಶುಕ್ರವಾರ (ಏ.11) ಉತ್ತರ ಕನ್ನಡ ಹಾಗೂ ಶಿವಮೊಗ್ಗ.
ಎರಡನೇ ಹಂತ:
ಏ.15ರಂದು ನಿಪ್ಪಾಣಿ, 16ರಂದು ಬೆಳಗಾವಿ ಮತ್ತು ಹುಬ್ಬಳ್ಳಿ, 17ರಂದು ಬಾಗಲಕೋಟೆ ಹಾಗೂ ವಿಜಯಪುರ, 18ರಂದು ಕಲಬುರಗಿ ಮತ್ತು ಬೀದರ್.
ಇದನ್ನೂ ಓದಿ: BBMPಯ ದುಂದುವೆಚ್ಚ: ಅಂಡರ್‌ಪಾಸ್ ಲೈಟಿಂಗ್‌ಗೆ ₹3 ಕೋಟಿ ಖರ್ಚು!
ಮೂರನೇ ಹಂತ:
ಏ.21ರಂದು ದಾವಣಗೆರೆ ಹಾಗೂ ಹಾವೇರಿ, 22ರಂದು ಗದಗ ಮತ್ತು ಕೊಪ್ಪಳ, 23ರಂದು ಯಾದಗಿರಿ ಹಾಗೂ ರಾಯಚೂರು, 24ರಂದು ಬಳ್ಳಾರಿ ಮತ್ತು ವಿಜಯನಗರ, 25ರಂದು ಚಿತ್ರದುರ್ಗ ಹಾಗೂ ತುಮಕೂರು.
ನಾಲ್ಕನೇ ಹಂತ:
ಏ.27ರಂದು ಕೋಲಾರ ಮತ್ತು ಚಿಕ್ಕಬಳ್ಳಾಪುರ, ಮೇ 3ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ