ನನಗೆ ರಾಜಕೀಯದಿಂದ ನಿವೃತ್ತಿ ಕೊಡಿಸಲು ಅವರು ತಯಾರಿದ್ದಾರೆ. ಅವರಿಗೆ ನಾನು ಬೇಡ, ನನ್ನ ಮಗ ಬೇಕು ಎಂದು ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರು (ನ.24): ನನಗೆ ರಾಜಕೀಯದಿಂದ ನಿವೃತ್ತಿ ಕೊಡಿಸಲು ಅವರು ತಯಾರಿದ್ದಾರೆ. ಅವರಿಗೆ ನಾನು ಬೇಡ, ನನ್ನ ಮಗ ಬೇಕು ಎಂದು ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಚುನಾವಣೆಯಲ್ಲಿ ನನ್ನನ್ನು ಯಾರು ಕರೆದಿದ್ದರು ಹೇಳಿ. ಅಭ್ಯರ್ಥಿ ಕರೆಯಲಿಲ್ಲ. ಅಭ್ಯರ್ಥಿಯ ತಾಯಿ ಕರೆಯಲಿಲ್ಲ. ದೊಡ್ಡ ಗೌಡರು ಕರೆಯಲಿಲ್ಲ. ಅವರಿಗೆ ನನ್ನ ಅವಶ್ಯಕತೆ ಇದ್ದಂತೆ ಕಾಣುತ್ತಿಲ್ಲ ಎಂದರು.
ನಾನು ಬೇಡ, ನನ್ನ ಮಗ ಬೇಕು. ಜಿ.ಟಿ. ದೇವೇಗೌಡನಿಗೆ ವಯಸ್ಸಾಗಿದೆ, ರಾಜಕೀಯದಿಂದ ನಿವೃತ್ತಿಯಾಗಲಿ. ನಮಗೆ ಜಿ.ಟಿ. ದೇವೇಗೌಡರ ಮಗ ಸಾಕು ಎಂಬ ಆದೇಶ ಅವರಿಂದ ಆಗಿದೆ. ನನಗೆ ರಾಜಕೀಯದಿಂದ ನಿವೃತ್ತಿ ಕೊಡಿಸಲು ಅವರು ತಯಾರಿದ್ದಾರೆ. ಅವರಿಗೂ ಗೊತ್ತು ಕಾಂಗ್ರೆಸ್ ಹೌಸ್ ಫುಲ್ ಆಗಿದೆ, ಜೆಡಿಎಸ್ ಬಿಜೆಪಿ ಜೊತೆಯಲ್ಲಿ ಒಂದಾಗಿವೆ. ಅಲ್ಲಿಗೆ ಜಿ.ಟಿ. ದೇವೇಗೌಡನಿಗೆ ಸ್ಥಾನ ಇಲ್ಲ. ಹೀಗಾಗಿ, ನಿವೃತ್ತಿ ತೆಗೆದುಕೊಳ್ಳಲಿ ಎಂಬ ಭಾವನೆಯಲ್ಲಿದ್ದಾರೆ ಎಂದು ಅವರು ತಿಳಿಸಿದರು.
ನಿಖಿಲ್ ಸೋಲಬಾರದಿತ್ತು: ನನಗೂ ಕುಮಾರಸ್ವಾಮಿ ನಡುವೆ ಯಾವ ಮುನಿಸು ಇಲ್ಲ. ಅವರು ಆ ರೀತಿ ಬಿಂಬಿಸಿ ಬಿಡುತ್ತಾರೆ, ನಾನೇನು ಮಾಡಲಿ ಹೇಳಿ. ನಿಖಿಲ್ ಚನ್ನಪಟ್ಟಣದಲ್ಲಿ ಸೋಲ ಬಾರದಿತ್ತು. ಮೂರು ಸೋಲಿನಿಂದ ಅವರಿಗೆ ಬೇಸರವಾಗಿರುವುದು ನಿಜ. ಅವರು ಎದೆಗುಂದಬಾರದು. ಧೈರ್ಯವಾಗಿ ಮತ್ತೆ ಪಕ್ಷ ಸಂಘಟನೆಯಲ್ಲಿ ತೊಡಗಬೇಕು. ಮೂರು ಬಾರಿ ಸೋತವರು ಗೆದ್ದು ಮಂತ್ರಿಯಾಗಿ ಉನ್ನತ ಸ್ಥಾನಕ್ಕೆ ಹೋಗಿದ್ದಾರೆ ಎಂದರು. ನನಗೆ ಚನ್ನಪಟ್ಟಣ ಸೋಲಿಗೆ ಕಾರಣ ಗೊತ್ತಿಲ್ಲ. ನಾನು ಆ ಕ್ಷೇತ್ರಕ್ಕೆ ಪ್ರಚಾರಕ್ಕೆ ಹೋಗಿಲ್ಲ. ಏನಾಗಿದೆ ಎಂಬುದನ್ನ ನೋಡಿ ಹೇಳುತ್ತೇನೆ. ನಮಗೆ ನಿಖಿಲ್ ಗೆಲ್ಲುವ ವಿಶ್ವಾಸ ಇತ್ತು ಎಂದು ಅವರು ಹೇಳಿದರು.
ಈ ಉಪಚುನಾವಣೆ ಫಲಿತಾಂಶ ನನಗೆ ಮಹತ್ವದ್ದಾಗಿತ್ತು: ಸಿಎಂ ಸಿದ್ದರಾಮಯ್ಯ
ಕಾಂಗ್ರೆಸ್ ಗೆ ಬಾ ಎಂದು ಸಿದ್ದರಾಮಯ್ಯ ಕರೆದಿಲ್ಲ: ನನಗೆ ಯಾವತ್ತಿಗೂ ಸಿದ್ದರಾಮಯ್ಯ ಖುದ್ದಾಗಿ ಕಾಂಗ್ರೆಸ್ ಗೆ ಬಾ ಎಂದು ಕರೆದಿಲ್ಲ ಎಂದು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ತಿಳಿಸಿದರು. ನಾನು ದಸರಾದಲ್ಲಿ ಅವರ ಜೊತೆ ವೇದಿಕೆ ಹಂಚಿಕೊಂಡಿದ್ದು ಬಿಟ್ಟರೆ ಮತ್ತೆ ನಾನು ಅವರನ್ನ ಭೇಟಿ ಮಾಡಿಲ್ಲ. ಅವರು ಇವತ್ತಲ್ಲ ಯಾವತ್ತಿಗೂ ಪಕ್ಷಕ್ಕೆ ಬಾ ಎಂದು ವೈಯಕ್ತಿಕವಾಗಿ ಹೇಳಿಲ್ಲ. ಯಾವುದೊ ಸಭೆಯಲ್ಲಿ ಹೇಳಿರಬಹುದು. ಅದು ನನಗೆ ಗೊತ್ತಿಲ್ಲ ಎಂದು ಹೇಳಿದರು. ಸಾರ್ವತ್ರಿಕ ಚುನಾವಣೆಗೂ ಮುನ್ನ ಡಿ.ಕೆ. ಶಿವಕುಮಾರ್, ರಾಹುಲ್ ಗಾಂಧಿಯ ಆಪ್ತ ಕಾರ್ಯದರ್ಶಿ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಆವಾಗಲೇ ನಾನು ಹೋಗಿಲ್ಲ ಎಂದರು.