ಎರಡು ಕೈಗಳಿಲ್ಲದ ಯುವಕನಿಗೆ ಸಿಕ್ತು 4 ಚಕ್ರಗಳ ವಾಹನ ಚಾಲನೆಗೆ ಲೈಸೆನ್ಸ್

By Anusha Kb  |  First Published May 4, 2024, 12:00 PM IST

ಎರಡು ಕೈಗಳಿಲ್ಲದೇ ಕಾಲುಗಳಿಂದಲೇ ವಾಹನ ಚಾಲನೆ ಮಾಡ್ತಿದ್ದ ಯುವಕನಿಗೆ ನಾಲ್ಕು ಚಕ್ರಗಳ ವಾಹನ ಚಾಲನೆಗೆ ಈಗ ಪರವಾನಗಿ ಸಿಕ್ಕಿದೆ. ಸೀಟು ಬೆಲ್ಟ್ ಧರಿಸಿ ಕಾಲಿನಿಂದಲೇ ಯುವಕ ವಾಹನ ಚಾಲನೆ ಮಾಡುತ್ತಿರುವ ವೀಡಿಯೋ ಈಗ ವೈರಲ್ ಆಗಿದೆ.


ಚೆನ್ನೈ: ಎರಡು ಕೈಗಳಿಲ್ಲದೇ ಕಾಲುಗಳಿಂದಲೇ ವಾಹನ ಚಾಲನೆ ಮಾಡ್ತಿದ್ದ ಯುವಕನಿಗೆ ನಾಲ್ಕು ಚಕ್ರಗಳ ವಾಹನ ಚಾಲನೆಗೆ ಈಗ ಪರವಾನಗಿ ಸಿಕ್ಕಿದೆ. ಸೀಟು ಬೆಲ್ಟ್ ಧರಿಸಿ ಕಾಲಿನಿಂದಲೇ ಯುವಕ ವಾಹನ ಚಾಲನೆ ಮಾಡುತ್ತಿರುವ ವೀಡಿಯೋ ಈಗ ವೈರಲ್ ಆಗಿದೆ. ವಿದ್ಯುತ್ ಅಪಘಾತದಲ್ಲಿ ಕೈಗಳನ್ನು ಕಳೆದುಕೊಂಡಿದ್ದ ಥಾನ್ಸೆನ್ ಕೆ ಎಂಬುವವವರೇ ಈ ರೀತಿ ಕೈಗಳಿಲ್ಲದಿದ್ದರು ವಾಹನ ಪರವಾನಗಿ ಪಡೆದ ಸಾಹಸಿ ಯುವಕ. 

ಚೆನ್ನೈನ ಕೆ.ಕೆ.ನಗರದಲ್ಲಿರುವ ಸರ್ಕಾರಿ ಇನ್‌ಸ್ಟಿಟ್ಯೂಟ್ ಆಫ್ ರಿಹ್ಯಾಬಿಲಿಟೇಶನ್ ಮೆಡಿಸಿನ್‌ನಲ್ಲಿ ಥಾನ್ಸೆನ್ ಕೆ  ಅವರು ತಮ್ಮ  ಕೆಂಪು ಸ್ವಿಫ್ಟ್‌ ಕಾರಿನ ಕೀಯನ್ನು ತಿರುಗಿಸಲು ತಮ್ಮ ಕಾಲುಗಳನ್ನು ಬಳಸಿ ಸ್ಟೇರಿಂಗ್ ಮೇಲೆ ಕಾಲುಗಳನ್ನು ಇರಿಸಿ ಸೀಟ್ ಬೆಲ್ಟ್ ಧರಿಸಿ ವಾಹನ ಚಾಲನೆ ಮಾಡುತ್ತಿರುವ ದೃಶ್ಯಗಳನ್ನು ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ತಮ್ಮ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆ ಹಿಡಿದು ಖುಷಿ ಪಟ್ಟಿದ್ದಾರೆ. ಇತ್ತ ಥಾನ್ಸೆನ್ ಅವರು ತಮಿಳುನಾಡಿನಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆದ ಎರಡೂ ಕೈಗಳಿಲ್ಲದ  ಮೊದಲ ವ್ಯಕ್ತಿ ಎನಿಸಿದ್ದಾರೆ. 

Tap to resize

Latest Videos

ಇನ್‌ಸ್ಟಿಟ್ಯೂಟ್ ಆಫ್ ರಿಹ್ಯಾಬಿಲಿಟೇಶನ್ ಸೆಂಟರ್‌ನ ವೈದ್ಯರು ಆತ ಸಮರ್ಥನಿದ್ದಾನೆ ಎಂದು ಸರ್ಟಿಫಿಕೇಟ್ ನೀಡಿದ ನಂತರ ಉತ್ತರ ಚೆನ್ನೈನ ಆರ್‌ಟಿಒ ಅಧಿಕಾರಿಗಳು ಥಾನ್ಸನ್‌ಗೆ 10 ವರ್ಷಗಳ ಅವಧಿಗೆ ವಾಹನ ಪರವಾನಗಿಯನ್ನು ನೀಡಿದ್ದಾರೆ.  ನಾನು ವಾಹನ ಚಾಲನೆ ಮಾಡುವುದಕ್ಕೆ ಉತ್ಸಾಹಿತನಾಗಿದ್ದು, ಈ ವಾಹನ ಪರವಾನಗಿ ನನಗೆ ಚಲನಶೀಲತೆ, ಸ್ವಾತಂತ್ರ್ಯ ಮತ್ತು ಸುರಕ್ಷತೆಯನ್ನು ನೀಡಿದೆ ಎಂದು ಅವರು ತಮ್ಮ ಈ ಸಾಧನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಬಾಲ್ಯ ವಿವಾಹವಾದ್ರೂ ಛಲ ಬಿಡದ ಮಹಿಳೆ… ವೈದ್ಯೆಯಾಗಿ ಸಮಾಜಸೇವೆ

ಥಾನ್ಸೆನ್ ಅವರು ಹತ್ತು ವರ್ಷದವರಿದ್ದಾಗ ಹೈಟೆನ್ಶನ್ ವಿದ್ಯುತ್ ವೈರ್‌ ಟಚ್ ಆದ ಪರಿಣಾಮ ಅವರ ಮೊಣಕೈನಿಂದ ಕೆಳಗೆ ಎರಡು ಕೈಗಳನ್ನು ಕತ್ತರಿಸಬೇಕಾಗಿ ಬಂದಿತ್ತು.  ಆ ಸಂದರ್ಭದಲ್ಲಿ ಪೋಷಕರು ಹಾಗೂ ಥಾನ್ಸೆನ್ ಆಘಾತಗೊಂಡಿದ್ದರು. ಆದರೆ ಕಾಲ ಕ್ರಮೇಣ ಅವರು ಕೈಗಳಿಲ್ಲದಿದ್ದರು ತಮ್ಮ ಕೆಲಸಗಳನ್ನು ತಾವೇ ಮಾಡುವುದಕ್ಕೆ ಕಲಿತರು.  ತುಂಡಾದ ಕೈಗಳನ್ನೇ ಬಳಸಿ ಅವರು ಬರೆಯಲು ಶುರು ಮಾಡಿದರು. ಇದಾದ ಸ್ವಲ್ಪ ದಿನದಲ್ಲೇ ಅವರು ಈಜುವುದಕ್ಕೂ ಕಲಿತರು, ಜೊತೆಗೆ ಡ್ರಮ್ ನುಡಿಸುವುದಕ್ಕೂ ಕಲಿತರು.

ಬರೀ ಇಷ್ಟೇ ಅಲ್ಲ ಇವರು ಕನ್ಸರ್ಟ್‌ಗಳಲ್ಲಿ ಡ್ರಮರ್ ಆಗಿಯೂ ಭಾಗವಹಿಸಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟ ರಾಘವ್ ಲಾರೆನ್ಸ್ ಅವರ ಕನ್ಸರ್ಟ್‌ ಒಂದರಲ್ಲಿ ಡ್ರಮರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಯಾರೋ ಒಬ್ಬರು ಕೈಗಳಿಲ್ಲದ ಬಗ್ಗೆ ನನ್ನ ಕೇಳುವವರೆಗೂ ನನಗೆ ಕೈಗಳಿಲ್ಲ ಎಂಬುದು ನೆನಪೇ ಆಗುವುದಿಲ್ಲ, ಅಷ್ಟರ ಮಟ್ಟಿಗೆ ನಾನು ಸ್ವಾವಲಂಬಿಯಾಗಿದ್ದೇನೆ ಎಂದು ಹೇಳುವ ಥಾನ್ಸೆನ್‌ಗೆ ಸ್ಫೂರ್ತಿಯಾಗಿರುವುದು ಮಧ್ಯಪ್ರದೇಶದ ಇಂದೋರ್ ಮೂಲದ ವಿಕ್ರಂ ಅಗ್ನಿಹೋತ್ರಿ. ವಿಕ್ರಂ ಅಗ್ನಿಹೋತ್ರಿ ಅವರಿಗೂ ಎರಡು ಕೈಗಳಿಲ್ಲ. ಆದರೂ ಅವರು 2016ರಲ್ಲಿ ವಾಹನ ಪರವಾನಗಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಹೋಟೆಲ್ ನಲ್ಲಿ ಪಾತ್ರೆ ತೊಳೆದು ತಿಂಗಳಿಗೆ 18ರೂ. ಸಂಪಾದಿಸುತ್ತಿದ್ದ ಕನ್ನಡಿಗ, ಈಗ 300 ಕೋಟಿಯ ಸಂಸ್ಥೆ ಮಾಲೀಕ!

click me!