ಗುಡ್ ಬೈ 2019: ಇವು ಸುಪ್ರೀಂಕೋರ್ಟ್‌ನ ಸುಪ್ರೀಂ ತೀರ್ಪುಗಳು!

By Suvarna NewsFirst Published Dec 31, 2019, 5:51 PM IST
Highlights

2019 ಮುಗಿದು 2020ರ ಕಾಲಘಟಕ್ಕೆ ಕಾಲಿಡುತ್ತಿರುವ ಭಾರತ| ಸ್ವತಂತ್ರ್ಯ ಭಾರತದ ಇತಿಹಾಸಕ್ಕೆ ಮತ್ತೊಂದು ವರ್ಷ ಸೇರ್ಪಡೆ| 2020ನ್ನು ಸ್ವಾಗತಿಸಲು ಸಜ್ಜಾದ ಯುವ ಭಾರತ| ದೇಶಾದ್ಯಂತ ಕಂಡುಬರುತ್ತಿರುವ ಹೊಸ ವರುಷದ ಹುರುಪು| 2019ರ ಘಟನಾವಳಿಗಳ ಹಿನ್ನೋಟದತ್ತ ದೃಷ್ಟಿ ಹರಿಸುವುದು ಅನಿವಾರ್ಯ| 2019ರಲ್ಲಿ ಸುಪ್ರೀಂಕೋರ್ಟ್ ಪ್ರಕಟಿಸಿದ್ದ ಮಹತ್ವದ ತೀರ್ಪುಗಳ ಹಿನ್ನೋಟ| 2019ರಲ್ಲಿ ಸುಪ್ರೀಂಕೋರ್ಟ್'ನಿಂದ ಹಲವು ಐತಿಹಾಸಿಕ ತೀರ್ಪುಗಳು|

ಬೆಂಗಳೂರು(ಡಿ.31): 2019 ಮುಗಿದು 2020ರ ಕಾಲಘಟಕ್ಕೆ ಭಾರತ ಕಾಲಿಡುತ್ತಿದೆ. ಈ ಮೂಲಕ ಸ್ವತಂತ್ರ್ಯ ಭಾರತದ ಇತಿಹಾಸಕ್ಕೆ ಮತ್ತೊಂದು ವರ್ಷ ಸೇರ್ಪಡೆಗೊಂಡಿದೆ.

2020ನ್ನು ಸ್ವಾಗತಿಸಲು ಯುವ ಭಾರತ ಸಜ್ಜಾಗಿದ್ದು, ಹೊಸ ವರ್ಷದ ಹುರುಪು ದೇಶಾದ್ಯಂತ ಕಂಡುಬರುತ್ತಿದೆ. ಹೊಸ ವರ್ಷ ಹೊಸ ಹುಮ್ಮಸ್ಸಿನಿಂದಿಗೆ ನಮ್ಮೆಲ್ಲರ ಮನೆಯ ಕದ ತಟ್ಟುತ್ತಿದೆ.

ಅದರಂತೆ 2019ರ ಘಟನಾವಳಿಗಳ ಹಿನ್ನೋಟ ಕೂಡ ಅಷ್ಟೇ ಪ್ರಮುಖವಾಗಿದ್ದು, ಅಂತ್ಯ ಕಂಡ 2019ರಲ್ಲಿ ನಡೆದ ಸಿಹಿ-ಕಹಿ ಘಟನೆಗಳತ್ತ ಭಾರತ ದೃಷ್ಟಿ ಹರಿಸುವುದು ಅವಶ್ಯ.

ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರದಲ್ಲಿ 2019ರಲ್ಲಿ ಅನೇಕ ಸಿಹಿ-ಕಹಿ ಘಟನೆಗಳು ಸಂಭವಿಸಿವೆ. ಅದರಲ್ಲೂ ಅರ್ಥ ವ್ಯವಸ್ಥೆಯ ಕುರಿತು ದೇಶದಲ್ಲಿ ಸಾಕಷ್ಟು ಚರ್ಚೆಯಾಗಿದೆ.

ಅದರಂತೆ 2019ರಲ್ಲಿ ಸುಪ್ರೀಂಕೋರ್ಟ್ ಹಲವು ಐತಿಹಾಸಿಕ ತೀರ್ಪುಗಳನ್ನು ಪ್ರಕಟಿಸಿದ್ದು, ಈ ತೀರ್ಪುಗಳು ದೇಶದ ರಾಜಕೀಯ ಹಾಗೂ ಸಾಮಾಜಿಕ ಸ್ಥಿತಿಗತಿಯನ್ನು ಬದಲಾಯಿಸಿದ್ದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ.

2019ರಲ್ಲಿ ಸುಪ್ರೀಂಕೋರ್ಟ್ ನೀಡಿದ ಐತಿಹಾಸಿಕ ತೀರ್ಪುಗಳತ್ತ ಗಮನಹರಿಸುವುದಾದರೆ...

ರಾಮನಿಗೆ ದೊರೆತ ಅಯೋಧ್ಯೆ: ಶತಮಾನಗಳ ನಂಬಿಕೆಗೆ ಸುಪ್ರೀಂ ತೀರ್ಪಿನ ನೈವೇದ್ಯೆ!

1. ಅಯೋಧ್ಯೆ ತೀರ್ಪು:

ಭಾರತವನ್ನು ಹಲವು ದಶಕಗಳ ಕಾಲ ರಾಜಕೀಯವಾಗಿ ಅಷ್ಟೇ ಅಲ್ಲದೇ ಸಾಮಾಜಿಕವಾಗಿ ಕಾಡಿದ ಅಯೋಧ್ಯೆ-ಬಾಬರಿ ಮಸೀದಿ ಭೂ ವಿವಾದದ ಕುರಿತು ಕಳೆದ ನ.09ರಂದು ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿತು.

ವಿವಾದಿತ ಭೂಮಿಯನ್ನು ರಾಮಲಲ್ಲಾ ಟ್ರಸ್ಟ್‌ಗೆ ವಹಿಸಿ ಸುಪ್ರೀಂಕೋರ್ಟ್ ಆದೇಶ ನೀಡುವ ಮೂಲಕ, ರಾಮ ಮಂದಿರ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿತು. ಇದೇ ವೇಳೆ ಬಾಬರಿ ಮಸೀದಿ ನಿರ್ಮಾಣಕ್ಕೆ ಅಯೋಧ್ಯೆ ಸಮೀಪದಲ್ಲೇ 5 ಎಕರೆ ಭೂಮಿ ನೀಡುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿತು.

ರಫೇಲ್ ಹಗರಣದ ಅರ್ಜಿ ವಜಾ: ಮೋದಿಗೆ ಕ್ಲೀನ್ ಚಿಟ್, ರಾಹುಲ್‌ಗೆ ಮುಖಭಂಗ!

2. ರಫೆಲ್ ತೀರ್ಪು:

ಬಹು ವಿವಾದಿತ ರಫೇಲ್ ಖರೀದಿ ಹಗರಣ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಪ್ರಧಾನಿ ಮೋದಿಗೆ ಮತ್ತೆ ಕ್ಲೀನ್ ಚಿಟ್‌ ಸಿಕ್ಕಿದ್ದು, ಕೈಗೆ ತೀವ್ರ ಮುಖಭಂಗವಾಗಿದೆ. ಇಷ್ಟೇ ಅಲ್ಲದೇ ಕೈ ನಾಯಕ ರಾಹುಲ್ ಗಾಂಧಿಗೆ ಎಚ್ಚರಿಕೆಯಿಂದಿರುವಂತೆ ಸುಪ್ರೀಂ ಕೋರ್ಟ್ ವಾರ್ನಿಂಗ್ ನೀಡಿದೆ.

ರಫೇಲ್ ಡೀಲ್ ತನಿಖೆ ಕೋರಿದ್ದ ಅರುಣ್ ಶೌರಿ, ಪ್ರಶಾಂತ್ ಭೂಷಣ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಈ ಮೂಲಕ ಬಹು ವಿವಾದಿತ ರಫೇಲ್ ಯುದ್ಧವಿಮಾನ ಖರೀದಿ ಪ್ರಕರಣ ಬಹುತೇಕ ಅಂತ್ಯಗೊಂಡಿದೆ.

ಶಬರಿಮಲೆಗೆ ಮಹಿಳೆಯರ ಪ್ರವೇಶ: ಆದೇಶ ಹೊರಡಿಸಲು ಸುಪ್ರೀಂ ನಕಾರ

3. ಶಬರಿಮಲೆ ತೀರ್ಪು:

ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರ ಸುರಕ್ಷಿತ ಪ್ರವೇಶಕ್ಕೆ ಕೇರಳ ಸರ್ಕಾರ ಅನುವು ಮಾಡಿಕೊಡುವಂತೆ ನಿರ್ದೇಶಿಸಬೇಕು’ ಎಂದು ಕೋರಿ ಇಬ್ಬರು ಮಹಿಳೆಯರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಆದೇಶ ಹೊರಡಿಸಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ.

ಬಿಂದು ಮತ್ತು ರೆಹನಾ ಫಾತಿಮಾ ಎಂಬಿಬ್ಬ ಮಹಿಳೆಯರು ತಮಗೆ ದೇಗುಲ ಪ್ರವೇಶಕ್ಕೆ ಅನುಮತಿ ನೀಡಿಲ್ಲ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮುಖ್ಯ ನ್ಯಾಯಾಧೀಶ ನ್ಯಾ. ಎಸ್‌.ಎ. ಬೋಬ್ಡೆ, ನ್ಯಾ.ಬಿ.ಆರ್‌. ಗವಾಯಿ ಹಾಗೂ ನ್ಯಾ. ಬಿ.ಆರ್‌. ಗವಾಯಿ ಹಾಗೂ ನ್ಯಾ. ಸೂರ್ಯಕಾಂತ್‌ ಅವರಿದ್ದ ನ್ಯಾಯಪೀಠ ‘ಇದು ಭಾವನಾತ್ಮಕ ವಿಷಯ. ಪರಿಸ್ಥಿತಿ ‘ಸಿಡಿದೇಳುವಂತೆ’ ಮಾಡಲು ನಾವು ಬಯಸುವುದಿಲ್ಲ’ ಎಂದು ಹೇಳಿತು.

ನಿರ್ಭಯಾ ಹತ್ಯಾಚಾರಿಗಳ ಅರ್ಜಿ ವಜಾ, ಗಲ್ಲು ಫಿಕ್ಸ್!

4. ನಿರ್ಭಯಾ ಅತ್ಯಾಚಾರಿಯ ಕ್ಷಮಾದಾನ ಅರ್ಜಿಯ ವಜಾ:

‘ದಿಲ್ಲಿಯ ನಿರ್ಭಯಾ ಗ್ಯಾಂಗ್‌ರೇಪ್ ಪ್ರಕರಣ 2012 ರ ಡಿಸೆಂಬರ್‌ನಲ್ಲಿ ನಡೆದ ವೇಳೆ ನಾನು ಅಪ್ರಾಪ್ತನಾಗಿದ್ದೆ’ ಎಂದು ಪ್ರಕರಣದ ದೋಷಿ ಪವನ್ ಗುಪ್ತಾ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ಗುರುವಾರ ವಜಾ ಮಾಡಿದೆ. ಇದರಿಂದ ಗಲ್ಲು ಶಿಕ್ಷೆ ತಪ್ಪಿಸಿಕೊಳ್ಳುವ ಅಪರಾಧಿಯ ಇನ್ನೊಂದು ಕುತಂತ್ರ ವಿಫಲಗೊಂಡಂತಾಗಿದೆ.

ಅಲ್ಲದೇ ಪ್ರಕರಣದ ಮತ್ತೋರ್ವ ಪ್ರಮುಖ ಅಪರಾಧಿ ಅಕ್ಷಯ್ ಸಿಂಗ್ ಕೂಡ ಕ್ಷಮಾದಾನ ಅರ್ಜಿ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ. ಸುಪ್ರೀಂಕೋರ್ಟ್ ಅಕ್ಷಯ್ ಸಿಂಗ್ ಅರ್ಜಿಯನ್ನೂ ತಿರಸ್ಕರಿಸಿ ಎಲ್ಲ ಅಪರಾಧಿಗಳಿಗೂ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿತು.

ಸಿಜೆಐ ಕಚೇರಿ ಆರ್‌ಟಿಐ ಅಡಿಗೆ: ಕ್ರೆಡಿಟ್‌ ಸಲ್ಲಬೇಕು ಸುಪ್ರೀಂ ಮುಡಿಗೆ!

5. ಸಿಜೆಐ ಕಚೇರಿ ಆರ್‌ಟಿಐ ವ್ಯಾಪ್ತಿಗೆ:

ಮಾಹಿತಿ ಹಕ್ಕು (ಆರ್‌ಟಿಐ) ಅಡಿ ಭಾರತದ ಮುಖ್ಯ ನ್ಯಾಯಾಧೀಶರ ಕಚೇರಿಯೂ ಬರುತ್ತದೆ ಎಂದು ಕೇಂದ್ರೀಯ ಮಾಹಿತಿ ಆಯೋಗ (ಸಿಐಸಿ) ಹೇಳಿತ್ತು. ಇದನ್ನುದಿಲ್ಲಿ ಹೈಕೋರ್ಟ್‌ ಅನುಮೋದಿಸಿತ್ತು. ಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ನೇಮಕಾತಿ ಕುರಿತ ಮಾಹಿತಿಯನ್ನು ಆರ್‌ಟಿಐ ಅಡಿ ತರಬೇಕೆಂಬುವುದು ಕೇಂದ್ರ ಮಾಹಿತಿ ಆಯೋಗದ ಆದೇಶವೂ ಆಗಿತ್ತು. ಆದರೆ ಈ ಆದೇಶವನ್ನು ಸುಪ್ರೀಂ ಕೋರ್ಟ್‌ನ ಸೆಕ್ರೆಟರಿ ಜನರಲ್‌ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಶ್ನಿಸಿ, ‘ಪಾರದರ್ಶಕತೆ’ ಹೆಸರಿನಲ್ಲಿ ಈ ರೀತಿ ಮಾಹಿತಿ ನೀಡುವುದು ನ್ಯಾಯಾಂಗಕ್ಕೆ ಧಕ್ಕೆ ತರುತ್ತದೆ ಎಂದು ಅವರು ವಾದಿಸಿದ್ದರು. ಈ ಬಗ್ಗೆ ಸುಪ್ರೀಂ ಐತಿಹಾಸಿಕ ತೀರ್ಪು ನೀಡಿ, ಹೇಳಿದ್ದಿಷ್ಟು.

ಇವಿಷ್ಟೇ ಅಲ್ಲದೇ 2019ರಲ್ಲಿ ಸುಪ್ರೀಂಕೋರ್ಟ್ ಇನ್ನೂ ಹಲವು ಮಹತ್ವದ ತೀರ್ಪುಗಳನ್ನು ಪ್ರಕಟಿಸಿದೆ. ಪ್ರಮುಖವಾಗಿ ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ರಚನೆಗೆ ಅವಕಾಶ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ರಂಜನ್ ಗೊಗೊಯ್ ವಿರುದ್ಧ ಕೇಳಿ ಬಂದಿದ್ದ ಲೈಂಗಿಕ ಕಿರುಕುಳದ ಆರೋಪದ ವಿಚಾರಣೆ, ಕೇರಳದ ಮರಡು ಫ್ಲ್ಯಾಟ್ ಧ್ವಂಸ ಪ್ರಕರಣ, ಪಿ.ಚಿದಂಬರಂ ಜಾಮೀನು ಅರ್ಜಿಯ ಕುರಿತಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.

click me!