ರಾತ್ರಿ ನಿದ್ದೆ ಕಡಿಮೆಯಾದರೆ ಶುರುವಾಗುತ್ತೆ ಹೈಪರ್ ಟೆನ್ಷನ್; ಜೋಕೆ!

By Web DeskFirst Published Aug 24, 2019, 3:19 PM IST
Highlights

ನೀವು ವೈಯಕ್ತಿಕ ಹಾಗೂ ಔದ್ಯೋಗಿಕ ಬದುಕಿನ ನಡುವೆ ಉತ್ತಮ ಬ್ಯಾಲೆನ್ಸ್ ಸಾಧಿಸಿರಬಹುದು. ಆದರೆ ನಿದ್ರೆ ಸರಿಯಾಗಿ ಮಾಡಲಾಗುತ್ತಿಲ್ಲವೆಂದರೆ, ಯಾವುದರಲ್ಲೂ ಸಮಾಧಾನ ಸಿಗದು. ಅಲ್ಲದೆ, ಅನಾರೋಗ್ಯಗಳು ನಿಮ್ಮನ್ನು ಸಮಾಧಾನವಾಗಿರಲೂ ಬಿಡವು. 

ಪ್ರತಿಯೊಬ್ಬರಿಗೂ ಪ್ರತಿ ದಿನ 8 ಗಂಟೆ ನಿದ್ರೆ ಅವಶ್ಯಕ ಎಂಬುದು ನಮ್ಮಲ್ಲಿ ಬಹುತೇಕರಿಗೆ ಗೊತ್ತು. ಆದರೆ, ಎಷ್ಟು ಜನರಿಗೆ ಅಷ್ಟು ಹೊತ್ತು ನಿದ್ರಿಸಲು ಸಾಧ್ಯ? ನಮ್ಮ ಬ್ಯುಸಿ ಲೈಫ್‌ನಲ್ಲಿ, ಹೆಕ್ಟಿಕ್ ಶೆಡ್ಯೂಲ್‌ನಲ್ಲಿ 8 ಗಂಟೆಗಳು ನಿದ್ರೆಗಾಗಿ ಉಳಿಯಿತೆಂದರೆ ಅದೃಷ್ಟವೆಂದೇ ತಿಳಿಯಬೇಕು. ಆದರೆ, ಹಾಗೆ ಸಮಯ ಸಿಕ್ಕಾಗ ಕೆಲಸದ ಒತ್ತಡದಿಂದ ನುಜ್ಜುಗುಜ್ಜಾದ ಮನಸ್ಸಿಗೆ ಸ್ವಲ್ಪ ಎಂಟರ್‌ಟೇನ್‌ಮೆಂಟ್ ಬೇಕೆನಿಸುತ್ತದೆ.

ಹೀಗಾಗಿ, ನೆಟ್‌ಫ್ಲಿಕ್ಸ್ ಅಥವಾ ಅಮೇಜಾನ್ ಪ್ರೈಮ್‌ನಲ್ಲಿ ಒಂದು ಮೂವಿ ನೋಡೋಣ ಎಂದು ಕೂರುವುದೋ ಅಥವಾ ಪುಸ್ತಕ ಓದೋಣವೆಂದು ಕುಳಿತುಬಿಡುತ್ತೇವೆ. ಇಲ್ಲವೇ ಒಂದು ಲಾಂಗ್ ಡ್ರೈವ್ ಹೋಗುತ್ತೀರಿ. ಮರುದಿನ ಮತ್ತೆ ರೆಸ್ಟ್ ಮಾಡಲು ಸಮಯವಿಲ್ಲದಂತೆ ಕಚೇರಿಗೆ ಓಡಬೇಕು. ಒಟ್ಟಿನಲ್ಲಿ ನಿದ್ರೆಯೆಂಬುದು ಬಹುತೇಕರಿಗೆ ಬೇಕೆಂದಷ್ಟೂ ದೂರ ಓಡುವ, ಸಿಕ್ಕರೂ ಸಿಗದ, ಮಾಡಿದರೂ ಸಮಾಧಾನ ನೀಡದ ಮಾಯಾಜಿಂಕೆಯಾಗಿದೆ. ಇದರಿಂದ ನಮ್ಮ ನಿದ್ರಾ ವಿನ್ಯಾಸಕ್ಕೆ ಭಂಗ ಬರುವುದಲ್ಲದೆ, ಹಲವಾರು ಅನಾರೋಗ್ಯಗಳಿಗೂ ನಾಂದಿ ಹಾಡಿದಂತಾಗುತ್ತದೆ. 

ದಿಂಬು ಇದ್ದರೆ ಸುಖ, ಇಲ್ಲದಿದ್ದರೆ ಆರೋಗ್ಯ...ಯಾವುದು ನಿಮ್ಮ ಆಯ್ಕೆ?

1. ಬೆಳಗಿನ ಹೊತ್ತು ನಿದ್ರೆ ಆವರಿಸುತ್ತದೆ

ರಾತ್ರಿ ಸಾಕಷ್ಟು ನಿದ್ರೆಯಾಗದ ಕಾರಣ ಬೆಳಗಿನ ಹೊತ್ತು ನಿದ್ರೆ ಆವರಿಸುತ್ತಿದೆ ಎಂದರೆ ಅದೇನು ಅಂಥ ಅನಾರೋಗ್ಯವಲ್ಲ ಎಂದು ನಿಮಗೆನಿಸಬಹುದು. ಆದರೆ, ಇಡೀ ದಿನ ಆಕಳಿಸುತ್ತಾ ಕೂತರೆ, ಯಾರು ತಾನೇ ನಿಮ್ಮ ಬಳಿ ಬರಲು ಬಯಸುತ್ತಾರೆ? ಬಾಸ್‌ಗೆ ಕೂಡಾ ನಿಮ್ಮ ಕುರಿತ ಅಭಿಪ್ರಾಯ ಕೆಟ್ಟು ಹೋಗುತ್ತದೆ. ಕೆಲಸದಲ್ಲೂ ಏಕಾಗ್ರತೆ ಸಾಧಿಸಲಾಗದು. ಇದರಿಂದ ಉದ್ಯೋಗ ಹಾಗೂ ಓದಿನಲ್ಲಿ ಹಿಂದುಳಿಯುವಿಕೆ, ಸಾಮಾಜಿಕ ಜೀವನ ಹಾಳಾಗುವುದು, ಆ್ಯಕ್ಸಿಡೆಂಟ್ ಮುಂತಾದ ಸಮಸ್ಯೆಗಳಾಗುತ್ತವೆ. 

2. ರೋಗ ನಿರೋಧಕ ವ್ಯವಸ್ಥೆ ಅಸ್ತವ್ಯಸ್ತ

ನಿದ್ರೆ ಕಡಿಮೆಯಾದರೆ ದೇಹದ ಪ್ರತಿಯೊಂದು ಕೋಶ, ಅಂಗಗಳೂ ಸುಸ್ತಾಗುತ್ತವೆ. ಯಾವುದು ಕೂಡಾ ಪೂರ್ತಿ ನಿಷ್ಠೆಯಿಂದ ಕೆಲಸ ಮಾಡಲಾರದೆ ಸೋಲುತ್ತವೆ. ರೋಗ ನಿರೋಧಕ ವ್ಯವಸ್ಥೆ ಕೂಡಾ ಸರಿಯಾಗಿ ಕೆಲಸ ಮಾಡಲಾರದು. ಇದರಿಂದ ಇನ್ಫೆಕ್ಷನ್ ಹಾಗೂ ವೈರಸ್‌ಗಳ ವಿರುದ್ಧ ಹೋರಾಡುವಲ್ಲಿ ಸೋಲಲಾರಂಭಿಸುತ್ತದೆ. ಕಾಯಿಲೆಗಳು ನಿಮ್ಮನ್ನು ಹೆಚ್ಚು ಗಟ್ಟಿಯಾಗಿ ತಬ್ಬಿಕೊಳ್ಳಲು ದಾರಿಯಾಗುತ್ತದೆ. 

ತಲೆ ಬುಡದಲ್ಲಿ ಇದನ್ನೆಲ್ಲ ಇಟ್ಕೊಂಡ್ರೆ ಕಾಡುತ್ತೆ ಮನೋರೋಗ!

3. ಡಿಹೈಡ್ರೇಶನ್

ನಾವು ಚೆನ್ನಾಗಿ ನಿದ್ರಿಸಿದಾಗ ದೇಹವು ಹೈಡ್ರೇಶನ್ ಮಟ್ಟ ನಿರ್ವಹಿಸುವ ಹಾರ್ಮೋನ್ ಬಿಡುಗಡೆ ಮಾಡುತ್ತದೆ. ಆದರೆ, ನಿದ್ರೆ ಕಡಿಮೆಯಾದಾಗ ಈ ಹಾರ್ಮೋನ್ ರಿಲೀಸ್ ಆಗದೆ ದೇಹ ಡಿಹೈಡ್ರೇಶನ್‌ಗೊಳಗಾಗುತ್ತದೆ. 

4. ನಿದ್ರಾನಡಿಗೆ

ಸ್ಲೀಪ್ ವಾಕಿಂಗ್ ಸಮಸ್ಯೆ ಇರುವವರನ್ನು ನೋಡಿದಾಗ, ನಿದ್ದೆ ಹೆಚ್ಚಾಗಿ ನಿದ್ದೆಯಲ್ಲಿ ನಡೆದದ್ದು ಅವರ ಅರಿವಿಗೇ ಬರಲಿಲ್ಲ ಎನಿಸಬಹುದು. ಆದರೆ, ಸ್ಲೀಪ್ ವಾಕಿಂಗ್‌ಗೆ ಮೊದಲ ಕಾರಣವೇ ನಿದ್ರಾಹೀನತೆ! ಈ ನಿದ್ರಾನಡಿಗೆಯಲ್ಲಿ ಹಲವು ಆ್ಯಕ್ಸಿಡೆಂಟ್‌ಗಳು ಕೂಡಾ ಆಗುತ್ತವೆ. 

ಸೌಂಡ್ ಸ್ಲೀಪ್‌ಗೆ ಹೀಗೆ ಮಾಡಿ ಎನ್ನುತ್ತದೆ ವಾಸ್ತು ಶಾಸ್ತ್ರ

5. ಆತಂಕ

ಮಾನಸಿಕ ಸ್ವಸ್ಥತೆ ಯಾವಾಗಲು ನಮ್ಮ ಪ್ರಾಮುಖ್ಯತೆಯಾಗಿರಬೇಕು. ಇಲ್ಲದಿದ್ದಲ್ಲಿ ಅದು ನಮ್ಮ ಬದುಕನ್ನೇ ನಾಶ ಮಾಡಬಲ್ಲದು. ನಿದ್ರಾಹೀನತೆಯು ಈ ಮಾನಸಿಕ ಆರೋಗ್ಯಕ್ಕೆ ಧಕ್ಕೆ ತರುತ್ತದೆ. ನಿದ್ರೆ ಕಡಿಮೆಯಾಗುವುದರಿಂದಲೇ ನೆಗೆಟಿವ್ ಥಿಂಕಿಂಗ್ ಹೆಚ್ಚಾಗುತ್ತದೆ, ಸಣ್ಣಪುಟ್ಟದ್ದಕ್ಕೂ ಕಿರಿಕಿರಿ, ಸಿಟ್ಟು, ಅಳು, ಭಯ ಶುರುವಾಗುತ್ತದೆ. ಆತಂಕ ಹಾಗೂ ಖಿನ್ನತೆಗೂ ಇದು ಕಾರಣವಾಗುತ್ತದೆ. ಇನ್ನು ಮೊದಲೇ ಖಿನ್ನತೆ ಅಥವಾ ಇನ್ನಾವುದೇ ಮಾನಸಿಕ ಸಮಸ್ಯೆಗಳಿದ್ದಲ್ಲಿ ಸರಿಯಾಗಿ ನಿದ್ರೆ ಮಾಡಲಿಲ್ಲವೆಂದರಂತೂ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. 

6. ಹೃದಯದ ಸಮಸ್ಯೆಗಳು

ನಿಮಗೆ ಭಯ ಪಡಿಸಬೇಕೆಂದು ಹೇಳುತ್ತಿಲ್ಲ. ಆದರೆ, ಸಿಗರೇಟು, ಮದ್ಯ ಚಟಗಳಿಲ್ಲದೆಯೂ, ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದಾಗಿಯೂ, ವಯಸ್ಸಿನ ಹಂಗಿಲ್ಲದೆಯೂ ನಿದ್ರೆಯ ಕೊರತೆಯು ಹೃದಯದ ಸಮಸ್ಯೆಗಳಿಗೆ ಕಾರಣವಾಗಬಲ್ಲದು. 

7.ಡಯಾಬಿಟೀಸ್

ನಂಬಲು ಕಷ್ಟವಾಗಬಹುದು. ಆದರೆ, 7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವುದರಿಂದ ಟೈಪ್ 2 ಡಯಾಬಿಟೀಸ್ ಬರುವ ಸಾಧ್ಯತೆ ಪ್ರತಿ ಗಂಟೆಗೆ ಶೇ.9ರಷ್ಟು ಹೆಚ್ಚು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. 

8. ಬೆನ್ನುನೋವು

ಸರಿಯಾಗಿ ನಿದ್ರೆಯಾಗದಿದ್ದರೆ ದೇಹದ ಅಂಗಗಳಿಗೆ ಬೇಕಾಗುವಷ್ಟು ರೆಸ್ಟ್ ಸಿಗುವುದಿಲ್ಲ. ಆಗ ಅವು ತಮ್ಮ ಸಿಟ್ಟನ್ನು ವ್ಯಕ್ತಪಡಿಸದೆ ಬಿಡಲಾರವು. ಅದರಲ್ಲೂ ದೇಹದ ದೊಡ್ಡ ಭಾಗವಾಗಿರುವ ಬೆನ್ನು ನೀ ನನಗಾದರೆ ನಾ  ನಿನಗೆ ಎಂದು ನೋವಿನ ಮೂಲಕ ತೋರಿಸಿಕೊಡುತ್ತದೆ. 

9. ಬೊಜ್ಜು

ರಾತ್ರಿ ಹೆಚ್ಚು ಹೊತ್ತು ಕುಳಿತಷ್ಟೂ ನೀವು ಚಿಪ್ಸ್, ಹಾಳುಮೂಳು ತಿನ್ನುವ ಸಾಧ್ಯತೆ ಹೆಚ್ಚು. ಇದು ನಿಧಾನವಾಗಿ ದೇಹದ ಬೊಜ್ಜಿಗೆ ಕಾರಣವಾಗುತ್ತದೆ. 

ನಿದ್ರೆಗೆ ಭಂಗ ತರೋ ಆ್ಯಪ್ಸ್ ಗೊತ್ತು, ಜೋಗುಳ ಹಾಡಿ ಮಲಗಿಸೋ ಆ್ಯಪ್ಸ್?

10. ಹೈಪರ್‌ಟೆನ್ಷನ್

ವಾರಕ್ಕೆ ಎರಡು ದಿನವಾದರೂ 5 ಗಂಟೆಗಳಿಗಿಂತ ಕಡಿಮೆ ನಿದ್ರಿಸುವವರು ಹೈಪರ್‌ಟೆನ್ಷನ್‌ಗೆ ಒಳಗಾಗುವ ಸಾಧ್ಯತೆ ಹೆಚ್ಚು. ಹೈ ಬಿಪಿಯು ಹಾರ್ಟ್ ಅಟ್ಯಾಕ್, ಮೆಟಾಬಾಲಿಕ್ ಸಿಂಡ್ರೋಮ್ ಮುಂತಾದವಕ್ಕೆ ಎಡೆ ಮಾಡುತ್ತದೆ. 

11.ಮರೆವು

ನಿದ್ರೆಯ ಕೊರತೆಯಿಂದಾಗಿ ಮೆದುಳಿನಲ್ಲಿ ಬೀಟಾ- ಅಮಿಲಾಯ್ಡ್ ಪ್ರೋಟೀನ್ ಹೆಚ್ಚಾಗಿ ಶೇಖರಣೆಯಾಗತೊಡಗುತ್ತದೆ. ಧೀರ್ಘಕಾಲದಲ್ಲಿ ಇದರಿಂದ ನೀವು ಮರೆವಿನ ಕಾಯಿಲೆಗಳಾದ ಡಿಮೆನ್ಷಿಯಾ ಹಾಗೂ ಅಲ್ಜೀಮರ್ಸ್‌ನಿಂದ ಬಳಲಬೇಕಾಗಬಹುದು. ಮೆದುಳಿನಲ್ಲಿ ಬೀಟಾ-ಅಮಿಲಾಯ್ಡ್ ಹೆಚ್ಚಿರುವವರು ಮೆಮೋರಿ ಟೆಸ್ಟ್‌ಗಳಲ್ಲಿ ಸೋಲುವುದೇ ಹೆಚ್ಚು. 
 

click me!