ಪುಟ್ಟ ಹುಡುಗರೇಕೆ ಪೋರ್ನ್ ನೋಡ್ತಾರೆ?

By Kannadaprabha NewsFirst Published Dec 17, 2018, 8:55 AM IST
Highlights

ಹತ್ತು ವರ್ಷದ ಮಗ ಆ ಥರ ವೀಡಿಯೋ ನೋಡುತ್ತಿದ್ದಾನೆ ಅನ್ನೋದು ಅವರಿಗೆ ದೊಡ್ಡ ಆಘಾತ! ಮಗನಿಗೆ ಹೊಡೆತ, ಇಂಟರ್ ನೆಟ್, ಫೋನ್ ಸಂಪರ್ಕ ಕಟ್, ಒಂಥರ ಜೈಲಿನ ಥರದ ಟ್ರೀಟ್‌ಮೆಂಟ್. ಮುಂದೆ ಆ ಹುಡುಗನ ಸ್ಥಿತಿ ಹೇಗಿರಬಹುದು ನೀವೇ ಯೋಚಿಸಿ. ಅವನಲ್ಲಿ ಕೀಳರಿಮೆ ಬೆಳೆಯಬಹುದು, ಬದುಕಿನ ಬಗ್ಗೆ ಜಿಗುಪ್ಸೆ ಮೂಡಬಹುದು, ಡಿಪ್ರೆಶನ್‌ನಂಥ ಸಮಸ್ಯೆಗಳು ಬರಬಹುದು, ಇನ್ನೂ ಏನೇನೋ ಆಗಬಹುದು. 

ಹತ್ತು ವರ್ಷದ ಹುಡುಗನಿಗೆ ‘ನೋಡಬಾರದ ವೀಡಿಯೋ’ ಕಣ್ಣಿಗೆ ಬೀಳುತ್ತೆ. ಅವನಿಗೆ ಅದರ ಬಗ್ಗೆ ಕುತೂಹಲ. ಆ ವಿಚಾರವಾಗಿ ಮನೆಯವರಲ್ಲಿ ಕೇಳಲು ಸಂಕೋಚ, ಭಯ. ಒಮ್ಮೆ ನೋಡಿದ್ದನ್ನು ಇನ್ನೊಮ್ಮೆ ನೋಡಿದಾಗ ಆ ಕಡೆಗೆ ಸೆಳೆತ ಬೆಳೆಯುತ್ತದೆ. ಕಾರ್ಟೂನ್ ನೋಡುವ ನೆವದಲ್ಲಿ ಅಪ್ಪ, ಅಮ್ಮನ ಫೋನ್ ತಗೊಂಡು ರೂಮ್‌ನಲ್ಲಿ ಒಬ್ಬನೇ ಕೂತು ಪೋರ್ನ್ ವೀಡಿಯೋ ನೋಡಲಾರಂಭಿಸುತ್ತಾನೆ.

ಕ್ರಮೇಣ ಇದು ಚಟವಾಗುತ್ತೆ. ಆದರೆ ಈ ಆಟಗಳೆಲ್ಲ ಒಮ್ಮೆಯಾದರೂ ಪೋಷಕರ ಕಣ್ಣಿಗೆ ಬೀಳಲೇ ಬೇಕಲ್ಲಾ.. ಹತ್ತು ವರ್ಷದ ಮಗ ಆ ಥರ ವೀಡಿಯೋ ನೋಡುತ್ತಿದ್ದಾನೆ ಅನ್ನೋದು ಅವರಿಗೆ ದೊಡ್ಡ ಆಘಾತ! ಮಗನಿಗೆ ಹೊಡೆತ, ಇಂಟರ್‌ನೆಟ್, ಫೋನ್ ಸಂಪರ್ಕ ಕಟ್, ಒಂಥರ ಜೈಲಿನ ಥರದ ಟ್ರೀಟ್‌ಮೆಂಟ್. ಮುಂದೆ ಆ ಹುಡುಗನ ಸ್ಥಿತಿ ಹೇಗಿರಬಹುದು ನೀವೇ ಯೋಚಿಸಿ. ಅವನಲ್ಲಿ ಕೀಳರಿಮೆ ಬೆಳೆಯಬಹುದು, ಬದುಕಿನ ಬಗ್ಗೆ ಜಿಗುಪ್ಸೆ ಮೂಡಬಹುದು, ಡಿಪ್ರೆಶನ್‌ನಂಥ ಸಮಸ್ಯೆಗಳು ಬರಬಹುದು, ಇನ್ನೂ ಏನೇನೋ ಆಗಬಹುದು. 

ಸಂಸತ್ ಅಧಿವೇಶನದ ಮಧ್ಯೆ ಪೋರ್ನ್ ವೀಡಿಯೋ ವೀಕ್ಷಿಸಿದ ಸಂಸದ

‘ಪ್ರೊಟೆಕ್ಟಿವ್ ಪೇರೆಂಟ್ಸ್ ಆದ್ರೂ ಪರ‌್ವಾಗಿಲ್ಲ, ಆದರೆ ಓವರ್ ರಿಯಾಕ್ಟಿವ್ ಪೇರೆಂಟ್‌ಗಳಾದರೆ ಬಹಳ ಕಷ್ಟ.’ ಅಂತಾರೆ ಮನಃ ಶಾಸ್ತ್ರಜ್ಞೆ ಕಪಿಲಾ ಶ್ರೀಧರ್. ‘ತನಗರಿವಿಲ್ಲದೇ ಪೋರ್ನ್ ವೀಡಿಯೋ ನೋಡುವ ಚಟಕ್ಕೆ ಬಿದ್ದ ಮಕ್ಕಳಿಗೆ ಹೆತ್ತವರ ಓವರ್ ರಿಯಾಕ್ಷನ್‌ಗಳಿಂದ ಆಗುವ ಘಾಸಿ ಅಷ್ಟಿಷ್ಟಲ್ಲ. ಹಾಗಂತ ಮಗ ಅದನ್ನೆಲ್ಲ ನೋಡಲಿ ಅಂತ ಬಿಡೋದು ತಪ್ಪು. ಮೊದಲ ಬಾರಿಗೇ ಓವರ್ ರಿಯಾಕ್ಟ್ ಮಾಡೋದೂ ತಪ್ಪು. ಮತ್ತೇನು ಮಾಡಬಹುದು, 12ಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳಾದರೆ ನಿಧಾನಕ್ಕೆ ಮಕ್ಕಳ ಮನಸ್ಸನ್ನು ಇತರ ಚಟುವಟಿಕೆಗಳ ಕಡೆಗೆ ಸೆಳೆಯಬೇಕು. ಅವರಿನ್ನೂ ಪ್ರೌಢಾವಸ್ಥೆಗೆ ಬಂದಿಲ್ಲದ ಕಾರಣ ನಾವು ಅಂದುಕೊಂಡ ಹಾಗೆ ಅವರಿಂದ ಅತಿಯಾದ ಪ್ರತಿರೋಧ ಬರಲ್ಲ. ನಿಧಾನಕ್ಕೆ ಮಕ್ಕಳಿಗೆ ಅರ್ಥವಾಗುವ ಹಾಗೆ ಪೋರ್ನ್ ಅನ್ನುವುದು ಎಷ್ಟು ಕೃತಕ ಎನ್ನುವುದನ್ನು ತಿಳಿಸಬೇಕು. ಸಹಜ ಲೈಂಗಿಕತೆ ಬಗ್ಗೆ ತಿಳುವಳಿಕೆ ನೀಡಬೇಕು’ ಅಂತಾರವರು.

ಇಂಥ ಮಕ್ಕಳಿಗೆ ಪೋರ್ನ್ ಚಟವಾಗಲ್ಲ!
ಹನ್ನೆರಡಕ್ಕಿಂತ ಕೆಳ ವಯಸ್ಸಿನ ಮಕ್ಕಳಲ್ಲಿ ಪೋರ್ನ್ ಬಗ್ಗೆ ಕುತೂಹಲ ಬೆಳೆಯಲು ಮುಖ್ಯ ಕಾರಣ ಅವರಿಗೆ ಪ್ರೌಢ ದೇಹದ ಅಂಗಾಗಗಳ ಬಗ್ಗೆ ಪರಿಚಯ ಇಲ್ಲದಿರುವುದರಿಂದ. ಸಾಮಾನ್ಯ ಭಾರತೀಯ ಕುಟುಂಬಗಳಲ್ಲಿ ಗಂಡುಮಗುವಿಗೆ ಮೂರು ವರ್ಷಗಳಾಗುತ್ತಿದ್ದ ಹಾಗೆ ತಾಯಿ ಅದರೆದುರು ಬಟ್ಟೆ ಬದಲಾಯಿಸಲ್ಲ. ಮಗುವಿಗೆ ತಾಯಿಯ ದೇಹ ಹೇಗಿರುತ್ತೆ ಅನ್ನುವ ಅರಿವು ಇರಲ್ಲ.

ಅನ್‌ಲೈನ್ ಕ್ಲಾಸ್ ವೇಳೆ ಪ್ರಸಾರವಾದ ಪೋರ್ನ್ ವೀಡಿಯೋ, ಕಕ್ಕಾಬಿಕ್ಕಿಯಾದ ಮಕ್ಕಳು

ಹೆಣ್ಣು ಮಗುವಿಗೆ ತಂದೆಯ ದೇಹದ ಬಗೆಗೂ ಅರಿವಿರುವುದಿಲ್ಲ. ಹೀಗಾಗಿ ಕುತೂಹಲ ಬೆಳೆಯುತ್ತೆ. ವಿದೇಶಿ ಕುಟುಂಬಗಳಲ್ಲಿ ಒಂದು ಹೊಸ ಪದ್ಧತಿ ಜನಪ್ರಿಯವಾಗುತ್ತಿದೆ. ಅಪ್ಪ, ಅಮ್ಮ ಹಾಗೂ ಮಕ್ಕಳು ವಾರದಲ್ಲಿ ಒಂದು ದಿನ ಮನೆಯೊಳಗೆ ಬೆತ್ತಲಾಗಿರುತ್ತಾರೆ. ಇದರಿಂದ ಎಲ್ಲರ ದೇಹದ ಅಂಗಗಳ ಪರಿಚಯ ಮಕ್ಕಳಿಗಾಗುವ ಕಾರಣ ಅವರಲ್ಲಿ ಕೆಟ್ಟ ಕುತೂಹಲ ಬೆಳೆಯಲ್ಲ. ನಮ್ಮ ಕುಟುಂಬಗಳಲ್ಲಿ ಇದು ಕಷ್ಟ ಸಾಧ್ಯ. ‘ಮಕ್ಕಳಿಗೆ ಸ್ವಲ್ಪಮಟ್ಟಿಗಾದರೂ ಅಪ್ಪ, ಅಮ್ಮನ ದೇಹದ ಪರಿಚಯವಿರುವಂತೆ ನೋಡಿಕೊಳ್ಳೋದು ಬಹಳ ಮುಖ್ಯ. ಹೀಗೆ ಮಾಡಿದರೆ ಮಕ್ಕಳಿಗೆ ಪೋರ್ನ್ ವೀಡಿಯೋ ಚಟ ಅಂಟಿಕೊಳ್ಳಲ್ಲ.’ಅಂತಾರೆ ಕಪಿಲಾ. 

ಹದಿನಾರು ವರ್ಷದ ಹುಡುಗಿಗೆ ಅಬಾರ್ಶನ್ ಆಗುತ್ತೆ ಅಂದರೆ, ಈ ಮಕ್ಕಳು 10 ಹರೆಯದಲ್ಲಿ ಪೋರ್ನ್ ವೀಡಿಯೋ ನೋಡಿರುವ ಸಾಧ್ಯತೆ ಹೆಚ್ಚು. ಹಾಗಂತ ಸೆಕ್ಸ್ ಅಥವಾ ಪೋರ್ನ್ ಒಂದಲ್ಲ ಒಂದು ದಿನ ನಮಗೆ ಅರ್ಥ ಆಗಲೇಬೇಕು. ಆದರೆ ಸರಿಯಾದ ಸಮಯದಲ್ಲಿ ಆದರಷ್ಟೇ ಅದು ಆರೋಗ್ಯಕರ. ಮಕ್ಕಳು ಚಿಕ್ಕವಯಸ್ಸಿನಲ್ಲಿ ಪೋರ್ನ್ ಕಡೆ ವಾಲದಂತೆ ತಡೆಯುವ ಶಕ್ತಿ ಇರುವುದು ಹೆತ್ತವರಿಗೆ. ಮಕ್ಕಳಿಗೆ ಅರ್ಥವಾಗುವ ಹಾಗೆ ದೇಹದ ಭಾಗಗಳ ಬಗ್ಗೆ, ಅವುಗಳ ಕ್ರಿಯೆಗಳ ಬಗ್ಗೆ ವಿವರಿಸಿದರೆ ಅವರು ಖಂಡಿತಾ ಪೋರ್ನ್ ವೀಡಿಯೋ ನೋಡುವ ಆಸಕ್ತಿ ಬೆಳೆಸಿಕೊಳ್ಳಲಾರರು. - ಕಪಿಲಾ ಶ್ರೀಧರ್ ಮನಃಶಾಸ್ತ್ರಜ್ಞೆ


ಈ ವಿಚಾರ ಗಮನದಲ್ಲಿರಲಿ

  • ಮಗು ಸೆಕ್ಸ್ ವೀಡಿಯೋ ನೋಡುತ್ತಿರುವುದು ಗಮನಕ್ಕೆ ಬಂದರೆ ಕೂಗಾಡುವುದು, ರೇಗಾಡುವುದು, ಎಲ್ಲರೆದುರು ಮಾನ ಕಳೆಯುವುದು ಮಾಡಬೇಡಿ. ತಾಳ್ಮೆಯಿಂದ ಆ ವೀಡಿಯೋದಲ್ಲಿರುವುದೇನು ಅಂತ ವಿವರಿಸಿ, ಪೋರ್ನ್ ವೀಡಿಯೋಗಳ ಕೃತಕತೆ ಬಗ್ಗೆ ಮನದಟ್ಟು ಮಾಡಿ.
  • ಮಕ್ಕಳಿಗೆ ನಿಮ್ಮ ಬಳಿ ಸಂಶಯಗಳನ್ನು, ವಿಚಾರಗಳನ್ನು ಹೇಳಿಕೊಳ್ಳುವ ಅವಕಾಶ ಕೊಡಿ. ಅವರ ಜೊತೆಗೆ ಮುಕ್ತ ಮನಸ್ಸಿನಿಂದ
  • ಮಾತನಾಡಿ.
  • ಹನ್ನೆರಡಕ್ಕಿಂತ ಕೆಳಗಿನ ಮಕ್ಕಳೆದುರು ದೇಹದ ಬಗ್ಗೆ ಮುಚ್ಚುಮರೆ ಬೇಡ. ಅವರಿಗೆ ಪ್ರೌಢ ದೇಹದ ಭಾಗಗಳ ಬಗ್ಗೆ ಅರಿವಿರಲಿ, ಅಸುರಕ್ಷತಾ ಭಾವ ಬೆಳೆಯದಿರಲಿ. ಮಗುವಿಗೆ ದಿನದ ಅಷ್ಟೂ ಹೊತ್ತು ಮೈತುಂಬ ಬಟ್ಟೆ ಹಾಕಿಕೊಂಡೇ ಇರುವಂತೆ ರಿಸ್ಟ್ರಿಕ್ಟ್ ಮಾಡಬೇಡಿ.
  • ಲೈಂಗಿಕ ಅಂಗಗಳ ಬಗ್ಗೆ ಆಡುಭಾಷೆಯಲ್ಲೇ ಮುಕ್ತವಾಗಿ ಮಾತನಾಡಿ, ಆ ಬಗ್ಗೆ ಮಡಿವಂತಿಕೆ ಬೇಡ. ಆಗ ಮಕ್ಕಳಿಗೆ ಇಂಥ ವಿಷಯದ ಬಗ್ಗೆ ಮಾತನಾಡಲು ಸಂಕೋಚವಾಗುವುದಿಲ್ಲ.

ಟೀನ್ ಪ್ರಗ್ನೆನ್ಸಿ ಭಾರತದಲ್ಲಿ ಹೆಚ್ಚಾಗ್ತಿದೆ!
ಹತ್ತರ ವಯಸ್ಸಲ್ಲಿ ಸೆಕ್ಸ್ ವೀಡಿಯೋ ನೋಡುವ ಮಗು ಹದಿಹರೆಯಕ್ಕೆ ತಲುಪುವಾಗ ತನ್ನ ದೇಹದ ಬಗ್ಗೆ ನಿಯಂತ್ರಣ ಸಾಧಿಸೋದು ಕಷ್ಟವಾಗುತ್ತೆ. ಹುಡುಗರಲ್ಲಿ ಅವಧಿಗೂ ಮುನ್ನವೇ ಪ್ರೌಢತ್ವದ ಲಕ್ಷಣಗಳು ಕಾಣಿಸುತ್ತವೆ. ಹೀಗಾದಾಗ ಬಹಳ ಬೇಗ ಲೈಂಗಿಕ ಅನುಭವಗಳಿಗೆ ತೆರೆದುಕೊಳ್ಳುತ್ತಾರೆ. ಇಂಥ ಕೇಸ್‌ಗಳಲ್ಲಿ ಹುಡುಗಿಯರು ಹದಿಹರೆಯದಲ್ಲೇ ಗರ್ಭಧರಿಸುವುದು ಸಾಮಾನ್ಯ. ಸುಮಾರು 16ಕ್ಕೆಲ್ಲ ಹುಡುಗಿ ಮೊದಲ ಅಬಾರ್ಶನ್ ಕಾಣುತ್ತಾಳೆ. ಇದಕ್ಕಿಂತ ದುರಂತ ಏನಿದೆ..

click me!