ರೈತರ ಪ್ರತಿಭಟನೆ: ಕೇಂದ್ರ ಹಾಗೂ ಅನ್ನದಾತರ ನಡುವೆ ಒಮ್ಮತ ಮೂಡುತ್ತಿಲ್ಲವೇಕೆ?

By Kannadaprabha NewsFirst Published Dec 11, 2020, 10:50 AM IST
Highlights

ಒಂದು ವೇಳೆ ರೈತರ ಪ್ರತಿಭಟನೆ ಪಂಜಾಬ್‌ನಿಂದ ಹೊರಗೆ ಉತ್ತರ ಪ್ರದೇಶ, ಹರ್ಯಾಣಕ್ಕೂ ತೀವ್ರವಾಗಿ ಹಬ್ಬಿದರೆ ಹರ್ಯಾಣದಲ್ಲಿ ದುಷ್ಯಂತ ಚೌತಾಲಾ ಜೊತೆಗಿರುವ 10 ಶಾಸಕರು ದೂರ ಹೋಗುತ್ತಾರೆ. ಆಗ ಮನೋಹರ್‌ ಲಾಲ್‌ ಖಟ್ಟರ್‌ ಸರ್ಕಾರ ಉಳಿಯುವುದು ಕಷ್ಟ.

ಭಾರೀ ಬಹುಮತ ಮತ್ತು ಜನ ಬೆಂಬಲದ ಕಾರಣದಿಂದ ಕಳೆದ 7 ವರ್ಷಗಳಲ್ಲಿ ಕೇಂದ್ರ ಸರ್ಕಾರ ತನ್ನ ನಿಲುವನ್ನು ಒಪ್ಪದ ಯಾರೊಂದಿಗೂ ಮಾತುಕತೆಗೆ ಕುಳಿತುಕೊಳ್ಳುವ ಸಂದರ್ಭ ಬಂದಿದ್ದು ಕಡಿಮೆ. ಆರ್ಟಿಕಲ್‌ 370, ನಾಗರಿಕ ಕಾಯ್ದೆ ಮತ್ತು ತ್ರಿವಳಿ ತಲಾಕ್‌ಗೂ ವಿರೋಧ ಇತ್ತಾದರೂ ಅದರಿಂದ ಬಿಜೆಪಿಗೆ ನಷ್ಟಕ್ಕಿಂತ ಲಾಭ ಜಾಸ್ತಿ ಇತ್ತು. ಆದರೆ ರೈತರ ವಿಷಯದಲ್ಲಿ ಹಾಗಿಲ್ಲ. ಒಂದು ಲಕ್ಷಕ್ಕೂ ಹೆಚ್ಚು ರೈತರು ರಾಜಧಾನಿಗೆ ಮುತ್ತಿಗೆ ಹಾಕಿರುವಾಗ ಮೊದಲ ಬಾರಿ ಕೇಂದ್ರ ಸರ್ಕಾರ ಜನರಿಗೆ ತನ್ನ ನಿಲುವನ್ನು ಮನವರಿಕೆ ಮಾಡಲು ಯತ್ನಿಸುತ್ತಿದೆ.

ಮೊದಲು ರೈತರು ಪಂಜಾಬ್‌ನಿಂದ ಹೊರಟಾಗ ಕೇಂದ್ರ ಸರ್ಕಾರ ರೈತರು ರಸ್ತೆಗೆ ಬಂದರೆ ಮಾತುಕತೆ ನಡೆಸೋದಿಲ್ಲ ಎಂದು ಹೇಳಿತ್ತು. ನಂತರ ಕೃಷಿ ಕಾರ್ಯದರ್ಶಿಯನ್ನು ಮಾತುಕತೆಗೆ ಕಳುಹಿಸಿತು. ಅದು ವಿಫಲವಾದಾಗ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಮತ್ತು ಆಹಾರ ಸಚಿವ ಪಿಯೂಷ್‌ ಗೋಯಲ್‌ ಅವರನ್ನು ಕಳುಹಿಸಿತು. ಅದೂ ವಿಫಲವಾದಾಗ ಈಗ ಸ್ವತಃ ಸರ್ಕಾರದ ನಂಬರ್‌ 2 ಅಮಿತ್‌ ಶಾ ರೈತರ ಜೊತೆ ಮಾತುಕತೆಗೆ ನಡೆಸುತ್ತಿದ್ದಾರೆ. 15 ದಿನಗಳ ನಂತರ ಸರ್ಕಾರ ಒಂದಿಷ್ಟುಕಾನೂನಿನ ತಿದ್ದುಪಡಿಗೆ ತಯಾರಾಗಿದೆ. ಆದರೆ ಪೂರ್ತಿ ಕಾನೂನು ರದ್ದು ಮಾಡಿ ಎಂದು ರೈತರು ಹಟ ಹಿಡಿದಿದ್ದಾರೆ. ಒಂದು ಸತ್ಯ ಏನೆಂದರೆ ರಾಜಧಾನಿಗೆ ಬಂದು ಕೂರುವವರೆಗೆ ನಮ್ಮ ಸರ್ಕಾರಗಳು ಮತ್ತು ಮಾಧ್ಯಮಗಳು ಕಣ್ಣು ತೆರೆಯುವುದಿಲ್ಲ.

ಅಹ್ಮದ್ ಭಾಯಿ ಇಲ್ಲದ ಕಾಂಗ್ರೆಸ್, ಗಾಂಧಿ ಕುಟುಂಬದ ಕಥೆಯೇನು?

ಯುಪಿ, ಹರ್ಯಾಣದಲ್ಲಿ ಎಫೆಕ್ಟ್

ಮಾತುಕತೆ ಧಾಟಿ ಗಮನಿಸಿದರೆ ಕೇಂದ್ರ ಸರ್ಕಾರ ಮತ್ತು ಪಂಜಾಬಿನ ರೈತರ ನಡುವೆ ವಿಶ್ವಾಸದ ಕೊರತೆ ಇದೆ. ಇದಕ್ಕೆ ಮುಖ್ಯ ಕಾರಣ ರೈತರು ಪಂಜಾಬ್‌ನಿಂದ ಹೊರಟಾಗಲೇ ಬಿಜೆಪಿ ಬೆಂಬಲಿಗರಲ್ಲಿ ಕೆಲವರು ಸಿಖ್‌ ರೈತರನ್ನು ‘ಖಲಿಸ್ತಾನಿಗಳು’, ‘ನಕ್ಸಲೀಯರು’ ಎಂದು ಕರೆದಿದ್ದು. ಇದರಿಂದ ಪೂರ್ತಿ ಸಿಖ್‌ ಸಮುದಾಯ ಪಂಜಾಬಿ ರೈತರ ಬೆಂಬಲಕ್ಕೆ ನಿಲ್ಲುವಂತೆ ಆಗಿದೆ. ಪಂಜಾಬಿನಲ್ಲಿ ಉಳಿದ ಕಡೆಗಿಂತ ಮೋದಿ ಜನಪ್ರಿಯತೆ ಕಡಿಮೆ ಇದೆ. ಹೀಗಾಗಿ ಅವರಿಗೆ ತನ್ನ ನಿಲುವನ್ನು ಮನವರಿಕೆ ಮಾಡುವುದು ಬಿಜೆಪಿಗೆ ಕಷ್ಟವಾಗುತ್ತಿದೆ.

ಆದರೆ ಬಿಜೆಪಿಗೆ ರಾಜಕೀಯ ಸಮಸ್ಯೆ ಇರುವುದು ಹರ್ಯಾಣ ಮತ್ತು ಉತ್ತರಪ್ರದೇಶದಲ್ಲಿ. ಒಂದು ವೇಳೆ ರೈತರ ಪ್ರತಿಭಟನೆ ಇನ್ನೂ ತಾರಕಕ್ಕೆ ಹೋದರೆ ದುಷ್ಯಂತ ಚೌತಾಲಾ ಜೊತೆಗಿರುವ 10 ಶಾಸಕರು ದೂರ ಹೋಗುತ್ತಾರೆ. ಆಗ ಮನೋಹರ್‌ ಲಾಲ್‌ ಖಟ್ಟರ್‌ ಸರ್ಕಾರ ಉಳಿಯುವುದು ಕಷ್ಟ. ಇನ್ನು ಯುಪಿಯಲ್ಲೂ 2022ರಲ್ಲಿ ಚುನಾವಣೆ ಇದೆ. ಸರ್ಕಾರಕ್ಕೆ 1991ರಲ್ಲಿ ಉಳಿದ ಕ್ಷೇತ್ರಗಳು ಜಾಗತೀಕರಣಕ್ಕೆ ಮುಕ್ತವಾದಂತೆ, ಈಗ ಕೃಷಿ ಮತ್ತು ರೈತ ಸಮಸ್ಯೆಯಿಂದ ಮುಕ್ತವಾಗಬೇಕಾದರೆ ಖಾಸಗಿ ಬಂಡವಾಳ ಬೇಕು ಎಂಬ ಸ್ಪಷ್ಟಅಭಿಪ್ರಾಯವಿದೆ. ಆದರೆ ರೈತರಿಗೆ ಇದನ್ನು ತಿಳಿಸಿ ಹೇಳುವುದು ಕಷ್ಟವಾಗುತ್ತಿದೆ.

ರೈತಾಪಿ ‘ನಾಯಕರ’ ಕೊರತೆ

ಕೇಂದ್ರ ನಾಯಕರ ಸಮಸ್ಯೆ ಎಂದರೆ ನಗರದ ಮಂದಿಯನ್ನುದ್ದೇಶಿಸಿ ನಿರ್ಮಲಾ ಸೀತಾರಾಮನ್‌, ಪಿಯೂಷ್‌ ಗೋಯಲ್‌, ಸ್ಮೃತಿ ಇರಾನಿ ಅಂಕಿ ಸಂಖ್ಯೆಯೊಂದಿಗೆ ಅದ್ಭುತ ಭಾಷಣ ಮಾಡಬಲ್ಲರು. ಅಮಿತ್‌ ಶಾ ಕಾರ್ಯಕರ್ತರಿಂದ ಫುಲ್‌ ಕೆಲಸ ತೆಗೆಸಬಲ್ಲರು. ಆದರೆ ವಿಭಿನ್ನ ವಿಚಾರದ ಭಿನ್ನ ನಿಲುವಿನ ಜನರ ಜೊತೆ ಕುಳಿತು ವಿಶ್ವಾಸದಿಂದ ಸ್ನೇಹ ಸಂಪಾದಿಸಿ, ಮನವರಿಕೆ ಮಾಡಿಕೊಡುವುದು ಸುಲಭವಲ್ಲ. ರೈತರೊಂದಿಗೆ ಮಾತುಕತೆ ನಡೆಸಲು ಕೊನೆಗೆ ರಾಜನಾಥ್‌ ಸಿಂಗ್‌ ತೆರೆಯ ಹಿಂದೆ ಚಟುವಟಿಕೆ ನಡೆಸಿದ ಮೇಲೆ ಸಾಧ್ಯವಾಯಿತು.

ಇದ್ದುದರಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ತಾಳ್ಮೆಯಿಂದ ಎಲ್ಲವನ್ನೂ ಕೇಳಿಸಿಕೊಳ್ಳುತ್ತಾರೆ. ರೈತ ನಾಯಕರು ಹೇಳುವ ಪ್ರಕಾರ, ಪ್ರತಿಯೊಂದು ಹಂತದಲ್ಲೂ ತೋಮರ್‌ ಮತ್ತು ಗೋಯಲ್‌ ಬಾಲ್ಕನಿಗೆ ಹೋಗಿ ಮೊಬೈಲ್‌ನಲ್ಲಿ ಯಾರೊಂದಿಗೋ ಮಾತನಾಡಿ ಬರುತ್ತಾರಂತೆ. ಅದೇನೇ ಇದ್ದರೂ ಈ ಇಬ್ಬರು ಸಚಿವರಿಗೆ ಕೊನೆಗೂ ರೈತರ ವಿಶ್ವಾಸ ಸಂಪಾದಿಸಲು ಸಾಧ್ಯವಾಗಿಲ್ಲ. ಇಂತಹ ಕೆಲಸಕ್ಕೆ ಯಡಿಯೂರಪ್ಪನವರಂತೆ ತಳದಿಂದ ಬಂದ ನಾಯಕರು ಬೇಕು. ದೂರದಿಂದ ದಣಿದು ಬಂದ ರೈತನಿಗೆ ‘ಹೇಗಿದ್ದಿ ಅಣ್ಣಾ..’ ಎಂದು ಹೆಗಲ ಮೇಲೆ ಕೈ ಹಾಕಿ ಮಾತನಾಡಿದರೆ ಸಾಕು ಅರ್ಧ ಪ್ರತಿಭಟನೆ ಕರಗಿ ಹೋಗಿರುತ್ತದೆ.

ಬಿಹಾರದಂತ ಕ್ಲಿಷ್ಟ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯಲ್ಲೂ ಮೋದಿ ಮಾಡಿದ ಮ್ಯಾಜಿಕ್ ಏನು?

ಒಂದು ಹೆಜ್ಜೆ ಹಿಂದೆ?

ಅಮಿತ್‌ ಶಾ ಜೊತೆಗಿನ ರೈತರ ಭೇಟಿ ನಂತರ ಕೇಂದ್ರ ಸರ್ಕಾರ ಒಂದಿಷ್ಟುತಿದ್ದುಪಡಿಗೆ ತಯಾರು ಇರುವುದಾಗಿ ರೈತರಿಗೆ ಪತ್ರ ಕಳುಹಿಸಿದೆ. ಸರ್ಕಾರ ಈಗ ಖಾಸಗಿ ಮಾರುಕಟ್ಟೆಯಲ್ಲೂ ಶುಲ್ಕ ನಿರಾಕರಣೆಗೆ ತಯಾರು ಇದ್ದು, ರೈತರು ಮತ್ತು ಕಂಪನಿಗಳ ವ್ಯಾಜ್ಯ ಪರಿಹಾರಕ್ಕೆ ಜಿಲ್ಲಾಧಿ​ಕಾರಿ ಬೇಡ, ರೈತ ಟ್ರಿಬ್ಯುನಲ್‌ಗಳ ಸ್ಥಾಪನೆಗೆ ತಯಾರಿದ್ದೇವೆ ಎಂದು ಹೇಳಿದೆ. ಖಾಸಗಿ ಕಂಪನಿಗಳು ಯಾವುದೇ ಕಾರಣಕ್ಕೂ ರೈತರ ಭೂಮಿ ಅಡ ಇಟ್ಟುಕೊಳ್ಳುವುದು ಅಸಾಧ್ಯ ಎಂದು ಕಾನೂನು ಮಾಡುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ಇವೆಲ್ಲ ಸಣ್ಣ ಪ್ರಸ್ತಾವನೆಗಳು.

ಸರ್ಕಾರ ಚಳಿಗಾಲದ ಅ​ಧಿವೇಶನ ಕರೆದು 3 ಮೂಲ ಕಾನೂನು ರದ್ದುಗೊಳಿಸಲಿ, ಜೊತೆಗೆ ಕನಿಷ್ಠ ಬೆಂಬಲ ಬೆಲೆ ಕೊಡುವುದಾಗಿ ಕಾನೂನಿನ ವಾಗ್ದಾನ ಮಾಡಲಿ ಎನ್ನುತ್ತಿವೆ ರೈತ ಸಂಘಟನೆಗಳು. ಮಾತುಕತೆ ನಡೆಸಿ ತಿದ್ದುಪಡಿಗೆ ತಯಾರಿದ್ದೇವೆ. ಇಷ್ಟಾದರೂ ರೈತರು ಹಟ ಹಿಡಿದರೆ ಏನು ಮಾಡುವುದು ಎಂದು ತೋರಿಸುವ ಪ್ರಯತ್ನ ಕೇಂದ್ರ ಮಂತ್ರಿಗಳದ್ದು. ಹಗ್ಗ ಹರಿಯುತ್ತಿಲ್ಲ, ಕೋಲು ಮುರಿಯುತ್ತಿಲ್ಲ.

ಹೊಸ ಕಾನೂನು ತಂದಿದ್ದು ಏಕೆ?

ಸಾಲ ಮನ್ನಾ, ಸಬ್ಸಿಡಿ ಮತ್ತು ಸಣ್ಣ ರೈತರಿಂದ ಕೃಷಿ ಕ್ಷೇತ್ರ ಸುಧಾರಣೆ ಆಗೋದಿಲ್ಲ. ಇದಕ್ಕಾಗಿ ಖರೀದಿಯಲ್ಲಿ ಖಾಸಗಿ ಹೂಡಿಕೆದಾರರನ್ನು ತನ್ನಿ. ಇದರಿಂದ ಬಂಡವಾಳ ಬರುತ್ತದೆ, ರೈತನಿಗೂ ಹಣ ಸಿಗುತ್ತದೆ ಎಂದು ಭಾರತಕ್ಕೆ ಪಾಶ್ಚಿಮಾತ್ಯ ಆರ್ಥಿಕ ತಜ್ಞರು 1991ರಿಂದ ಹೇಳುತ್ತಲೇ ಬಂದಿದ್ದಾರೆ. ಆದರೆ ಯಾವುದೇ ಸರ್ಕಾರ ಈ ಧೈರ್ಯ ಮಾಡಿರಲಿಲ್ಲ. ಏಕೆಂದರೆ ರೈತ ಮತ್ತು ಮುಕ್ತ ಮಾರುಕಟ್ಟೆಇವೆರಡನ್ನೂ ಜೋಡಿಸಲು ಹೋದರೆ ಹಳ್ಳಿಗಳು ತಿರುಗಿ ಬಿದ್ದಾವು ಎಂಬ ಹೆದರಿಕೆ. ಆದರೆ ಭಾರೀ ಬಹುಮತ ಇರುವ ಎನ್‌ಡಿಎ ಈ ಸಾಹಸವನ್ನೇನೋ ಮಾಡಿದೆ. ಆದರೆ ಹಳ್ಳಿಯ ರೈತರಿಗೆ ಮನವರಿಕೆ ಮಾಡಿಕೊಡಲು ಆಗುತ್ತಿಲ್ಲ. ಮೂರು ಕಾನೂನುಗಳಿಂದ ರೈತನ ಆದಾಯ ದ್ವಿಗುಣ ಎಂದಷ್ಟೇ ಸರ್ಕಾರ ಹೇಳುತ್ತಿದೆ. ಆದರೆ ಹೇಳದೇ ಇರುವ ಅಂಶಗಳು ಕೂಡ ಸಾಕಷ್ಟಿವೆ.

50 ಪ್ರತಿಶತ ಭಾರತೀಯರು ಕೃಷಿ ಚಟುವಟಿಕೆಯಲ್ಲಿದ್ದರೂ ಇವರ ಜಿಡಿಪಿ ಕೊಡುಗೆ ಕೇವಲ 17 ಪ್ರತಿಶತ. ಹೀಗಾಗಿ ಒಂದು, ಎರಡು ಎಕರೆ ಇರುವ ಸಣ್ಣ ರೈತರು ಕಡಿಮೆ ಆದಷ್ಟೂಒಳ್ಳೆಯದು. ಇವರ ಅವಶ್ಯಕತೆ ಮಹಾನಗರಗಳಿಗಿದೆ. ಜೊತೆಗೆ ಕೃಷಿ ಮಾರುಕಟ್ಟೆಮುಕ್ತವಾದರೆ ಮಾತ್ರ ಸರ್ಕಾರದ ಸಬ್ಸಿಡಿ ಕಡಿಮೆ ಆಗಿ, ಆಧುನಿಕ ಯಂತ್ರ-ತಂತ್ರಗಳು ಬರುತ್ತವೆ. ಬೀಜ ಬಿತ್ತನೆಯಿಂದ ಊಟದ ತಟ್ಟೆವರೆಗೆ ಆಹಾರ ತರುವಲ್ಲಿ ದೊಡ್ಡ ದೊಡ್ಡ ಕಂಪನಿಗಳು ಬಂದರೆ ಮಾತ್ರ ಕೃಷಿ ಲಾಭದಾಯಕ ಮಾಡಬಹುದು. ನಾವು ಒಮ್ಮೆ ಮುಕ್ತ ಮಾರುಕಟ್ಟೆಗೆ ತೆರೆದುಕೊಂಡ ಮೇಲೆ ಇದು ಅನಿವಾರ್ಯ ಹೌದು. ಸರ್ಕಾರಕ್ಕೆ ತಾನು ಹೊರಟಿರುವ ದಾರಿ ಬಗ್ಗೆ ಸ್ಪಷ್ಟತೆ ಇರಬಹುದು. ಆದರೆ, 70 ವರ್ಷದಿಂದ ಮುಕ್ತ ಮಾರುಕಟ್ಟೆಇರುವ ಅಮೆರಿಕ, ಫ್ರಾನ್ಸ್‌, ಜರ್ಮನಿಗಳಲ್ಲಿ ಏಕೆ ಸರ್ಕಾರಗಳು ಅಷ್ಟೊಂದು ದೊಡ್ಡ ಸಬ್ಸಿಡಿಯನ್ನು ರೈತರಿಗೆ ಕೊಡುತ್ತವೆ ಮತ್ತು ಅಲ್ಲಿನ ರೈತ ಕೂಡ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂಬ ಪ್ರಶ್ನೆಗೆ ಉತ್ತರ ಎಲ್ಲಿದೆ?

ಪಂಜಾಬಿಗಳೇ ಬೀದಿಗೆ ಏಕೆ?

ದೇಶದ ಬೇರೆ ಭಾಗಗಳಲ್ಲಿ ರೈತ ಸಂಘಟನೆಗಳು ಬೀದಿಗೆ ಇಳಿದು ಪ್ರತಿಭಟನೆಯನ್ನೇನೋ ಮಾಡುತ್ತಿವೆ. ಆದರೆ ಸಾಮಾನ್ಯ ರೈತ ಆಕ್ರೋಶಗೊಂಡಿದ್ದು ಕಾಣಲಿಲ್ಲ. ಆದರೆ ಕೃಷಿ ಕ್ರಾಂತಿಯ ಪಂಜಾಬ್‌ನಲ್ಲಿ ಸಾಮಾನ್ಯ ರೈತನೂ ಹೋರಾಟಕ್ಕೆ ಇಳಿದಿದ್ದಾನೆ. ಏಕೆಂದರೆ ಅಲ್ಲಿ 1500 ಎಪಿಎಂಸಿ ಕೇಂದ್ರಗಳಿವೆ. ಅಲ್ಲಿನ ರೈತರಿಗೆ ಸರ್ಕಾರದ ಕನಿಷ್ಠ ಬೆಂಬಲ ಬೆಲೆಯಿಂದ ಗೋ​ದಿ ಮತ್ತು ಭತ್ತಕ್ಕೆ ಒಳ್ಳೆಯ ಬೆಲೆ ದೊರಕುತ್ತದೆ. ಕೇಂದ್ರ ಸರ್ಕಾರ ಅಲ್ಲಿನ ಎಪಿಎಂಸಿಗಳ ಮೂಲಕ ಲಕ್ಷಾಂತರ ಟನ್‌ ಆಹಾರ ಧಾನ್ಯವನ್ನು ರೈತರಿಂದ ಖರೀದಿಸುತ್ತದೆ.

ಒಂದು ವೇಳೆ ನಾಳೆ ಖಾಸಗಿಯವರು ಬಂದು ಕನಿಷ್ಠ ಬೆಂಬಲ ಬೆಲೆ ನೀಡದೇ ಹೋದರೆ ಎಂಬ ಚಿಂತೆ, ಆತಂಕ ಪಂಜಾಬಿ ರೈತರನ್ನು ಕಾಡುತ್ತಿದೆ. ದೊಡ್ಡ ದೊಡ್ಡ ಕಂಪನಿಗಳಿಗೆ ದಾಸ್ತಾನಿಗೆ ಅನುಮತಿ ನೀಡಿದಲ್ಲಿ ಬೆಳೆ ಬರುವಾಗಲೇ ದಾಸ್ತಾನು ಹೊರಗೆ ತೆಗೆದು ಬೆಲೆ ಇಳಿಸಿದರೆ ಎಂಬ ಚಿಂತೆ ಕಾಡುತ್ತಿದೆ. ಅಂದಹಾಗೆ, ಬಿಹಾರದಲ್ಲಿ 2006ರಲ್ಲಿಯೇ ಎಪಿಎಂಸಿ ರದ್ದುಗೊಳಿಸಲಾಗಿದೆ. ಆದರೂ ಗಂಗೆಯ ತಟದ ರೈತ ಕೃಷಿಗೆ ಬೆಲೆ ಸಿಗದೇ ಮುಂಬೈ, ದಿಲ್ಲಿ ಸೇರಿಕೊಂಡಿದ್ದಾನೆ ಯಾಕೆ ಎಂಬ ಪಂಜಾಬಿ ರೈತರ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿದ್ದಂತಿಲ್ಲ.

ರೈತರ ಜೊತೆ ಸಭೆ: ಅಮಿತ್ ಶಾಗೆ ಯೆಸ್, ನೋ ಎರಡೇ ಆಯ್ಕೆ ಮುಂದಿಟ್ಟ ರೈತ ಸಂಘಟನೆ!

ರಾಜಕೀಯದ ಚಿತ್ರ ವಿಚಿತ್ರಗಳು

ನಮ್ಮ ದೇಶದಲ್ಲಿ ಅಧಿಕಾರದಲ್ಲಿದ್ದಾಗ ಒಂದು ಭಾಷೆ, ವಿಪಕ್ಷದಲ್ಲಿದ್ದಾಗ ತದ್ವಿರುದ್ಧ ಭಾಷೆ ರಾಜಕಾರಣದ ಸಾಮಾನ್ಯ ನಿಯಮ. 1991ರಲ್ಲಿ ಮುಕ್ತ ಮಾರುಕಟ್ಟೆತಂದ, 2008ರಲ್ಲಿ ಅಮೆರಿಕದ ಜೊತೆ ಪರಮಾಣು ಕರಾರು ಮಾಡಿಕೊಂಡ ಕಾಂಗ್ರೆಸ್‌ ಈಗ ದೇಶವನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದೀರಿ ಎಂದು ಬಿಜೆಪಿಯನ್ನು ಬಯ್ಯುತ್ತಿದೆ. 91ರಲ್ಲಿ ಮುಕ್ತ ಮಾರುಕಟ್ಟೆವಿರುದ್ಧ ಇದ್ದ, 2014ರ ವರೆಗೂ ಕೃಷಿಗೆ ಖಾಸಗಿ ಬಂಡವಾಳ ಬೇಡ ಎನ್ನುತ್ತಿದ್ದ ಬಿಜೆಪಿ ಈಗ ರೈತರ ಸಮಸ್ಯೆಗೆ ರಾಮಬಾಣವೇ ಖಾಸಗೀಕರಣ ಎನ್ನುತ್ತಿದೆ. ದೇಶದ ರಾಜಕೀಯ ವಾತಾವರಣದಲ್ಲಿ ರೈತರ ಪರ, ಬಡವರ ಪರ ಎಂದು ಹೇಳಿಕೊಳ್ಳುವುದು ಒಳ್ಳೆಯ ಶಬ್ದಗಳು. ಆದರೆ ಖಾಸಗೀಕರಣ, ಬಂಡವಾಳ, ಬಹುರಾಷ್ಟ್ರೀಯ ಕಂಪನಿಗಳು ಎಂಬವು ಕೆಟ್ಟಶಬ್ದಗಳು. ಇದು ವಿಚಿತ್ರವಾದರೂ ಸತ್ಯ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

click me!