ಎದೆ ಎತ್ತರಕ್ಕೆ ಬೆಳೆದ ಮಕ್ಕಳಿಗೆ ಬರುತ್ತಾ ಸಿಟ್ಟು? ಮ್ಯಾನೇಜ್ ಮಾಡೋ ಗುಟ್ಟು

By Web Desk  |  First Published Nov 22, 2019, 5:51 PM IST

ಟೀನೇಜ್‌ನಲ್ಲಿ ಮಕ್ಕಳ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಆದರೆ, ಅವರು ತಮ್ಮ ಕೋಪವನ್ನು ಬೇಕಾಬಿಟ್ಟಿ ಮತ್ತೊಬ್ಬರ ಮೇಲೆ ಪ್ರದರ್ಶಿಸಲು ಅವಕಾಶ ಮಾಡಿಕೊಡಬಾರದು. 


ಹದಿವಯಸ್ಸು ಎಂದ್ರೆ ಹುಚುಕೋಡಿ ಮನಸ್ಸು. ಮಾತು ಮಾತಿಗೆ ಕೋಪ, ಎಲ್ಲಕ್ಕೂ ವಿರೋಧ, ಮೂಡಿತನ. ಮೀಡಿಯಾಗಳಲ್ಲಿ, ಚಲನಚಿತ್ರಗಳಲ್ಲಿ, ಕಾದಂಬರಿಗಳಲ್ಲಿ ಹದಿಹರೆಯದವರನ್ನು ಹೀಗೆಯೇ ತೋರಿಸಿ ತೋರಿಸಿ, ಅವರು ಹೀಗೆ ಕೋಪ ಮಾಡುವುದು ನಾರ್ಮಲ್ ಎಂಬಂತಾಗಿದೆ. ಹಾಗಾಗಿ, ಅವರ ಈ ಎಲ್ಲ ನೆಗೆಟಿವ್ ವರ್ತನೆಗಳಿಗೆ ಪೋಷಕರೇ ಸಮರ್ಥನೆ ಕೊಟ್ಟುಕೊಳ್ಳುತ್ತಾರೆ. ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬಿಡುತ್ತಾರೆ. 
ಹೌದು, ಟೀನೇಜಿನಲ್ಲಿ ಹಾರ್ಮೋನ್ ಸಮತೋಲನ ತಪ್ಪಬಹುದು. ಈ ಸಂದರ್ಭದಲ್ಲಿ ಮಕ್ಕಳ ಮನಸ್ಸು, ವಯಸ್ಸನ್ನು ಅರ್ಥ ಮಾಡಿಕೊಳ್ಳಬೇಕು. ಹಾಗಂಥ ಆಗ ಮಕ್ಕಳು ಎಷ್ಟು ಬೇಕಾದರೂ ಕೋಪ ಮಾಡಬಹುದೆಂದಲ್ಲ. ಅವರಿಗೆ ಕೋಪ ನಿಭಾಯಿಸಲು ಹೇಳಿಕೊಡಬೇಕು. ಕೋಪ ತೋರದೆ ಪರಿಸ್ಥಿತಿ ಎದುರಿಸುವುದು ಹೇಗೆ ಎಂಬ ಅರಿವು ಅವರಲ್ಲಿ ಮೂಡಿಸಬೇಕು. ಕೋಪದಲ್ಲಿ ಅವರು ಮಾಡುವ ತಪ್ಪುಗಳಿಗೆ ಅವರನ್ನೇ ಹೊಣೆಯಾಗಿಸಬೇಕು. ಅಷ್ಟೇ ಅಲ್ಲ, ಸರಿಯಾದ ಗೈಡೆನ್ಸ್ ನೀಡಬೇಕು. 

ನೀವು ಈ ಲೇಖನ ಓದುತ್ತಿದ್ದೀರೆಂದರೆ, ಬಹುಷಃ ನೀವೂ ಮಕ್ಕಳ ಕೋಪವನ್ನು ಹೇಗಪ್ಪಾ ನಿಭಾಯಿಸುವುದು ಎಂಬ ಗೊಂದಲದಿಂದ ಒದ್ದಾಡುತ್ತಿದ್ದೀರಿ. ಅವರ ವರ್ತನೆಯನ್ನು ನಿಯಂತ್ರಿಸಲು ನಿಮಗೂ ಸ್ವಲ್ಪ ಸಹಾಯ ಬೇಕಾಗಿದೆ. ಕೋಪವೊಂದು ಬಿಟ್ಟರೆ ನನ್ನ ಮಗ ಚಿನ್ನ ಎನ್ನುವ ನಿಮಗೆ ಆತನ ಕೋಪ ಬಿಡಿಸುವುದೇ ಸಮಸ್ಯೆಯಾಗಿದೆ. ಹಾಗಿದ್ದರೆ, ಇಲ್ಲಿದೆ ನೋಡಿ ಕೋಪ ನಿಭಾಯಿಸುವ ವಿಧಾನಗಳು.

Tap to resize

Latest Videos

ಕೋಪದಲ್ಲಿ ನೀವು ಜಮದಗ್ನಿಯೇ, ಬುದ್ಧನಾಗಲು ಹೀಗ್ ಮಾಡಿ

ಯಾವುದಕ್ಕೆ ಅವರಿಗೆ ಕೋಪ ಬರುತ್ತಿದೆ ಪತ್ತೆ ಹಚ್ಚಿ
ಹದಿಹರೆಯದಲ್ಲಿ ಕಾರಣ ತಿಳಿವ ಮೊದಲೇ ಸಿಟ್ಟು ಬುಸ್ಸೆಂದು ಹೊಗೆಯಾಡಬಹುದು. ಎಲ್ಲಕ್ಕೂ ಕ್ಷಣದಲ್ಲೇ ಕೋಪ ಕಾಣಿಸಿಕೊಂಡುಬಿಡುತ್ತದೆ. ಆದರೆ, ಯಾವುದಕ್ಕಾಗಿ ತಮಗೆ ಸಿಟ್ಟು ಬಂದಿತು, ತಮಗೆ ಹಾಗೆನಿಸಲು ಕಾರಣವೇನು ಎಂದು ಮಕ್ಕಳು ಯೋಚಿಸಿರುವುದಿಲ್ಲ. ಹೀಗಾಗಿ, ಹದಿಹರೆಯದ ಮಕ್ಕಳಿಗೆ ತಮ್ಮ ಭಾವನೆಗಳ ಬಗ್ಗೆ ಗಮನಹರಿಸುವಂತೆ ಪ್ರೋತ್ಸಾಹ ನೀಡುವುದು ಸಿಟ್ಟನ್ನು ನಿಭಾಯಿಸಲು ಹೇಳಿಕೊಡುವ ಮೊದಲ ಹಂತ. ಅವರಿಗೆ ಕೋಪ ಬಂದು ಅದನ್ನವರು ತಾವೇ ಊಟ ಬಿಡುವುದು, ಕೋಣೆಗೆ ಹೋಗಿ ಬಾಗಿಲು ಹಾಕಿಕೊಳ್ಳುವುದು, ಅಥವಾ ಇತರರ ಮೇಲೆ ಕೂಗಾಡುವುದು, ಹೊಡೆಯುವುದು ಮುಂತಾದ ರೀತಿಯಲ್ಲಿ ತೋರಿಸುತ್ತಿದ್ದರೆ, ಎಲ್ಲಕ್ಕಿಂತ ಮೊದಲು ಯಾವ ಕಾರಣಕ್ಕಾಗಿ ಅವರಿಗಷ್ಟು ಕೋಪ ಬರುತ್ತಿದೆ ಎಂದು ಯೋಚಿಸಲು ತಿಳಿಸಿ. ಯಾಕಾಗಿ ಕೋಪ ಬರುತ್ತದೆ ಎಂದು ತಿಳಿದರೆ, ಅದನ್ನು ನಿಭಾಯಿಸುವುದು ಹೇಗೆ ಎಂದು ಯೋಚಿಸುವುದು ಸರಳವಾಗುತ್ತದೆ. 

undefined

ಫಲಿತಾಂಶ ಯೋಚಿಸುವುದನ್ನು ಕಲಿಸಿ
ಕೋಪ ಸಾಮಾನ್ಯವಾಗಿ ಕಾರಣದೊಂದಿಗೇ ಹುಟ್ಟುವುದಿಲ್ಲ. ತತ್‌ಕ್ಷಣಕ್ಕೆ ಭುಗಿಲೇಳುತ್ತದೆ. ಮಕ್ಕಳು ಸಿಟ್ಟು ಮಾಡುವಾಗ ಅದರಿಂದ ಏನೆಲ್ಲ ಅನಾಹುತವಾಗಬಹುದು, ತೊಂದರೆಯಾಗಬಹುದೆಂದು ಯೋಚಿಸುವುದಿಲ್ಲ. ಆದರೆ ಪ್ರತಿಯೊಂದು ಕ್ರಿಯೆಯೂ ಒಳ್ಳೆಯ ಅಥವಾ ಕೆಟ್ಟ ಪರಿಣಾಮವನ್ನು ಹೊಂದಿರುತ್ತದೆ. ಹೀಗಾಗಿ, ಮಕ್ಕಳು ಸಿಟ್ಟು ಬಂದಾಗ ಹೇಗೆ ಪ್ರತಿಕ್ರಿಯಿಸಿದರೆ ಏನೆಲ್ಲ ಆಗಬಹುದು ಎಂಬುದನ್ನು ವಿವರವಾಗಿ ಯೋಚಿಸಲು ತಿಳಿಸಿ. ಕೋಪದಲ್ಲಿ ತಮ್ಮನಿಗೋ, ತಂಗಿಗೋ ಹೊಡೆದಾಗ ಅದರಿಂದ ಏನೆಲ್ಲ ಆಗಬಹುದು, ಕೈಗೆ ಸಿಕ್ಕಿದ್ದನ್ನು ಎಲ್ಲಿ ಏನು ನೋಡದೆ ಎಸೆದಾಗ ಏನೆಲ್ಲ ಆಗಬಹುದು, ಬಾಯಿಗೆ ಬಂದಂತೆ ತಿರುಗುತ್ತರ ನೀಡಿದಾಗ ಪೋಷಕರ ಮನಸ್ಸಿಗೆ ಎಂಥ ಆಘಾತವಾಗಬಹುದು ಇತ್ಯಾದಿ ಇತ್ಯಾದಿ. ಇದರಿಂದ ನಿಧಾನವಾಗಿ ಅವರೇ ಕೋಪವನ್ನು ವ್ಯಕ್ತಪಡಿಸುವ ಪಾಸಿಟಿವ್ ದಾರಿ ಕಂಡುಕೊಳ್ಳುತ್ತಾರೆ. 

ಸಮಸ್ಯೆಗೆ ಹತ್ತಾರು ರೀತಿಯ ಪರಿಹಾರ ಕಂಡುಕೊಳ್ಳಲು ಸಹಕರಿಸಿ
ಕೆಲ ಮಕ್ಕಳಿಗೆ ಸಿಟ್ಟು ಸಮಸ್ಯಾತ್ಮಕವಾಗಿರುತ್ತದೆ. ಅವರಿಗೆ ಸಿಟ್ಟನ್ನು ಪಾಸಿಟಿವ್ ಆಗಿ ನಿರ್ವಹಿಸಲು ಏನೇನು ದಾರಿಗಳಿವೆ ತಿಳಿಸಿ. ಉದಾಹರಣೆಗೆ ಅವರಿಗೆ ವಿಪರೀತ ಕೋಪ ಬಂದಾಗ ಅವರು ಒಂದೆರಡು ನಿಮಿಷ ಮೌನವಾಗಿ ಕುಳಿತು, ತಮಗೆ ಯಾಕಾಗಿ ಸಿಟ್ಟು ಬರುತ್ತಿದೆ ಯೋಚಿಸಿ, ಬಳಿಕ ಪೋಷಕರ ಬಳಿ ಹೇಳಿಕೊಳ್ಳಬಹುದು. ''ನೀನು ಹೇಳಿದ್ದು ಸರಿ ಇರಬಹುದು, ಆದರೆ, ಹಾಗೆ ಹೇಳುವಾಗ ಅಧಿಕಾರದ ದನಿಯಲ್ಲಿ ಹೇಳುತ್ತೀಯಲ್ಲ, ಅದು ನನಗೆ ಇಷ್ಟವಾಗುವುದಿಲ್ಲ, ಅದಕ್ಕೇ ಕೋಪ ಬರುತ್ತದೆ'' ಎಂದೋ ಅಥವಾ 'ವ್ಯಂಗ್ಯವಾಡದೆ ಹೇಳಿದರೆ ಕೇಳುತ್ತೀನಿ, ಫ್ರೆಂಡ್ಲಿಯಾಗಿ ಮಾತಾಡಿ' ಎಂದೋ ಪೋಷಕರ ಬಳಿ ಹೇಳಿಕೊಳ್ಳುವಷ್ಟು ಸಲುಗೆ ನೀಡಿ. ಏಕೆಂದರೆ ಬಹುತೇಕ ಬಾರಿ ಮಕ್ಕಳಿಗೆ ಪೋಷಕರ ಬುದ್ಧಿ ಮಾತಿನಿಂದ ಸಿಟ್ಟು ಬರುವುದಿಲ್ಲ. ಬದಲಿಗೆ ಅದನ್ನವರು ಹೇಳುವ ಟೋನ್‌ನಿಂದಾಗಿ ಸಿಟ್ಟು ಕೆರಳಿರುತ್ತದೆ. ಈ ಬಗ್ಗೆ ಅವರು ಅನಲೈಸ್ ಮಾಡುವುದನ್ನು ಹೇಳಿಕೊಡಿ. ಇಲ್ಲದಿದ್ದಲ್ಲಿ, ಕೋಪ ಬಂದಾಗ ಅದನ್ನು ಬರೆದು ಹಗುರಾಗಬಹುದು, ಗೀಚಿ ಹಗುರಾಗಬಹುದು, ಅದರ ಬಗ್ಗೆ ಕವನ, ಕತೆಯನ್ನೂ ಬರೆಯಬಹುದು, ಚಿತ್ರ ಬಿಡಿಸಬಹುದು, ಅದಕ್ಕೆ ಹೊಂದುವ ಹಾಡಿಗೆ ನೃತ್ಯ ಮಾಡಬಹುದು ಮುಂತಾದ ಸೃಜನಾತ್ಮಕ ದಾರಿಗಳಿರುತ್ತವೆ ಎಂಬುದು ತಿಳಿಸಿ. ಕಲಾತ್ಮಕವಾಗಿ ಸಿಟ್ಟು ಹೊರಹಾಕಲು ದಾರಿಗಳ ಕೊರತೆ ಖಂಡಿತಾ  ಆಗುವುದಿಲ್ಲ. ಇದರಿಂದ ಸಿಟ್ಟೂ ಶಮನವಾಗುತ್ತದೆ, ಅದರ ಬದಲಿಗೆ ಮನಸ್ಸಿಗೆ ಸಮಾಧಾನವೂ ಸಿಗುತ್ತದೆ. ಒಂದು ವೇಳೆ ನಿಮ್ಮ ಮಗ/ಳು ಕಲಾತ್ಮಕತೆ ಹೊಂದದೆ ಹೆಚ್ಚು ದೈಹಿಕ ಶಕ್ತಿ ಬಳಸುವವರಾಗಿದ್ದರೆ, ಅವರು ಕೋಪ ಬಂದಾಗ ಕ್ರೀಡೆಯಲ್ಲಿ ತೊಡಗುವುದು, ಓಡುವುದು, ಪಂಚಿಂಗ್ ಬ್ಯಾಗಿಗೆ ಪಂಚ್ ಮಾಡುವುದು, ವ್ಯಾಯಾಮ ಮಾಡುವುದರಲ್ಲಿ ತೊಡಗುವುದನ್ನು ಅಭ್ಯಾಸ ಮಾಡಿಸಿ. ಹೀಗೆ ಒಂದಿಷ್ಟು ಎನರ್ಜಿ ಹೊರಹಾಕುತ್ತಲೇ ಮನಸ್ಸು ಶಾಂತವಾಗುತ್ತದೆ. ಇದು ನಿಮ್ಮ ಮಕ್ಕಳಿಗೆ ಅನುಭವಕ್ಕೆ ಸಿಗುವಂತೆ ಮಾಡಿ. 

ಗೊತ್ತಲ್ಲದೇ ಗಂಡನನ್ನು ದೂರ ಮಾಡಿಕೊಳ್ಳುವ ದಾರಿಗಳಿವು

ಮಾನಸಿಕ ಶಾಂತಿ
ಕೋಪವನ್ನು ಪ್ರಾಡಕ್ಟಿವ್ ಆಗಿ ವ್ಯಕ್ತಪಡಿಸುವುದು ಕಲಿಯುವುದು ಎಷ್ಟು ಮುಖ್ಯವೋ, ಕೋಪ ಬರದಂತೆ ನೋಡಿಕೊಳ್ಳುವುದನ್ನು ಕಲಿವುದೂ ಅಷ್ಟೇ ಮುಖ್ಯ. ಇದಕ್ಕಾಗಿ ಉಸಿರಾಟದ ವ್ಯಾಯಾಮಗಳು, ಯೋಗ, ಪ್ರಾಣಾಯಾಮ, ಧ್ಯಾನ ಮುಂತಾದ ತಂತ್ರಗಳನ್ನು ಅಭ್ಯಾಸ ಮಾಡಿಸಿ. ಇದು ಯೋಚನೆಗಳನ್ನು ಹೆಚ್ಚು ಸ್ಪಷ್ಟಪಡಿಸುವ ಜೊತೆಗೆ, ಕೋಪವನ್ನು ಕಡಿಮೆಯೂ ಮಾಡುತ್ತದೆ. ಈ ವ್ಯಾಯಾಮಗಳನ್ನು ಅರು ತರಗತಿಗೆ ಹೋಗಿಯೂ ಅಭ್ಯಾಸ ಮಾಡಬಹುದು, ಕೋರ್ಸ್ ಕೂಡಾ ಮಾಡಿಕೊಳ್ಳುವುದು ಉತ್ತಮ. 

ಮನರಂಜನೆ
ನಾವು ಸಂತೋಷವಾಗಿರುವಾಗ ಸಿಟ್ಟು ಬರುವುದಿಲ್ಲ. ಹೀಗಾಗಿ, ಕೋಪ ಬಂದಾಗ ಯಾವುದರಲ್ಲಿ ಸಂತೋಷ, ಮನರಂಜನೆ ಸಿಗುತ್ತದೆಯೋ ಕೆಲ ಕಾಲ ಅದನ್ನು ಮಾಡಲು ಮಕ್ಕಳನ್ನು ಪ್ರೇರೇಪಿಸಿ. ಉದಾಹರಣೆಗೆ ನಿಮ್ಮ ಮಗನಿಗೆ ಕೋಪ ಬಂದಾಗ ಇಷ್ಟದ ಕಾರ್ಯಕ್ರಮವೊಂದನ್ನು ನೋಡಲು ಹೇಳಿ ಅಥವಾ ಫ್ರೆಂಡ್ಸ್‌ಗೆ ಫೋನ್ ಮಾಡುವುದು, ಅವರೊಂದಿಗೆ ಕೆಲ ಸಮಯ ಕಳೆದು ಬರುವುದನ್ನು ಪ್ರೋತ್ಸಾಹಿಸಿ. ಇದರಿಂದ ಅವರು ರಿಲ್ಯಾಕ್ಸ್ ಆಗುವ ಜೊತೆಗೆ ಮುಖದಲ್ಲಿ ನಗೆ ಹೊಮ್ಮುತ್ತದೆ. ಆ ಬಳಿಕ, ತಾವು ಸಿಟ್ಟು ಮಾಡುವಂಥ ದೊಡ್ಡ ಕಾರಣ ಅಲ್ಲಿರಲೇ ಇಲ್ಲ ಎಂದು ಅವರಿಗೇ ಅನಿಸುತ್ತದೆ. 

ಶ್ಲಾಘನೆ
ಯಾವಾಗ ನಿಮ್ಮ ಮಕ್ಕಳು ಕೋಪವನ್ನು ಪಾಸಿಟಿವ್ ಆಗಿ ವ್ಯಕ್ತಪಡಿಸುತ್ತಾರೋ ಆಗೆಲ್ಲ ಮೆಚ್ಚುಗೆಯ ಮಾತುಗಳನ್ನಾಡಿ. ಅವರು ಸರಿಯಾದ ದಾರಿ ಆಯ್ಕೆ ಮಾಡಿಕೊಂಡಿದ್ದರಿಂದ ನಿಮಗೆ ಖುಷಿಯಾದುದನ್ನು ವಿವರಿಸಿ. ಒಂದು ವೇಳೆ ಸಾಮಾನ್ಯವಾಗಿ ಕೋಪ ಮಾಡಿಕೊಳ್ಳುತ್ತಿದ್ದ ವಿಷಯಕ್ಕೆ ಅವರು ಕೋಪ ಮಾಡಿಕೊಳ್ಳಲಿಲ್ಲವೆಂದಾಗಲೂ ಅದನ್ನು ಹೊಗಳಿ. ಇದು ಅವರ ಸಕಾರಾತ್ಮಕ ನಡತೆಯನ್ನು ಪ್ರೇರೇಪಿಸುತ್ತದೆ. 

ಪಾರ್ಟ್ನರ್ ಜತೆ ಜಗಳವಾಡಿದ್ರೆ ಒಳ್ಳೇದಂತೆ

click me!