ಉತ್ತರ ಪ್ರದೇಶದ ಅಮೇಠಿಯನ್ನು ತ್ಯಜಿಸಿ ರಾಯ್‌ಬರೇಲಿ ಕ್ಷೇತ್ರ ಆಯ್ಕೆ ಮಾಡಿಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಬಲವಾಗಿ ಲೇವಡಿ ಮಾಡಿದ್ದಾರೆ
ಪಿಟಿಐ ಬರ್ಧಮಾನ್ (ಪ.ಬಂಗಾಳ): ಉತ್ತರ ಪ್ರದೇಶದ ಅಮೇಠಿಯನ್ನು ತ್ಯಜಿಸಿ ರಾಯ್‌ಬರೇಲಿ ಕ್ಷೇತ್ರ ಆಯ್ಕೆ ಮಾಡಿಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಬಲವಾಗಿ ಲೇವಡಿ ಮಾಡಿದ್ದಾರೆ. ‘ವಯನಾಡ್‌ನಲ್ಲಿನ ಸೋಲನ್ನು ಗ್ರಹಿಸಿಯೇ ಅವರು ರಾಯ್‌ಬರೇಲಿಯಲ್ಲಿ ಗೆಲುವಿನ ಹಾದಿ ಹುಡುಕುತ್ತಿದ್ದಾರೆ’ ಎಂದು ವ್ಯಂಗ್ಯವಾಡಿರುವ ಅವರು, ‘ಹೆದರಬೇಡ ಯುವರಾಜ.. ಅಮೇಠಿಗೆ ಬಾ’ ಎಂದು ಸವಾಲೆಸೆದಿದ್ದಾರೆ.
ಪ.ಬಂಗಾಳದ ಬರ್ಧಮಾನ್-ದುರ್ಗಾಪುರ ಲೋಕಸಭಾ ಕ್ಷೇತ್ರ(Durgapur Lok sabha constituency) ದಲ್ಲಿ ಶುಕ್ರವಾರ ಬಿಜೆಪಿ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ (PM Modi rally), ‘ಕಾಂಗ್ರೆಸ್ ನಾಯಕಿಯೊಬ್ಬರು (ಸೋನಿಯಾ ಗಾಂಧಿ) ರಾಯ್‌ಬರೇಲಿ ಬಿಟ್ಟು ರಾಜಸ್ಥಾನಕ್ಕೆ ಹೋಗಿ ರಾಜ್ಯಸಭೆ ಸೇರಿಕೊಂಡರು. ಈಗ ಕಳೆದ ಸಲ ಅಮೇಠಿ ಕ್ಷೇತ್ರದಲ್ಲಿ ಸೋತು ಕೇರಳದ ವಯನಾಡ್‌ಗೆ ಹೋಗಿದ್ದ ಕಾಂಗ್ರೆಸ್‌ನ ‘ಶೆಹಜಾದಾ’ ರಾಯ್‌ಬರೇಲಿಯಿಂದ ಸ್ಪರ್ಧಿಸುತ್ತಿದ್ದಾರೆ’ ಎಂದು ಕುಹಕವಾಡಿದರು.
ಬಿಜೆಪಿ ಭದ್ರಕೋಟೆ ಗಾಂಧೀನಗರದಲ್ಲಿ ಅಮಿತ್ ಶಾ ವಿರುದ್ಧ ಸೋನಲ್ ಪಟೇಲ್ ಸೆಡ್ಡು!
‘ವಯನಾಡ್‌ನಲ್ಲಿ ಯುವರಾಜನಿಗೆ ಸೋಲು ಖಚಿತ ಎಂದು ನಾನು ಹಿಂದೆಯೇ ಹೇಳಿದ್ದೆ. ಆಗ ಅವರ ಚೇಲಾಗಳು, ಯುವರಾಜನು ಅಮೇಠಿಯಲ್ಲೂ ಸ್ಪರ್ಧಿಸಲಿದ್ದಾನೆ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ ಅಮೇಠಿಯಿಂದಲೂ ಓಡಿ ಹೋದ ಯುವರಾಜ, ರಾಯ್‌ಬರೇಲಿ ಸೇರಿಕೊಂಡಿದ್ದಾರೆ’ ಎಂದು ತಿವಿದರು.
ಇದೇ ವೇಳೆ, ರಾಹುಲ್ ಗಾಂಧಿ(Rahul gandhi) ಅವರ ‘ಡರೋ ಮತ್’ ಉದ್ಘೋಷವನ್ನೇ ಇಟ್ಟುಕೊಂಡು ಚಾಟಿ ಬೀಸಿದ ಮೋದಿ ‘ಶಹಾಜಾದೇ ಡರೋ ಮತ್.. ಭಾಗೋ ಮತ್. ಅಮೇಠಿ ಆವೋ’ (ಯುವರಾಜನೇ ಹೆದರಬೇಡ. ಅಮೇಠಿಯಿಂದಲೇ ಸ್ಪರ್ಧಿಸು) ಎಂದು ಜನರ ಶಿಳ್ಳೆ ಕೇಕೆಗಳ ಸವಾಲು ಎಸೆದರು.
ಓಡು ರಾಹುಲ್ ಓಡು : ಬಿಜೆಪಿ ಮುಖಂಡರಿಂದ ವ್ಯಂಗ್ಯ
ಕಾಂಗ್ರೆಸ್‌ಗೆ ಕನಿಷ್ಠ ಸ್ಥಾನ:
ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷವು ‘ಸಾರ್ವಕಾಲಿಕ ಕನಿಷ್ಠ’ ಸ್ಥಾನ ಸಂಪಾದಿಸಲಿದೆ ಎಂದ ಮೋದಿ, ‘ಚುನಾವಣಾಪೂರ್ವ ಸಮೀಕ್ಷೆಗಳು ಅಥವಾ ಚುನಾವಣೋತ್ತರ ಸಮೀಕ್ಷೆಗಳ ಅಗತ್ಯವಿಲ್ಲ. ಏಕೆಂದರೆ ನಾನು ಸಂಸತ್ತಿನಲ್ಲಿ ಅವರ (ಕಾಂಗ್ರೆಸ್) ಸೋಲಿನ ಬಗ್ಗೆ ಬಹಳ ಹಿಂದೆಯೇ ಮಾತನಾಡಿದ್ದೆ. ಅವರ ಹಿರಿಯ ನಾಯಕಿ ತಮ್ಮ ಲೋಕಸಭೆ ಸ್ಥಾನವನ್ನು ತೊರೆದು ರಾಜಸ್ಥಾನದಿಂದ ರಾಜ್ಯಸಭೆಯ ಮೂಲಕ ಸಂಸತ್ತಿಗೆ ಪ್ರವೇಶಿಸಿದಾಗಲೇ ಅವರು ಸೋಲನ್ನು ಅನುಭವಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ’ ಎಂದು ವ್ಯಂಗ್ಯವಾಡಿದರು.