ಐತಿಹಾಸಿಕ ಹಿನ್ನೆಲೆ ಹೊಂದಿರುವ ಲಕ್ಕುಂಡಿಯ ಗತವೈಭವವನ್ನು ಮರುಸ್ಥಾಪಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆ ಮುಂದಾಗಿದೆ. ಜೊತೆಗೆ ಲಕ್ಕುಂಡಿಯ ಪುರಾತತ್ವ ಅವಶೇಷಗಳನ್ನು ಮರಳಿ ಪಡೆಯುವ ಮಹತ್ವದ ಅಭಿಯಾನಕ್ಕೆ ಪುರಾತತ್ವ ಇಲಾಖೆ ಮುಂದಡಿ ಇಟ್ಟಿದೆ.
ಸ್ವಸ್ತಿಕ್ ಕನ್ಯಾಡಿ, ಏಷಿಯಾನೆಟ್ ಸುವರ್ಣ ನ್ಯೂಸ್
ಲಕ್ಕುಂಡಿ (ನ.24): ಐತಿಹಾಸಿಕ ಹಿನ್ನೆಲೆ ಹೊಂದಿರುವ ಲಕ್ಕುಂಡಿಯ ಗತವೈಭವವನ್ನು ಮರುಸ್ಥಾಪಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆ ಮುಂದಾಗಿದೆ. ಜೊತೆಗೆ ಲಕ್ಕುಂಡಿಯ ಪುರಾತತ್ವ ಅವಶೇಷಗಳನ್ನು ಮರಳಿ ಪಡೆಯುವ ಮಹತ್ವದ ಅಭಿಯಾನಕ್ಕೆ ಪುರಾತತ್ವ ಇಲಾಖೆ ಮುಂದಡಿ ಇಟ್ಟಿದೆ. ಇಂದು ವಿಶೇಷ ಪಲ್ಲಕ್ಕಿ ಲಕ್ಕುಂಡಿಯ ಮನೆ ಮನೆಗಳಿಗೆ ತಲುಪಲಿದ್ದು ಪ್ರಾಚೀನ ಅವಶೇಷಗಳನ್ನು ಸಂಗ್ರಹಿಸಿ ಅವುಗಳನ್ನು ಇಲಾಖೆಯ ಸುಪರ್ದಿಗೆ ತೆಗೆದುಕೊಳ್ಳಲಾಗುತ್ತಿದೆ.
ಈಗಾಗಲೇ ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ಲಕ್ಕುಂಡಿಯ ಪುರಾತತ್ವ ಪರಂಪರೆ ಕುರಿತು ಲಕ್ಕುಂಡಿಯ ಮನೆ ಮನೆಗಳಿಗೆ ಪತ್ರ ಬರೆದಿದ್ದು ಲಕ್ಕುಂಡಿಯ ಪುರಾತತ್ವ ಶ್ರೀಮಂತಿಕೆಯನ್ನು ಕಾಪಾಡಲು ಎಲ್ಲರ ಸಹಕಾರವನ್ನು ಕೋರಿದ್ದಾರೆ. ಅದೇ ರೀತಿ ಜನರಿಂದ ಪುರಾತನ ಅವಶೇಷ ಸಂಗ್ರಹಿಸಲು ಪಲ್ಲಕ್ಕಿಯನ್ನು ಸಿದ್ದಪಡಿಸಲಾಗಿದ್ದು ಇಂದು ಬೆಳಗ್ಗಿನಿಂದಲೇ ಈ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ.
ವಾಸದ ಮನೆಗಳನ್ನು ಬಿಟ್ಟು ಕೊಡಲಿರುವ ಲಕ್ಕುಂಡಿ ನಿವಾಸಿಗಳು: ಈಗಾಗಲೇ ಲಕ್ಕುಂಡಿಯ ಪುರಾತತ್ವ ಶ್ರೀಮಂತಿಕೆಯ ಬಗ್ಗೆ ಅಧಿಕಾರಿಗಳ ತಂಡ ಅಧ್ಯಯನ ನಡೆಸಿದ್ದು ಐದಕ್ಕೂ ಹೆಚ್ಚು ಮನೆಗಳು ಐತಿಹಾಸಿಕ ಹಿನ್ನಲೆಗಳನ್ನು ಒಳಗೊಂಡಿದೆ ಎಂದು ತಿಳಿದು ಬಂದಿದೆ. ಈ ಪೈಕಿ ಕೆಲವು ಪುರಾತನ ದೇವಸ್ಥಾನವೂ ಹೌದು. ಇವುಗಳ ಕುರಿತು ಸಚಿವರು ಪತ್ರದ ಮೂಲಕ ಜನರಿಗೆ ಪುರಾತನ ವಸ್ತುಗಳ ಮಹತ್ವವನ್ನು ತಿಳಿಸಿದ್ದು, ಇದೀಗ ಇವುಗಳನ್ನು ಇಲಾಖೆಯ ಸುಪರ್ದಿಗೆ ಒಪ್ಪಿಸಲು ಗ್ರಾಮಸ್ಥರು ಒಪ್ಪಿಕೊಂಡಿದ್ದು ಅವುಗಳನ್ನು ಮರಳಿ ಪಡೆದುಕೊಳ್ಳಲು ಸಕಲ ತಯಾರಿ ನಡೆದಿದೆ. ಇಂದು ಸಚಿವ ಎಚ್.ಕೆ ಪಾಟೀಲ್ ಸಮ್ಮುಖದಲ್ಲಿ ಈ ಮನೆಗಳ ಹಸ್ತಾಂತರ ನಡೆಯಲಿದೆ. ಜೊತೆಗೆ ಇತಿಹಾಸಕ್ಕೆ ಸಂಬಂಧಿಸಿದಂತೆ ಸುಮಾರು 200ಕ್ಕೂ ಹೆಚ್ಚು ಮನೆಗಳಿಂದ ವಿವಿಧ ನಾಣ್ಯಗಳು, ಪುರಾತನ ಪಳೆಯುಳಿಕೆಗಳು, ಶಿಲ್ಪಗಳು, ತಾಳೆಗರಿಗಳು, ಶಾಸನ, ಕೆತ್ತನೆ ಕಂಬಗಳು, ಪುರಾತನ ಪರಿಕರಗಳು ಸೇರಿದಂತೆ ಹಲವು ವಸ್ತುಗಳನ್ನು ಸಂಗ್ರಹಿಸಲಾಗುತ್ತಿದೆ.
‘ಕರಿಯ’ ಹೇಳಿಕೆ ಸಮಸ್ಯೆ: ಸಚಿವ ಜಮೀರ್ ಅಹಮದ್ ಬಚಾವ್
ಲಕ್ಕುಂಡಿಗೆ ಯುನೆಸ್ಕೊ ಪಾರಂಪರಿಕ ತಾಣದ ಮನ್ನಣೆ: ಲಕ್ಕುಂಡಿಯು 101 ಪುರಾತನ ದೇಗುಲಗಳು ಮತ್ತು ಮೆಟ್ಟಿಲುಬಾವಿಗಳನ್ನು ಹೊಂದಿದೆ ಎಂದು ಈಗಾಗಲೆ ಸಚಿವರು ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅದರ ಪರಂಪರೆಯನ್ನು ಸಂರಕ್ಷಿಸಲು ಜನರ ಸಾಮೂಹಿಕ ಪ್ರಯತ್ನದಿಂದ ಮಾತ್ರ ಸಾಧ್ಯ. ಜೊತೆಗೆ ಐತಿಹಾಸಿಕ ಹಿನ್ನೆಲೆ ಹೊಂದಿರುವ ಈ ಪ್ರದೇಶವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಪರಿಗಣಿಸಲು ಪುರಾತತ್ವ ಇಲಾಖೆ ಶಿಫಾರಸು ಮಾಡಲಿದೆ. ಇಂದು ನಡೆಯಲಿರುವ ಪ್ರಾಚ್ಯವಸ್ತುಗಳ ಅನ್ವೇಷಣೆ ಮತ್ತು ಸಂಗ್ರಹ ಅಭಿಯಾನ ಇದಕ್ಕೆ ಇನ್ನಷ್ಟು ಬಲ ನೀಡಲಿದೆ.ಇಂದು ಪಲ್ಲಕ್ಕಿಯು ಹಲಗುಂದಿ ಬಸವೇಶ್ವರ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಚರಿಸಿ ಗ್ರಾಮಸ್ಥರು ನೀಡಿದ ದೇಣಿಗೆಯನ್ನು ಸ್ವೀಕರಿಸಲಿದೆ.