ಉತ್ತರಾ ಖಂಡ : ಸುಟ್ಟ ಸ್ಥಿತಿಯಲ್ಲಿ ಬೆಂಗಳೂರು ನೋಂದಣಿ ಹೊಂದಿರುವ ಕಾರು, ಶವ ಪತ್ತೆ

ಉತ್ತರಾಖಂಡದ ಜ್ಯೋತಿರ್ಮಠದ ಬಳಿ ಸುಟ್ಟ ಕಾರಿನಲ್ಲಿ ಬೆಂಗಳೂರು ನೋಂದಣಿಯ ವಾಹನ ಪತ್ತೆಯಾಗಿದೆ. ಕಾರಿನ ಒಳಗೆ ಮಹಿಳೆಯ ಸುಟ್ಟ ಮೃತದೇಹ ಲಭ್ಯವಾಗಿದ್ದು, ಕೊಲೆಯ ಶಂಕೆ ವ್ಯಕ್ತವಾಗಿದೆ.


ಚಮೋಲಿ (ಉತ್ತರಾಖಂಡ): ಬೆಂಗಳೂರು ನೋಂದಣಿ ಹೊಂದಿರುವ ಮಾರುತಿ ರಿಟ್ಜ್‌ ಕಾರು ಉತ್ತರಾಖಂಡದ ಜ್ಯೋತಿರ್ಮಠದ ಸಮೀಪ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದರ ಒಳಗೆ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಮೃತದೇಹವೂ ಲಭಿಸಿದ್ದು, ಘಟನೆ ಶನಿವಾರ ರಾತ್ರಿ ನಡೆದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ತಪೋವನ್‌ ಎಂಬ ಗ್ರಾಮದಲ್ಲಿ ಸುಟ್ಟ ಸ್ಥಿತಿಯಲ್ಲಿನ ಕಾರನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಕಾರನ್ನು ಪರಿಶೀಲಿಸಿದಾಗ, ಮಹಿಳೆಯ ಮೃತದೇಹ ಪತ್ತೆಯಾಗಿದೆ. ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪರಿಶೀಲನೆ ವೇಳೆ ಕಾರು ಬೆಂಗಳೂರು ನೋಂದಣಿ (KA 01 AG 0590) ಎಂದು ತಿಳಿದುಬಂದಿದೆ. ಕಾರು ಸಂತೋಶ್‌ ಕುಮಾರ್‌ ಸೇನಾಪತಿ ಎಂಬುವರ ಹೆಸರಿನಲ್ಲಿ ನೋಂದಣಿಯಾಗಿದ್ದು, ಇವರು ಬೆಂಗಳೂರಿನ ಕಸ್ತೂರಿ ನಗರ ಸಮೀಪ ಕೃಷ್ಣಯ್ಯನಪಾಳ್ಯದ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.

Latest Videos

ಇದನ್ನೂ ಓದಿ: ಕೆಲವರಿಗೆ ಎಷ್ಟೇ ಅನುದಾನ ಹಣ ಕೊಟ್ರೂ ಅಳೋದು ಬಿಡೋಲ್ಲ : ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ಗೆ ಮೋದಿ ಚಾಟಿ

ಮತ್ತೊಂದೆಡೆ ಈ ಕಾರು ಕಳೆದೆರಡು ದಿನಗಳಿಂದ ಜ್ಯೋತಿರ್ಮಠ ಸಮೀಪ ತಿರುಗಾಡುತ್ತಿತ್ತು. ಕಾರಿನಲ್ಲಿ ಯುವಕ ಮತ್ತು ಮಹಿಳೆ ಇದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಯುವಕನ ಮಾಹಿತಿ ಇನ್ನು ಪತ್ತೆಯಾಗಬೇಕಿದೆ.

ಹೆಚ್ಚಿನ ತನಿಖೆಗಾಗಿ ಉನ್ನತ ಮಟ್ಟದ ತಂಡ ರಚಿಸಲಾಗಿದ್ದು, ಕಾರನ್ನು ವಿಧಿವಿಜ್ಞಾನ ತಜ್ಞರು ತನಿಖೆ ನಡೆಸುತ್ತಿದ್ದಾರೆ ಎಂದು ಚಮೋಲಿ ಎಸ್‌ಪಿ ಸರ್ವೇಶ್‌ ಪನ್ವರ್‌ ತಿಳಿಸಿದ್ದಾರೆ. ಇದು ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ.

click me!