ಹಾವೇರಿ: ಬಾರದ ಮಳೆ ಒಣಗಿ ನಿಂತ ಬೆಳೆ, ರೈತರು ಕಂಗಾಲು!

Published : Jul 06, 2023, 05:55 AM IST
ಹಾವೇರಿ: ಬಾರದ ಮಳೆ ಒಣಗಿ ನಿಂತ ಬೆಳೆ, ರೈತರು ಕಂಗಾಲು!

ಸಾರಾಂಶ

ನೀರಿನ ಮೂಲ ಅರ್ಥೈಸಿಕೊಳ್ಳದೆ ಬೋರ್‌ವೆಲ್‌ ನೀರು ನೆಚ್ಚಿ ಕಬ್ಬು, ಅಡಕೆ ಸೇರಿದಂತೆ ಇನ್ನಿತರ ಬೆಳೆ ಬೆಳೆಯಲು ಮುಂದಾಗಿದ್ದ ರೈತರು ಪ್ರಸಕ್ತ ವರ್ಷ ಅಂತರ್ಜಲ ಕೈಕೊಟ್ಟಬೆನ್ನಲ್ಲೇ ಬೆಳೆ ನಾಶಪಡಿಸುತ್ತಿದ್ದಾರೆ. ಈಗಾಗಲೇ ಕಬ್ಬು ಬೆಳೆ ನಾಶಪಡಿಸಿದ್ದು ಅಡಕೆಗೂ ಕುತ್ತು ಬಂದಿದೆ.

ಶಿವಾನಂದ ಮಲ್ಲನಗೌಡ್ರ

ಬ್ಯಾಡಗಿ (ಜು.6) : ನೀರಿನ ಮೂಲ ಅರ್ಥೈಸಿಕೊಳ್ಳದೆ ಬೋರ್‌ವೆಲ್‌ ನೀರು ನೆಚ್ಚಿ ಕಬ್ಬು, ಅಡಕೆ ಸೇರಿದಂತೆ ಇನ್ನಿತರ ಬೆಳೆ ಬೆಳೆಯಲು ಮುಂದಾಗಿದ್ದ ರೈತರು ಪ್ರಸಕ್ತ ವರ್ಷ ಅಂತರ್ಜಲ ಕೈಕೊಟ್ಟಬೆನ್ನಲ್ಲೇ ಬೆಳೆ ನಾಶಪಡಿಸುತ್ತಿದ್ದಾರೆ. ಈಗಾಗಲೇ ಕಬ್ಬು ಬೆಳೆ ನಾಶಪಡಿಸಿದ್ದು ಅಡಕೆಗೂ ಕುತ್ತು ಬಂದಿದೆ.

ಕೈಕೊಟ್ಟಅಂತರ್ಜಲ ಹಾಗೂ 9 ತಿಂಗಳಿಂದ ಸುರಿಯದ ಮಳೆಯಿಂದಾಗಿ ತೋಟಗಾರಿಕೆ ಬೆಳೆಗಳು ವಿನಾಶದಂತಹ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿವೆ. ನೈಸರ್ಗಿಕವಾಗಿ ಸುರಿಯುವ ಮಳೆ ಹಾಗೂ ಮಳೆ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದು ಎಷ್ಟೊಂದು ಪ್ರಮುಖ ಎನ್ನುವುದು ಇದೀಗ ಪ್ರತಿಯೊಬ್ಬರ ಅರಿವಿಗೂ ಬರುತ್ತಿದೆ.

ಧಾರವಾಡ: ಕಾಡಂಚಿನ ಹೊಲಗಳಿಗೆ ವನ್ಯಜೀವಿಗಳ ದಾಂಗುಡಿ; ರೈತರು ಕಂಗಾಲು

ಮಣ್ಣಿನ ಗುಣ ಪರೀಕ್ಷೆ ಸೇರಿದಂತೆ ಭೂಮಿಯಲ್ಲಿ ತೇವಾಂಶ ಹಿಡಿದಿಟ್ಟುಕೊಳ್ಳುವ ಶಕ್ತಿ ಮತ್ತು ಮಳೆ ಕೈಕೊಟ್ಟರೆ ನೀರಿನ ಪರಾರ‍ಯಯ ವ್ಯವಸ್ಥೆಯ ಬಗ್ಗೆ ಪರಿಗಣಿಸಿಯೇ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತದೆ. ಆದರೆ ಇದ್ಯಾವುದರ ಅರಿವಿಲ್ಲದೆಯೇ ಹುಚ್ಚು ಧೈರ್ಯ ಮಾಡಿ ಕಬ್ಬು, ಅಡಕೆ, ಚಿಕ್ಕು, ಮಾವು, ಕ್ಯಾಬೇಜ್‌ ಬೆಳೆ ಬೆಳೆಯುತ್ತಿದ್ದು ತಾಲೂಕಿನ ರೈತರು ಇದೀಗ ಬೆಳೆನಾಶಕ್ಕೆ ಮುಂದಾಗಿ ಕೈಸುಟ್ಟುಕೊಳ್ಳುತ್ತಿದ್ದಾರೆ.

ಮೂಕರೋದನೆ:

ನೀರಿಲ್ಲದೇ ಸಸ್ಯ ಸಂಕುಲಗಳು ಮೂಕರೋದನೆ ಆರಂಭಿಸಿವೆ. ಬೆಳೆದಷ್ಟುಎತ್ತರಕ್ಕೆ ನಿಲ್ಲುವ ಶಕ್ತಿ ಕಳೆದುಕೊಳ್ಳುತ್ತಿರುವ ಗಿಡಗಳು ರಾತ್ರೋರಾತ್ರಿ ನೆಲಕ್ಕುರುಳುತ್ತಿವೆ. ಇನ್ನು ಕೆಲವೆಡೆ ಹಸಿರಾಗಿದ್ದ ಎಲೆಗಳು ನೀರಿಲ್ಲದೇ ಹಳದಿ ಬಣ್ಣಕ್ಕೆ ತಿರುಗಿ ನೆಲಕಚ್ಚುತ್ತಿವೆ. ಇದರಿಂದ ಲಕ್ಷಗಟ್ಟಲೇ ವ್ಯಯಿಸಿ ಮಾಡಿದ್ದ ತೋಟಗಳು ಬರಿದಾಗುತ್ತಿವೆ.

ನಡುಗುತ್ತಿದೆ ಮಲೆನಾಡು:

ಅತೀ ಹೆಚ್ಚು ಮಳೆ ಸುರಿಯುವ ತಾಲೂಕಿನ ಮಲೆನಾಡು ಸೆರಗಿನಲ್ಲೇ ನೀರಿನ ಕೊರತೆಯಿಂದ ಅಂತರ್ಜಲ ಬತ್ತಿ ತೋಟಗಳು ಒಣಗುತ್ತಿವೆ. ಕಳೆದೆರಡು ವರ್ಷ ಸತತವಾಗಿ ಸುರಿದ ಮಲೆ, ಅತಿವೃಷ್ಟಿಯ ಘಟನೆಗಳು ಮಾಸುವ ಮುನ್ನವೇ ಇದೀಗ ಮಳೆಯಿಲ್ಲದೆ ಮಲೆನಾಡು ಭಾಗ ಸಂಪೂರ್ಣ ನಡುಗುತ್ತಿದೆ.

ಅಡಕೆಗೂ ಬರುತ್ತಿದೆ ಕುತ್ತು:

ಬ್ಯಾಡಗಿ ತಾಲೂಕಿನ ಮಲೆನಾಡು ಭಾಗದ 26 ಗ್ರಾಮಗಳಲ್ಲಿ ಈಗಾಗಲೇ ನೂರು ಹೆಕ್ಟೇರ್‌ಗೂ ಹೆಚ್ಚು ಕಬ್ಬು ಬೆಳೆ ನಾಶವಾಗಿದೆ. ಇನ್ನೂ ಕೆಲವೆಡೆ ಅಡಕೆ ಬೆಳೆ ಉಳಿಸಿಕೊಳ್ಳಲು ಕಬ್ಬು ನಾಶಪಡಿಸಿದ್ದಾರೆ. ಆದರೆ ಇದೀಗ ಅಡಕೆಗೂ ನೀರು ಸಾಕಾಗುತ್ತಿಲ್ಲ. ಮುಂದೇನೂ ಎಂಬ ಚಿಂತೆಯಲ್ಲಿಯೇ 25 ಹೆಕ್ಟೇರ್‌ ಅಡಕೆ ಬೆಳೆಯೂ ನಾಶವಾಗಿದೆ. ಇನ್ನು ಅಷ್ಟೇನೂ ನೀರು ಅವಶ್ಯವಿಲ್ಲದ ಮಾವು, ಚಿಕ್ಕು, ತೋಟಗಳು ಅಲ್ಲಲ್ಲಿ ಕಾಣಸಿಗುತ್ತಿವೆ.

 

ರಾಜ್ಯದಲ್ಲಿ ಬರಗಾಲ ಘೋಷಣೆ ಮಾಡಿ : ಕುರುಬೂರು ಶಾಂತಕುಮಾರ್‌

ಮಲೆನಾಡು ಭಾಗದ ಬಹುತೇಕ ಗ್ರಾಮಗಳಲ್ಲಿ ಸದ್ದಿಲ್ಲದೇ ತೋಟಗಾರಿಕೆ ಬೆಳೆ ನಾಶವಾಗುತ್ತಿದೆ. 47 ವರ್ಷದ ನನ್ನ ಅನುಭವದಲ್ಲಿ ಇಂತಹ ಕೆಟ್ಟಅನುಭವ ನೋಡಿಲ್ಲ. 9 ತಿಂಗಳಿಂದ ಮಳೆಯಾಗಿಲ್ಲ, ನೀರಿಲ್ಲದೇ ಕಬ್ಬು ಬೆಳೆ ನಾಶಪಡಿಸಿ ಅಡಕೆ ಉಳಿಸಿಕೊಂಡಿದ್ದೇನೆ. ಪ್ರಸ್ತುತ ವಾತಾವರಣದಲ್ಲಿ ಅದೂ ಉಳಿಯುವ ಭರವಸೆ ಯಿಲ್ಲ.

ಹುಚ್ಚನಗೌಡ ಲಿಂಗನಗೌಡ್ರ ಹೀರೇಅಣಜಿ ರೈತ

ಅಡಕೆ ತೋಟ ತೋರಿಸಿ ನಮ್ಮ ಮಕ್ಕಳಿಗೆ ಹೆಣ್ಣು ಕೇಳುತಿದ್ವಿ. ಇದೀಗ ಅಂತರ್ಜಲ ಕುಸಿತದಿಂದ 10 ಎಕರೆ ಕಬ್ಬು ನಾಶಪಡಿಸಿದ್ದೇನೆ. ಇನ್ನು ನಮ್ಮ ಭಾಗದಲ್ಲಿ ಅಡಕೆ ಬೆಳೆ ಸಹ ಉಳಿಯವುದು ಕಷ್ಟವಾಗಿದೆ.

ಮಲ್ಲೇಶಪ್ಪ ಡಂಬಳ ರೈತ ಚಿಕ್ಕಣಜಿ

PREV
Read more Articles on
click me!

Recommended Stories

ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?