
ಚಿಕ್ಕಬಳ್ಳಾಪುರ (ಏ.7): ನಮ್ಮದು ಜನಪರ ಸರ್ಕಾರ, ಗ್ಯಾರಂಟಿಗಳ ಸರ್ಕಾರ ಎಂದು ಬೀಗುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ಇನ್ನೂ ತುಂಬಿಲ್ಲ. ಗ್ಯಾರಂಟಿ ಹೆಸರಲ್ಲಿ ಎರಡು ವರ್ಷಗಳಿಂದ ಭ್ರಷ್ಟಾಚಾರದಲ್ಲಿ ಮುಳುಗಿದೆ. ಈ ಸರಕಾರಕ್ಕೆ ಇನ್ನೂ 3 ವರ್ಷ ಸಮಯವಿದ್ದು ಅಲ್ಲಿಯವರೆಗೆ ಪಾಪಿ ಚಿರಾಯು ಎಂಬಂತೆ ಎಷ್ಟು ಪಾಪ ಮಾಡುತ್ತಾರೋ ಮಾಡಲಿ ಎಂದು ಸಂಸದ ಡಾ.ಕೆ.ಸುಧಾಕರ್ ವ್ಯಂಗ್ಯವಾಡಿದರು.
ನಗರದ ನಗರಸಭೆ ಅವರಣದಲ್ಲಿ ಶನಿವಾರ ನಡೆದ ಬಜೆಟ್ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಗ್ಯಾರೆಂಟಿಗಳ ಭಾರಕ್ಕೆ ರಾಜ್ಯ ಸರಕಾರ ದಿವಾಳಿಯತ್ತ ಸಾಗಿದ್ದು ಆರ್ಥಿಕ ಸ್ಥಿತಿಗತಿಗಳನ್ನು ಯಾವ ರೀತಿ ನಿಭಾಯಿಸಬೇಕಿತ್ತು, ಯಾವ ರೀತಿ ಆಡಳಿತ ನಡೆಸಬೇಕಿತ್ತೋ ಹಾಗೆ ಮಾಡುವುದರಲ್ಲಿ ಎಡವಿದ್ದಾರೆ. ಹೀಗಾಗಿ ಕರ್ನಾಟಕ ರಾಜ್ಯದ ಆರ್ಥಿಕತೆ ಭಯ ಹುಟ್ಟಿಸುವ ದಿಕ್ಕಿನತ್ತ ಸಾಗುತ್ತಿದೆ ಎಂದರು.ಹಾಲು ಉತ್ಪಾದಕರಿಗೆ ಹಣ ನೀಡಿಲ್ಲ. ಗ್ಯಾರಂಟಿ ಕೊಡಿರಪ್ಪಾ ಇಲ್ಲದಿದ್ದರೆ ಬೆಳಕಾಗೊಲ್ಲ ಎಂದು ಯಾರೂ ಕೂಡ ಇವರನ್ನು ಕೇಳಿರಲಿಲ್ಲ. ರೈತರಿಗೆ, ಮಹಿಳೆಯರಿಗೆ ವಿದ್ಯಾರ್ಥಿಗಳಿಗೆ ಹೀಗೆ ಈ ಸರ್ಕಾರ ನಿತ್ಯವೂ ಎಲ್ಲವರ್ಗದ ತಲೆಯ ಮೇಲೆ ತೆರಿಗೆಯ ಭಾರ ಹಾಕುತ್ತಿದ್ದಾರೆ. ರೈತರಿಗೆ ಕೊಡುವ ಹಾಲಿನ ಬೆಲೆ ಇಳಿಸಿ, ಗ್ರಾಹಕರು ಕುಡಿಯುವ ಹಾಲಿಗೆ ಬೆಲೆ ಏರಿಸಿದ್ದಾರೆ. 18 ತಿಂಗಳಲ್ಲಿ 4 ಬಾರಿ ಹಾಲಿನ ಬೆಲೆ ಏರಿಕೆ ಮಾಡಿದ್ದರೂ ರೈತರಿಗೆ ಹಣ ವರ್ಗಾಯಿಸಿಲ್ಲ. ರೈತರಿಗೆ ಕೊಡುವುದರಲ್ಲೇ 3 ರೂಪಾಯಿ ಕಡಿಮೆ ಮಾಡಿದ್ದಾರೆ ಎಂದು ಕುಟುಕಿದರು.
ಕೇಂದ್ರ ಸರಕಾರ ವಕ್ಫ್ ಕಾಯ್ದೆ ಸಂಬಂಧ ತೆಗೆದುಕೊಂಡಿರುವ ನಿರ್ಣಯ ಐತಿಹಾಸಿಕವಾದ ನಿರ್ಣಯವಾಗಿದೆ. ಇದರಿಂದಾಗಿ ಬಡ ಅಲ್ಪಸಂಖ್ಯಾತರಿಗೆ ವಿಶೇಷವಾಗಿ ಮಹಿಳೆಯರಿಗೆ ಆಗುತ್ತಿದ್ದ ಅನ್ಯಾಯಕ್ಕೆ ಮುಕ್ತಿ ಸಿಕ್ಕಿದೆ ಎಂದರು.ಶಾಸಕರಿಗೆ ಅಧಿಕಾರ ಇಲ್ಲಡೀಮ್ಡ್ ಫಾರೆಸ್ಟ್‌ಗೆ ಡಾ.ಕೆ.ಸುಧಾಕರ್ ರೈತರ ಜಮೀನುಗಳನ್ನು ಸೇರಿಸಿಬಿಟ್ಟಿದ್ದಾರೆ ಎಂದು ಹೇಳುವವರಿಗೆ ಯಾವ ವರ್ಷದಲ್ಲಿ ಕೊಟ್ಟಿದ್ದಾರೆ, ಆಗ ಯಾವ ಸರ್ಕಾರ ಇತ್ತು, ಯಾರು ಮುಖ್ಯಮಂತ್ರಿ ಇದ್ದರು ಎಂಬುದನ್ನು ಹೇಳಲು ಹೇಳಿ. ಶಾಸಕರ ಹಂತದಲ್ಲಿ ಜಮೀನುಗಳನ್ನು ಡೀಮ್ಡ್ ಫಾರೆಸ್ಟ್ ಗೆ ಸೇರಿಸಲು ಅಧಿಕಾರ ಇಲ್ಲ ಎಂಬುದು ಗೊತ್ತಿಲ್ಲವೇ ಎಂದು ಪರೋಕ್ಷವಾಗಿ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ: ಸರ್ಕಾರದ ವಿರುದ್ಧ ಬಿಜೆಪಿಯಿಂದ ಜನಾಕ್ರೋಶ ಯಾತ್ರೆ! ಎಂದು? ಎಲ್ಲಿ? ನಾಲ್ಕು ಹಂತಗಳ ವಿವರ ಇಲ್ಲಿದೆ
ನಗರೋತ್ಥಾನ ಟೆಂಡರ್‌ಗೆ ತಡೆ
ನಾನು ಸಚಿವನಾಗಿದ್ದಾಗ ತಂದಿದ್ದ ನಗರೋತ್ಥಾನದ ಅನುದಾನವನ್ನು ತರಲಾಗಿತ್ತು. ರಸ್ತೆ ಅಭಿವೃದ್ಧಿಗೆ ೩೧ ವಾರ್ಡುಗಳಿಗೆ ಸದಸ್ಯರನ್ನು ಕೇಳಿ ಸಮಾನವಾಗಿ ಅನುದಾನ ಹಂಚಿಕೆ ಮಾಡಲಾಗಿತ್ತು. ಈ ಸಂಬಂಧ ನಮ್ಮ ಕಾಲದಲ್ಲಿಯೇ ಟೆಂಡರ್ ಆಗಿತ್ತು. ಆದರೆ ಈಗಿನ ಶಾಸಕರು 2 ವರ್ಷವಾದರೂ ಅದನ್ನು ತಡೆಹಿಡಿದಿದ್ದಾರೆ ಇದು ಸರಿಯಲ್ಲ.ಅವರಿಗೆ ಬೇಕಾದ ಗುತ್ತಿಗೆದಾರರಿಗೆ ಕೋಟಿಗಟ್ಟಲೆ ಗುತ್ತಿಗೆ ನೀಡಿ ಲಾಭ ಮಾಡಿಕೊಳ್ಳಬೇಕು ಎನ್ನುವ ಕಾರಣಕ್ಕೆ ತಡೆ ಹಿಡಿದಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ವಿಧಾನಸೌಧದಲ್ಲಿ ಕೂತು ಲೂಟಿ; ಸಿದ್ದು ಡಿಕೆಶಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ!
ಇಲ್ಲಿನ ಶಾಸಕರಿಗೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯಾಗಲಿ, ನಗರಸಭೆ ಉದ್ದಾರವಾಗಲಿ ಬೇಕಿಲ್ಲ. ಡಲ್ಟ್ ಗ್ರಾಂಟ್ ತರುವಲ್ಲಿ ಕೂಡ ಸಂಪೂರ್ಣ ವಿಫಲವಾಗಿದ್ದಾರೆ.ಉಸ್ತುವಾರಿ ಸಚಿವರು ಚಿಂತಾಮಣಿಗೆ 20 ಕೋಟಿ ತಂದಿದ್ದರೆ, ಚಿಕ್ಕಬಳ್ಳಾಪುರಕ್ಕೆ ಕೇವಲ 2 ಕೋಟಿ ಮಾತ್ರ ತಂದಿದ್ದಾರೆ. ನನ್ನ ಅವಧಿಯಲ್ಲಿ 9.75ಕೋಟಿಗೆ ಕಾರ್ಯಯೋಜನೆ ಮಾಡಿಸಿದ್ದೆ. ಈ ಪೈಕಿ ಈಗ 2 ಕೋಟಿ ಬಂದಿದೆ. ಇಷ್ಟು ಅನ್ಯಾಯ ಆದರೂ ಕೂಡ ಶಾಸಕರು ಆರಾಮಾಗಿ ಇದ್ದಾರೆ ಎಂದರೆ ಅವರಿಗೆ ಈ ಕ್ಷೇತ್ರದ ಬಗ್ಗೆ ಬದ್ಧತೆಯಿಲ್ಲ ಎಂದರ್ಥ ಎಂದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ