ಪದೆ ಪದೇ ಸೂಸು ಹೋಗ್ಬೇಕು ಎನಿಸುತ್ತಿದ್ಯಾ?

By Suvarna NewsFirst Published Dec 7, 2019, 3:37 PM IST
Highlights

ಬೆಳಗ್ಗೆ ಎದ್ದು ಪಾರ್ಕಿನಲ್ಲಿ ಸುತ್ತಿದ್ದರ ಎರಡರಷ್ಟು ದೂರ ಕೋಣೆಯಿಂದ ಟಾಯ್ಲೆಟ್‌ಗೆ ಪದೇ ಪದೆ ಹೋಗಿ ಸವೆಸಿದ್ದೀರಾ? ಸುಸೂ ಮಾಡಿ ಬಂದು ಕುಳಿತು ಎರಡು ಮಾತನಾಡುವಾಗಲೇ ಮತ್ತೆ ಹೋಗುವಂತಾಗುತ್ತದೆಯೇ? ಇದರಿಂದ ಪ್ರಯಾಣಕ್ಕೆ ಹೋಗುವುದು, ನೆಂಟರಿಷ್ಟರ ಮನೆಗೆ ಹೋಗುವುದು, ಕಚೇರಿಯಲ್ಲಿ ಮುಜುಗರವೆನಿಸುತ್ತದೆಯೇ? ಇವು ಅನಾರೋಗ್ಯದ ಸೂಚನೆ ಇರಬಹುದು. ಎಲ್ಲಕ್ಕೂ ಮುನ್ನ ವೈದ್ಯರನ್ನು ಕಾಣಿ. 

ನೀವು ತುಂಬಾ ನೀರು ಕುಡೀತಿದ್ರೆ ತುಂಬಾ ಬಾರಿ ಮೂತ್ರ ವಿಸರ್ಜಿಸಬೇಕೆನಿಸುವುದು ಸಾಮಾನ್ಯ. ಅದರಲ್ಲೂ ಶೇ.20ರಿಂದ 30ರಷ್ಟು ನೀರಿನಂಶ ತಿನ್ನುವ ಆಹಾರದಿಂದಲೂ ದೇಹ ಸೇರಿರುತ್ತದೆ. ಆದರೆ, ಅತಿಯಾಗಿ ಮೂತ್ರ ವಿಸರ್ಜಿಸುತ್ತಲಿದ್ರೆ ರಕ್ತದಲ್ಲಿ ಉಪ್ಪಿನಂಶ ಅನಾರೋಗ್ಯಕಾರಿಯಾಗಿ ಕಡಿಮೆಯಾಗಬಹುದು. ಹಾಗಾಗಿ, ಮೂತ್ರ ಬಿಳಿ ಹೋಗುವಷ್ಟು ನೀರು ಕುಡಿಯಬೇಕು, ಆದರೆ, ಇಡೀ ದಿನ ಟಾಯ್ಲೆಟ್‌ನಲ್ಲೇ ಇರುವಷ್ಟು ಬೇಡ. ಹೀಗೆ ಹೆಚ್ಚಾಗಿ ನೀರು ಕುಡಿಯುವುದರ ಹೊರತಾಗಿಯೂ ಅನೇಕ ಕಾರಣಗಳಿಂದಾಗಿ ಪದೆ ಪದೆ ಮೂತ್ರ ವಿಸರ್ಜಿಸುವಂತಾಗುತ್ತಿರಬಹುದು. ಹಾಗೆ ಬೇರೊಂದು ಕಾರಣವಾಗಿದ್ದಾಗ ನೀವು ವೈದ್ಯರನ್ನು ಕಾಣಲೇಬೇಕು. ಏಕೆಂದರೆ, ಮತ್ತೆ ಮತ್ತೆ ಸುಸೂಗೆ ಹೋಗುವ ಹಿಂದೆ ಈ ಕಾರಣಗಳಿರಬಹುದು.

ಫಿಟ್ ನಟಿ ಕರೀನಾಳ 8 ಮೀಲ್ ಡಯಟ್ ಪ್ಲ್ಯಾನ್ ಇದು!

ಮೂತ್ರನಾಳದ ಸೋಂಕು

ಆಗಾಗ್ಗೆ ಮೂತ್ರ ವಿಸರ್ಜಿಸಲು ಇದು ಸಾಮಾನ್ಯ ಕಾರಣವಾಗಿದೆ. ಬ್ಯಾಕ್ಟೀರಿಯಾವು ಕಿಡ್ನಿ, ಬ್ಲ್ಯಾಡರ್ ಅಥವಾ ಮೂತ್ರನಾಳಕ್ಕೆ ಸೋಂಕು ತಗುಲಿಸಿದಾಗ, ಬ್ಲ್ಯಾಡರ್ ಊದಿಕೊಳ್ಳುತ್ತದೆ. ಹಾಗಾಗಿ, ಹೆಚ್ಚು ಮೂತ್ರ ಸಂಗ್ರಹಿಸಿಟ್ಟುಕೊಳ್ಳುವಲ್ಲಿ ವಿಫಲವಾಗುತ್ತದೆ. ಹೀಗೆ ಇನ್ಫೆಕ್ಷನ್ ಆದಾಗ ಮೂತ್ರವು ವಿಚಿತ್ರ ವಾಸನೆ ಹೊಂದಿ ಸ್ವಲ್ಪ ರಕ್ತವೂ ಹೋಗಬಹುದು. ಜೊತೆಗೆ, ನಿಮಗೆ ಜ್ವರ, ಚಳಿ, ಸಂಕಟವಾಗುವುದು ಕೆಳಹೊಟ್ಟೆಯ ಬದಿಗಳಲ್ಲಿ ನೋವು ಕಾಣಿಸಿಕೊಳ್ಳುವುದು ಮುಂತಾದ ಅನುಭವಗಳಾಗಬಹುದು. ಈ ಸೋಂಕು ನಿವಾರಣೆಗೆ ವೈದ್ಯರು ಆ್ಯಂಟಿ ಬಯೋಟಿಕ್ ನೀಡಬಹುದು. 

ಡಯಾಬಿಟೀಸ್

ಡಯಾಬಿಟೀಸ್‌ನ ಟೈಪ್ 1 ಹಾಗೂ ಟೈಪ್ 2 ಎರಡೂ ನಿಮ್ಮ ರಕ್ತದಲ್ಲಿ ಸಕ್ಕರೆ ಹೆಚ್ಚಿಸುತ್ತವೆ. ನಿಮ್ಮ ಕಿಡ್ನಿಗಳು ಇದನ್ನು ಫಿಲ್ಟರ್ ಮಾಡಲು ಪ್ರಯತ್ನಿಸುತ್ತವಾದರೂ ಎಲ್ಲ ಬಾರಿ ಅವು ಸಫಲವಾಗುವುದಿಲ್ಲ. ಹಾಗಾಗಿ, ಮೂತ್ರದಲ್ಲಿ ಸಕ್ಕರೆ ಹೋಗಲು ಶುರುವಾಗುತ್ತದೆ. ಇದು ನಿಮ್ಮ ದೇಹದಿಂದ ಹೆಚ್ಚಿನ ನೀರನ್ನು ಸೆಳೆಯುತ್ತದೆ ಮತ್ತು ನಿಮ್ಮನ್ನು ಹೆಚ್ಚು ಮೂತ್ರ ವಿಸರ್ಜಿಸುವಂತೆ ಮಾಡುತ್ತದೆ. ಪದೇ ಪದೆ ಮೂತ್ರಕ್ಕೆ ಹೋಗಬೇಕೆನಿಸುವುದು ಡಯಾಬಿಟೀಸ್‌ನ ಮೊದಲ ಸಾಮಾನ್ಯ ಲಕ್ಷಣಗಳಲ್ಲೊಂದು. ಹಾಗಾಗಿ, ಈ ಲಕ್ಷಣ ಕಂಡುಬಂದಲ್ಲಿ ತಡ ಮಾಡದೇ ವೈದ್ಯರನ್ನು ಸಂಪರ್ಕಿಸಿ.

ಹದಿಹರೆಯದವರು ಕುಡಿಯಲು ಕಾರಣವೇನು?

ಡಯಾಬಿಟಿಸ್ ಇನ್ಸಿಪಿಡಸ್

ಇದು ಟೈಪ್ 1 ಅಥವಾ ಟೈಪ್ 2 ಡಯಾಬಿಟಿಸ್‌ಗಿಂತ ವಿಭಿನ್ನ ಸ್ಥಿತಿ. ಇಲ್ಲಿ, ನಿಮ್ಮ ದೇಹವು ಸಾಕಷ್ಟು ವ್ಯಾಸೊಪ್ರೆಸಿನ್ ಹಾರ್ಮೋನ್ ಬಳಸುವಲ್ಲಿ ವಿಫಲವಾಗುತ್ತದೆ. ಈ ಹಾರ್ಮೋನ್ ಅಗತ್ಯವಿರುವಾಗ ಕಿಡ್ನಿಗಳಿಗೆ ಸೂಚನೆ ರವಾನಿಸಿ ರಕ್ತಕ್ಕೆ ನೀರನ್ನು ಒದಗಿಸುವಂತೆ ಮಾಡುತ್ತದೆ. ಹೀಗೆ ವ್ಯಾಸೋಪ್ರೆಸಿನ್ ಸರಿಯಾಗಿ ಕೆಲಸ ಮಾಡದಾದಾಗ ಅಥವಾ ಉತ್ಪತ್ತಿ ಕಡಿಮೆಯಾದಾಗ ಸುಸ್ತು, ವಾಕರಿಕೆ ಬಂದಂತಾಗುವುದು, ಗೊಂದಲ ಹಾಗೂ ಸಿಕ್ಕಾಪಟ್ಟೆ ಬಾಯಾರಿಕೆ ಕಾಣಿಸಿಕೊಳ್ಳಬಹುದು. ಇಂಥ ಸಂದರ್ಭದಲ್ಲಿ ನೀವು ದಿನವೊಂದರಲ್ಲಿ 15 ಲೀಟರ್‌ನಷ್ಟು ಮೂತ್ರ ವಿಸರ್ಜಿಸುವಂತಾಗುವುದು ಕೂಡಾ ಇದೆ. ವೈದ್ಯರು ಈ ಸಮಸ್ಯೆ ನಿವಾರಣೆಗೆ ಕೆಲ ಔಷಧಿಗಳನ್ನು ಸೂಚಿಸಬಹುದು. 

ಡೈಯುರೆಟಿಕ್ಸ್

ವಾಟರ್ ಪಿಲ್ಸ್ ಎಂದೂ ಕರೆಯಲ್ಪಡುವ ಈ ಮಾತ್ರೆಗಳನ್ನು ಹೈಬಿಪಿ ಹಾಗೂ ಲಿವರ್ ಮತ್ತು ಕಿಡ್ನಿ ಸಮಸ್ಯೆಗಳ ಚಿಕಿತ್ಸೆಗಾಗಿ ನೀಡಬಹುದು. ಈ ಮಾತ್ರೆಗಳು ನಿಮ್ಮ ಕಿಡ್ನಿಯು ಹೆಚ್ಚು ಸೋಡಿಯಂನ್ನು ಮೂತ್ರಕ್ಕೆ ಬಿಡುಗಡೆ ಮಾಡಲು ಕಾರಣವಾಗುತ್ತವೆ. ಇದರಿಂದ ಪದೇ ಪದೆ ಮೂತ್ರಕ್ಕೆ ಹೋಗಬೇಕಾಗಬಹುದು. ಇದರಿಂದ ದೇಹವು ಸೋಡಿಯಂ ಹಾಗೂ ಪೊಟ್ಯಾಶಿಯಂನ್ನು ದೊಡ್ಡ ಮಟ್ಟದಲ್ಲಿ ಕಳೆದುಕೊಳ್ಳುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ತಲೆ ಸುತ್ತುವುದು, ತಲೆನೋವು, ಸಂಕಟ ಕಾಣಿಸಿಕೊಳ್ಳಬಹುದು. ನೀವು ಮಾತ್ರೆ ತೆಗೆದುಕೊಳ್ಳುವುದು ನಿಲ್ಲಿಸುವ ಅಥವಾ ಡೋಸ್ ಬದಲಾಯಿಸುವ ಮೊದಲು ವೈದ್ಯರನ್ನು ವಿಚಾರಿಸಿ.

ಪೇನ್‌ಫುಲ್ ಬ್ಲ್ಯಾಡರ್ ಸಿಂಡ್ರೋಮ್

ನಿಮಗೆ ಇಡೀ ದಿನ ವಾಶ್‌ರೂಂಗೆ ಹೋಗುವಂತಾಗುತ್ತದೆ. ಆದರೆ ಹೋದಾಗ ಮಾತ್ರ ಹೆಚ್ಚು ಮೂತ್ರ ಹೊರಬರುವುದಿಲ್ಲ ಎನಿಸಬಹುದು. ಇದರೊಂದಿಗೆ ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳಬಹುದು. ಅದರಲ್ಲೂ ಮೂತ್ರ ವಿಸರ್ಜಿಸಬೇಕಾದಾಗ ಅಥವಾ ಸೆಕ್ಸ್ ಸಂದರ್ಭದಲ್ಲಿ ನೋವು ಸಿಕ್ಕಾಪಟ್ಟೆ ಹೆಚ್ಚಬಹುದು. ಡಯಟ್, ಎಕ್ಸರ್ಸೈಸ್, ಔಷಧ, ಸರ್ಜರಿ ಹಾಗೂ ಫಿಸಿಕಲ್ ಥೆರಪಿ ಮೂಲಕ ಇದಕ್ಕೆ ಚಿಕಿತ್ಸೆ ಪಡೆಯಬಹುದು.

ಕಿಡ್ನಿ ಕಲ್ಲು

ಮಿನರಲ್ಸ್ ಹಾಗೂ ಸಾಲ್ಟ್ ಸೇರಿ ಶೇಖರವಾಗಿ ಕಿಡ್ನಿಯಲ್ಲಿ ಕಲ್ಲಾಗಬಹುದು. ಇಂಥ ಸಂದರ್ಭದಲ್ಲಿ ಕೂಡಾ ನೀವು ಪದೇ ಪದೆ ಮೂತ್ರ ವಿಸರ್ಜನೆಗೆ ಹೋದರೂ ಹೆಚ್ಚು ಮೂತ್ರ ಬರುವುದಿಲ್ಲ. ಬೊಜ್ಜು, ಡಿಹೈಡ್ರೈಶನ್, ಹೈ ಪ್ರೋಟೀನ್ ಡಯಟ್, ಕುಟುಂಬದಲ್ಲಿ ಯಾರಿಗಾದರೂ ಆಗಿದ್ದರೆ ಕಿಡ್ನಿ ಕಲ್ಲಾಗುವ ಸಾಧ್ಯತೆ ಹೆಚ್ಚು. ಕೆಲವೊಮ್ಮೆ ಅದಾಗಿಯೇ ಕರಗುತ್ತದೆ. ಮತ್ತೆ ಕೆಲವೊಮ್ಮೆ ಸರ್ಜರಿ ಬೇಕಾಗುತ್ತದೆ. 

ಪ್ರಗ್ನೆನ್ಸಿ

ಹೊಟ್ಟೆಯಲ್ಲಿ ಮಗು ಬೆಳೆದಂತೆಲ್ಲ  ಹೆಚ್ಚು ಜಾಗ ಬೇಡುತ್ತದೆ. ಆಗ ಬ್ಲ್ಯಾಡರ್ ಮೇಲೆ ಒತ್ತಡ ಬೀಳುತ್ತದೆ. ಇದರಿಂದ ಪದೇ ಪದೆ ಮೂತ್ರ ವಿಸರ್ಜಿಸುವಂತಾಗುತ್ತದೆ. 
ಇಷ್ಟೇ ಅಲ್ಲದೆ ಸ್ಟ್ರೋಕ್, ವೆಜೈನೈಟಿಸ್, ಅತಿಯಾದ ಆಲ್ಕೋಹಾಲ್ ಅಥವಾ ಕೆಫಿನ್ ಸೇವನೆ, ಮೆನೋಪಾಸ್, ಟ್ಯೂಮರ್, ಪ್ರೊಸ್ಟೇಟ್ ಕ್ಯಾನ್ಸರ್, ಮಲಬದ್ಧತೆ ಮುಂತಾದ ಸಮಸ್ಯೆಗಳಿರುವ ಸಂದರ್ಭದಲ್ಲಿ ಕೂಡಾ ಪದೇ ಪದೆ ಮೂತ್ರಕ್ಕೆ ಹೋಗುವಂತಾಗಬಹುದು. 

click me!