ಬೆಂಗಳೂರು ಹೊರವಲಯ ಆನೇಕಲ್‌ನಲ್ಲಿ ಕೆನರಾ ಬ್ಯಾಂಕ್ ಎಟಿಎಂ ದೋಚಲು ಬಂದ ಕಳ್ಳರು ಎಟಿಎಂ ಮಿಷನ್ ಅನ್ನೇ ಆಟೋಗೆ ತುಂಬಿಕೊಂಡು ಹೋಗಿ ನೀಲಗಿರಿ ತೋಪಿನಲ್ಲಿ ಒಡೆಯಲು ಯತ್ನಿಸಿದ್ದಾರೆ. ರಾತ್ರಿಯಿಡೀ ಪ್ರಯತ್ನಿಸಿದರೂ ಒಡೆಯಲಾಗದೇ ಬೆಳಗ್ಗೆ ಮಿಷನ್ ಬಿಟ್ಟು ಓಡಿ ಹೋಗಿದ್ದಾರೆ.
ಆನೇಕಲ್ (ನ.26): ಬೆಂಗಳೂರಿನ ಹೊರವಲಯ ಆನೇಕಲ್‌ನಲ್ಲಿ ಕೆನರಾ ಬ್ಯಾಂಕ್ ಎಟಿಎಂ ದೋಚಲು ಬಂದ ಕಳ್ಳರು ಎಟಿಎಂ ಮಿಷನ್ ಅನ್ನೇ ಆಟೋಗೆ ತುಂಬಿಕೊಂಡು ಹೋಗಿದ್ದಾರೆ. ನಂತರ, ನೀಲಗಿರಿ ತೋಪಿನಲ್ಲಿ ಎಟಿಎಂ ಮಿಷನ್ ಇಟ್ಟು ಅದನ್ನು ಕತ್ತರಿಸಿ ಹಣ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ರಾತ್ರಿಯಿಡೀ ಎಟಿಎಂ ಮಿಷನ್ ಒಡೆಯಲು ಪ್ರಯತ್ನಿಸಿದರೂ ತೆಗೆಯಲಾಗದೇ ಬೆಳಗ್ಗೆ ಮಿಷನ್ ಬಿಟ್ಟು ಓಡಿ ಹೋಗಿದ್ದಾರೆ. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಪಕ್ಕದ ಮಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಚನಹಳ್ಳಿ ಗ್ರಾಮದಲ್ಲಿ ಕೆನರಾ ಬ್ಯಾಂಕ್ ಎಟಿಎಂ ಒಂದರಲ್ಲಿ ಹಣ ಕದಿಯಲು ಬಂದು ವಿಫಲರಾಗಿದ್ದಾರೆ. ಆಗ ಒಂದು ಟಾಟಾ ಏಸ್ ವಾಹನದಲ್ಲಿ ಬಂದು ಎಟಿಎಂ ಯಂತ್ರವನ್ನೇ ಹೊತ್ತುಕೊಂಡು ನೀಲಗಿರಿ ತೋಪಿಗೆ ಹೋಗಿದ್ದಾರೆ. ರಾತ್ರಿಯಿಡಿ ನೀಲಗಿರಿ ತೋಪಿನಲ್ಲಿ ಎಟಿಎಂ ಯಂತ್ರವನ್ನು ಆಕ್ಸಲ್ ಬ್ಲೇಡ್‌ನಿಂದ ಕತ್ತರಿಸಲು ಮುಂದಾಗಿದ್ದಾರೆ. ಜೊತೆಗೆ, ಕಬ್ಬಿಣದ ಹಾರೆಗಳಿಂದ ಒಡೆಯಲು ಪ್ರಯತ್ನಿಸಿದ್ದಾರೆ. ಎಷ್ಟೇ ಪ್ರಯತ್ನ ಮಾಡಿದರೂ ಎಟಿಎಂ ಒಡೆಯಲು ಸಾಧ್ಯವಾಗಿಲ್ಲ.
ಬೆಳಗ್ಗೆವರೆಗೂ ಎಟಿಎಂ ಯಂತ್ರವನ್ನು ಒಡೆಯಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಬೆಳಗ್ಗೆ ಜನರು ನೀಲಗಿರಿ ತೋಪಿನ ಅಕ್ಕ-ಪಕ್ಕದ ಜಮೀನುಗಳಿಗೆ ಜನರು ಬರುವುದು ಹಾಗೂ ರಸ್ತೆಯಲ್ಲಿ ಜನರು ಓಡಾಡುತ್ತಿದ್ದ ಹಿನ್ನೆಲೆಯಲ್ಲಿ ಜನರನ್ನು ಕಂಡು ಎಟಿಎಂ ಯಂತ್ರವನ್ನು ಅಲ್ಲಿಯೇ ಬಿಟ್ಟು ಪರಾರಿ ಆಗಿದ್ದಾರೆ. ಇನ್ನು ಸ್ಥಳೀಯ ಜನರು ಸ್ಥಳಕ್ಕೆ ಹೋಗಿ ನೋಡಿದಾಗ ಎಟಿಎಂ ಯಂತ್ರವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ ಅತ್ತಿಬೆಲೆ ಠಾಣೆ ಪೊಲೀಸರು ಇದು ಕೆನರಾ ಬ್ಯಾಂಕ್‌ನ ಎಟಿಎಂ ಎಂದು ಗುರುತಿಸಿ ಬ್ಯಾಂಕ್‌ನ ಮ್ಯಾನೇಜರ್‌ಗೆ ಮಾಹಿತಿ ನೀಡಿದ್ದಾರೆ.
ನಂತರ, ಮಂಚನಹಳ್ಳಿ ಶಾಖೆಯ ಕೆನರಾ ಬ್ಯಾಂಕ್ ಸಿಬ್ಬಂದಿ ಈ ಎಟಿಎಂ ಯಂತ್ರಕ್ಕೆ ಕಳೆದೆರಡು ದಿನಗಳ ಹಿಂದೆ ಹಣವನ್ನು ಹಾಕಿದ್ದು, ಇದೀಗ ರೂ. 10 ಲಕ್ಷಕ್ಕೂ ಅಧಿಕ ಹಣವಿತ್ತು ಎಂದು ಮಾಹಿತಿ ನೀಡಿದ್ದಾರೆ. ಈ ಘಟನೆ ಕುರಿತಂತೆ ಕೆನರಾ ಬ್ಯಾಂಕ್ ಸಿಬ್ಬಂದಿ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಪೊಲೀಸರು ಎಟಿಎಂ ಯಂತ್ರವನ್ನು ವಶಕ್ಕೆ ಪಡೆದಿದ್ದು, ಕಳ್ಳರ ಕುರಿತಾಗಿ ಸಾಕ್ಷಿ ಸಂಗ್ರಹಣೆಗೆ ಮಾಡುತ್ತಿದ್ದಾರೆ. ಇನ್ನು ಸಿಸಿಟಿವಿ ಸೇರಿದಂತೆ ಇತರೆ ಮೂಲಗಳಿಂದ ಕಳ್ಳರನ್ನು ಹುಡುಕಲು ಮುಂದಾಗಿದ್ದಾರೆ.