ಚೀನಾ ಸಂಘರ್ಷ ಬೆನ್ನಲ್ಲೇ ಭಾರತ- ಜಪಾನ್‌ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ

By Kannadaprabha NewsFirst Published Sep 11, 2020, 12:48 PM IST
Highlights

- ಭಾರತ- ಜಪಾನ್‌ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ
- ಪರಸ್ಪರ ಸೇನಾ ನೆಲೆಗಳನ್ನು ಬಳಸಿಕೊಳ್ಳಲು ಇದರಿಂದ ಅವಕಾಶ

ನವದೆಹಲಿ (ಸೆ.11): ಲಡಾಖ್‌ ಗಡಿ ಬಿಕ್ಕಟ್ಟು ಉದ್ವಿಗ್ನ ಸ್ಥಿತಿ ತಲುಪಿರುವಾಗಲೇ, ಚೀನಾದಿಂದ ಕಿರುಕುಳ ಎದುರಿಸುತ್ತಿರುವ ಭಾರತ ಮತ್ತು ಜಪಾನ್‌ ಗುರುವಾರ ರಕ್ಷಣಾ ಸಹಕಾರ ಒಪ್ಪಂದವೊಂದಕ್ಕೆ ಸಹಿ ಹಾಕಿವೆ. ಅ ಮೂಲಕ ಗಡಿಯಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಚೀನಾಗೆ ಪರೋಕ್ಷ ಸಂದೇಶ ರವಾನಿಸಿವೆ.

ಈ ಒಪ್ಪಂದದಿಂದಾಗಿ ಉಭಯ ದೇಶಗಳ ಸೇನಾ ಪಡೆಗಳಿಗೆ ಪರಸ್ಪರರ ಸೇನಾ ನೆಲೆಗಳನ್ನು ಬಳಸಿಕೊಳ್ಳುವ ಅವಕಾಶ ಲಭ್ಯವಾಗಲಿದೆ. ಅಲ್ಲದೆ ಸೇನೆಗೆ ಸಂಬಂಧಿಸಿದ ಉಪಕರಣಗಳ ದುರಸ್ತಿ, ಸರಕು ಮರುಪೂರಣದಂಥ ಸೇವೆಗಳಿಗೂ ಅವಕಾಶ ಮಾಡಿಕೊಡಲಿದೆ. ಭಾರತದ ರಕ್ಷಣಾ ಕಾರ‍್ಯದರ್ಶಿ ಅಜಯ್‌ಕುಮಾರ್‌ ಹಾಗೂ ಜಪಾನ್‌ ರಾಯಭಾರಿ ಸುಜುಕಿ ಸತೋಷಿ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು. ಹಲವು ವರ್ಷಗಳ ಮಾತುಕತೆ, ಚರ್ಚೆ ಬಳಿಕ ಇಂಥದ್ದೊಂದು ಒಪ್ಪಂದಕ್ಕೆ ಬರಲಾಗಿದೆ.

ಒಪ್ಪಂದದ ಬೆನ್ನಲ್ಲೇ ಜಪಾನ್‌ ಪ್ರಧಾನಿ ಶಿನ್ಜೋ ಅಬೆ ಅವರಿಗೆ ಕರೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಒಪ್ಪಂದವನ್ನು ಸ್ವಾಗತಿಸಿದ್ದಾರೆ. ಅಲ್ಲದೆ ಇದನ್ನು ಸಾಧ್ಯವಾಗಿಸಿದ್ದಕ್ಕೆ ಅಬೆ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಲಡಾಕ್ ಬಿಕ್ಕಟ್ಟು ಶಮನಕ್ಕೆ ಇಂಡೋ-ಚೀನಾ ಮಾತುಕತೆ

ಚೀನಾಕ್ಕೆ ರಫೇಲ್‌ ಎಚ್ಚರಿಕೆ
ಅಂಬಾಲಾ: ಚೀನಾ ಗಡಿಯಲ್ಲಿ ಯುದ್ಧ ರೀತಿಯ ವಾತಾವರಣ ನಿರ್ಮಾಣವಾಗಿರುವಾಗಲೇ, ಜಗತ್ತಿನ ಅತ್ಯಂತ ಶಕ್ತಿಶಾಲಿ ಯುದ್ಧ ವಿಮಾನಗಳಲ್ಲಿ ಒಂದಾಗಿರುವ ‘ರಫೇಲ್‌’ ಭಾರತೀಯ ವಾಯುಪಡೆಗೆ ಗುರುವಾರ ಅಧಿಕೃತವಾಗಿ ಸೇರ್ಪಡೆಯಾಗಿದೆ. ಚೀನಾ ಬಳಿ ಇರುವ ಸಮರ ವಿಮಾನಗಳಿಗಿಂತ ರಫೇಲ್‌ ಶಕ್ತಿಯುತವಾಗಿರುವುದರಿಂದ ನೆರೆ ದೇಶದ ಎದುರು ಭಾರತದ ಕೈಮೇಲಾದಂತಾಗಿದೆ.

ಇದೇ ಸಂದರ್ಭವನ್ನು ಬಳಸಿಕೊಂಡು ಚೀನಾಕ್ಕೆ ಭಾರತ ಕಠೋರ ಎಚ್ಚರಿಕೆಯನ್ನೂ ನೀಡಿದೆ. ಭಾರತದ ಸಾರ್ವಭೌಮತೆ ಮೇಲೆ ಕಣ್ಣಿಟ್ಟಿರುವವರಿಗೆ ರಫೇಲ್‌ ಸೇರ್ಪಡೆ ಎಂಬುದು ಅತಿದೊಡ್ಡ ಹಾಗೂ ಕಠಿಣ ಸಂದೇಶವಾಗಿದೆ ಎಂದು ರಕ್ಷಣಾ ಮಂತ್ರಿ ರಾಜನಾಥ್‌ ಸಿಂಗ್‌ ಗುಡುಗಿದ್ದಾರೆ.

ರಾಜನಾಥ್‌, ಫ್ರಾನ್ಸ್‌ನ ರಕ್ಷಣಾ ಸಚಿವೆ ಫ್ಲೋರೆನ್ಸ್‌ ಪಾರ್ಲಿ, ಸಶಸ್ತ್ರ ಪಡೆಗಳ ದಂಡಾಧಿಕಾರಿ ಜನರಲ್‌ ಬಿಪಿನ್‌ ರಾವತ್‌, ವಾಯುಪಡೆ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ಆರ್‌ಕೆಎಸ್‌ ಭದೌರಿಯಾ, ಫ್ರಾನ್ಸ್‌ನ ಹಿರಿಯ ಅಧಿಕಾರಿಗಳು ರಫೇಲ್‌ ವಾಯುಪಡೆ ಸೇರ್ಪಡೆ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಸಾಂಪ್ರದಾಯಿಕ ಸರ್ವಧರ್ಮ ಪೂಜೆ, ಜಲಫಿರಂಗಿಯಿಂದ ಗೌರವ ಸ್ವೀಕಾರ ಬಳಿಕ ರಫೇಲ್‌ ಯುದ್ಧ ವಿಮಾನಗಳು ಆಗಸದಲ್ಲಿ ಹಲವು ರೋಮಾಂಚನಕಾರಿ ಪ್ರದರ್ಶನಗಳನ್ನು ನೀಡಿದವು. ಈ ಯುದ್ಧ ವಿಮಾನಗಳು ಅಂಬಾಲಾ ವಾಯುನೆಲೆಯ ‘ಗೋಲ್ಡನ್‌ ಆ್ಯರೋ’ ಸ್ಕಾ ್ವಡ್ರನ್‌ ತಂಡದಲ್ಲಿರಲಿವೆ.

Fact Check: ಗಡಿ ಚೀನಾ ರೇಖೆ ಬಳಿ ಯುದ್ಧ

ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ರಾಜನಾಥ್‌, ರಫೇಲ್‌ ಯುದ್ಧ ವಿಮಾನಗಳ ಸೇರ್ಪಡೆ ಇಡೀ ಜಗತ್ತು ಅದರಲ್ಲೂ ವಿಶೇಷವಾಗಿ ನಮ್ಮ ಸಾರ್ವಭೌಮತೆ ಮೇಲೆ ಕಣ್ಣಿಟ್ಟಿರುವವರಿಗೆ ಅತಿದೊಡ್ಡ ಹಾಗೂ ಕಠಿಣ ಸಂದೇಶವಾಗಿದೆ. ಗಡಿಯಲ್ಲಿ ಸೃಷ್ಟಿಯಾಗಿರುವ ವಾತಾವರಣದ ಹಿನ್ನೆಲೆಯಲ್ಲಿ ಇಂತಹ ಸೇರ್ಪಡೆ ಕಾರ್ಯಕ್ರಮ ಮಹತ್ವದ್ದಾಗಿದೆ ಎಂದು ಹೇಳಿದರು.

ಫ್ರಾನ್ಸ್‌ನ ಸಚಿವೆ ಫ್ಲೋರೆನ್ಸ್‌ ಮಾತನಾಡಿ, ದ್ವಿಪಕ್ಷೀಯ ರಕ್ಷಣಾ ಬಾಂಧವ್ಯದಲ್ಲಿ ರಫೇಲ್‌ ಸೇರ್ಪಡೆ ಹೊಸ ಅಧ್ಯಾಯ ಎಂದು ಬಣ್ಣಿಸಿದರು. ಇದೇ ವೇಳೆ, ಸ್ವದೇಶಿ ನಿರ್ಮಿತ ತೇಜಸ್‌, ಸಾರಂಗ್‌ ಹೆಲಿಕಾಪ್ಟರ್‌ ತಂಡಗಳು ವೈಮಾನಿಕ ಪ್ರದರ್ಶನ ನೀಡಿದವು.

ವಾಯುಪಡೆಗೀಗ 5 ರಫೇಲ್‌ ಬಲ
59 ಸಾವಿರ ಕೋಟಿ ರು. ವೆಚ್ಚದಲ್ಲಿ ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್‌ ಕಂಪನಿಯಿಂದ 36 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸುವ ಸಂಬಂಧ ಭಾರತ 4 ವರ್ಷಗಳ ಹಿಂದೆ ಫ್ರಾನ್ಸ್‌ ಸರ್ಕಾರದ ಜತೆಗೇ ಒಪ್ಪಂದ ಮಾಡಿಕೊಂಡಿತ್ತು. ಈ ಪೈಕಿ ಮೊದಲ ಬ್ಯಾಚ್‌ನಲ್ಲಿ 10 ವಿಮಾನಗಳು ಭಾರತಕ್ಕೆ ಹಸ್ತಾಂತರವಾಗಿವೆ. ಅದರಲ್ಲಿ 5 ವಿಮಾನಗಳು ಜು.29ರಂದು ಅಂಬಾಲಾ ವಾಯುನೆಲೆಗೆ ಬಂದಿಳಿದಿದ್ದವು. ಅವುಗಳನ್ನು ಅಧಿಕೃತವಾಗಿ ಗುರುವಾರ ವಾಯುಪಡೆಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.

ಚೀನಾಕ್ಕೆ ಎಚ್‌ಎಎಲ್ ಹೆಲಿಕಾಪ್ಟರ್ ಸಡ್ಡು

ಉಳಿದ 5 ವಿಮಾನಗಳು ಫ್ರಾನ್ಸ್‌ನಲ್ಲೇ ಇದ್ದು, ತರಬೇತಿಗೆ ಬಳಕೆಯಾಗುತ್ತಿವೆ. ಒಟ್ಟಾರೆ 2021ರೊಳಗೆ ಎಲ್ಲ 36 ವಿಮಾನಗಳು ಫ್ರಾನ್ಸ್‌ನಿಂದ ಭಾರತಕ್ಕೆ ಹಸ್ತಾಂತರವಾಗಲಿವೆ. 2ನೇ ಬ್ಯಾಚ್‌ನಲ್ಲಿ 4ರಿಂದ 5 ವಿಮಾನಗಳು ನವೆಂಬರ್‌ನೊಳಗೆ ಭಾರತಕ್ಕೆ ಆಗಮಿಸುವ ನಿರೀಕ್ಷೆ ಇದೆ.

ರಷ್ಯಾದ ಸುಖೋಯ್‌ ಬಳಿಕ 23 ವರ್ಷಗಳಲ್ಲಿ ಭಾರತ ಖರೀದಿಸಿದ ಮೊದಲ ಯುದ್ಧ ವಿಮಾನಗಳು ಇವಾಗಿವೆ. ಹಲವು ಅತ್ಯಾಧುನಿಕ ಸೌಲಭ್ಯಗಳನ್ನು ಇವು ಹೊಂದಿದ್ದು, ಚೀನಾ ಬಳಿ ಇರುವ ವಿಮಾನಕ್ಕಿಂತ ಶಕ್ತಿಯುತವಾಗಿವೆ. ಹೀಗಾಗಿ ಗಡಿ ಸಂಘರ್ಷದ ಸಂದರ್ಭದಲ್ಲಿ ಇವುಗಳ ಸೇರ್ಪಡೆ ವ್ಯೂಹಾತ್ಮಕವಾಗಿ ಮಹತ್ವದ್ದಾಗಿದೆ.

click me!