ಸುಳ್ವಾಡಿ ವಿಷ ದುರಂತ: ದೇವಳ ಬಾಗಿಲು ತೆರೆಯಲು ಹೆಚ್ಚಿದ ಒತ್ತಡ

By Kannadaprabha NewsFirst Published Dec 14, 2019, 11:07 AM IST
Highlights

ಸುಳ್ವಾಡಿ ವಿಷ ಪ್ರಸಾದ ದುರಂತ ನಡೆದು ಒಂದು ವರ್ಷವಾಗಿದೆ. ಗೋಪುರ ನಿರ್ಮಾಣಕ್ಕಾಗಿ ಭೂಮಿ ಪೂಜೆ ಸಂದರ್ಭ ಭಕ್ತರಿಗೆ ವಿಷವಿಕ್ಕಿ 17 ಜನರನ್ನು ಬಲಿ ಪಡೆದು ದೇಶವಷ್ಟೇ ಅಲ್ಲದೇ ಜಾಗತಿಕ ಮಟ್ಟದಲ್ಲಿ ಸುದ್ದಿಯಾದ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ವಿಷ ಪ್ರಸಾದ ದುರಂತಕ್ಕೆ ಇಂದಿಗೆ 1 ವರ್ಷ. ದುರಂತ ನಡೆದು ಮುಚ್ಚಲ್ಪಟ್ಟಿದ್ದ ದೇವಸ್ಥಾನ ತೆರೆಯಬೇಕೆಂದು ಭಕ್ತರ ಒತ್ತಾಯ ಹೆಚ್ಚಾಗಿದೆ.

ಚಾಮರಾಜನಗರ(ಡಿ.14): ಗೋಪುರ ನಿರ್ಮಾಣಕ್ಕಾಗಿ ಭೂಮಿ ಪೂಜೆ ಸಂದರ್ಭ ಭಕ್ತರಿಗೆ ವಿಷವಿಕ್ಕಿ 17 ಜನರನ್ನು ಬಲಿ ಪಡೆದು ದೇಶವಷ್ಟೇ ಅಲ್ಲದೇ ಜಾಗತಿಕ ಮಟ್ಟದಲ್ಲಿ ಸುದ್ದಿಯಾದ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ವಿಷ ಪ್ರಸಾದ ದುರಂತಕ್ಕೆ ಇಂದಿಗೆ 1 ವರ್ಷ.

ಹನೂರು ತಾಲೂಕಿನ ಕಾಡಂಚಿನ ಗ್ರಾಮವಾದ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇಗುಲದ ಗೋಪುರ ನಿರ್ಮಾಣದ ಗುದ್ದಲಿ ಪೂಜೆಯಲ್ಲಿ ವಿತರಿಸಿದ ವಿಷಮಿಶ್ರಿತ ಪ್ರಸಾದ ಸೇವಿಸಿ 124 ಮಂದಿ ಅಸ್ವಸ್ಥರಾಗಿ 17 ಮಂದಿ ಅಸುನೀಗಿದ್ದ ಘಟನೆಗೆ ಒಂದು ವರ್ಷವಾಗುತ್ತಿದ್ದು ಭಕ್ತರ ಮೊಗದಲ್ಲಿ ನೀರವ ಮೌನ ಆವರಿಸಿದೆ.

ಸುಳ್ವಾಡಿ: ದೇಗುಲ ಮೇಲಿನ ಹಿಡಿತಕ್ಕಾಗಿ ಪ್ರಸಾದಕ್ಕೆ ವಿಷ

ಘಟನೆಯಿಂದಾಗಿ ದುಡಿಯುತ್ತಿದ್ದ ಮಗ, ಸಲಹುತ್ತಿದ್ದ ತಾಯಿ-ತಂದೆ, ಪ್ರೀತಿಯ ಅಜ್ಜ, ಹುಟ್ಟುಹಬ್ಬದ ದಿನವೇ ತೀರಿಕೊಂಡ ಮಗು, ರೋಗಿಷ್ಟಮಗನ ಆರೋಗ್ಯಕ್ಕಾಗಿ ಬೇಡಲು ಹೋದ ತಾಯಿ ಮಸಣ ಸೇರಿದ್ದು. ಹೀಗೆ ಮೃತಪಟ್ಟ17 ಮಂದಿಯ ಹಿಂದಿರುವ ಕರುಣಾಜನಕ ಕಥೆಗೆ ಇಂದಿಗೂ ಅವರ ಕುಟುಂಬಸ್ಥರು ಮರುಗುತ್ತಿದ್ದಾರೆ. ಕುಟುಂಬದ ಆಧಾರವೇ ಕಳೆದುಕೊಂಡು ಕಂಗಾಲಾಗಿರುವ ಸಂತ್ರಸ್ಥರ ಕುಟುಂಬಕ್ಕೆ ಸರ್ಕಾರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ.

ಮಧ್ಯ ವಯಸ್ಕರೇ ಹೆಚ್ಚಿನ ಮಂದಿ ಸಂತ್ರಸ್ಥರಾಗಿರುವುದರಿಂದ ವಿಷ ಸೇವಿಸಿ ಮಾನಸಿಕ ಆಘಾತಕ್ಕೆ ಒಳಗಾಗಿದ್ದು ಔಷಧೋಪಚಾರಕ್ಕಿಂತ ಮಾನಸಿಕ ಶಾಂತಿಯನ್ನು ಬೇಡುತ್ತಿದ್ದು ಪ್ರಸಾದ ಸೇವಿಸಿ ಅಸ್ವಸ್ಥರಾದವರಲ್ಲಿ ಬಹುತೇಕರು ಕೂಲಿಗೆ ಹೋಗುವುದನ್ನೇ ಬಿಟ್ಟಿದ್ದು ನಿತ್ಯವೂ ನರಕಯಾತನೆ ಅನುಭವಿಸುತ್ತಿದ್ದಾರೆ.

ಚಿನ್ನಪ್ಪಿ ಮೈಮೇಲೆ ‘ಮಾರಮ್ಮ’? ಬಾಯ್ಬಿಟ್ರು ಸ್ಫೋಟಕ ಮಾಹಿತಿ!

ಜಿಲ್ಲಾಡಳಿತ ಆಯುಷ್‌ ಮೂಲಕ ಕ್ಯಾಂಪ್‌ಗಳನ್ನು ಆಯೋಜಿಸಿ ಆಪ್ತ ಸಮಾಲೋಚನೆ ನಡೆಸುವ ಕೆಲಸ ಮಾಡುತ್ತಿದ್ದರೂ ಫಲಪ್ರದವಾಗುತ್ತಿಲ್ಲ. ಒಟ್ಟಿನಲ್ಲಿ ಭಕ್ತರ ನಂಬಿಕೆಗೆ ಕೊಳ್ಳಿಯಿಟ್ಟಪ್ರಕರಣದಲ್ಲಿ ನಾಲ್ವರು ಅರೋಪಿಗಳು ನ್ಯಾಯಾಂಗ ಬಂಧನದ ವಶದಲ್ಲಿದ್ದು, ಸುಪ್ರೀಂ ಕದ ತಟ್ಟಿದ್ದರೂ ಮೊದಲನೇ ಆರೋಪಿಗೆ ಜಾಮೀನು ಸಿಕ್ಕಿಲ್ಲ. ಭಕ್ತರಿಗೆ ಮಾರಮ್ಮನ ದರ್ಶನವಿಲ್ಲ, ಸಂತ್ರಸ್ಥರಿಗೆ ಜಮೀನು, ನಿವೇಶನ ಸಿಕ್ಕಿಲ್ಲ.

ಘಟನೆ ನಡೆದಿದ್ದು ಹೀಗೆ:

2018ರ ಡಿಸೆಂಬರ್‌ 14ರಂದು ಗೋಪುರಕ್ಕೆ ಭೂಮಿಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಾಲೂರು ಮಠದ ಪೀಠಾಧ್ಯಕ್ಷ ಗುರುಸ್ವಾಮಿ ಅವರು ಕಾರ್ಯಕ್ರಮಕ್ಕೆ ಬಂದಿದ್ದರು. ಇಮ್ಮಡಿ ಮಹದೇವಸ್ವಾಮಿ ಬಂದಿರಲಿಲ್ಲ.

ಕಾರ್ಯಕ್ರಮದ ಬಳಿಕ ದೇವಾಲಯಕ್ಕೆ ಬಂದ ಭಕ್ತರಿಗೆ ತರಕಾರಿ ಬಾತ್‌ ಅನ್ನು ಪ್ರಸಾದವಾಗಿ ವಿತರಿಸಲಾಗಿತ್ತು. ಸುತ್ತಮುತ್ತಲಿನ ಊರುಗಳಿಂದ ಬಂದಿದ್ದ 130ಕ್ಕೂ ಹೆಚ್ಚು ಭಕ್ತರು ಪ್ರಸಾದ ಸ್ವೀಕರಿಸಿದ್ದರು. ಅದಾದ ಸ್ವಲ್ಪ ಹೊತ್ತಿನಲ್ಲಿ ತೀವ್ರವಾಗಿ ಅಸ್ವಸ್ಥರಾದರು. ಮೂರ್ನಾಲ್ಕು ಮಂದಿ ದಾರಿ ಮಧ್ಯೆ ಪ್ರಾಣ ಕಳೆದುಕೊಂಡರೆ ಉಳಿದವರು ಆಸ್ಪತ್ರೆಗಳಲ್ಲಿ ಅಸುನೀಗಿದ್ದರು. ಘಟನೆಯಲ್ಲಿ ಒಟ್ಟಾರೆ 17 ಜನರು ಮೃತಪಟ್ಟಿದ್ದರು. ದೇವಸ್ಥಾನದ ಟ್ರಸ್ಟ್‌ನ ಇನ್ನೊಂದು ಬಣಕ್ಕೆ ಕೆಟ್ಟಹೆಸರು ತರುವ ಉದ್ದೇಶದಿಂದ ಇಮ್ಮಡಿ ಮಹದೇವಸ್ವಾಮಿ ಮತ್ತು ತಂಡ ದೊಡ್ಡಯ್ಯನ ಮೂಲಕ ಪ್ರಸಾದಕ್ಕೆ ವಿಷ ಬೆರೆಸಿತ್ತು. ಜಿಲ್ಲಾಡಳಿತ ಎಲ್ಲ ಅಸ್ವಸ್ಥರಿಗೂ ಮೈಸೂರಿನ ಖಾಸಗಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿತ್ತು. ಆಸ್ಪತ್ರೆ ಬಿಲ್‌ . 1.23 ಕೋಟಿಯನ್ನು ಸರ್ಕಾರವೇ ಭರಿಸಿತ್ತು.

ಸಿಗದ ಜಮೀನು:

ನಿವೇಶನ ಹಾಗೂ ಮೃತಪಟ್ಟವರ ಕುಟುಂಬಗಳಿಗೆ ಎರಡು ಎಕರೆ ಜಮೀನು ನೀಡುವುದಾಗಿ ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಭರವಸೆ ನೀಡಿದ್ದರು.

ಅದರಂತೆ ಎಲ್ಲ ಸಂತ್ರಸ್ತರ ಕುಟುಂಬವರಿಗೆ ನಿವೇಶನ ಹಾಗೂ ಮೃತಪಟ್ಟವರ ಕುಟುಂಬಗಳಿಗೆ ಎರಡು ಎಕರೆ ಜಮೀನು ಹಂಚಿಕೆ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಬಿದರಹಳ್ಳಿಯ ಬೋಳುದಿಣ್ಣೆ ಬಳಿ ಎರಡು ಎಕರೆ ಜಾಗವನ್ನು ಗುರುತಿಸಿ ನಿವೇಶನ ಸಿದ್ಧಪಡಿಸಲಾಗಿದೆ. ಮೃತಪಟ್ಟವರ 11 ಕುಟುಂಬಗಳಿಗೆ ತಲಾ ಎರಡು ಎಕರೆ ಜಮೀನು ನೀಡಲೂ ಭೂಮಿ ಗುರುತಿಸಲಾಗಿದೆ. ಜಮೀನಿನ ಮಾಲೀಕರು ಹೆಚ್ಚು ಹಣ ಕೇಳುತ್ತಿದ್ದಾರೆ. ಈಗಾಗಲೇ ಈ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದ್ದು, ವಿಶೇಷ ಪ್ರಕರಣ’ ಎಂದು ಪರಿಗಣಿಸಿ ಹೆಚ್ಚು ಹಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಸಿಕ್ಕಿದಿಷ್ಟು:

ಮೃತರ ಕುಟುಂಬದವರಿಗೆ ತಲಾ 5 ಲಕ್ಷ ರು. ವಿತರಣೆ ಮಾಡಲಾಗಿದ್ದು, ಅಸ್ವಸ್ಥಗೊಂಡವರಿಗೆ 50 ಸಾವಿರ ಪರಿಹಾರ ನೀಡಲಾಗಿದೆ. ಎಲ್ಲರಿಗೂ ಉಚಿತ ಚಿಕಿತ್ಸೆ ನೀಡಲಾಗಿದ್ದು, ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ 36 ಮಂದಿಗೆ ತಲಾ 6 ಕುರಿಗಳ ವಿತರಣೆ ಮಾಡಲಾಗಿದೆ. ಕೃಷಿ ಇಲಾಖೆಯಿಂದ ಕೃಷಿ ಪರಿಕರ ನೀಡಲಾಗಿದೆ.

ಜಿಲ್ಲಾಧಿಕಾರಿಗಳ ಸೇವೆ ಸ್ಮರಣೆ:

ಸುಳ್ವಾಡಿ ಸಂತ್ರಸ್ಥರು ಘಟನೆ ನಡೆದು ಒಂದು ವರ್ಷ ಕಳೆದರೂ ಇಂದಿಗೂ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮತ್ತು ಜಿಲ್ಲಾಡಳಿತದ ಸೇವೆಯನ್ನು ಸ್ಮರಿಸುತ್ತಾರೆ. ಕೆಲವರಂತೂ ದೇವರಂತೆ ನಮ್ಮನ್ನು ರಕ್ಷಣೆ ಮಾಡಿದರು. ಸಂಕಷ್ಟದ ಪ್ರತಿ ದಿನವೂ ನಮ್ಮ ಆರೋಗ್ಯ ವಿಚಾರಿಸಿಕೊಂಡು ಬೇಕಾದ ಸೂಕ್ತ ಚಿಕಿತ್ಸೆ ಕೊಡಿಸಿದರು. ಇಲ್ಲವಾದರೆ ನಾವು ಗುಣಮುಖರಾಗುತ್ತಿರಲಿಲ್ಲ. ನಾವು ಬದುಕಿರುವವರೆಗೂ ಅವರನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಸಂತ್ರಸ್ಥರು ನೆನೆಯುತ್ತಾರೆ.

ಈಗ ಕೂಲಿಗೆ ಹೋಗಲು ಆಗುತ್ತಿಲ್ಲ. ಸುಸ್ತಿನಿಂದ ಊಟ ಮಾಡಲಾಗುತ್ತಿಲ್ಲ, ಔಷಧ ಸೇವನೆ ಮಾಡಿದರೆ ಕೋಪ ಬರುತ್ತೆ, ಪ್ರಸಾದ ಸೇವಿಸಿ ನಾವು ಮೃತರಾಗಬೇಕಿತ್ತು. ಈಗ ಬದುಕುವುದೇ ಬೇಡ ಎನಿಸುತ್ತದೆ. ಜಮೀನು, ಮನೆ ಕೊಡುವ ಭರವಸೆಯನ್ನೇ ಈಡೇರಿಸಿಲ್ಲ ಎನ್ನುತ್ತಾರೆ ಸಂತ್ರಸ್ತೆ ಮಾರಕ್ಕ.

ಗೋಳಿನ ಕಥೆ: ಎಚ್‌ಡಿಕೆ ಕೊಟ್ಟ ಭರವಸೆ ಬಿಎಸ್‌ವೈ ಸರ್ಕಾರ ಈಡೇರಿಸುತ್ತಾ?.

ವಿಷ ದುರಂತ ಸಂದರ್ಭದಲ್ಲಿ ಭೇಟಿ ನೀಡಿದ್ದ ಶಾಸಕ ಮತ್ತು ಸಂಸದರು ಇನ್ನು ನಮ್ಮತ್ತ ತಿರುಗಿ ನೋಡಿಲ್ಲ. ನಿವೇಶನವೂ ನೀಡಿಲ್ಲ- ಜಮೀನು ಕೊಡಲಿಲ್ಲ. ಇತ್ತಿಚೇಗೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ ಕುಮಾರ್‌ ಕೆಲವರ ಜೊತೆಗೆ ಮಾತ್ರ ಮಾತನಾಡಿ ಹೋದರು. ನಮಗೆ ನಂಬಿಕೆಯೇ ಇಲ್ಲವಾಗಿದೆ ಎಂದು ರಂಗಸ್ವಾಮಿ ಹೇಳಿದ್ದಾರೆ.

ರಾಜೀವ್‌ ಗಾಂಧಿ ವಸತಿ ನಿಗಮದ ಅಡಿಯಲ್ಲಿ 58 ಸಂತ್ರಸ್ಥ ಕುಟುಂಬಗಳಿಗೆ 30 ಬೈ 40 ಅಳತೆಯ ನಿವೇಶನ ಹಂಚಿಕೆ ಮಾಡುವುದಕ್ಕಾಗಿ ಬಿದರಹಳ್ಳಿಯ ಸರ್ವೆ ನಂ 40ರಲ್ಲಿ ಎರಡು ಎಕರೆ ಜಾಗ ಗುರುತಿಸಲಾಗಿದೆ. ಗ್ರಾಮಸಭೆಯಲ್ಲೇ ನಿವೇಶನ ನೀಡಲು ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಡಿಸಿ ಬಿ.ಬಿ.ಕಾವೇರಿ ತಿಳಿಸಿದ್ದಾರೆ.

ದೇಗುಲ ಬಾಗಿಲು ತೆರೆಸುವಂತೆ ಹೆಚ್ವಿದ ಭಕ್ತರ ಒತ್ತಡ

ವಿಷಪ್ರಸಾದ ದುರಂತ ನಡೆದ ಮಾರನೆ ದಿನ ಅಂದರೆ ಡಿ. 15ರಂದು ಬಂದ್‌ ಆದ ದೇಗುಲ ಇನ್ನೂ ತೆರೆದಿಲ್ಲ. ಅಮಾವಾಸ್ಯೆ, ಹುಣ್ಣಿಮೆ, ಮಂಗಳವಾರ, ಶುಕ್ರವಾರ ನಡೆಯುತ್ತಿದ್ದ ವಿಶೇಷ ಪೂಜೆಗಳು ನಿಂತು ಹೋಗಿದ್ದು, ಹರಕೆಗಳು ಕಟ್ಟಿಕೊಂಡ ಭಕ್ತರು ದೇಗುಲದ ಬಾಗಿಲು ತೆರೆಯುವುದನ್ನೇ ಕಾಯುತ್ತಿದ್ದಾರೆ.

ಸ್ಥಳೀಯ ಕೆಲವು ಭಕ್ತರು ದೇವಸ್ಥಾನದ ಆವರಣವನ್ನು ದಿನವೂ ಗುಡಿಸಿ, ಸ್ವಚ್ಛಗೊಳಿಸಿ ರಂಗೋಲಿ ಹಾಕುತ್ತಾರೆ. ತಮಿಳುನಾಡು ಹಾಗೂ ಹೊರ ಜಿಲ್ಲೆಗಳಿಂದಲೂ ದೇವಸ್ಥಾನಕ್ಕೆ ಬರುತ್ತಿದ್ದ ಭಕ್ತರ ಸಂಖ್ಯೆ ಈಗ ಕಡಿಮೆಯಾಗಿದೆ. ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಬರುತ್ತಾರೆ. ಹೊರಗಡೆಯಿಂದಲೇ ಕೈ ಮುಗಿದು, ದೀಪ, ಗಂಧದ ಕಡ್ಡಿ ಹಚ್ಚಿ ನಮಸ್ಕರಿಸುತ್ತಾರೆ.

ದೇಗುಲದ ಪ್ರಾಂಗಣದಲ್ಲಿ ಮಾರಮ್ಮನ ಫೋಟೋವನ್ನಿಟ್ಟು ಪೂಜೆ ಸಲ್ಲಿಸುತ್ತಿದ್ದು ದೂರದ ಬೆಂಗಳೂರು, ಕೊಯಮತ್ತೂರು, ಮಂಡ್ಯ, ಮೈಸೂರಿನಿಂದ ಬರುವ ಭಕ್ತರು ದೇವರಿಗೆ ಪೂಜೆ- ಅಭಿಷೇಕ ನಿಂತಿರುವುದನ್ನು ಕಂಡು ಮರುಗಿ ಗೋಳಾಡುವುದು ಸಾಮಾನ್ಯವಾಗಿದೆ. ಸಚಿವ ಸುರೇಶ್‌ ಕುಮಾರ್‌ ಕಳೆದ ತಿಂಗಳು ದೇಗುಲಕ್ಕೆ ಭೇಟಿ ನೀಡಿದ್ದ ವೇಳೆ ಮಲೆಮಹದೇಶ್ವರ ಬೆಟ್ಟದ ಅರ್ಚಕರನ್ನು ನೇಮಿಸಿ, ದೇಗುಲ ತೆರೆಸಲಾಗುವುದು ಎಂಬ ಭರವಸೆಯೂ ಈಡೇರದಿರುವುದರಿಂದ ಭಕ್ತರು ಧರಣಿ ಕೂರಬೇಕೆಂದು ನಿಶ್ಚಯವನ್ನೂ ಮಾಡಿಕೊಂಡಿದ್ದಾರೆ.

- ದೇವರಾಜು ಕಪ್ಪಸೋಗೆ

click me!