ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ತಮ್ಮ ವಿರುದ್ಧದ ಭೂ ಒತ್ತುವರಿ ಆರೋಪವನ್ನು ತಳ್ಳಿಹಾಕಿದ್ದಾರೆ.
ಬೆಂಗಳೂರು (ಏ.7): ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ವಿಧಾನಸೌಧದ ಮೂರನೇ ಮಹಡಿಯಲ್ಲಿ ಮೊಹಮ್ಮದ್ ಘೋರಿ, ಘಜನಿ ಮೊಹಮ್ಮದ್‌ನಂಥವರು ಕೂತು ಲೂಟಿ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಶನಿವಾರ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಅಕ್ರಮಗಳು, ದರೋಡೆ ಕೆಲಸ ನಡೆಯುತ್ತಿವೆ. ಮೊಹಮ್ಮದ್ ಘೋರಿ, ಘಜನಿ ಮೊಹಮ್ಮದ್‌ನಂಥವರಿಂದ ಲೂಟಿ ನಡೆಯುತ್ತಿದೆ. ಹೀಗಾದರೆ ರಾಜ್ಯದ ಸ್ಥಿತಿ ಏನಾಗಬಹುದು ಎಂದು ಕಿಡಿಕಾರಿದರು.
ತಮ್ಮ ತೇಜೋವಧೆಗೆ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದು, ಸುಳ್ಳು, ಭೂ ಒತ್ತುವರಿ ಹಗರಣ ಮುಂದಿಟ್ಟು ಬಾಯ್ಮುಚ್ಚಿಸುವ ಪ್ರಯತ್ನ ನಡೆಸಿದೆ. 40 ವರ್ಷಗಳ ಹಿಂದೆ ಭೂಮಿ ಖರೀದಿ ಮಾಡಿದ್ದು, ಅಂದಿನಿಂದಲೂ ದ್ವೇಷದ ರಾಜಕಾರಣ ನಡೆಯುತ್ತಿದೆ. 47 ಎಕರೆ ಭೂಮಿಯನ್ನು ಸಿನಿಮಾ ನಿರ್ಮಾಪಕನಾಗಿದ್ದಾಗ ಖರೀದಿ ಮಾಡಿದ್ದೆ. ಅದರಲ್ಲಿ ಒತ್ತುವರಿಯಾಗಿದ್ದರೆ ದಾಖಲೆಗಳಲ್ಲಿ ಸರಿಪಡಿಸಿಕೊಳ್ಳಿ ಎಂದು ನಾನೇ ಹೇಳಿದ್ದೇನೆ. ಆದರೂ ದುರುದ್ದೇಶಪೂರ್ವಕವಾಗಿ ನನ್ನ ವರ್ಚಸ್ಸಿಗೆ ಧಕ್ಕೆ ಉಂಟುಮಾಡಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕುಟುಂಬಕ್ಕೆ ನಾನಾ ರೀತಿಯ ಹಿಂಸೆ ನೀಡುವುದು ಹೊಸತಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ: BBMPಯ ದುಂದುವೆಚ್ಚ: ಅಂಡರ್‌ಪಾಸ್ ಲೈಟಿಂಗ್‌ಗೆ ₹3 ಕೋಟಿ ಖರ್ಚು!
ಸರ್ಕಾರಕ್ಕೆ ಸವಾಲು:
ನನಗೆ ನೋಟಿಸ್ ಕೊಡುವ ವಿಚಾರದಲ್ಲಿ ಕೆಳಹಂತದ ಅಧಿಕಾರಿಗಳನ್ನು ನಾನು ಪ್ರಶ್ನೆ ಮಾಡಲ್ಲ. ಎಸ್ಐಟಿ ತಂಡ ರಚಿಸಿ ತನಿಖೆ ಮಾಡಿರುವುದು ಇತಿಹಾಸದಲ್ಲಿಯೇ ಮೊದಲು. ನನ್ನ ವಿರುದ್ಧ ರಾಜಕೀಯ ದ್ವೇಷ ಸಾಧಿಸಲಾಗುತ್ತಿದೆ. ಇಷ್ಟು ದಿನ ಸುಮ್ಮನಿದ್ದೆ. ಆದರೆ, ಈ ಸರ್ಕಾರಕ್ಕೆ ನಾನು ಸವಾಲು ಹಾಕುವುದಕ್ಕೆ ಬಂದಿದ್ದೇನೆ. ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ರಾಜಕಾರಣ ನಡೆಯುತ್ತಿದೆ. ಸರ್ಕಾರದ ವಿರುದ್ಧ ನಾನು ಯುದ್ಧ ಆರಂಭ ಮಾಡುತ್ತೇನೆ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.
ಇದನ್ನೂ ಓದಿ: ಮೆಟ್ರೋ, ಹಾಲು ದರ ಹೆಚ್ಚಳ ಬೆನ್ನಲ್ಲೇ ಮತ್ತೊಂದು ಬೆಲೆ ಏರಿಕೆ ಬರೆ; ಇಂದಿನಿಂದ ಕಸ ವಿಲೇವಾರಿಗೂ ಬಿಬಿಎಂಪಿ ಶುಲ್ಕ ವಸೂಲಿ!
ನಾನು ಮಾಜಿ ಪ್ರಧಾನಿ ಮಗ ಮತ್ತು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೆ. ನಾಲ್ಕು ಎಕರೆ ಜಮೀನು ಒತ್ತುವರಿ ಮಾಡಿಕೊಳ್ಳುಬೇಕಾ? 70 ಎಕರೆ ಒತ್ತುವರಿ ಎಂದು ಯಾರೋ ಸಮಾಜ ಪರಿವರ್ತನೆ ಮಾಡುವ ವ್ಯಕ್ತಿ ಹೇಳಿದ್ದು, ಬಂದು ತೋರಿಸಲಿ. ನಾನು ಅನುಭವಿಸುತ್ತಿರುವ ಭೂಮಿಯೇ 40 ರಿಂದ 42 ಎಕರೆ. ಅತಿಕ್ರಮಣ ಮಾಡಿಕೊಂಡಿದ್ದರೆ ದಾಖಲೆ ಬಿಡುಗಡೆ ಮಾಡಲಿ. ಈ ಸರ್ಕಾರದಲ್ಲಿರುವವರು ನಾನು ಅಪರಾಧಿ ಎಂದು ಅಪಪ್ರಚಾರ ಮಾಡುವುದಕ್ಕೆ ಹೊರಟ್ಟಿದ್ದಾರೆ. ಇದಕ್ಕೆಲ್ಲ ಕುಮಾರಸ್ವಾಮಿ ಹೆದರಲ್ಲ. ಅಧಿಕಾರ ಯಾರಿಗೂ ಶಾಶ್ವತವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.