ಚನ್ನಪಟ್ಟಣ ಕ್ಷೇತ್ರದ ಜನರು ನೀಡಿದ ತೀರ್ಪಿಗೆ ನಾನು ತಲೆಬಾಗಿದ್ದೇನೆ. ಅವರ ಅದೇಶವನ್ನು ಒಪ್ಪಿಕೊಳ್ಳುತ್ತಿದ್ದೇನೆ. ಯಾವುದೇ ಕಾರಣಕ್ಕೂ ಕಾರ್ಯಕರ್ತರನ್ನು ಬಿಟ್ಟು ಪಲಾಯನ ಮಾಡುವ ವ್ಯಕ್ತಿ ನಾನಲ್ಲ, ಎದೆಗುಂದುವ ಪ್ರಶೆಯೂ ಇಲ್ಲ. ಸೋತಿದ್ದೇನೆ ಅಂತ ಸುಮ್ಮನೇ ಕೂರಲ್ಲ, ಹೋರಾಟ ಮಾಡುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ರಾಮನಗರ (ನ.24): ಚನ್ನಪಟ್ಟಣ ಕ್ಷೇತ್ರದ ಜನರು ನೀಡಿದ ತೀರ್ಪಿಗೆ ನಾನು ತಲೆಬಾಗಿದ್ದೇನೆ. ಅವರ ಅದೇಶವನ್ನು ಒಪ್ಪಿಕೊಳ್ಳುತ್ತಿದ್ದೇನೆ. ಯಾವುದೇ ಕಾರಣಕ್ಕೂ ಕಾರ್ಯಕರ್ತರನ್ನು ಬಿಟ್ಟು ಪಲಾಯನ ಮಾಡುವ ವ್ಯಕ್ತಿ ನಾನಲ್ಲ, ಎದೆಗುಂದುವ ಪ್ರಶೆಯೂ ಇಲ್ಲ. ಸೋತಿದ್ದೇನೆ ಅಂತ ಸುಮ್ಮನೇ ಕೂರಲ್ಲ, ಹೋರಾಟ ಮಾಡುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ಚನ್ನಪಟ್ಟಣ ಚುನಾವಣೆ ಫಲಿತಾಂಶದ ಬಳಿಕ ಬಿಡದಿ ತೋಟದ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪೆ ಅಂತಿಮ. ಅವರ ತೀರ್ಪಿಗೆ ತಲೆಬಾಗುತ್ತೇನೆ. ಇದು ನನಗೆ ಮೂರನೇ ಸೋಲು. ಈ ಸೋಲನ್ನು ವಿನಮ್ರವಾಗಿ ಸ್ವೀಕರಿಸುತ್ತೇನೆ.
ಕ್ಷೇತ್ರದ ಜನರೊಂದಿಗೆ ನಿರಂತರವಾಗಿ ಇರುತ್ತೇನೆ. ಅವರ ಸೇವೆ ಮಾಡುತ್ತೇನೆ. ನನ್ನ ಪರ ಚುನಾವಣೆಯಲ್ಲಿ ಹಗಲು ರಾತ್ರಿ ಅವಿರತವಾಗಿ ಶ್ರಮಿಸಿದ ಜೆಡಿಎಸ್ - ಬಿಜೆಪಿ ಪಕ್ಷಗಳ ಎಲ್ಲಾ ಕಾರ್ಯಕರ್ತರು, ಮುಖಂಡರು ಸೇರಿ ಎಲ್ಲರಿಗೂ ಶಿರಬಾಗಿ ನಮಿಸುತ್ತೇನೆ ಎಂದು ಹೇಳಿದರು. ಇದು ನಾನು ಬಯಸದೇ ಬಂದ ಉಪ ಚುನಾವಣೆ. ಕಡೆ ಘಳಿಗೆಯಲ್ಲಿ ತೆಗೆದುಕೊಂಡ ನಿರ್ಧಾರ. ಪಕ್ಷ ಕಷ್ಟಕಾಲದಲ್ಲಿದ್ದಾಗ ತಲೆಬಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ. 87,031 ಜನರು ನನ್ನ ಪರ ಮತ ಹಾಕಿದ್ದಾರೆ. ಅವರ ನಿರೀಕ್ಷೆಯನ್ನು ಹುಸಿ ಮಾಡಲಾರೆ. ಚುನಾವಣೆ ಸಂದರ್ಭದಲ್ಲಿ ಜನತೆಗೆ ನಾನು ಕೆಲ ಮಾತು ಕೊಟ್ಟಿದ್ದೇನೆ. ಅವುಗಳನ್ನು ಈಡೇರಿಸುತ್ತೇನೆ ಎಂದು ತಿಳಿಸಿದರು.
ಇದು ಸಿಎಂ ಸಿದ್ದು, ಡಿಸಿಎಂ ಡಿಕೆಶಿ ಗೆಲುವಲ್ಲ, ಹಣದ ಗೆಲುವು: ಆರ್.ಅಶೋಕ್
ಚನ್ನಪಟ್ಟಣ ಫಲಿತಾಂಶ ಅಘಾತ ತಂದಿದೆ ನಿಜ. ಆದರೆ, ಕೇವಲ ಅತ್ಯಂತ ಕಡಿಮೆ ಅವಧಿಯಲ್ಲಿ ಒಬ್ಬ ಯುವಕನಿಗೆ 87,031 ಮತಗಳು ಬಂದಿವೆ. ಇದು ಸಣ್ಣ ಪ್ರಮಾಣದ ಮತವಲ್ಲ, ಜನರ ಋಣ ತೀರಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ. ಎಲ್ಲರಿಗೂ ದನಿಯಾಗಿ ಇರುತ್ತೇನೆ. ಇಲ್ಲಿ ನಾವು ಎಡವಿದ್ದೇವೆ. ಎಲ್ಲಿ ಸರಿಪಡಿಸಿಕೊಳ್ಳಬೇಕೆಂದು ಕೂತು ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತೇವೆ ಎಂದು ನಿಖಿಲ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಸೋಲಿನಿಂದ ನಾನು ಎದೆಗುಂದಲ್ಲ : ನಿಖಿಲ್ ಕುಮಾರಸ್ವಾಮಿಯಿಂದ ಪಕ್ಷ ಅಲ್ಲ, ಪಕ್ಷದಿಂದ ನಿಖಿಲ್ ಕುಮಾರಸ್ವಾಮಿ ಎಂದು ನಂಬಿರುವವನು ನಾನು. ಒಬ್ಬ ಸಾಮಾನ್ಯ ಕಾರ್ಯಕರ್ತನ ಹಾಗೆ ಕೆಲಸ ಮಾಡುತ್ತೇನೆ. ಈ ಸೋಲಿನಿಂದ ನಾನು ಎದೆಗುಂದಲ್ಲ, ಯುವ ಸಮುದಾಯದ ದನಿಯಾಗಿ ಕೆಲಸ ಮಾಡುತ್ತೇನೆ. ನಾನು ಈ ಜಿಲ್ಲೆಯ ಮಗ ಅಂತ ಭಾವಿಸುತ್ತೇನೆ. ನನಗೆ ಕ್ಷೇತ್ರದ ಜನರ ಪ್ರೀತಿ ವಾತ್ಸಲ್ಯ ದಕ್ಕಿದೆ. ನಾವಿಲ್ಲಿ ಜನಿಸದೆ ಇರಬಹುದು, ನಮ್ಮದು ಭಾವನಾತ್ಮಕ ಸಂಬಂಧ, ರಾಮನಗರದ ಜಿಲ್ಲೆ ಜನರ ಜತೆ ಪ್ರಾಮಾಣಿಕವಾಗಿ ಹೆಜ್ಜೆ ಹಾಕುತ್ತೇನೆ. ಮಂಡ್ಯ ಮತ್ತು ರಾಮನಗರ ಜನತೆ ಶಕ್ತಿ ತುಂಬಿ ಕುಮಾರಣ್ಣ ಅವರನ್ನು ಕೇಂದ್ರದ ಮಂತ್ರಿ ಮಾಡಿದ್ದಾರೆ. ಅವರ ಋಣ ತೀರಿಸುತ್ತೇನೆ ಎಂದು ನಿಖಿಲ್ ತಿಳಿಸಿದರು.
ಉಪಚುನಾವಣೆಯಲ್ಲಿ 3 ಕ್ಷೇತ್ರದ ಸೋಲು ನನ್ನ ಹೊಣೆ: ವಿಜಯೇಂದ್ರ
ಒಂದು ಸಮುದಾಯದ ಮತ ಕಾಂಗ್ರೆಸ್‌ಗೆ ಮಾತ್ರ ಹೋಗಿವೆ: ಒಂದು ನಿರ್ದಿಷ್ಟ ಸಮುದಾಯದ ಮತಗಳು ಕಾಂಗ್ರೆಸ್ ಪರವಾಗಿ ಕ್ರೋಢೀಕರಣ ಆಗಿವೆ. ಈ ಪಕ್ಷ ಸ್ಥಾಪನೆಯಾದಂದಿನಿಂದ ಆ ಸಮುದಾಯದ ಪರವಾಗಿಯೂ ನಮ್ಮ ಪಕ್ಷ ಹೋರಾಟ ನಡೆಸಿತ್ತು. ದೇವೇಗೌಡರು ಮೀಸಲಾತಿ ನೀಡಿದ್ದರು. ಅವರಿಗೆ ದೇವೇಗೌಡರು, ಕುಮಾರಸ್ವಾಮಿ ಅವರು ಸಾಕಷ್ಟು ಒಳ್ಳೆಯದು ಮಾಡಿದ್ದಾರೆ. ಆದರೂ ಆ ಸಮುದಾಯ ನಮ್ಮ ಪರ ಮತ ಹಾಕಿಲ್ಲ. ಈ ಬಗ್ಗೆ ಹೆಚ್ಚು ಚರ್ಚೆ ಮಾಡಲು ಬಯಸುವುದಿಲ್ಲ ಎಂದು ನಿಖಿಲ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕಾರ್ಯಕರ್ತರೇ ಜೆಡಿಎಸ್ ಪಕ್ಷದ ಬೆನ್ನೆಲುಬು, ಶಕ್ತಿ. ದೇವೆಗೌಡರು ಫೀನಿಕ್ಸ್‌ನಂತೆ ಜೆಡಿಎಸ್ ಪಕ್ಷವನ್ನು ಕಟ್ಟಿದ್ದಾರೆ. ಎಲ್ಲ ಏಳು ಬೀಳುಗಳನ್ನು ನೋಡಿದ್ದೇವೆ. ಎಲ್ಲವನ್ನು ಸಮಚಿತ್ತವಾಗಿ ಕೊಂಡೊಯ್ಯುತ್ತೇವೆ. ಎಲ್ಲ ಸಮುದಾಯಗಳಿಗೆ ಧ್ವನಿಯಾಗುತ್ತೇವೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್ ನಾಯಕರು, ಕಾರ್ಯಕರ್ತರಿದ್ದರು.