ಬದಲಾವಣೆಗೆ ತೆರೆದುಕೊಳ್ಳುವ ಜೀವಂತ ಕಲೆ ಯಕ್ಷಗಾನ

By Kannadaprabha NewsFirst Published Oct 6, 2021, 3:52 PM IST
Highlights
  •  ದಕ್ಷಿಣ ಭಾರತದ ಸಾಂಪ್ರದಾಯಿಕ ರಂಗಭೂಮಿಯಲ್ಲಿ ಕನ್ನಡನಾಡಿನ ಯಕ್ಷಗಾನಕ್ಕೆ ಹಿರಿದಾದ ಸ್ಥಾನ
  • ಜನಪದ ರಂಗಭೂಮಿಯಿಂದ ಟಿಸಿಲೊಡೆದು ಕಾಲದಿಂದ ಕಾಲಕ್ಕೆ ಹೊಸಹೊಸ ಅಂಶಗಳನ್ನು ಸೇರ್ಪಡಿಸಿಕೊಳ್ಳುತ್ತಾ ಯಕ್ಷಗಾನ ಬೆಳೆದು ನಿಂತಿದೆ

ಮಂಗಳೂರು (ಅ.06):  ದಕ್ಷಿಣ ಭಾರತದ (South India) ಸಾಂಪ್ರದಾಯಿಕ ರಂಗಭೂಮಿಯಲ್ಲಿ ಕನ್ನಡನಾಡಿನ ಯಕ್ಷಗಾನಕ್ಕೆ (Yakshagana) ಹಿರಿದಾದ ಸ್ಥಾನವಿದೆ. ನೆರೆ ರಾಜ್ಯಗಳ ತೆರಕ್ಕೂತು, ಯಕ್ಷಗಾನಮು, ವಿಧಿನಾಟಕಮು, ಕಥಕ್ಕಳಿ, ರಾಮನಾಟ್ಯಂ, ಕೃಷ್ಣನಾಟ್ಯಂ ಮುಂತಾದ ಸಂಚಾರಿ ಕಲೆಗಳಲ್ಲಿ ಯಕ್ಷಗಾನ ಎದ್ದು ನಿಲ್ಲುವ ಕಲೆ. ಜನಪದ (Folk) ರಂಗಭೂಮಿಯಿಂದ ಟಿಸಿಲೊಡೆದು ಕಾಲದಿಂದ ಕಾಲಕ್ಕೆ ಹೊಸಹೊಸ ಅಂಶಗಳನ್ನು ಸೇರ್ಪಡಿಸಿಕೊಳ್ಳುತ್ತಾ ಯಕ್ಷಗಾನ ಬೆಳೆದು ನಿಂತಿರುವ ಪರಿ ಬೆರಗುಗೊಳಿಸುವಂತದ್ದು. ಡಾರ್ವಿನನ (Charls Darvin) ವಿಕಾಸವಾದದ ಸೂತ್ರದಂತೆ ಬದಲಾದ ಕಾಲಕ್ಕೆ ಸ್ಪಂದಿಸುವುದೇ ಬೆಳವಣಿಗೆಯ, ಜೀವಂತಿಕೆಯ ಲಕ್ಷಣ ಎಂಬುವುದನ್ನು ಯಕ್ಷಗಾನ ಕಲೆ ಕರಗತ ಮಾಡಿಕೊಂಡಿದೆ.

ಏಳು ಶತಕಗಳ ಹಿಂದೆ ಯಕ್ಷಗಾನ ಪ್ರಸಂಗ ರಚನೆ ಪ್ರಾರಂಭವಾದರೂ ಭಕ್ತಿ ಪ್ರಸರಣದ ವಾಹಕವಾದುದು 500 ವರ್ಷಗಳ ಹಿಂದೆ. ಕರ್ನಾಟಕ (Karnataka), ಆಂಧ್ರಗಳೆರಡಕ್ಕೂ ಸುವರ್ಣಯುಗ ತಂದುಕೊಟ್ಟವಿಜಯನಗರ (Vijayanagara Dynasty) ಸಾಮ್ರಾಜ್ಯ ಕಾಲದಲ್ಲಿ ದಾಸ ಸಾಹಿತ್ಯ ಪ್ರವರ್ಧಮಾನಕ್ಕೆ ಬಂತು. ಯಕ್ಷಗಾನವನ್ನು ದಾಸರೂ ಕೂಡ ಅಪ್ಪಿಕೊಂಡರು.

ಜಾತಿ, ಧರ್ಮಗಳ ಎಲ್ಲೆ ಮೀರಿ ನಿಂತ ಯಕ್ಷಗಾನ : ಸರ್ವಧರ್ಮೀಯರು ಯಕ್ಷಗಾನ ಕಲಾವಿದರು

ಉತ್ತರಕರ್ನಾಟಕದಲ್ಲಿ (North Karnataka) ಪ್ರಚುರವಿರುವ ಯಕ್ಷಗಾನ ಪ್ರಬೇಧಗಳಾದ ಬಯಲಾಟ, ದಾಸರಾಟಕ್ಕೆ ಹರಿದಾಸರ ಕೊಡುಗೆ ಅಪಾರ. ಪುರಂದರ ದಾಸರ ಮಗ ಮಧ್ವಮುನಿಪತಿ ದಾಸರು ಯಕ್ಷಗಾನ ಪ್ರಸಂಗಗಳನ್ನು ರಚಿಸಿರುವುದರ ಬಗ್ಗೆ ಉಲ್ಲೇಖವಿದೆ. ರಾಮಾಯಣ, ಮಹಾಭಾರತ, ಭಾಗವತ, ಪುರಾಣಾದಿಗಳನ್ನು ಆಧರಿಸಿ ರಚಿಸಿರುವ ಪ್ರಸಂಗಗಳು ಧರ್ಮದ ಆಶಯವನ್ನು ಜನಮನದಲ್ಲಿ ಬಿತ್ತಿರುವಂತೆಯೇ ಜಾನಪದ ಕತೆ, ಚಾರಿತ್ರಿಕ ಘಟನೆ, ಕಲ್ಪನಾ ವಿಲಾಸಗಳು ಯಕ್ಷಗಾನದ ವಸ್ತುಗಳಾದುವು. ಯಕ್ಷ ಕವಿಗಳು, ಭಾಗವತರು ಶಿಷ್ಟಸಾಹಿತ್ಯದ ಅನೇಕ ಉತ್ತಮ ಅಂಶಗಳನ್ನು, ವಿಚಾರಗಳನ್ನು, ಜೀವನ ಮೌಲ್ಯವನ್ನು ಯಾವ ಎಗ್ಗೂ ಇಲ್ಲದೆ ಸ್ವೀಕರಿಸಿ ಜನಸಾಮಾನ್ಯರಿಗೆ ಉಣಬಡಿಸಿದರು.

ಸಮಕಾಲೀನ ಸ್ಪಂದನಗಳು:

ಯಕ್ಷಗಾನ ಸಾಹಿತ್ಯ (literature) ಕೇವಲ ಓದುಗಬ್ಬವಾಗದೇ ಹಾಡುಗಬ್ಬವಾಗಿ, ಆಡುಗಬ್ಬವಾಗಿ ರಂಗದಲ್ಲಿ ಮೈದಾಳಿದಾಗಲೇ ಸಾರ್ಥಕ್ಯ ಪಡೆಯುತ್ತದೆ. ಯಕ್ಷಗಾನ ಪೌರಾಣಿಕ ಆವರಣದಲ್ಲಿ ಇದ್ದರೂ ಸಮಕಾಲೀನತೆಗೆ ಸದಾ ಸ್ಪಂದಿಸುತ್ತಾ ಅದು ಜೀವಂತಿಕೆ ಪಡೆಯುತ್ತದೆ. ಇದಕ್ಕಾಗಿ ಯಕ್ಷಕವಿಗಳನ್ನು ಹಾಗೂ ಯಕ್ಷ ಕಲಾವಿದರನ್ನು ಅಭಿನಂದಿಸಬೇಕು. ಯಕ್ಷ ಸಾಹಿತ್ಯ ಸ್ವತಂತ್ರ ಪ್ರಕಾರವಾದಂತೆ ಯಕ್ಷಗಾನದ ಹಾಡುಗಾರಿಕೆ , ಬಣ್ಣಗಾರಿಕೆ, ಕುಣಿತ, ಮಾತುಗಾರಿಕೆ ಎಲ್ಲವೂ ಸ್ವತಂತ್ರ ಅಸ್ತಿತ್ವ ಉಳ್ಳವು. ಯಕ್ಷಗಾನದ ಅಸ್ಮಿತೆ ಇರುವುದೇ ಈ ಎಲ್ಲ ಕಲೆಗಳ ಸಮ್ಮಿಲನದಲ್ಲಿ, ಸಮತೋಲನದಲ್ಲಿ .

ಉಡುಪಿಯಲ್ಲಿ ವರ್ಷಕ್ಕೆ 1200 ಮಕ್ಕಳಿಂದ ಯಕ್ಷಗಾನ ಕಲಿಕೆ!

ಒಂದು ಕಾಲಕ್ಕೆ ಗ್ರಾಮೀಣದ ಕಲೆಯಾಗಿದ್ದ ಯಕ್ಷಗಾನ ಇಂದು ಸರ್ವ ಜನರ ಆಡುಂಬೊಲವಾಗಿದೆ. ನಗರೀಕರಣಕ್ಕೆ ಕೂಡ ತನ್ನನ್ನು ತೆರೆದುಕೊಳ್ಳುತ್ತದೆ. ಕಳೆದ ಶತಮಾನದಲ್ಲಿ ಸಮಾಜದಲ್ಲಿ ಉಂಟಾದ ಬದಲಾವಣೆಗಳನ್ನು ಯಕ್ಷಗಾನ ಸ್ವೀಕರಿಸಿದೆ. ಶುದ್ಧ ಕನ್ನಡದ ಬಳಕೆ ಈ ರಂಗದ ಹೆಗ್ಗಳಿಕೆಯಾಗಿದೆ.

ದೇಗುಲಗಳ ಕೊಡುಗೆ: ದೇವಸ್ಥಾನಗಳು ಹರಕೆಯ ರೂಪದಲ್ಲಿ ಈ ಕಲೆಯ ಉಳಿವಿಗೆ ಕಾರಣವಾದುವು. ಆರ್ಥಿಕ ಸುಧಾರಣೆಗಳಿಂದ ಸಂಘಟಕರು ಹೊಸ ಮೇಳವನ್ನು ಕಟ್ಟಿದರು. ಡೇರೆ ಮೆಳಗಳ ಮೂಲಕ ಪ್ರದರ್ಶನ ನಡೆದುವು. ಜನರು ಹಣ ತೆತ್ತು ಆಟವನ್ನು ನೋಡಿದರು. ಬೇರಾವ ಕಲಾಪ್ರಕಾರಕ್ಕೂ ದೊರೆಯದ ಮನ್ನಣೆ ಇದಾಗಿದೆ.

ಕಳೆದ ಶತಮಾನದ ಉತ್ತರಾರ್ಧದಲ್ಲಿ ಯಕ್ಷಗಾನ ಪ್ರದರ್ಶನಗಳು ಜಯಭೇರಿ ಬಾರಿಸುತ್ತಿದ್ದವು. ಕರಾವಳಿ ಹಾಗೂ ಮಲೆನಾಡಿನ ಆರು ಜಿಲ್ಲೆಗಳಲ್ಲಿ ಜನಾಶ್ರಯದಿಂದಾಗಿ ಉಚ್ಛ್ರಾಯ ಸ್ಥಿತಿ ಕಂಡಂತೆ ಉಳಿದ ಭಾಗದಲ್ಲಿ ಈ ಸ್ಥಿತಿಯಿಲ್ಲ. ಮೂಲತಃ ಯಕ್ಷಗಾನ ಪ್ರಸಂಗಗಳನ್ನು ಆಧರಿಸಿ ಪ್ರದರ್ಶನ ನೀಡುವ ಮೂಡಲಪಾಯ, ಘಟ್ಟದ ಕೋರೆಗಳು 14 ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿವೆ. ಆದರೆ ಪ್ರದರ್ಶನಗಳು ನಡೆಯುವುದು ಕಡಿಮೆ. ಜನರ ಆಸಕ್ತಿ ಕೂಡ ಈ ಕಲಾಪ್ರಕಾರವನ್ನು ದಕ್ಕಿಲ್ಲ. ಹವ್ಯಾಸಿ ಸಂಘ ಸಂಸ್ಥೆಗಳಿದ್ದರೂ ಜನರನ್ನು ಸೆಳೆಯುತ್ತಿಲ್ಲ.

ಪೌರಾಣಿಕ ನಾಟಕ, ವೃತ್ತಿ ರಂಗಭೂಮಿ ಹಾಗೂ ಚಲನಚಿತ್ರದಿಂದಾಗಿ ಅಲ್ಲಿನ ಜನತೆ ಮೂಡಲಪಾಯ ಹಾಗೂ ಘಟ್ಟದ ಕೋರೆಗೆ ವಿಮುಖರಾಗಿದ್ದಾರೆ. ಬಯಲಾಟ, ಸಣ್ಣಾಟ, ದಾಸರಾಟ, ಕೃಷ್ಣ ಪಾರಿಜಾತಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. 21ನೇ ಶತಮಾನ, ಅದರ್ಲೂ ಕೊರೋನಾದ ಅವಧಿ ಯಕ್ಷಗಾನ ರಂಗಭೂಮಿಯ ಇಳಿತದ ಕಾಲವಾಗುತ್ತಿದೆ. ಕಲಾವಿದರು, ಸಂಘಟಕರು ಸಂಕಷ್ಟದಲ್ಲಿದ್ದಾರೆ. ಇದನ್ನೇ ಆಶ್ರಯಿಸಿದ ಜನ ಸಮೂಹ ಮುಂದೇನು? ಎಂದು ಕೇಳುತ್ತಿದೆ. ಇಂತಹ ಸ್ಥಿತಿಯಲ್ಲಿ ಸರ್ಕಾರದ ಪಾತ್ರ ಹಿರಿದು.

ಕರ್ನಾಟಕ ರಾಜ್ಯ ಕಲೆಯಾಗಿ ‘ಯಕ್ಷಗಾನ’ ಘೋಷಿಸಲು ಸಿಎಂಗೆ ಮನವಿ

ಸರ್ಕಾರ ಸ್ಪಂದಿಸಲಿ: ಕರ್ನಾಟಕ ಸರ್ಕಾರ ಈ ಬಗ್ಗೆ ಸ್ಪಂದಿಸಬೇಕಿದೆ. ಯಕ್ಷಗಾನವನ್ನು ಕರ್ನಾಟಕದ ಪ್ರಾತಿನಿಧಿಕಲೆ ಎಂದು ಸ್ವೀಕರಿಸಿ ಇದಕ್ಕೆ ಅಗತ್ಯವುಳ್ಳ ಪ್ರೋತ್ಸಾಹ ನೀಡಬೇಕಾಗಿದೆ. ಕರ್ನಾಟಕದಾದ್ಯಂತ ಯಕ್ಷಗಾನ ಕಲೆಯನ್ನು ಮರುವೈಭವವನ್ನು ಗಳಿಸುವಂತಾಗಬೇಕು. ಈ ನಿಟ್ಟಿನಲ್ಲಿ ಯಕ್ಷಗಾನ ಕಲಾವಿದರು, ಅಭಿಮಾನಿಗಳು, ಸಂಘಟಕರು, ಕಲಾಪೋಷಕರು ಒಂದಾಗಿ ಸರ್ಕಾರದ ಗಮನ ಸೆಳೆಯಬೇಕು. ಕರ್ನಾಟಕ ಯಕ್ಷಗಾನ ಅಕಾಡೆಮಿ ಕೂಡ ಒಂದು ಮಹತ್ತರ ಯೋಜನೆ ಸಿದ್ಧಪಡಿಸಿ ಮುಂದಿನ ವರ್ಷಗಳಲ್ಲಿ ಈ ಕಲೆಗೆ ಬೇಕಾದ ರೂಪುರೇಷೆಗಳನ್ನು ಸಿದ್ಧಪಡಿಸಬೇಕು. ಅದೇ ರೀತಿ ಯಕ್ಷ ಸಾಹಿತ್ಯಕ್ಕೆ ವಿದ್ವತ್‌ ವಲಯದ ಮನ್ನಣೆ ಇನ್ನಷ್ಟುಬರಬೇಕಾಗಿದೆ. ಸಾಹಿತ್ಯ ಸಮ್ಮೇಳನಗಳಲ್ಲಿ ಯಕ್ಷಗಾನ ಸಾಹಿತ್ಯಕ್ಕೆ ಸಂಬಂಧಿಸಿದ ಗೋಷ್ಠಿಗಳು ಏರ್ಪಡಬೇಕಾಗಿದೆ.

ಆಧುನಿಕ ತಂತ್ರಜ್ಞಾನದ ಬಳಕೆ ಕೂಡ ಇಂದಿನ ತುರ್ತಾಗಿದ್ದು, ಯಕ್ಷಗಾನ ರಂಗದಲ್ಲಿ ಸಕ್ರಿಯರಾಗಿರುವವರು ಆದಷ್ಟುತಂತ್ರಜ್ಞಾನ ಬಳಸಬೇಕು. ನಮ್ಮ ಯಕ್ಷಗಾನ ಕಲೆಯನ್ನು ಇನ್ನಷ್ಟುಬೆಳೆಸುವಲ್ಲಿ, ಎತ್ತರಿಸುವಲ್ಲಿ ತಂತ್ರಜ್ಞಾನದ ಪಾತ್ರ ಮುಂದಿನ ದಿನಗಳಲ್ಲಿ ಮಹತ್ತರವಾಗಿರುತ್ತದೆ. ಬದಲಾವಣೆಗೆ ಸದಾ ಸ್ಪಂದಿಸುವ ಯಕ್ಷಗಾನ ಇದಕ್ಕೆಲ್ಲ ಹೇಗೆ ತೆರೆದುಕೊಳ್ಳುತ್ತದೆ ಎನ್ನುವುದು ಅಧ್ಯಯನಯೋಗ್ಯ ಸಂಗತಿ.

-ಡಾ.ಆನಂದರಾಮ ಉಪಾಧ್ಯ, ಯಕ್ಷಗಾನ ಸಂಶೋಧಕರು.

click me!