ತಮಿಳುನಾಡಿಗೆ ಕೇಂದ್ರದ ಅನುದಾನದ ಬಗ್ಗೆ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಸ್ಟಾಲಿನ್ ನಡುವೆ ವಾಗ್ದಾಳಿ ನಡೆದಿದೆ. ಅನುದಾನ ಹೆಚ್ಚಳದ ಹೊರತಾಗಿಯೂ ಕೆಲವರು ದೂರು ನೀಡುತ್ತಿದ್ದಾರೆ ಎಂದು ಮೋದಿ ಟೀಕಿಸಿದರೆ, ಕ್ಷೇತ್ರ ಮರುವಿಂಗಡಣೆಯಿಂದ ತಮಿಳುನಾಡಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ಸ್ಟಾಲಿನ್ ಆಗ್ರಹಿಸಿದ್ದಾರೆ.
ರಾಮೇಶ್ವರಂ (ಏ.8): ತಮಿಳುನಾಡಿಗೆ ಕೇಂದ್ರೀಯ ಅನುದಾನವನ್ನು ಕಡಿತ ಮಾಡಲಾಗಿದೆ ಎಂದು ಕೂಗೆಬ್ಬಿಸಿರುವ ಅಲ್ಲಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ‘ ಹೆಚ್ಚಿನ ಹಂಚಿಕೆಯ ಹೊರತಾಗಿಯೂ, ಕೆಲವರು ನಿಧಿಗಾಗಿ ಅಳುತ್ತಾರೆ’ ಎಂದು ಛೇಡಿಸಿದ್ದಾರೆ.
ತಮಿಳುನಾಡಿನ ರಾಮೇಶ್ವರಂನಲ್ಲಿ ಹೊಸ ಪಾಂಬನ್ ಸೇತುವೆಯನ್ನು ಉದ್ಘಾಟಿಸಿದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ತಮಿಳುನಾಡಿನ ಮೂಲಸೌಕರ್ಯವು ಸರ್ಕಾರಕ್ಕೆ ಪ್ರಮುಖ ಆದ್ಯತೆಯಾಗಿದೆ. ಈ ಹಿಂದಿನ ಅವಧಿಗೆ (ಯುಪಿಎ ಅವಧಿಗೆ) ಹೋಲಿಸಿದರೆ 2014ರಿಂದ ತಮಿಳುನಾಡಿಗೆ ಕೇಂದ್ರದ ನಿಧಿ 3 ಪಟ್ಟು ಹೆಚ್ಚಾಗಿದೆ’ ಎಂದರು.
ಇದೇ ವೇಳೆ, ರೈಲ್ವೆ ಅನುದಾನದ ಬಗ್ಗೆ ಮಾತನಾಡಿದ ಅವರು, ‘ಕಳೆದ ದಶಕದಲ್ಲಿ, ರಾಜ್ಯದ ರೈಲು ಬಜೆಟ್ 7 ಪಟ್ಟು ಹೆಚ್ಚಾಗಿದೆ. 2014 ರ ಮೊದಲು ತಮಿಳುನಾಡಿಗೆ ವಾರ್ಷಿಕ 900 ಕೋಟಿ ರು. ಮಾತ್ರ ಹಂಚಿಕೆಯಾಗುತ್ತಿತ್ತು, ಆದರೆ ಈ ವರ್ಷ ರಾಜ್ಯದ ರೈಲು ಬಜೆಟ್ 6,000 ಕೋಟಿ ರು.ಗಳನ್ನು ಮೀರಿದೆ. ಕೇಂದ್ರ ಸರ್ಕಾರವು ರಾಮೇಶ್ವರಂನಲ್ಲಿರುವ ರೈಲು ನಿಲ್ದಾಣ ಸೇರಿದಂತೆ ತಮಿಳುನಾಡಿನಾದ್ಯಂತ 77 ರೈಲು ನಿಲ್ದಾಣಗಳನ್ನು ಆಧುನೀಕರಿಸುತ್ತಿದೆ. ಈ ಗಮನಾರ್ಹ ಬೆಳವಣಿಗೆಯ ಹೊರತಾಗಿಯೂ, ಕೆಲವರು ಯಾವುದೇ ಕಾರಣವಿಲ್ಲದೆ ದೂರು ನೀಡುತ್ತಲೇ ಇದ್ದಾರೆ’ ಎಂದು ಟೀಕಿಸಿದರು.
ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಭಾರತದ ಪ್ರಯಾಣದಲ್ಲಿ ತಮಿಳುನಾಡು ನಿರ್ಣಾಯಕ ಸ್ಥಾನವನ್ನು ಹೊಂದಿದೆ ಎಂದು ಹೇಳಿದ ಪ್ರಧಾನಿ ಮೋದಿ, ರಾಜ್ಯವು ಅಭಿವೃದ್ಧಿಯಾಗುತ್ತಿದ್ದಂತೆಯೇ ದೇಶದ ಒಟ್ಟಾರೆ ಪ್ರಗತಿಯು ವೇಗಗೊಳ್ಳುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ತಮಿಳು ನಾಯಕರೇಕೆ ತಮಿಳಿನಲ್ಲಿ ಸಹಿ ಮಾಡಲ್ಲ? : ಹಿಂದಿ ಹೇರಿಕೆ ಎನ್ನುವ ಡಿಎಂಕೆ ಸ್ಟಾಲಿನ್‌ಗೆ ಮೋದಿ ಟಾಂಗ್
ಮೋದಿ ಮರುವಿಂಗಡಣೆ ಆತಂಕ ನಿವಾರಿಸಲಿ: ಸ್ಟಾಲಿನ್
ಊಟಿ(ತ.ನಾಡು): ಪ್ರಸ್ತಾವಿತ ಲೋಕಸಭಾ ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದ ತಮಿಳುನಾಡು ಜನರ ಆತಂಕವನ್ನು ಪರಿಹರಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಬೇಕು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆಗ್ರಹಿಸಿದ್ದಾರೆ.
ಪ್ರವಾಸಿ ತಾಣವಾದ ಊಟಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ಕ್ಷೇತ್ರ ಮರುವಿಂಗಡಣೆಯಿಂದ ತಮಿಳುನಾಡಿನ ಕ್ಷೇತ್ರಗಳು ಕಡಿಮೆ ಆಗಿ ಅನ್ಯಾಯವಾಗಬಾರದು. ಈ ಸಂಬಂಧ ಸಂಸತ್ತಿನಲ್ಲಿ ನಿರ್ಣಯವೊಂದನ್ನು ಮಂಡಿಸಬೇಕು. ಕ್ಷೇತ್ರ ಮರುವಿಂಗಡಣೆ ಸಂಸತ್ ಕ್ಷೇತ್ರಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಇದನ್ನು ಪ್ರಶ್ನಿಸುವುದು ನಮ್ಮ ಹಕ್ಕಾಗಿದೆ ಎಂದರು.
ಇದನ್ನೂ ಓದಿ: ಪ್ರಧಾನಿ ಮೋದಿ ರಾಮನವಮಿಯಂದು ಅಯೋಧ್ಯೆ ಅಲ್ಲ, ಈ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಾರೆ! ಅದಕ್ಕೂ ರಾಮನಿಗೂ ಇರುವ ಸಂಬಂಧವೇನು?
ಪಾಂಡಿಚೇರಿ ಸೇರಿಸಿ ಒಟ್ಟು ತಮಿಳುನಾಡಿನಲ್ಲಿ 40 ಲೋಕಸಭಾ ಕ್ಷೇತ್ರಗಳಿವೆ. ಆದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಕ್ಷೇತ್ರ ಮರುವಿಂಗಡಣೆ ಮೂಲಕ ನಮ್ಮ ಧ್ವನಿ ಹತ್ತಿಕ್ಕಲು ಹೊರಟಿದೆ. ಜನಸಂಖ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದ ರಾಜ್ಯಗಳಿಗೆ ಕ್ಷೇತ್ರ ಮರುವಿಂಗಡಣೆ ವೇಳೆ ಯಾವುದೇ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಪ್ರಧಾನಿ ಅವರು ಗ್ಯಾರಂಟಿ ನೀಡಬೇಕು.
ತಮಿಳುನಾಡಿನ ಕ್ಷೇತ್ರಗಳನ್ನು ಕಡಿಮೆ ಮಾಡುವುದಿಲ್ಲ ಎಂದು ಅವರು ಸಾರ್ವಜನಿಕವಾಗಿ ಭರವಸೆ ನೀಡಬೇಕು. ಒಂದು ವೇಳೆ ಈಗಿನ ಸ್ವರೂಪದಲ್ಲಿ ಕ್ಷೇತ್ರ ಮರುವಿಂಗಡನೆ ನಡೆದರೆ ತಮಿಳುನಾಡಿಗೆ ಭಾರೀ ನಷ್ಟವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ಮಾ.22ರಂದು ಜಂಟಿ ಕಾರ್ಯಕಾರಿ ಸಮಿತಿಯ ಸಭೆಯನ್ನು ಚೆನ್ನೈನಲ್ಲಿ ನಡೆಸಲಾಗಿದ್ದು, ಹಲವು ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಮತ್ತು ಪ್ರಮುಖ ನಾಯಕರು ಇದರಲ್ಲಿ ಪಾಲ್ಗೊಂಡಿದ್ದರು ಇದೇ ವೇಳೆ ಸಿಎಂ ಮಾಹಿತಿ ನೀಡಿದರು.