Raita Ratna Award: ರೈತರು ಬೆಳೆ ಬ್ರ್ಯಾಂಡ್‌ ಮಾಡಿ: ಸಚಿವ ಬಿ.ಸಿ.ಪಾಟೀಲ್‌

By Kannadaprabha NewsFirst Published Mar 18, 2023, 11:26 AM IST
Highlights

ವಿಷಪೂರಿತ ಆಹಾರ ಸೇವನೆ ಮಾಡುತ್ತಿರುವುದರಿಂದ ಆಸ್ಪತ್ರೆಗಳಿಗೆ ಲಕ್ಷಾಂತರ ರುಪಾಯಿ ವ್ಯಯಿಸುವಂತಾಗಿದೆ. ಆದ್ದರಿಂದ ನೈಸರ್ಗಿಕ ಕೃಷಿಗೆ ಗಮನ ನೀಡಬೇಕು. ಪ್ರಶಸ್ತಿ ಪುರಸ್ಕೃತರು ಸಾವಯವ ಕೃಷಿ ಕೈಗೊಂಡಿರುವುದು ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್‌. 

ಬೆಂಗಳೂರು(ಮಾ.18): ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಅತಿಯಾದ ಬಳಕೆಯಿಂದ ಭೂಮಿ ಬರಡಾಗುತ್ತಿದ್ದು ನೈಸರ್ಗಿಕ ಕೃಷಿಗೆ ರೈತರು ಒತ್ತು ನೀಡಬೇಕು. ಬೆಳೆ ಬೆಳೆದರಷ್ಟೇ ಸಾಲದು, ಕೃಷಿ ಉತ್ಪನ್ನಗಳ ಸಂಸ್ಕರಣೆ, ಬ್ರ್ಯಾಂಡಿಂಗ್‌, ಮಾರಾಟಕ್ಕೂ ಆದ್ಯತೆ ನೀಡಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಕರೆ ನೀಡಿದ್ದಾರೆ.

‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನಿಂದ ಶುಕ್ರವಾರ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ‘ರೈತ ರತ್ನ’ ಮೂರನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧಕರನ್ನು ಗೌರವಿಸಿ ಅವರು ಮಾತನಾಡಿದರು.
ಇಂದು ಎಲ್ಲರೂ ಅವಸರದಲ್ಲಿದ್ದು, ಬೇಗ ಬೆಳೆ ಬೆಳೆಯಲು ಹಾತೊರೆಯುತ್ತಾರೆ. ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಅತಿಯಾದ ಬಳಕೆಯಿಂದ ಭೂಮಿ ತಾಯಿ ಬಂಜೆಯಾಗುತ್ತಿದ್ದು, ನಮ್ಮನ್ನು ನಾವು ಕೊಂದುಕೊಳ್ಳುತ್ತಿದ್ದೇವೆ. ವಿಷಪೂರಿತ ಆಹಾರ ಸೇವನೆ ಮಾಡುತ್ತಿರುವುದರಿಂದ ಆಸ್ಪತ್ರೆಗಳಿಗೆ ಲಕ್ಷಾಂತರ ರುಪಾಯಿ ವ್ಯಯಿಸುವಂತಾಗಿದೆ. ಆದ್ದರಿಂದ ನೈಸರ್ಗಿಕ ಕೃಷಿಗೆ ಗಮನ ನೀಡಬೇಕು. ಪ್ರಶಸ್ತಿ ಪುರಸ್ಕೃತರು ಸಾವಯವ ಕೃಷಿ ಕೈಗೊಂಡಿರುವುದು ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Raita Ratna Award: ಇವರೇ ಕರುನಾಡಿನ ಅಪೂರ್ವ ಕೃಷಿ ಸಾಧಕರು..!

ಬಿತ್ತಿ ಬೆಳೆದರಷ್ಟೇ ಉದ್ಧಾರವಾಗಲ್ಲ:

ರೈತರು ಬಿತ್ತಿ ಬೆಳೆದರಷ್ಟೇ ಉದ್ಧಾರವಾಗುವುದಿಲ್ಲ. ತಾವು ಬೆಳೆದ ಉತ್ಪನ್ನಗಳನ್ನು ಸಂಸ್ಕರಣೆ ಮಾಡಿ ಪ್ಯಾಕಿಂಗ್‌, ಬ್ರ್ಯಾಂಡಿಂಗ್‌ ಮಾಡಿ ಮಾರಾಟ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು. ಮದ್ಯವರ್ತಿಗಳ ಹಾವಳಿಯೂ ತಪ್ಪಲಿದೆ. ಇದಕ್ಕಾಗಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ‘ಆತ್ಮ ನಿರ್ಭರ’ ಯೋಜನೆಯಡಿ ‘ಪ್ರಧಾನ ಮಂತ್ರಿ ಕಿರು ಉದ್ಯಮ ಯೋಜನೆ’ ಜಾರಿಗೆ ತಂದಿದೆ. ಉದ್ಯಮ ಸ್ಥಾಪಿಸುವವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಹಾಯಧನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕೃಷಿ ನಾಶವಾದರೆ ದುರ್ಭಿಕ್ಷ ಬರುತ್ತದೆ ಎಂದು ದೊಡ್ಡವರು ಹೇಳಿದ್ದಾರೆ. ಕೃಷಿ ಚಟುವಟಿಕೆ ಇಲ್ಲದಿದ್ದರೆ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಒಕ್ಕಲಿಗ ವ್ಯವಸಾಯ ಮಾಡದಿದ್ದರೆ ಜಗವೆಲ್ಲಾ ಬಿಕ್ಕಲಿದೆ ಎಂದು ಸರ್ವಜ್ಞ ಹೇಳಿದ್ದಾರೆ. ‘ಕೃಷಿ ಕೆಲಸ ಮಾಡುವವರ ಪಾದವನ್ನು ನೋಡಿದರೆ, ಅವರ ಮನೆಯ ಒಳ ಹೊಕ್ಕರೆ ಸಾಕು ಜೀವನ ಪಾವನವಾಗುತ್ತದೆ’ ಎಂದು 12ನೇ ಶತಮಾನದಲ್ಲಿ ಬಸವಣ್ಣನವರು ತಿಳಿಸಿದ್ದರು. ಕೃಷಿಗೆ ಎಷ್ಟುಪ್ರಾಮುಖ್ಯತೆಯಿದೆ ಎಂಬುದು ಇದರಲ್ಲೇ ತಿಳಿಯುತ್ತದೆ ಎಂದು ಉದಾಹರಿಸಿದರು.

ರೈತರ ಸ್ವಾವಲಂಬನೆಗೆ ಹಲವು ಕ್ರಮ:

ರೈತರ ಆದಾಯ ಹೆಚ್ಚಿಸಲು, ಸ್ವಾವಲಂಬಿಗಳನ್ನಾಗಿ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿವೆ. ಮೋದಿ ಅವರು ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ತಲಾ 2 ಸಾವಿರದಂತೆ ವರ್ಷಕ್ಕೆ 6 ಸಾವಿರ ರು. ಪ್ರೋತ್ಸಾಹಧನ ನೀಡುತ್ತಿದ್ದಾರೆ. ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲೂ ಈ ಯೋಜನೆಗೆ ಬೆಂಬಲ ವ್ಯಕ್ತಪಡಿಸಿ ವಾರ್ಷಿಕವಾಗಿ ತಲಾ 4 ಸಾವಿರ ರು. ನೀಡಲು ಆರಂಬಿಸಿದರು. ಒಟ್ಟಾರೆ ರೈತರಿಗೆ ವಾರ್ಷಿಕವಾಗಿ 10 ಸಾವಿರ ರು. ನೀಡುತ್ತಿದ್ದು, ಇದು ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಲು ಸಹಾಯಕವಾಗಲಿದೆ ಎಂದು ಬಣ್ಣಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಜನಸಂಖ್ಯೆ 38 ಕೋಟಿ ಇತ್ತು. ಬಳಿಕ ಕೆಲ ವರ್ಷಗಳಲ್ಲೇ 60 ಕೋಟಿ ತಲುಪಿದ್ದು ಅಷ್ಟುಜನರಿಗೆ ಅನ್ನ ನೀಡಲು ಆಗುತ್ತಿರಲಿಲ್ಲ. ಆದ್ದರಿಂದ 1965 ರಲ್ಲಿ ಹಸಿರು ಕ್ರಾಂತಿಯಾಯಿತು. ಇದೀಗ ದೇಶದ 138 ಕೊಟಿ ಜನರಿಗೆ ಅನ್ನ ನೀಡಿ ಹೊರದೇಶಗಳಿಗೆ ರಫ್ತು ಮಾಡುವಂತಹ ಸಾಧನೆಯನ್ನು ನಮ್ಮ ಕೃಷಿಕರು ಮಾಡಿದ್ದಾರೆ. ಇದಕ್ಕೆ ಕೃಷಿಯಲ್ಲಿ ಉಪಯೋಗಿಸುತ್ತಿರುವ ಆಧುನಿಕ ತಂತ್ರಜ್ಞಾನವೂ ಪ್ರಮುಖ ಕಾರಣವಾಗಿದೆ ಎಂದು ವ್ಯಾಖ್ಯಾನಿಸಿದರು.

Raita Ratna Award: ಕೃಷಿ ರಫ್ತಿನಲ್ಲಿ ಭಾರತ ನಂ.1 ಆಗಬೇಕು: ಕೇಂದ್ರ ಸಚಿವೆ ಶೋಭಾ

ಕೀಳರಿಮೆ ಬಿಟ್ಟು ಸಾಧಿಸಿ

ನಮ್ಮ ರೈತರಲ್ಲಿ ಕೀಳರಿಮೆ ಮನೋಭಾವವಿದೆ. ಕುರಿ, ಕೋಳಿ ಸಾಕಬಾರದು ಎಂದುಕೊಳ್ಳುತ್ತಾರೆ. ಆದರೆ ಗೌರವಯುತವಾಗಿ ದುಡಿಯುವವರಿಗೆ ಯಾವ ಉದ್ಯಮವಾದರೂ ಪರವಾಗಿಲ್ಲ. ಕೀಳರಿಮೆ ಬಿಟ್ಟು ಸಾಧನೆ ಮಾಡಿ. ಕೃಷಿ ಜೊತೆಗೆ ಹೈನುಗಾರಿಕೆ, ತೋಟಗಾರಿಕೆಯಲ್ಲೂ ತೊಡಗಿಕೊಂಡರೆ ಹೆಚ್ಚು ಲಾಭ ಗಳಿಸಬಹುದು ಎಂದು ಬಿ.ಸಿ.ಪಾಟೀಲ್‌ ತಿಳಿಸಿದರು.

ಸಾಧಕರನ್ನು ಗುರುತಿಸಿ ಗೌರವಿಸುವ ಅದ್ಭುತವಾದ ಕೆಲಸವನ್ನು ‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಮಾಡುತ್ತಿವೆ. ಕೃಷಿ ಇಲಾಖೆಯ ಕೆಲಸವನ್ನು ಮಾಡುತ್ತಾ ಸಾಧಕರನ್ನು ಗುರುತಿಸಿ, ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದೀರಿ. ಇದರಿಂದ ಹಲವು ರೈತರಿಗೆ ಸ್ಫೂರ್ತಿ ಆಗಿದ್ದೀರಿ. ಈ ಕಾರ್ಯಕ್ರಮ ಮುಂದುವರೆಯಲಿ. ಕಳೆದ ಮೂರು ವರ್ಷದಿಂದಲೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನನ್ನ ಸೌಭಾಗ್ಯವಾಗಿದೆ. ಹಳ್ಳಿಗಳಲ್ಲಿ ಕೃಷಿ ಮಾಡುವವರನ್ನು ಗುರುತಿಸಿ ಬೆಂಗಳೂರಿನ ಪಂಚತಾರಾ ಹೋಟೆಲ್‌ಗೆ ಕರೆಸಿ ಸನ್ಮಾನ ಮಾಡಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

click me!