ಬೆಂಗಳೂರಿನಲ್ಲಿ ಹಂದಿ ಜ್ವರ- 109 ಪ್ರಕರಣ ಪತ್ತೆ!

By Web DeskFirst Published Oct 12, 2018, 9:46 AM IST
Highlights

ಬಿಬಿಎಂಪಿ ವ್ಯಾಪ್ತಿಯಲ್ಲಿ ಎಚ್‌1ಎನ್‌1 ಪ್ರಕರಣಗಳು ಹೆಚ್ಚಾಗಿದೆ. ಪಾಲಿಕೆಯ ಎಲ್ಲ ಆರೋಗ್ಯ ಪ್ರಾಥಮಿಕ ಕೇಂದ್ರಗಳಲ್ಲಿ ಹಂದಿ ಜ್ವರ ಮಾತ್ರೆ ಹಾಗೂ ಚಿಕಿತ್ಸೆಗೆ ಎಲ್ಲಾ ತಯಾರಿ ಮಾಡಿಕೊಳ್ಳುವಂತೆ ಮೇಯರ್ ಸೂಚಿಸಿದ್ದಾರೆ.

ಬೆಂಗಳೂರು(ಅ.12):  ನಗರದಲ್ಲೂ ಎಚ್‌1ಎನ್‌1 ಪ್ರಕರಣಗಳು ಹೆಚ್ಚತೊಡಗಿದ್ದು, ಸೆಪ್ಟಂಬರ್‌ ಆರಂಭದಿಂದ ಈವರೆಗೆ ನಗರದಲ್ಲಿ ಒಟ್ಟು 109 ಪ್ರಕರಣಗಳು ಪತ್ತೆಯಾಗಿರುವುದಾಗಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮಾಹಿತಿ ನೀಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಖಾಸಗಿ ಹಾಗೂ ಸರ್ಕಾರ ಆಸ್ಪತ್ರೆಗಳಿಂದ ಈ ಮಾಹಿತಿ ಲಭ್ಯವಾಗಿದ್ದು, ಮಹದೇವಪುರ ವಲಯ ಒಂದರಲ್ಲೇ ಅತಿ ಹೆಚ್ಚು 43 ಎಚ್‌1 ಎನ್‌1 ಪ್ರಕರಣಗಳು ಬೆಳಕಿಗೆ ಬಂದಿವೆ. ಉಳಿದಂತೆ ಪೂರ್ವ ವಲಯದಲ್ಲಿ 22, ದಕ್ಷಿಣ ವಲಯದಲ್ಲಿ 17, ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರ ವಲಯಗಳಲ್ಲಿ ತಲಾ 7, ಪಶ್ಚಿಮ, ಯಲಹಂಕ ವಲಯಗಳಲ್ಲಿ ತಲಾ 6 ಮತ್ತು ದಾಸರಹಳ್ಳಿ ವಲಯದಲ್ಲಿ 1 ಪ್ರಕರಣಗಳು ಪತ್ತೆಯಾಗಿವೆ.

ಆದರೆ, ಸಮಾಧಾನಕರ ವಿಚಾರವೆಂದರೆ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಾಲಿನಲ್ಲಿ ಕಂಡುಬಂದಿರುವ ಎಚ್‌1ಎನ್‌1 ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಹಾಗಾಗಿ ನಗರದ ನಾಗರಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಪಾಲಿಕೆ ವೈದ್ಯಾಧಿಕಾರಿಗಳು ಹೇಳಿದ್ದಾರೆ.

ಮೇಯರ್‌ ಸಭೆ:
ಎನ್‌1ಎನ್‌1 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಮೇಯರ್‌ ಗಂಗಾಂಬಿಕೆ ಪಾಲಿಕೆ ಆರೋಗ್ಯಾಧಿಕಾರಿಗಳ ಸಭೆ ನಡೆಸಿ ರೋಗ ನಿಯಂತ್ರಣಕ್ಕೆ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ಎಚ್‌1ಎನ್‌1 ಸೋಂಕು ಕಂಡುಬಂದ ರೋಗಿಗಳ ಹತ್ತಿರರ ಸಂಬಂಧಿಕರು, ಕುಟುಂಬಸ್ಥರನ್ನು ಭೇಟಿ ಮಾಡಿ ರೋಗ ಹರಡುವಿಕೆ ನಿಯಂತ್ರಿಸುವ ಸಲಹೆ ನೀಡಿ, ಪಾಲಿಕೆಯ ಎಲ್ಲ ಆರೋಗ್ಯ ಪ್ರಾಥಮಿಕ ಕೇಂದ್ರಗಳಲ್ಲಿ ಮಾತ್ರೆಗಳನ್ನು ಸಾಕಷ್ಟುಪ್ರಮಾಣದ ದಾಸ್ತಾನು ಮಾಡಿಟ್ಟುಕೊಳ್ಳುವಂತೆ ಸೂಚಿಸಿದರು. ಈ ರೋಗ ಸಂಬಂಧಿ ಮಾಹಿತಿಯನ್ನು ಕರಪತ್ರಗಳಲ್ಲಿ ಮುದ್ರಿಸಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಹಾಗೂ ಮನೆ ಸಮೀಕ್ಷೆ ವೇಳೆ ಹಂಚುವಂತೆ ಸೂಚಿಸಿದ್ದಾರೆ.

ರೋಗದ ಲಕ್ಷಣಗಳು:
ತೀವ್ರ ಸ್ವರೂಪದ ಜ್ವರ, ಕೆಮ್ಮು ಮತ್ತು ಹಳದಿ ಕಫ, ಅತಿಯಾದ ಭೇದಿ-ವಾಂತಿ, ಮೈಕೈ ನೋವು, ನೆಗಡಿ ಮತ್ತು ಗಂಟಲು ಕೆರೆತ, ಉಸಿರಾಟದ ತೊಂದರೆಯಂತಹ ಸಮಸ್ಯೆಗಳಿದ್ದರೆ ಅದು ಎಚ್‌1 ಎನ್‌1 ಲಕ್ಷಣಗಳಿರಬಹುದು. ಇಂತಹ ಸಂದರ್ಭದಲ್ಲಿ ಕೂಡಲೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಹೋಗಿ ಸೂಕ್ತ ಚಿಕಿತ್ಸೆ ಹಾಗೂ ತಪಾಸಣೆಗೆ ಒಳಗಾಗುವಂತೆ ಪಾಲಿಕೆ ಆರೋಗ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ.

ಎಚ್ಚರಿಕೆ: ಎನ್‌1 ಎನ್‌1ಸೋಂಕು ನಿಯಂತ್ರಿಸುವ ದೃಷ್ಟಿಯಿಂದ ಕೆಮ್ಮುವಾಗ, ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರದಿಂದ ಅಥವಾ ಟಿಶ್ಯೂಕಾಗದದಿಂದ ಮುಚ್ಚಿಕೊಳ್ಳಿ. ಮೂಗು, ಕಣ್ಣು, ಬಾಯಿಯನ್ನು ಮುಟ್ಟಿಕೊಳ್ಳುವ ಮೊದಲು ಕೈಗಳನ್ನು ಸಾಬೂನು ಬಳಸಿ ತೊಳೆದುಕೊಳ್ಳಬೇಕು. ಚೆನ್ನಾಗಿ ನಿದ್ರೆ ಮಾಡಿ, ಚಟುವಟಿಕೆಯಿಂದ ಇರಬೇಕು. ಒತ್ತಡವನ್ನು ಪರಿಣಾಮಕಾರಿಯಾಗಿ ನಿಭಾಯಿಸಬೇಕು. ಧಾರಾಳವಾಗಿ ನೀರು ಕುಡಿಯಿರಿ, ಪೌಷ್ಠಿಕಾಂಶವಿರುವ ಆಹಾರವನ್ನು ಹೆಚ್ಚಾಗಿ ಸೇವಿಸಿ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಲಿದೆ. 

ಅನಾವಶ್ಯಕವಾಗಿ ಜನಸಂದಣಿ ಪ್ರದೇಶಕ್ಕೆ ಹೋಗಬೇಡಿ, ಹೋದರೂ ಮಾಸ್ಕ್‌ ಧರಿಸುವುದು, ಹಸ್ತಲಾಘವ, ತಬ್ಬುವ ಮೂಲಕ ಶುಭ ಕೋರುವುದು ಬೇಡ, ರೋಗ ಲಕ್ಷಣವಿರುವವರಿಂದ 1 ಮೀಟರ್‌ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

click me!