ಕೋವಿಡ್‌ ಅಬ್ಬರದಲ್ಲೂ ರಾಜಕಾರಣಿಗಳ ಹಿಂಬಾಲಕರು ರಾಜಕೀಯವನ್ನೇ ಮಾಡುತ್ತಿದ್ದಾರೆ!

By Kannadaprabha NewsFirst Published Apr 30, 2021, 9:31 AM IST
Highlights

ವಿಶ್ವ ಆರೋಗ್ಯ ಸಂಸ್ಥೆ ಎಲ್ಲಿಯೂ ಕೂಡ ಕೋವಿಡ್‌ ಸೋಂಕಿತರಿಗೆ ರೆಮ್‌ಡೆಸಿವಿರ್‌ ಮತ್ತು ತೋಸಿಲೊಜಿಎಂಬಿ ಚುಚ್ಚುಮದ್ದು ಕೊಡಲೇಬೇಕು ಎಂದು ಹೇಳಿಲ್ಲ. 

ನವದೆಹಲಿ (ಏ. 30): ಕಳೆದ ಹತ್ತು ದಿನಗಳಿಂದ ಟೀವಿಯಲ್ಲಿ ಸಾಮೂಹಿಕ ಅಂತ್ಯಸಂಸ್ಕಾರ, ಬೆಡ್‌ ಸಿಗದೆ ಸೋಂಕಿತರ ಸಂಬಂಧಿಕರ ರೋದನದ ಹೃದಯ ವಿದ್ರಾವಕ ದ್ರಶ್ಯಗಳು ನೋಡಲು ಸಿಕ್ಕರೆ, ಪತ್ರಿಕೆ ತೆರೆದರೆ ಸಾಕು ವೈರಸ್ಸಿನ ಅಟ್ಟಹಾಸದ ಹೊಸ ಹೊಸ ಆಯಾಮಗಳು ಓದಲು ಸಿಗುತ್ತವೆ. ಯಾವುದೂ ಬೇಡ ಎಂದು ಫೋನ್‌ ತೆಗೆದುಕೊಂಡರೆ ಯಾರೋ ಹತ್ತಿರದವರ ಸಾವಿನ ಸುದ್ದಿ ಕಿವಿಗೆ ಅಪ್ಪಳಿಸಿ ಒಂದು ಕಡೆ ಕಳೆದುಕೊಂಡ ದುಃಖ, ಇನ್ನೊಂದು ಕಡೆ ತನಗೇ ಹೀಗಾದರೆ ಎಂಬ ಹೆದರಿಕೆ ಮಸ್ತಿಷ್ಕವನ್ನು ಆವರಿಸುತ್ತದೆ. ಒಟ್ಟಾರೆ ನರಳಾಟ, ಗೋಳಾಟದ ಸುದ್ದಿಗಳ ಮಧ್ಯೆ ಆತಂಕದಲ್ಲೇ ಬದುಕಬೇಕಾದ ದುರಿತ ದಿನಗಳಿವು.

ಕಳೆದ ವರ್ಷದ ಕೊರೋನಾದ ಜೊತೆಗಿನ ಮೊದಲ ಯುದ್ಧದಲ್ಲಿ ಬಾಂಬ್‌ ಎಲ್ಲೋ ದೂರ ಅಪ್ಪಳಿಸಿದ್ದು ನೋಡಲು ಸಿಗುತ್ತಿತ್ತು. ಈಗ ಎರಡನೇ ಯುದ್ಧದಲ್ಲಿ ಬಾಂಬ್‌ ಇಲ್ಲೇ ಹತ್ತಿರದಲ್ಲಿ ಬೀಳುತ್ತಿದೆ. ಪರಿಣತರು ಹೇಳುವಂತೆ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಎರಡನೇ ಅಲೆ ಕಡಿಮೆಯಾಗಿ ನೂರನೇ ದಿನಕ್ಕೆ ಮೂರನೇ ಅಲೆ ಶುರು ಆಗಬಹುದು. ಆದರೆ, ನಮ್ಮ ರಾಜಕೀಯ ಪಕ್ಷಗಳು ಮತ್ತು ಅವರ ಪುಢಾರಿಗಳಿಗೆ ಪ್ರಶಂಸೆ ಮತ್ತು ಟೀಕೆಗಳ ಅತಿರೇಕ ಬಿಟ್ಟು ಏನೂ ಕಾಣುತ್ತಿಲ್ಲ. ಆಡಳಿತಾರೂಢ ಪಕ್ಷದ ಸಮರ್ಥಕರಿಗೆ ಕೇಂದ್ರ ಸರ್ಕಾರ ಏನೂ ತಪ್ಪೇ ಮಾಡಿಲ್ಲ, ಎಲ್ಲ ರಾಜ್ಯ ಸರ್ಕಾರದ್ದೇ ತಪ್ಪು ಎಂದು ಕಾಣಿಸುತ್ತದೆ.

ಕೇವಲ 2 ಲಸಿಕೆ ಉತ್ಪಾದಕ ಕಂಪನಿಗಳ ಮೇಲೆ ಸರ್ಕಾರ ಅವಲಂಬಿತವಾಗಿದ್ದೇ ತಪ್ಪಾಯಿತೇ.?

ಇನ್ನೊಂದು ಕಡೆ 2014ರಿಂದ ಮೋದಿಯನ್ನು ಏನಕೇನ ಟೀಕಿಸುತ್ತಲೇ ಇರುವ ಕೆಲವರು ಈ ಸಂಕಟದಲ್ಲೂ ವಿಘ್ನ ಸಂತೋಷಿಗಳಂತೆ ವರ್ತಿಸುತ್ತಿದ್ದಾರೆ. ಸಮಸ್ಯೆಗೆ ಪರಿಹಾರ, ಸಂಕಟಕ್ಕೆ ಸಮಾಧಾನ ಹೇಳುವ ಬದಲು ನಿಂದಾ ಸುಖದಲ್ಲಿ ಕೆಲವರು ವ್ಯಸ್ತರಾಗಿದ್ದಾರೆ. ಕಣ್ಣ ಮುಂದಿರುವ ತಲೆಮಾರುಗಳು ಸ್ವಸ್ಥರಾಗಿ ಉಳಿದರೆ ತಾನೇ ಈ ರಾಜಕಾರಣ, ಲೀಡರ್‌ಗಿರಿ, ವಿಚಾರಧಾರೆ, ಮೀಡಿಯಾ, ಫೇಸ್‌ಬುಕ್‌, ಟ್ವೀಟರ್‌ಗಳಿಗೆಲ್ಲ ಬೆಲೆ. ಇಲ್ಲವಾದರೆ ಅವೆಲ್ಲ ಇತಿಹಾಸಕ್ಕೆ ಸರಕುಗಳು ಅಷ್ಟೆ.

ಗೌಡರ ಮೇಲೆ ಮೋದಿ ಪ್ರೀತಿ

ಕೊರೋನಾ ಎರಡನೇ ಅಲೆ ಜೋರಾದಾಗ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಲಸಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಕೆಲ ಸಲಹೆಗಳನ್ನು ನೀಡಿ ಪತ್ರ ಬರೆದರು. ಅದನ್ನು ನೋಡಿ ಮಂತ್ರಿಗಳೆಲ್ಲ ಕೆಂಡಾಮಂಡಲರಾಗಿದ್ದರು. ಅಷ್ಟಕ್ಕೂ ಸಿಂಗ್‌ ಸಾಹೇಬರು ಹೇಳಿದ್ದು ಲಸಿಕೆ ಪ್ರಕ್ರಿಯೆ ಚುರುಕುಗೊಳಿಸಿ, ಖಾಸಗಿಯವರಿಗೆ ಅವಕಾಶ ಕೊಡಿ ಎಂದಷ್ಟೇ. ಡಾ.ಮನಮೋಹನ್‌ ಸಿಂಗ್‌ರಿಗೆ ಫೋನ್‌ ಮಾಡಿ ಸರ್ಕಾರ ಏನು ಮಾಡಿದೆ, ನಿಮ್ಮ ಸಲಹೆ ಏನೇನು ಎಂದು ಕೇಳಿದರೆ ವಿಷಯ ಮುಗಿಯುತ್ತಿತ್ತು. ಆದರೆ, ಡಾ.ಮನಮೋಹನ್‌ ಸಿಂಗ್‌ರಿಗೆ ಡಾ.ಹರ್ಷವರ್ಧನ್‌ರಿಂದ ಖಾರವಾದ ಪತ್ರ ಬರೆಸಲಾಯಿತು.

ಮಂತ್ರಿಗಳು ಸರಣಿ ಟೀಕಾಸ್ತ್ರ ಎಸೆದರು. ಆದರೆ, ಆಶ್ಚರ್ಯವೆಂಬಂತೆ ಮರುದಿನ ದೇವೇಗೌಡರು ಪತ್ರ ಬರೆದ ನಂತರ ಸ್ವತಃ ಪ್ರಧಾನಿಯೇ ಫೋನ್‌ ಮಾಡಿ ಮಾತನಾಡಿ ಸಲಹೆ ಕೇಳಿದರು. ಆರೋಗ್ಯ ವಿಚಾರಿಸಿದರು. ಆದರೆ, ಮನಮೋಹನ್‌ ಪತ್ರದ ನಂತರ ಸರ್ಕಾರ ಎಚ್ಚೆತ್ತಿದ್ದು ನಿಜ. ಪಶ್ಚಿಮ ಬಂಗಾಳದ ಚುನಾವಣಾ ರಾರ‍ಯಲಿಗಳು ರದ್ದುಗೊಂಡವು. ಹೊಸ ಲಸಿಕೆ ನೀತಿ ತರಲಾಯಿತು. ಆಳುವ ಪ್ರಭುಗಳು ರಚನಾತ್ಮಕ ಟೀಕೆ ಮತ್ತು ಸಲಹೆಗಳನ್ನು ಮುಕ್ತವಾಗಿ ಸ್ವೀಕರಿಸುವುದು ಒಳ್ಳೆಯದಲ್ಲವೇ?

ಮೋದಿಗೆ ಆಪ್ತರಾಗಿದ್ದ ಪ್ರಶಾಂತ್ ಕಿಶೋರ್ ವಿರೋಧ ಪಾಳ ಸೇರಿದ್ಹೇಗೆ..?

ಭ್ರಷ್ಟಾಚಾರ ಮತ್ತು ಲೂಟಿ

ಎರಡನೇ ಅಲೆ ಅಪ್ಪಳಿಸಿದ ರಭಸಕ್ಕೆ ನಮ್ಮ ದೇಶದ ಮಹಾನಗರಗಳ ಆರೋಗ್ಯ ವ್ಯವಸ್ಥೆ ಅಪ್ಪಚ್ಚಿಯಾಗಿದೆ. ತಯಾರಿ ಕೊರತೆ ಎದ್ದು ಕಾಣುತ್ತಿರುವುದು ಹೌದಾದರೂ ಕೂಡ ವ್ಯವಸ್ಥೆಯ ಭ್ರಷ್ಟಾಚಾರವೇ ಈ ಹಾಹಾಕಾರಕ್ಕೆ ಮೂಲ ಕಾರಣ. ಮೊದಲ ಅಲೆ ಬಂದಾಗ ಸಾವಿರಾರು ಕೋಟಿ ಖರ್ಚು ಮಾಡಿದ್ದು ಈಗ ಏಲ್ಲೂ ಕಾಣುತ್ತಿಲ್ಲ. ಕಳೆದ ಒಂದು ವರ್ಷದಲ್ಲಿ ಉದ್ಯಮಿಗಳು, ಸಣ್ಣ ವ್ಯಾಪಾರಿಗಳು, ನೌಕರದಾರರು, ಕೂಲಿ ಕಾರ್ಮಿಕರು ಎಲ್ಲರ ಆದಾಯಕ್ಕೂ ಕತ್ತರಿ ಬಿದ್ದಿದೆ. ಅಷ್ಟೇ ಏಕೆ ಸರ್ಕಾರ ಕೂಡ ತೆರಿಗೆ ಇಲ್ಲದೆ ಬಡವಾಗಿದೆ.

ಆದರೆ ಸರ್ಕಾರಗಳನ್ನು ನಡೆಸುತ್ತಿರುವ ಕೆಲ ರಾಜಕಾರಣಿಗಳು ಮತ್ತು ಅಧಿಕಾರಿಗಳು ಮಾತ್ರ ದುಪ್ಪಟ್ಟು ವೇಗದಿಂದ ಶ್ರೀಮಂತರಾಗುತ್ತಿದ್ದಾರೆ. ಹಿಂದೆ ಒಂದು ಬರ, ಒಂದು ಪ್ರವಾಹ ಬಂದರೆ ಸಾಕು ಅಧಿಕಾರದಲ್ಲಿರುವವರಿಗೆ ಸುಗ್ಗಿ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಆಸ್ಪತ್ರೆಯ ಹಾಹಾಕಾರ, ನರಳಾಟ, ಕೂಗಾಟ, ಸ್ಮಶಾನದ ರೋದನ ಎಲ್ಲವೂ ಕೆಲವರಿಗೆ ಜಾತ್ರೆ ಅಷ್ಟೇ. ಈ ಭ್ರಷ್ಟಾಚಾರದಿಂದ ಹೊರಗೆ ತರದೆ ಭಾರತವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ ಬಿಡಿ.

ಇಂಜೆಕ್ಷನ್‌ ತರೋದು ಎಲ್ಲಿಂದ?

ವಿಶ್ವ ಆರೋಗ್ಯ ಸಂಸ್ಥೆ ಎಲ್ಲಿಯೂ ಕೂಡ ಕೋವಿಡ್‌ ಸೋಂಕಿತರಿಗೆ ರೆಮ್‌ಡೆಸಿವಿರ್‌ ಮತ್ತು ತೋಸಿಲೊಜಿಎಂಬಿ ಚುಚ್ಚುಮದ್ದು ಕೊಡಲೇಬೇಕು ಎಂದು ಹೇಳಿಲ್ಲ. ಆದರೆ, ಸೋಂಕಿತರ ಸ್ಥಿತಿ ಗಂಭೀರವಾಗಿ ಆಮ್ಲಜನಕದ ಕೊರತೆ ಜಾಸ್ತಿ ಆದಾಗ ಸ್ಥಳೀಯ ವೈದ್ಯರು ಈ ಇಂಜೆಕ್ಷನ್‌ ಕೊಟ್ಟು ನೋಡೋಣ ಎನ್ನುತ್ತಾರೆ. ಅಗತ್ಯವಾದಷ್ಟುಇಂಜೆಕ್ಷನ್‌ ಪೂರೈಕೆ ಮಾಡಲು ವಿಫಲವಾಗುತ್ತಿರುವ ಸರ್ಕಾರ ಈ ಇಂಜೆಕ್ಷನ್‌ಗಳಿಂದ ಜಾಸ್ತಿ ಉಪಯೋಗವಿಲ್ಲ ಎಂದೆಲ್ಲ ಏನೇ ಹೇಳಬಹುದು, ಆದರೆ ಪ್ರಾಣ ಬಿಡುವ ರೋಗಿಯನ್ನು ಉಳಿಸಲು ಈ ಇಂಜೆಕ್ಷನ್‌ ಕೊಟ್ಟು ಕೊನೆ ಪ್ರಯತ್ನ ಮಾಡೋಣ ಎಂದು ವೈದ್ಯರು ಹೇಳುತ್ತಿರುವುದರಿಂದ ಆಸಹಾಯಕ ಸಂಬಂಧಿಗಳು ಕಾಳಸಂತೆಯಲ್ಲಿ 5 ಪಟ್ಟು ದುಡ್ಡು ಕೊಟ್ಟು ಇಂಜೆಕ್ಷನ್‌ ಖರೀದಿಸುತ್ತಿದ್ದಾರೆ.

ಬಂಡಾಯಗಾರ ಯತ್ನಾಳ್ ಬಗ್ಗೆ ಹೈಕಮಾಂಡ್‌ಗೆ ಸಾಫ್ಟ್ ಕಾರ್ನರ್ ಯಾಕೆ.?

ಹೀಗಾಗಿ ಒಂದು ರೆಮ್‌ಡೆಸಿವಿರ್‌ನ ಬೆಲೆ 5 ಸಾವಿರದಿಂದ 25ಕ್ಕೆ ಹೋಗಿದ್ದರೆ, ತೋಸಿಲೊಜಿಎಂಬಿ ಬೆಲೆ 40 ಸಾವಿರ ಇದ್ದದ್ದು 80ಕ್ಕೆ ಹೋಗಿದೆ. ಸ್ವಿಸ್‌ ಕಂಪನಿ ತಯಾರಿಸುವ ಈ ತೋಸಿಲೊಜಿಎಂಬಿ ಚುಚ್ಚುಮದ್ದು ಅತ್ಯಂತ ಆಮ್ಲಜನಕ ಕೊರತೆ ಇರುವ ಎನ್‌ಆಯ್‌ವಿ ವೆಂಟಿಲೇಟರ್‌ ಮೇಲೆ ಹೋಗಿರುವ ರೋಗಿಗೆ ಕೊಡಲಾಗುತ್ತದೆ. ಆದರೆ ಭಾರತದಲ್ಲಿ ಕಳೆದ 25 ದಿನಗಳಿಂದ ಈ ಇಂಜೆಕ್ಷನ್‌ ಸರಳ ಅಧಿಕೃತ ಮಾರ್ಗದಲ್ಲಿ ಸಿಗುತ್ತಿಲ್ಲ. ಈ ಕೊರತೆಯ ಹೊಣೆ ಸರ್ಕಾರದ್ದೇ ತಾನೆ? ಬೇಕಾಗುವಷ್ಟುಆಮ್ಲಜನಕ ಮತ್ತು ಈ ಎರಡು ಇಂಜೆಕ್ಷನ್‌ಗಳನ್ನು ಪೂರೈಕೆ ಮಾಡಿರಪ್ಪ ಸಾಕು ಎಂದು ಕೇಳಿದರೂ ಸರ್ಕಾರಗಳಿಂದ ಅದು ಸಾಧ್ಯ ಆಗುತ್ತಿಲ್ಲ.

ಸಿಟ್ಟಿನಿಂದ ಅಬ್ಬರಿಸಿದ ಪ್ರಧಾನಿ

ಮಂತ್ರಿಗಳ ಜೊತೆ, ಅಧಿಕಾರಿಗಳ ಜೊತೆಗಿನ ಸಭೆಗಳಲ್ಲಿ ಪ್ರಧಾನಿ ಮೋದಿ ಸಿಟ್ಟಿನಿಂದ ಕೂಗಾಡುವುದು ಕಡಿಮೆ. ಆದರೆ ಕಳೆದ ವಾರ ನಡೆದ ಕ್ಯಾಬಿನೆಟ್‌ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಮತ್ತು ಆರೋಗ್ಯ ಕಾರ್ಯದರ್ಶಿಗಳ ಜೊತೆಗಿನ ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ 11 ಪರಿಣತರ ತಂಡ, 4 ಕಾರ್ಯಪಡೆ ರಚಿಸಿದ್ದೆವು, ಅವೆಲ್ಲ ಏನು ಮಾಡುತ್ತಿದ್ದವು? ಆಮ್ಲಜನಕ ಕೊರತೆ ಬಗ್ಗೆ ಮೊದಲೇ ಮಾಹಿತಿ ಯಾಕೆ ನೀಡಲಿಲ್ಲ ಎಂದೆಲ್ಲ ಕೇಳಿದ್ದಾರೆ. ಆದರೆ, ಯಾರ ಬಳಿಯೂ ಉತ್ತರ ಇರಲಿಲ್ಲ. ಮೋದಿ ಸರ್ಕಾರದಲ್ಲಿ ಏನೇ ಒಂದು ಹೆಜ್ಜೆ ಮುಂದೆ ಇಡಬೇಕೆಂದರೂ ಮೋದಿ ಅವರೇ ಹೇಳಬೇಕು. ಎಲ್ಲರೂ ಹೇಳಿದಷ್ಟುಮಾಡಿ ಸುಮ್ಮನಾಗುವವರೇ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

click me!