Asianet Suvarna News Asianet Suvarna News

ಧಾರವಾಡ: ಕಾಡಂಚಿನ ಹೊಲಗಳಿಗೆ ವನ್ಯಜೀವಿಗಳ ದಾಂಗುಡಿ; ರೈತರು ಕಂಗಾಲು

ಬತ್ತಿ ಹೊದ ಕೆರೆ-ಕಟ್ಟೆಗಳು. ಕುಡಿಯುವ ನೀರು ಹಾಗೂ ಆಹಾರಕ್ಕಾಗಿ ಕಾಡುಬಿಟ್ಟು ಅಲ್ಲಲ್ಲಿ ಬಿತ್ತನೆಯಾಗಿರುವ ಹೊಲಗಳಿಗೆ ದಾಂಗುಡಿ ಇಡುತ್ತಿರುವ ವನ್ಯ ಜೀವಿಗಳು!

Animals attack the lands adjacent to the forest at dharwad rav
Author
First Published Jul 6, 2023, 4:50 AM IST | Last Updated Jul 6, 2023, 4:50 AM IST

ಬರದ ಬರೆ-4

ಶಶಿಕುಮಾರ ಪತಂಗೆ

ಅಳ್ನಾವರ (ಜು.6) : ಬತ್ತಿ ಹೊದ ಕೆರೆ-ಕಟ್ಟೆಗಳು. ಕುಡಿಯುವ ನೀರು ಹಾಗೂ ಆಹಾರಕ್ಕಾಗಿ ಕಾಡುಬಿಟ್ಟು ಅಲ್ಲಲ್ಲಿ ಬಿತ್ತನೆಯಾಗಿರುವ ಹೊಲಗಳಿಗೆ ದಾಂಗುಡಿ ಇಡುತ್ತಿರುವ ವನ್ಯ ಜೀವಿಗಳು!

ಇದು ಅಳ್ನಾವರ ಸಮೀಪದ ಕಾಡಂಚಿನ ಗ್ರಾಮಗಳ ರೈತರ ಸ್ಥಿತಿ. ಸಂಪೂರ್ಣ ಮಲೆನಾಡು ಪ್ರದೇಶ ಅಳ್ನಾವರ. ಸಾಮಾನ್ಯವಾಗಿ ಈ ಭಾಗದಲ್ಲಿ ಮಳೆ ಪ್ರಮಾಣ ತುಸು ಜಾಸ್ತಿ. ಆದರೆ, ಈ ಬಾರಿ ಜೂನ್‌ ತಿಂಗಳಲ್ಲಿ ಬಿತ್ತನೆಯ ಸಮಯದಲ್ಲಿ 219 ಮಿ.ಮೀ. ಮಳೆ ಪೈಕಿ ಆಗಿದ್ದು ಬರೀ 44 ಮಿ.ಮೀ. ಅಂದರೆ ಶೇ. 80ರಷ್ಟುಮಳೆ ಕೊರತೆ ಉಂಟಾಗಿದೆ. ಮಳೆ ಕೊರತೆಯಿಂದ ಅಲ್ಲೋ-ಇಲ್ಲೋ ಒಂದಿಷ್ಟುಕೊಳವೆಬಾವಿ ನೀರಿನಿಂದ ಕಬ್ಬು, ಬತ್ತ, ಗೋವಿನ ಜೋಳ ಅಂತಹ ಬೆಳೆಗಳನ್ನು ಬಿತ್ತಲಾಗಿದೆ.

ಅರಣ್ಯದಲ್ಲಿ ಸಹ ನೀರು-ಆಹಾರದ ಕೊರತೆಯುಂಟಾಗಿದ್ದು, ಅಲ್ಲಿನ ಪ್ರಾಣಿಗಳು ತಮ್ಮ ಆಹಾರ ಅರಸುತ್ತಾ ನಾಡಿನತ್ತ ಮುಖ ಮಾಡಿವೆ. ಬೆಳೆಗಳಿಗೆ ಕಾಡುಹಂದಿ, ನರಿಯ ಹಾವಳಿ ಅಧಿಕವಾಗಿದ್ದು, ಸಾಕಷ್ಟುಪ್ರಮಾಣದಲ್ಲಿ ಕಬ್ಬು ಬೆಳೆಯನ್ನು ನಾಶ ಮಾಡಿವೆ. ಜತೆಗೆ ಕಾಳುಗಳ ಬಿತ್ತನೆಗೆ ನವಿಲು, ಕಾಡುಕೋಳಿಗಳ ಕಾಟ ಅಧಿಕವಾಗಿದೆ. ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಪ್ರಾಣಿಗಳು ತಿಂದು ಉಳಿದ ಪೈರನ್ನು ರೈತರು ಸಂಗ್ರಹಿಸಿ ದನಕರುಗಳಿಗೆ ಹಾಕುವ ಸ್ಥಿತಿ ಬಂದಿದೆ.

ಎನ್‌.ಆರ್‌.ಪುರ ಸಮೀಪ ಓಡಾಡುತ್ತಿರುವ 15 ಕಾಡಾನೆಗಳ ಹಿಂಡು; ತೋಟಗಾರಿಕೆ ಬೆಳೆ ನಾಶ!

ಕಳೆದ ಮೂರು ವರ್ಷಗಳ ಕಾಲ ಈ ಭಾಗದಲ್ಲಿ ಅತಿಯಾದ ಮಳೆಯಿಂದ ಬೆಳೆಗಳು ಹಾಳಾದವು. ಈ ವರ್ಷ ಮಳೆಯ ಸುಳಿವೆ ಇಲ್ಲ. ಹೀಗಾಗಿ, ಒಟ್ಟಾರೆ 4,860 ಹೆಕ್ಟೇರ್‌ ಪೈಕಿ ಬರೀ ಬತ್ತ 692, ಗೋವಿನ ಜೋಳ 654 ಹಾಗೂ ಕಬ್ಬು 1,300 ಸೇರಿದಂತೆ ಬರೀ 2,646 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಆರಿದ್ರಾ ಮಳೆಯಾಗುವ ಹೊತ್ತಿಗೆ ಬತ್ತದ ಬೆಳೆಯು ಏಳಿಂಚು ಎತ್ತರದಲ್ಲಿ ಬೆಳೆಯಬೇಕು. ಆದರೆ, ಈ ವರ್ಷ ಭೂಮಿಗೆ ಕಾಳು ಬಿದ್ದಿಲ್ಲ.

ಜಾನುವಾರುಗಳಿಗೆ ಮೇವಿಲ್ಲ:

ತಾಲೂಕಿನಲ್ಲಿ ಈ ಹಿಂದೆ ಬತ್ತ ಪ್ರಮುಖ ಬೆಳೆಯಾಗಿತ್ತು. ಆದರೆ, ಇತ್ತೀಚೆಗೆ ದಿನಗಳಲ್ಲಿ ಕಬ್ಬು ಬೆಳೆಯೇ ಅ​ಧಿಕವಾಗಿದೆ. ಇದರಿಂದ ಜಾನುವಾರುಗಳಿಗೆ ಮೇವಿಲ್ಲದಂತಾಗಿದೆ. ಈ ಮಳೆಗಾಲದಲ್ಲಿ ಒಣ ಹುಲ್ಲು ಖಾಲಿಯಾಗುತ್ತಿದ್ದು, ದನಗಳಿಗೆ ಹಸಿ ಮೇವನ್ನೇ ಹಾಕುತ್ತಿದ್ದರು. ಈ ಬಾರಿ ಮಳೆಯಿಲ್ಲದ ಕಾರಣ ಹಸಿ ಮೇವಿನ ಕೊರತೆ ಉಂಟಾಗಿದ್ದು, ರೈತರು ತಮ್ಮ ಜಾನುವಾರಗಳನ್ನು ಬೆಳಗಾವಿ ಜಿಲ್ಲೆಯ ಕಿತ್ತೂರು ಹಾಗೂ ಬಾಗೇವಾಡಿ ಸಂತೆಗಳಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ.

ದೇವರಿಗೆ ಹರಕೆ:

ಮಳೆಗಾಗಿ ಪ್ರತಿ ಗ್ರಾಮಗಳಲ್ಲಿಯೂ ದೇವರಿಗೆ ಭಜನೆ ಹಾಗೂ ವ್ರತಗಳನ್ನು ಮಾಡಲಾಗುತ್ತಿದೆ. ವಾರದ ಒಂದು ದಿನ ದೇವರ ಕೆಲಸವನ್ನು ಮಾತ್ರ ಮಾಡುವಂತೆ ಗ್ರಾಮದಲ್ಲಿನ ಜನರು ಆದೇಶವನ್ನು ಮಾಡಿಕೊಂಡಿದ್ದಾರೆ. ಕುಂಬಾರಕೊಪ್ಪ ಗ್ರಾಮದ ಜನರು ಮಳೆರಾಯನಿಗಾಗಿ ಗುರ್ಜಿ ಸೇವೆ ಮಾಡುತ್ತಿದ್ದಾರೆ. ಅದರ ಜತೆಗೆ ಗ್ರಾಮದಲ್ಲಿನ ಸಿದ್ಧಾರೂಢರ ಮಠದಲ್ಲಿ ನಿತ್ಯ ಭಜನೆ ಮಾಡಲಾಗುತ್ತಿದೆ ಎಂದು ಗ್ರಾಮದ ಮಕ್ತುಂಸಾಬ ಕಾಶಿನಕುಂಟಿ ಹೇಳುತ್ತಾರೆ.

ಈ ಭಾಗದ ಸಾಕಷ್ಟುಜನರು ತಮ್ಮ ಊರಲ್ಲಿ ಕೂಲಿ ಕಡಿಮೆಯಾದಾಗ ಪಕ್ಕದ ಗೋವಾ ರಾಜ್ಯಕ್ಕೆ ದುಡಿಮೆಯನ್ನರಸಿ ಹೋಗುತ್ತಾರೆ. ಆದರೆ, ಈ ಬಾರಿ ಅಲ್ಲಿಯೂ ಕೈ ತುಂಬ ಕೆಲಸಗಳು ಸಿಗದೆ ಬರಿಗೈಯಲ್ಲಿ ತವರಿಗೆ ಹಿಂತಿರುಗುತ್ತಿದ್ದಾರೆ.

400ಕ್ಕೂ ಅಡಿಕೆ ಸಸಿಗಳು ಕಿತ್ತುಹಾಕಿದ ದುಷ್ಕರ್ಮಿಗಳು; ಕಷ್ಟಪಟ್ಟು ಬೆಳೆದಿದ್ದ ರೈತ ಕಂಗಾಲು!

ಕಳೆದ ಮೂರು ವರ್ಷ ಅ​ಧಿಕ ಮಳೆಯಾಗಿದ್ದರಿಂದ ತೇವಾಂಶದಿಂದಾಗಿ ಬೆಳೆಗಳು ಹಾನಿಗೀಡಾಗಿದ್ದವು. ಈ ವರ್ಷ ಸಮರ್ಪಕವಾದ ಮಳೆಯಿಲ್ಲದೆ ಬಿತ್ತನೆ ಮಾಡಲಾಗಿಲ್ಲ. ಸರ್ಕಾರ ಈ ಬಗ್ಗೆ ಗಮನ ಹರಿಸಿ ಮೋಡಬಿತ್ತನೆಯ ಕಾರ್ಯಕ್ಕೆ ಮುಂದಾಗಬೇಕು ಎಂದು ಕೋಗಿಲಗೆರೆ ರೈತ ಅರುಣಕುಮಾರ ಹಿರೇಮಠ ಆಗ್ರಹಿಸುತ್ತಾರೆ.

ಮಳೆಯಿಲ್ಲದೆ ಹೊಲದಲ್ಲಿ ಕಬ್ಬುನ್ನು ಹೊರತುಪಡಿಸಿ ಮತ್ಯಾವ ಬೆಳೆಗಳಿಲ್ಲ. ಈ ಕಬ್ಬಿನ ಬೆಳೆಗೂ ಇದೀಗ ಕಾಡುಪ್ರಾಣಿಗಳು ಹಾವಳಿ ಅಧಿ​ಕವಾಗಿದೆ. ಬೆಳೆ ನಾಶವಾಗುತ್ತಿದ್ದು, ಕಬ್ಬು ಬೆಳೆಗಾರ ರೈತರಿಗೆ ಸರ್ಕಾರ ಕೂಡಲೆ ಪರಿಹಾರ ಒದಗಿಸುವ ಕಾರ್ಯವನ್ನು ಮಾಡಬೇಕು.

ಜಗದೀಶ ಕಿತ್ತೂರ, ಹುಲಿಕೇರಿ ಗ್ರಾಮದ ರೈತ

Latest Videos
Follow Us:
Download App:
  • android
  • ios