ವರಮಹಾಲಕ್ಷ್ಮೇ ಹಬ್ಬವನ್ನು ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ತುಸು ಅದ್ದೂರಿಯಾಗಿಯೇ ಆಚರಿಸಿಕೊಂಡು ಬಂದವರು. ಈ ಬಾರಿ ಕೊರೋನಾ ತಣ್ಣೀರೆರೆಚಿದೆ. ಆದರೆ ನಿಂತಂತಿರುವ ಬದುಕಿಗೆ ಚಲನೆ ಕೊಡುವ ಮನಸ್ಸಂತೂ ಇದ್ದೇ ಇದೆ. ಐದು ಮಂದಿ ತಾರೆಯರು ಈ ಬಾರಿಯ ವರ ಮಹಾಲಕ್ಷ್ಮಿಯ ಖುಷಿ ಹಂಚಿಕೊಂಡಿದ್ದಾರೆ.
- ಕೆಂಡಪ್ರದಿ
ಮಗಳೇ ಮನೆ ಲಕ್ಷ್ಮೀ
undefined
- ಶ್ವೇತಾ ಶ್ರೀವಾತ್ಸವ್
ನಮ್ಮ ಮನೆಯಲ್ಲಿ ಮೊದಲಿನಿಂದಲೂ ವರಮಹಾಲಕ್ಷ್ಮೇ ಹಬ್ಬವನ್ನು ಅದ್ದೂರಿಯಾಗಿಯೇ ಆಚರಿಸಿಕೊಂಡು ಬರುತ್ತಿದ್ದೇವೆ. ಈ ಬಾರಿ ನಮ್ಮ ಮನೆಯ ವಿಶೇಷ ಎಂದರೆ ನನ್ನ ಮಗಳು. ಅವಳಿಗೆ ಈಗ ಮೂರು ವರ್ಷ. ಮುದ್ದಾಗಿ ಮಾತನಾಡಲು ಕಲಿಯುತ್ತಿದ್ದಾಳೆ. ನಾವು ಏನೇ ಮಾಡಿದರೂ ಅದನ್ನು ಅನುಕರಣೆ ಮಾಡುತ್ತಾಳೆ. ನಾವು ಪೂಜೆ ಮಾಡುತ್ತಿದ್ದರೆ ಅವಳೂ ಕೂತು ಪೂಜೆ ಮಾಡುತ್ತಾಳೆ. ಈ ಬಾರಿ ಅವಳಿಂದಲೇ ಪುಟ್ಟಪುಟ್ಟಶ್ಲೋಕಗಳನ್ನು ಹೇಳಿಸುವುದು, ಪೂಜೆ ಮಾಡಿಸುವುದಕ್ಕೆ ಕಾತರದಿಂದ ಕಾಯುತ್ತಿದ್ದೇನೆ.
ಮನೆಯಲ್ಲಿ ಹೀಗೆ ಮಾಡಿದ್ರೆ ದರಿದ್ರ ಲಕ್ಷ್ಮಿ ವಕ್ಕರಿಸುವುದು ಖಂಡಿತ!
ಈ ಹಬ್ಬದಲ್ಲಿ ನಮ್ಮ ಇಡೀ ಫ್ಯಾಮಿಲಿ ಒಂದಾಗುತ್ತದೆ. ಎಲ್ಲರೂ ಸೇರಿ ಹಲವಾರು ಬಗೆಯ ತಿಂಡಿಗಳನ್ನು ಮಾಡಿ ಒಟ್ಟಿಗೆ ಊಟ ಮಾಡುತ್ತೇವೆ. ಮಳೆಗಾಲದ ಈ ವೇಳೆಯಲ್ಲಿ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ತಿನ್ನುವುದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಹೀಗಾಗಿ ತಿಂಡಿಗಳನ್ನು ಹೆಚ್ಚಾಗಿಯೇ ಮಾಡುತ್ತೇವೆ. ನಾನು ಅಂದುಕೊಂಡಿರುವ ಪ್ರಕಾರ ಲಕ್ಷ್ಮೇ ಪೂಜೆ ಮಾಡುವುದರಿಂದ ಸಂಪತ್ತು ಒಮ್ಮೆಲೆ ಹೆಚ್ಚಾಗಿ ಬಿಡುವುದಿಲ್ಲ. ಇದೊಂದು ಸಂಭ್ರಮ, ಎಲ್ಲರೂ ಒಟ್ಟಾಗಿ ಸೇರಿ ಸಂತೋಷದಿಂದ ಕಳೆಯುವ ಹಬ್ಬ. ಇದನ್ನೇ ನಾನು ನನ್ನ ಮಗಳಿಗೆ ಹೇಳಿಕೊಡುವವಳಿದ್ದೇನೆ. ಸಂಪತ್ತು ಬರಲಿ ಎಂದಷ್ಟೇ ನಾವು ಈ ಹಬ್ಬ ಮಾಡುವುದಿಲ್ಲ. ನನ್ನ ಪಾಲಿಗೆ ಮಹಾಲಕ್ಷ್ಮೀ ಆಗಿರುವ ನನ್ನ ಮಗಳಿಗೆ ನಮ್ಮ ಸಂಪ್ರದಾಯಗಳನ್ನೆಲ್ಲಾ ಹೇಳಿಕೊಡಬೇಕು, ಮನೆ ಮಂದಿ ಸಂತೋಷದಿಂದ ಇರಬೇಕು ಎಂದು ಇದೆಲ್ಲವನ್ನೂ ಮಾಡುವುದು.
*
ಲಕ್ಷ್ಮೇ ಅಲಂಕಾರ ನೋಡುವುದೇ ಚೆಂದ
- ಐಶಾನಿ ಶೆಟ್ಟಿ
ನಮ್ಮದು ಕರಾವಳಿ. ಅಲ್ಲಿ ವರಮಹಾಲಕ್ಷ್ಮೀ ಹಬ್ಬದ ಆಚರಣೆ ಹೆಚ್ಚಾಗಿ ಇಲ್ಲ. ಹಾಗಾಗಿ ನಮ್ಮ ಮನೆಯಲ್ಲಿ ಮೊದಲಿನಿಂದಲೂ ಹಬ್ಬದ ಆಚರಣೆ ಇಲ್ಲ. ಆದರೆ ನಾನು ಹುಟ್ಟಿಬೆಳೆದ್ದೆಲ್ಲಾ ಬೆಂಗಳೂರು. ಇಲ್ಲಿ ನಮ್ಮ ಅಕ್ಕ ಪಕ್ಕದ ಮನೆಗಳಲ್ಲಿ ಪ್ರತಿ ವರ್ಷವೂ ಲಕ್ಷ್ಮೀ ಕೂರಿಸಿ ಹಬ್ಬ ಮಾಡುತ್ತಿದ್ದರು. ನಮ್ಮನ್ನೂ ಕರೆಯುತ್ತಿದ್ದರು. ಅಲ್ಲಿಗೆ ಹೋದಾಗ ಅಲಂಕಾರವನ್ನು ನೋಡುವುದು, ಪೂಜೆ ಮಾಡುವುದು, ಅವರ ಸಡಗರವನ್ನು ನೋಡುವುದೇ ಚೆಂದ. ಹಲವಾರು ತಿಂಡಿಗಳನ್ನು ನಾನು ಈ ಹಬ್ಬದಲ್ಲಿಯೇ ನೋಡಿದ್ದು, ಸವಿದದ್ದು. ಹಾಗಾಗಿ ಪ್ರತಿ ವರ್ಷ ನನಗೆ ಅಕ್ಕ ಪಕ್ಕದ ಮನೆಯವರು ಮಾಡುವ ವರಮಹಾಲಕ್ಷ್ಮೀ ಪೂಜೆಯಲ್ಲಿ ಪಾಲ್ಗೊಳ್ಳುವುದು ಎಂದರೆ ತುಂಬಾ ಇಷ್ಟ. ಇನ್ನು ನಮ್ಮ ಮನೆಯಲ್ಲಿ ಸರಳವಾಗಿ ಪೂಜೆ ಮಾಡಿಕೊಳ್ಳುತ್ತೇವೆ, ಏನಾದರೊಂದು ಸಿಹಿ ಮಾಡಿಕೊಂಡು ಎಲ್ಲರೂ ಜೊತೆಯಾಗಿ ಊಟ ಮಾಡುತ್ತೇವೆ.
ಧನ ವೃದ್ಧಿಗೆ ಯಾವ ರಾಶಿಯವರು ಯಾವ ಲಕ್ಷ್ಮಿ ಮಂತ್ರವನ್ನು ಪಠಿಸಬೇಕು?*
ನಾವು ಗ್ರ್ಯಾಂಡ್ ಆಗಿ ಮಾಡುವ ಹಬ್ಬವಿದು
- ನೇಹಾ ಪಾಟೀಲ್
ಅಮ್ಮನ ಮನೆ ಇರುವುದು ಹುಬ್ಬಳ್ಳಿಯಲ್ಲಿ. ಆ ಕಡೆ ಶುಕ್ರವಾರ ಗೌರಿ ಪೂಜೆ ಎಂದು ವರಮಹಾಲಕ್ಷ್ಮೀ ಹಬ್ಬ ಮಾಡುತ್ತಾರೆ. ಸಿಹಿ ಕಡುಬು, ತೊಗರಿ ಬೇಳೆಯಿಂದ ವಿವಿಧ ರೀತಿಯ ಸಿಹಿ ಪದಾರ್ಥಗಳನ್ನು ಮಾಡುತ್ತಾರೆ. ಅಲ್ಲಿ ಈ ಹಬ್ಬವನ್ನು ತುಂಬಾ ಅಚ್ಚುಕಟ್ಟಾಗಿ ಗ್ರ್ಯಾಂಡ್ ಆಗಿ ಮಾಡುತ್ತಾರೆ. ನಾನು ಬೆಂಗಳೂರಿಗೆ ಮದುವೆಯಾಗಿ ಬಂದ ಮೇಲೆ ನನಗೆ ಇದು ಎರಡನೇ ಹಬ್ಬ. ಇಲ್ಲಿ ನಮ್ಮ ಅತ್ತೆ ಮನೆಯಲ್ಲಿಯೂ ಅದ್ದೂರಿಯಾಗಿ ವರಮಹಾಲಕ್ಷ್ಮೇ ಹಬ್ಬ ಮಾಡುತ್ತಾರೆ. ಹಾಗಾಗಿ ನನಗೆ ಈ ಹಬ್ಬ ಎಂದರೆ ಡಬ್ಬಲ್ ಧಮಾಕಾ. ಅಮ್ಮನ ಮನೆಯಲ್ಲಿಯೂ ಲಕ್ಷ್ಮೇ ಕೂರಿಸಿ ಪೂಜೆ ಮಾಡುತ್ತಾರೆ. ಇಲ್ಲಿಯೂ ತುಂಬಾ ಚೆನ್ನಾಗಿ ಅಲಂಕಾರ ಮಾಡಿ, ಅಕ್ಕ ಪಕ್ಕದ ಮನೆಯವರನ್ನು ಕರೆದು ಪೂಜೆ ಮಾಡುತ್ತೇವೆ.
ಈಗ ಕೊರೋನಾ ಇರುವ ಕಾರಣ ತುಂಬಾ ಸಿಂಪಲ್ ಆಗಿ ಹಬ್ಬ ಮಾಡುವ ನಿರ್ಧಾರ ಮಾಡಿದ್ದೇವೆ. ಹೆಚ್ಚಾಗಿ ಯಾರನ್ನೂ ಕರೆಯುವುದಕ್ಕೆ ಸಾಧ್ಯವಾಗುವುದಿಲ್ಲ. ನಮ್ಮ ಮನೆಯವರಿಗೆ ಸೀಮಿತವಾಗಿ ಕೆಲವು ತಿಂಡಿ ಮಾಡಿಕೊಂಡು ಸರಳವಾಗಿ ಹಬ್ಬ ಆಚರಣೆ ಮಾಡುತ್ತಿದ್ದೇವೆ. ಈಗ ಸೇಫ್ ಆಗಿ ಇದ್ದು, ಹಬ್ಬ ಮಾಡಿದರೆ ಮುಂದಿನ ವರ್ಷ ಬೇಕಿದ್ದರೆ ಗ್ರ್ಯಾಂಡ್ ಆಗಿ ಮಾಡಬಹುದು.
ಸಂಪತ್ತು-ಸಮೃದ್ಧಿಗೆ ವರಮಹಾಲಕ್ಷ್ಮೀ ವ್ರತ ಹೀಗಿರಲಿ!
*
ನನ್ನ ಪಾಲಿಗೆ ಇದು ಸ್ಪೆಷಲ್ ಹಬ್ಬ
-ಶ್ರೀ ಲೀಲಾ
ನಮ್ಮ ಮನೆ¿åಲ್ಲಿ ಎಲ್ಲರಿಗೂ ದೇವರ ಮೇಲೆ ಅಪಾರ ಭಕ್ತಿ ಇದೆ. ಪ್ರತಿ ಶುಕ್ರವಾರ ನಾವು ವಿಶೇಷ ಪೂಜೆ ಮಾಡುತ್ತೇವೆ. ಹೀಗಾಗಿ ಸಹಜವಾಗಿಯೇ ವರಮಹಾಲಕ್ಷ್ಮೀ ಹಬ್ಬ ಎಂದರೆ ನಮಗೆ ವಿಶೇಷ. ಪ್ರತಿ ವರ್ಷ ಲಕ್ಷ್ಮೇ ಕೂರಿಸಿ ಪೂಜೆ ಮಾಡುತ್ತೇವೆ. ಈ ವರ್ಷವೂ ಮಾಡುತ್ತೇವೆ. ಮೊದಲೆಲ್ಲಾ ಬೇರೆ ಬೇರೆ ಕಾರಣಗಳಿಂದ ಇಡೀ ಫ್ಯಾಮಿಲಿ ಒಟ್ಟಿಗೆ ಸೇರಲು ಆಗುತ್ತಲೇ ಇರಲಿಲ್ಲ. ಈಗ ಕೊರೋನಾ ಇರುವ ಕಾರಣ ಎಲ್ಲರೂ ಮನೆಯಲ್ಲಿಯೇ ಸೇರುತ್ತಿದ್ದೇವೆ. ಜೊತೆಗೆ ಈ ಹಬ್ಬವೂ ಬಂದಿರುವುದರಿಂದ ಎಲ್ಲರೂ ಸಂಭ್ರಮದಿಂದ ಈ ವರ್ಷ ಪೂಜೆ ಮಾಡಬೇಕು ಎಂದುಕೊಂಡಿದ್ದೇವೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಈ ಹಬ್ಬ ಎಂದರೆ ತುಂಬಾ ಇಷ್ಟ. ನನಗೂ ಹಾಗೆಯೇ. ಬೇರೆಲ್ಲಾ ಹಬ್ಬಗಳಿಗಿಂತ ವರಮಹಾಲಕ್ಷ್ಮೀ ನನ್ನ ಪಾಲಿಗೆ ಸ್ಪೆಷಲ್. ಇಂತಹ ವೇಳೆಯಲ್ಲಿ ನಮ್ಮ ಮನಸ್ಸನ್ನು ಪಾಸಿಟಿವ್ ಆಗಿ ಇಟ್ಟುಕೊಳ್ಳಬೇಕಾದದ್ದು ತುಂಬಾ ಮುಖ್ಯ. ಈ ರೀತಿಯ ಹಬ್ಬಗಳಿಂದ ಇದು ಸಾಧ್ಯವಾಗುತ್ತದೆ. ಕೆಲಸವನ್ನು ಹಂಚಿಕೊಂಡು ಮಾಡುತ್ತಾ, ಸಂಭ್ರಮವನ್ನೂ ಹಂಚಿಕೊಳ್ಳುತ್ತೇವೆ. ಜೊತೆಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಬೇಕಾಗಿದೆ.
*
ಈ ಬಾರಿ ಸಿಂಪಲ್ ಹಬ್ಬ
- ಅನುಪಮಾ ಗೌಡ
ನನ್ನಮ್ಮ ವರಮಹಾಲಕ್ಷ್ಮೀ ಹಬ್ಬವನ್ನು ಮೂರು ದಿನಗಳ ಕಾಲ ಮಾಡುತ್ತಿದ್ದರು. ನಾನು ಚಿಕ್ಕಂದಿನಲ್ಲಿ ಇದ್ದಾಗಿನಿಂದಲೂ ಈ ಹಬ್ಬದ ಜೊತೆಗೆ ವಿಶೇಷ ನಂಟು ಇದೆ. ಗಣೇಶ ಹಬ್ಬ ಮತ್ತು ಇದು ನನ್ನ ಪಾಲಿಗೆ ವಿಶೇಷ. ಲಕ್ಷ್ಮೀ ಕೂರಿಸುವುದು, ವಿವಿಧ ತಿಂಡಿಗಳನ್ನು ಮಾಡುವುದು, ಎಲ್ಲರನ್ನೂ ಕರೆದು ಊಟ ಹಾಕುವುದು, ಪೂಜೆ ಮಾಡಿಸುವುದು ತುಂಬಾ ಅರ್ಥಗಳನ್ನು ಹೊಂದಿರುವ ಹಬ್ಬ ಇದು. ಮೂರು ದಿನಗಳ ಕಾಲ ನಿತ್ಯವೂ ಪೂಜೆ ಇರುತ್ತಿತ್ತು. ನಾನು ಕಳೆದ ನಾಲ್ಕು ವರ್ಷಗಳಿಂದ ಲಕ್ಷ್ಮೀ ಕೂರಿಸಿ ಪೂಜೆ ಮಾಡುವ ಸಂಪ್ರದಾಯ ಶುರು ಮಾಡಿದೆ. ಎರಡು ವರ್ಷ ಅದ್ದೂರಿಯಾಗಿ ಮಾಡಿದೆ. ನಡುವೆ ಒಂದು ವರ್ಷ ಆಗಿರಲಿಲ್ಲ. ಈಗ ಕೊರೋನಾ ಇರುವ ಕಾರಣ ಸಿಂಪಲ್ ಆಗಿ ಪೂಜೆ ಮಾಡುವೆ. ಒಮ್ಮೆ ಪೂಜೆ ಶುರು ಮಾಡಿದರೆ ನಿಲ್ಲಿಸಬಾರದು ಎಂದು ಹೇಳುತ್ತಾರೆ. ಈ ಕಾರಣದಿಂದ ಸಿಂಪಲ್ ಆಗಿ ಪೂಜೆ ಮಾಡುವೆ. ಮುಂದಿನ ವರ್ಷಗಳಿಂದ ಸಾಧ್ಯವಾದಷ್ಟುಮಟ್ಟಿಗೆ ಸರಳವಾಗಿಯೇ ಪೂಜೆ ಮುಂದುವರೆಸಿಕೊಂಡು ಹೋಗುವ ಪ್ಲಾನ್ ಇದೆ. ಎಲ್ಲರನ್ನೂ ಒಳಗೊಂಡು ಪೂಜೆ ಮಾಡುವುದು, ಸಂಭ್ರಮಿಸುವುದು ಎಂದರೆ ನನಗೆ ತುಂಬಾ ಇಷ್ಟ. ಅದಕ್ಕೆ ಪೂರಕವಾಗಿ ಬರುತ್ತಿದ್ದದ್ದು ಈ ವರಮಹಾಲಕ್ಷ್ಮೀ ಹಬ್ಬ.