ಪೆನ್‌ಡ್ರೈವ್‌ ಕೇಸಿಗೆಂದೇ ಡಿಕೆಶಿಯಿಂದ 4 ಸಚಿವರ ತಂಡ: ದೇವರಾಜೇಗೌಡ

By Kannadaprabha NewsFirst Published May 18, 2024, 4:52 AM IST
Highlights

ಡಿ.ಕೆ.ಶಿವಕುಮಾರ್‌ ಅವರು ತಮಗೆ 100 ಕೋಟಿ ಆಫರ್‌ ನೀಡಿದ್ದರು ಎಂದು ಆರೋಪಿಸಿದ ಅವರು, ನಾನು ಜೈಲಿಂದ ಹೊರಬಂದ ದಿನವೇ ರಾಜ್ಯ ಸರ್ಕಾರ ಪತನವಾಗಲಿದೆ ಎಂದು ಹೇಳಿದ ವಕೀಲ ದೇವರಾಜೇಗೌಡ 

ಹಾಸನ(ಮೇ.18):  ಸಂಸದ ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್‌ ಪ್ರಚಾರದ ಹಿಂದೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕುತಂತ್ರ ಇದೆ. ಈ ಪ್ರಕರಣ ಇಟ್ಟುಕೊಂಡು ಜೆಡಿಎಸ್‌ ಮುಗಿಸಲು ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಕೆಟ್ಟ ಹೆಸರು ತರಲೆಂದೇ ಯೋಜನೆ ಹಾಕಿದ್ದರು. ಅದಕ್ಕೆಂದೇ ನಾಲ್ಕು ಸಚಿವರನ್ನೊಳಗೊಂಡ ಒಂದು ತಂಡವನ್ನೂ ಸಜ್ಜುಗೊಳಿಸಿದ್ದರು ಎಂದು ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ವಕೀಲ ದೇವರಾಜೇಗೌಡ ಗಂಭೀರ ಆರೋಪ ಮಾಡಿದ್ದಾರೆ.

ಪೆನ್‌ಡ್ರೈವ್‌ ಹಂಚಿಕೆ ಪ್ರಕರಣದಲ್ಲಿ ಸಿಲುಕಿರುವ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ದೇವರಾಜೇಗೌಡ ಅವರು ತಮ್ಮನ್ನು ಎಸ್‌ಐಟಿಗೆ ಹಸ್ತಾಂತರಿಸುವ ವೇಳೆ ಶುಕ್ರವಾರ ಮಾಧ್ಯಮದೊಂದಿಗೆ ಮಾತನಾಡಿದರು. ಡಿ.ಕೆ.ಶಿವಕುಮಾರ್‌ ಅವರು ತಮಗೆ 100 ಕೋಟಿ ಆಫರ್‌ ನೀಡಿದ್ದರು ಎಂದು ಆರೋಪಿಸಿದ ಅವರು, ನಾನು ಜೈಲಿಂದ ಹೊರಬಂದ ದಿನವೇ ರಾಜ್ಯ ಸರ್ಕಾರ ಪತನವಾಗಲಿದೆ ಎಂದು ಹೇಳಿದರು.

Latest Videos

HD Revanna ಲೈಂಗಿಕ ದೌರ್ಜನ್ಯ ಪ್ರಕರಣ, ಮೇ.20ರವರೆಗೆ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಕೋರ್ಟ್

‘ಪೆನ್‌ಡ್ರೈವ್‌ ಕೇಸಲ್ಲಿ ನನ್ನ ಮಧ್ಯಸ್ಥಿಕೆ ಮಾಡಿಸಿದ್ದು ಮಾಜಿ ಸಂಸದ ಶಿವರಾಮೇಗೌಡ. ನನ್ನ ಬಂಧನಕ್ಕೆ ಡಿ.ಕೆ.ಶಿವಕುಮಾರ್ ಅವರೇ ನೇರ ಹೊಣೆ. ಡಿ.ಕೆ.ಶಿವಕುಮಾರ್‌ ನನಗೆ 100 ಕೋಟಿ ರುಪಾಯಿ ಆಫರ್‌ ನೀಡಿದ್ದರು. ಐದು ಕೋಟಿ ರುಪಾಯಿ ಅಡ್ವಾನ್ಸ್ ಅನ್ನು ಬೌರಿಂಗ್ ಕ್ಲಬ್‌ನ 110ನೇ ಕೊಠಡಿಗೆ ಕಳುಹಿಸಿದ್ದರು. ಚನ್ನರಾಯಪಟ್ಟಣದ ಗೋಪಾಲಸ್ವಾಮಿ ಅವರನ್ನು ಐದು ಕೋಟಿ ರು. ಜತೆಗೆ ನನ್ನೊಂದಿಗೆ ಸಂಧಾನಕ್ಕಾಗಿಯೇ ಕಳುಹಿಸಿಕೊಟ್ಟಿದ್ದರು ಎಂದರು.

ಡಿ.ಕೆ.ಶಿವಕುಮಾರ್ ಅವರು ನನ್ನನ್ನು ಕರೆಸಿ ಪೆನ್‌ಡ್ರೈವ್‌ ಅನ್ನು ಕುಮಾರಸ್ವಾಮಿ ಅವರೇ ಹಂಚಿದರು ಅಂತ ಆರೋಪ ಮಾಡು. ನಿನಗೆ ಯಾವುದೇ ಸಮಸ್ಯೆ ಆಗಲ್ಲ. ನಾನು ನಿನ್ನನ್ನು ಕಾಪಾಡುತ್ತೇನೆ ಎಂದು ಹೇಳಿದರು. ನಾನು ಅದಕ್ಕೆ ಒಪ್ಪದಿದ್ದಾಗ ಜಾತಿ ನಿಂದನೆ ಕೇಸ್‌ನಲ್ಲಿ ಫಿಕ್ಸ್ ಮಾಡಿಸಿದರು ಎಂದು ಆರೋಪಿಸಿದರು.

ನಾಲ್ಕು ಜನ ಸಚಿವರ ತಂಡ: ‘ಪ್ರಜ್ವಲ್‌ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್ ಕರೆಸಿಕೊಂಡು ಸಂಪೂರ್ಣ ಮಾಹಿತಿ ಪಡೆದು ಪೆನ್‌ಡ್ರೈವ್ ರೆಡಿ ಮಾಡಿದ್ದೇ ಡಿ.ಕೆ.ಶಿವಕುಮಾರ್. ಇದೆಲ್ಲ ಕುತಂತ್ರಕ್ಕಾಗಿ ನಾಲ್ಕು ಜನ ಮಂತ್ರಿಗಳ ಕಮಿಟಿ ಮಾಡಿದರು. ಚೆಲುವರಾಯಸ್ವಾಮಿ, ಕೃಷ್ಣಬೈರೇಗೌಡ, ಪ್ರೀಯಾಂಕ್‌ ಖರ್ಗೆ ಮತ್ತು ಇನ್ನೊಬ್ಬ ಸಚಿವರು ಇದರಲ್ಲಿದ್ದರು. ಈ ಮಂತ್ರಿಗಳ ತಂಡವನ್ನು ಪೆನ್‌ಡ್ರೈವ್‌ ಕೇಸ್‌ ಹ್ಯಾಂಡಲ್ ಮಾಡಲು ಬಿಟ್ಟಿದ್ದರು’ ಎಂದು ತಿಳಿಸಿದರು.

‘ಒಂದೇ ಏಟಿಗೆ ಕುಮಾರಸ್ವಾಮಿ ಹಾಗೂ ಮೋದಿಗೆ ಕೆಟ್ಟ ಹೆಸರು ತರುವ ದುರುದ್ದೇಶ ಅವರದಾಗಿತ್ತು. ಮೋದಿಯನ್ನು ಹಗರಣದಲ್ಲಿ ಬಿಂಬಿಲಿಸಿ ಬಿಜೆಪಿಗೆ ಕೆಟ್ಟ ಹೆಸರು ತರಬೇಕೆಂಬುದು ಅವರ ಪ್ಲ್ಯಾನ್‌ ಆಗಿತ್ತು. ಅವರ ಯಾವ ಆಮಿಷಗಳಿಗೂ ನಾನು ಒಪ್ಪಲಿಲ್ಲ. ಹಾಗಾಗಿಯೇ ನನ್ನ ಮೇಲೆ ಲೈಂಗಿಕ ಕಿರುಕುಳದ ಕೇಸ್ ಹಾಕಿಸಿದರು. ಅದರಲ್ಲಿ ಸಾಕ್ಷ್ಯ ಸಿಗಲಿಲ್ಲ. ಅದಾದ ಮೇಲೆ ರೇಪ್ ಕೇಸ್ ಹಾಕಿಸಿದರು. ಅದರಲ್ಲೂ ಸಾಕ್ಷ್ಯ ಸಿಗಲಿಲ್ಲ. ಏನಾದರೂ ಮಾಡಿ ದೇವರಾಜೇಗೌಡರನ್ನು ಮಟ್ಟ ಹಾಕಬೇಕು ಅಂತ ಹೇಳಿ ಈಗ ಪೆನ್‌ಡ್ರೈವ್ ಕೇಸ್‌ನಲ್ಲಿ ಸಿಲುಕಿಸಿದ್ದಾರೆ. ಇದೆಲ್ಲ ಡಿ.ಕೆ.ಶಿವಕುಮಾರ್ ಕುತಂತ್ರ. ಮುಂದಿನ ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸುವ ನಿಟ್ಟಿನಲ್ಲಿ ನಾನು ಕಾನೂನು ಹೋರಾಟ ಮಾಡುತ್ತೇನೆ’ ಎಂದು ಕಿಡಿಕಾರಿದರು.

ಕಾರ್ತಿಕ್‌ ಪತ್ನಿ ಕಿಡ್ನಾಪ್‌ ವಿಡಿಯೋ ಇದೆ:

‘ಅವರಿಗೆ ಸಿಕ್ಕಿರುವ ಪೆನ್‌ಡ್ರೈವ್‌ನಲ್ಲಿ ಕಾರ್ತಿಕ್ ಪತ್ನಿ ಕಿಡ್ನಾಪ್ ಪ್ರಕರಣದ ವಿಡಿಯೋ ಇದೆ. ಡಿ.ಕೆ.ಶಿವಕುಮಾರ್ ಅವರು ನನ್ನೊಂದಿಗೆ ಮಾತನಾಡಿರುವ ಆಡಿಯೋ ನನ್ನ ಬಳಿಯೇ ಸುರಕ್ಷಿತವಾಗಿದೆ. ಸದ್ಯದಲ್ಲೇ ಅದು ಬಿಡುಗಡೆಯಾಗಲಿದೆ. ನಾನು ಹೊರಗೆ ಬಂದ ದಿನ ಸರ್ಕಾರದ ಪತನವಾಗಲಿದೆ ಎಂದರು.

ಇದೇ ವೇಳೆ ಎಸ್ಐಟಿ ನನ್ನ ಮನೆ ಜಾಲಾಡಿದರೂ ಅವರಿಗೆ ಏನೂ ಸಿಗಲ್ಲ. ನನ್ನ ಬಳಿ ಇರುವ ಸಾಕ್ಷಿ ಬೇರೆಲ್ಲೋ ಇದೆ. ಸಾಕ್ಷಿಯನ್ನು ಭದ್ರವಾಗಿಟ್ಟಿದ್ದೇನೆ. ಪೊಲೀಸ್‌ ಕಸ್ಟಡಿಯಲ್ಲಿ ನಾಲ್ಕು ದಿನಗಳ ಕಾಲ ನನ್ನನ್ನು ವಿಚಾರಣೆ ಮಾಡಿದ್ದಾರೆ. ಇದರಲ್ಲಿ ಎಸ್ಪಿ, ಐಜಿ ಶಾಮೀಲಾಗಿದ್ದಾರೆ’ ಎಂದು ದೇವರಾಜೇಗೌಡ ಆರೋಪಿಸಿದರು.

ಸತ್ಯ ಹೊರಬರಲಿದೆ:

ಪೆನ್‌ಡ್ರೈವ್‌ ಪ್ರಕರಣದ ತನಿಖೆ ಪೂರ್ಣಗೊಂಡರೆ ಸತ್ಯ ಹೊರಬೀಳಲಿದೆ. ನಾನು ಸತ್ಯ, ಧರ್ಮದ ಪರ ಹೋರಾಟ ಮಾಡುವ ನಾಯಕ. ಇಂಥದ್ದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಯಾವ ಷಡ್ಯಂತ್ರದಿಂದಲೂ ಯಾರೂ ಏನೂ ಮಾಡಲು ಆಗಲ್ಲ. ಅಂತಿಮವಾಗಿ ಎಲ್ಲರೂ ಕಾನೂನಿಗೆ ತಲೆ ಬಾಗಲೇಬೇಕು’ ಎಂದು ಇದಕ್ಕೂ ಮುನ್ನ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎಲ್ಲಿದ್ದೀಯಪ್ಪಾ ಪ್ರಜ್ವಲ್?: 20 ದಿನಗಳಿಂದ ಅಜ್ಞಾತವಾಸ, ನಿತ್ಯಾನಂದನ ದಾರಿ ತುಳಿತಾನಾ ಪೆನ್‌ಡ್ರೈವ್ ವೀರ?

ದೇವರಾಜೇಗೌಡ ಎಸ್ಐಟಿ ಕಸ್ಟಡಿಗೆ

ಹೊಳೆನರಸೀಪುರ: ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡರನ್ನು ಮೇ 24ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಜೆಎಂಎಫ್‌ಸಿ ನ್ಯಾಯಾಲಯ ಶುಕ್ರವಾರ ಆದೇಶ ನೀಡಿದೆ. ಈ ನಡುವೆ, ಸಂಸದ ಪ್ರಜ್ವಲ್‌ ದೇವೇಗೌಡರ ಅವರ ಪೆನ್‌ಡ್ರೈವ್‌ ಹಂಚಿಕೆ ಪ್ರಕರಣದಲ್ಲಿ ವಿಚಾರಣೆಗಾಗಿ ಎಸ್‌ಐಟಿ ಅವರನ್ನು ವಶಕ್ಕೆ ಪಡೆದಿದ್ದು, ಬೆಂಗಳೂರಿಗೆ ಕರೆದೊಯ್ದಿದೆ.

ಪಟ್ಟಣದ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬಳು ನೀಡಿದ್ದ ದೂರಿನಂತೆ ಮೇ 10ರಂದು ದೇವರಾಜೇಗೌಡರನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಹೊಳೆನರಸೀಪುರದ ಜೆಎಂಎಫ್‌ಸಿ ನ್ಯಾಯಾಲಯವು ಅವರನ್ನು 3 ದಿನ ಪೊಲೀಸ್‌ ಕಸ್ಟಡಿಗೆ ನೀಡಿತ್ತು. ಆ ಅವಧಿ ಮುಗಿದ ಕಾರಣ ಶುಕ್ರವಾರ ಬೆಳಗ್ಗೆ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮೇ 24ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ನಡುವೆ, ಅವರನ್ನು ಪೆನ್‌ಡ್ರೈವ್‌ ಕೇಸಿನ ವಿಚಾರಣೆಗಾಗಿ ನ್ಯಾಯಾಲಯದ ಅನುಮತಿ ಪಡೆದು ಎಸ್‌ಐಟಿ ಬೆಂಗಳೂರಿಗೆ ಕರೆದೊಯ್ದಿದೆ.

click me!