Farting : ಅತಿಯಾಗಿ ಹೂಸು ಬಿಡುವುದು ಯಾಕೆ ಗೊತ್ತಾ? ಇದರಿಂದ ಹೊರಬರುವ ಉಪಾಯಗಳೇನು?

By Suvarna NewsFirst Published Sep 8, 2022, 1:02 PM IST
Highlights

Health Tips in Kannada: ಮೀಟಿಂಗ್ ಇರಲಿ, ಪಾರ್ಟಿ ಇರಲಿ, ಟ್ರಾವೆಲ್ ಇರಲಿ.. ಹೂಸು ಬಂದರೆ ಅವಮಾನದಲ್ಲಿ ಒದ್ದಾಡಿ ಸಾಯೋ ಹಾಗಾಗುತ್ತದೆ. ಹೂಸು ಬಿಡುವವರನ್ನು ನೋಡಿ ಕೆಟ್ಟದಾಗಿ ಮಾತಾಡುವ ಜನರೂ ಇರ್ತಾರೆ. ನೀವು ಹೂಸು ಬಂದಾಗ ಹೊರಬಿಡಲಾಗದೇ, ಒಳಗೂ ಇಟ್ಟುಕೊಳ್ಳಲಾಗದೇ ಒದ್ದಾಡಿದ್ದೀರಾ? ನಿಮ್ಮ ಸಮಸ್ಯೆಗೆ ಇಲ್ಲಿದೆ ಪರಿಹಾರ.

ಹೂಸು ಬರುವುದು ಅಸಹಜ ಅಲ್ಲ. ಆದರೆ ಅದನ್ನು ಜನ ಮಾತ್ರ ಅಸಹಜವಾಗಿ ತೆಗೆದುಕೊಳ್ತಾರೆ. ಹೀಗಾಗಿ ಹೂಸು ಬಂದರೆ ಜೀವ ಬಾಯಿಗೆ ಬಂದಂಥಾ ಸ್ಥಿತಿ. ಅತ್ತ ಹೂಸು ಬಿಟ್ಟರೆ ಇತರರು ನಕ್ಕರೆ, ಅಪಹಾಸ್ಯ ಮಾಡಿದರೆ, ಕೆಟ್ಟ ವಾಸನೆಗೆ ಕೆಟ್ಟದಾಗಿ ರಿಯಾಕ್ಟ್ ಮಾಡಿದರೆ ಏನು ಮಾಡೋದು ಅನ್ನೋ ತಳಮಳ. ಇನ್ನೊಂದು ಕಡೆ ಹೊರ ಬಿಡದಿದ್ದರೆ ಗ್ಯಾಸ್ ತುಂಬಿಕೊಂಡು ಸಂಕಟ, ವೇದನೆ. ಹಾಗೆ ನೋಡಿದರೆ ಫಾರ್ಟಿಂಗ್ ಅಥವಾ ಹೂಸು ಅನಾರೋಗ್ಯದ ಲಕ್ಷಣ ಏನೂ ಅಲ್ಲ. ಹೂಸು ಬಿಡುವುದು ಆರೋಗ್ಯಕರವಾಗಿದೆ, ಏಕೆಂದರೆ ಇದು ನಮ್ಮ ದೇಹದಲ್ಲಿನ ಹೆಚ್ಚುವರಿ ಅನಿಲವನ್ನು ಬಿಡುಗಡೆ ಮಾಡಲು ಅನುವು ಮಾಡಿಕೊಡುತ್ತದೆ. ಗ್ಯಾಸ್‌ ಹೊರಬರದೇ ಇದ್ದರೆ ಹೊಟ್ಟೆಯುಬ್ಬರ, ನೋವಿನಂತಹ ಲಕ್ಷಣಗಳನ್ನು ಅನುಭವಿಸಬೇಕಾಗುತ್ತದೆ. ಈ ಹೂಸಿನ ಸಮಸ್ಯೆ ಸಾಮಾನ್ಯವೇ. ಆದರೆ ಇದು ಅತಿಯಾಗಿ ನಿಮ್ಮನ್ನು ಕಾಡುತ್ತಿದ್ದರೆ, ಫಾರ್ಟಿಂಗ್ ನಿಲ್ಲಿಸುವುದು ಹೇಗೆ ಎಂಬ ವಿವರ ಇಲ್ಲಿದೆ. ಸಾಮಾಜಿಕವಾಗಿ ಅವಮಾನ ತರುವ ಈ ಸಮಸ್ಯೆಗೆ ನಮ್ಮ ಆಹಾರ ಪದ್ಧತಿಯೇ ಹೆಚ್ಚಿನ ಸಲ ಕಾರಣವಾಗಿರುತ್ತದೆ. ಜೀರ್ಣಕ್ರಿಯೆ ಮತ್ತು ಉಸಿರಾಟದಿಂದ ಸಣ್ಣ ಕರುಳಿನಲ್ಲಿ ಗ್ಯಾಸ್ ಸಂಗ್ರಹವಾದಾಗ ವಾಯು, ಗ್ಯಾಸ್ ಎಂದು ಕರೆಯಲ್ಪಡುವ ಹೂಸು ಬಿಡುಗಡೆಯಾಗುತ್ತದೆ. ಇದು ಹೆಚ್ಚುವರಿ ತೇಗು ಅಥವಾ ಹೂಸಿನ ರೂಪದಲ್ಲಿ ಬಿಡುಗಡೆಯಾಗುತ್ತದೆ.

ಇದಕ್ಕೆ ಕಾರಣಗಳೂ ಒಂದಿಷ್ಟಿವೆ. ಸೂಕ್ತವಾದ ರೀತಿಯಲ್ಲಿ ಆಹಾರ ಜಗಿಯದೇ ಇರುವುದು, ಕಾರ್ಬೊನೇಟೆಡ್ ಪಾನೀಯಗಳ ಸೇವನೆ, ಟೈಪ್ 2 ಡಯಾಬಿಟಿಸ್, ಬ್ಯಾಕ್ಟೀರಿಯಾವನ್ನು ಹೆಚ್ಚಿಸುವ ಯಕೃತ್ತಿನ ಕಾಯಿಲೆಗಳು ಅತಿಯಾದ ಹೂಸು ಹೊರಹೋಗಲು ಕಾರಣವಾಗುತ್ತವೆ. ಹೆಚ್ಚಿನ ಸಲ ಹೂಸು ವಾಸನೆಯಿಲ್ಲದೆ ಇರುತ್ತದೆ. ಕೆಲವು ಸಲ ವಾಸನೆಯಿಂದ ಕೂಡಿರುತ್ತದೆ. ಆದರೆ ಸದ್ದನ್ನು ಉಂಟುಮಾಡುವುದಿಲ್ಲ. ಹೂಸು ಕೆಟ್ಟ ವಾಸನೆಯಿಂದ ಕೂಡಿದ್ದರೆ ತಿನ್ನುವ ಆಹಾರದ ಬಗ್ಗೆ ಗಮನವಹಿಸಬೇಕು. ಆರೋಗ್ಯಕರ ಜೀವನಕ್ಕೆ ಮಿತವಾಗಿ ತಿನ್ನುವುದು ಯಾವಾಗಲೂ ಉತ್ತಮ. ಕಡಿಮೆ ತಿನ್ನುವುದು ಜೀರ್ಣ ಕ್ರಿಯೆಯನ್ನು ಉತ್ತಮ ಗೊಳಿಸುತ್ತದೆ. ಅತಿಯಾದ ಆಹಾರ ಸೇವನೆ ಬೊಜ್ಜು, ಫಾರ್ಟಿಂಗ್‌ ಸಮಸ್ಯೆಗೆ ಕಾರಣವಾಗುತ್ತದೆ.

ಇದನ್ನೂ ಓದಿ: ಕೆಮ್ಮಿ ಕೆಮ್ಮಿ ಸುಸ್ತಾಯ್ತಾ.... ಈ ಮನೆಮದ್ದು ಮಾಡಿ ರಿಲ್ಯಾಕ್ಸ್ ಆಗಿ!

ಕಡಿಮೆ ತಿನ್ನುವುದರ ಜೊತೆಗೆ, ಸರಿಯಾದ ರೀತಿಯಲ್ಲಿ ಆಹಾರ ತಿನ್ನುವುದು ಉತ್ತಮ. ಆಹಾರವನ್ನು ಚೆನ್ನಾಗಿ ಜಗಿದು, ಅಗೆದು ತಿನ್ನುವುದು ಆರೋಗ್ಯಕ್ಕೆ ಉತ್ತಮ. ಬೇಗನೆ ತಿನ್ನುವುದರಿಂದ ದೇಹಕ್ಕೆ ಹೆಚ್ಚಿನ ಗಾಳಿಯು ಪ್ರವೇಶಿಸುವ ಸಾಧ್ಯತೆಗಳಿವೆ, ಇದು ನಿಮ್ಮ ಗ್ಯಾಸ್‌ ಗೆ ನೇರ ಕಾರಣವಾಗುತ್ತದೆ. ಹೆಚ್ಚು ಸಿಗರೇಟ್ ಸೇದುವುದು ಕೂಡ ಹೊಟ್ಟೆ ಗ್ಯಾಸ್ ಗೆ ಕಾರಣವಾಗಿದೆ. ಧೂಮಪಾನ ಮಾಡುವವರಲ್ಲಿ ಮಲಬದ್ಧತೆ ಕೂಡ ಹೆಚ್ಚಾಗಿ ಕಂಡುಬರುತ್ತದೆ. ಈ ಕಾರಣದಿಂದಾಗಿ, ಗ್ಯಾಸ್ಟ್ರಿಕ್ ಹೆಚ್ಚಾಗುವ ಸಾಧ್ಯತೆಗಳಿವೆ.

ಕೊಬ್ಬಿನ ಆಹಾರಗಳು, ಪಾನೀಯ ಇಂತಹ ಅನಾರೋಗ್ಯಕರ ಆಹಾರ ಪದ್ಧತಿ ಗ್ಯಾಸ್‌ ಗೆ ಕಾರಣವಾಗಿದೆ. ಫ್ರುಕ್ಟೋಸ್ ಮತ್ತು ಸೋರ್ಬಿಟೋಲ್ನಂತಹ ಅನಿಲವನ್ನು ಉಂಟುಮಾಡುವ ಸಿಹಿಕಾರಕಗಳನ್ನು ತಪ್ಪಿಸುವುದು ಉತ್ತಮ. ಹೂಸಿಗೆ ಆಹಾರದ ಜೊತೆ ವೈದ್ಯಕೀಯ ಪರಿಸ್ಥಿತಿಗಳು ಸಹ ಕಾರಣವಾಗುತ್ತದೆ. ಉರಿಯೂತದ ಕರುಳಿನ  ಕಾಯಿಲೆ, ತಿನ್ನುವ ಅಸ್ವಸ್ಥತೆಗಳು ಮತ್ತು ಕ್ರೋನ್ಸ್ ಕಾಯಿಲೆಗಳು ಸಹ ಅತಿಯಾದ ಫಾರ್ಟಿಂಗ್‌ಗೆ ಕಾರಣವಾಗುತ್ತವೆ.

ಇದನ್ನೂ ಓದಿ: ಗರ್ಭಾವಸ್ಥೆಯ Stretch Mark ನಿರ್ಮೂಲನೆಗೆ ಮನೆಮದ್ದು!

ಹೂಸು ತಡೆಯೋದು ಹೇಗೆ?

ಹಲವಾರು ಆರೋಗ್ಯ ಸಮಸ್ಯೆಗೆ ನೀರು ಸೇವನೆಯೇ ಮದ್ದು. ಸಾಧ್ಯವಾದಷ್ಟು ನೀರು ಕುಡಿಯುವುದು ಉತ್ತಮ. ನೀರಿನ ಜೊತೆಗೆ ಮಜ್ಜಿಗೆ, ಮೊಸರು ಸೇವಿಸಬಹುದು. ಮಸಾಲಾ ಪದಾರ್ಥ ಲವಂಗ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ರೋಗಗಳ ಹೊರೆಯಿಂದ ರಕ್ಷಿಸುವ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಲವಂಗದ ಟೀ ವಿವಿಧ ಸೋಂಕುಗಳನ್ನು ತಡೆಯುತ್ತದೆ.ಊಟಕ್ಕೆ ಒಂದು ಗಂಟೆ ಮೊದಲು ಲವಂಗದಿಂದ ಮಾಡಿದ ಒಂದು ಕಪ್ ಚಹಾವನ್ನು ಕುಡಿಯುವುದರಿಂದ ಅಜೀರ್ಣ ಅಥವಾ ಹೊಟ್ಟೆಯ ಅಸ್ವಸ್ಥತೆ ಮತ್ತು ಉಬ್ಬುವುದು ಮುಂತಾದ ಸಮಸ್ಯೆಗಳನ್ನು ನಿವಾರಿಸಬಹುದು. ಓಂಕಾಳುಗಳು ಥೈಮೋಲ್ ಎಂಬ ವಸ್ತುವನ್ನು ಹೊಂದಿರುತ್ತವೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುವ ಆಮ್ಲವನ್ನು ಹೊಂದಿದ್ದು, ಇದು ಆಹಾರದಲ್ಲಿನ ವಾಯುವನ್ನು ತಡೆಯುತ್ತದೆ. 1/2 ಚಮಚ ಓಂಕಾಳು ನೀರಿನಲ್ಲಿ ಕುದಿಸಿ ಪ್ರತಿದಿನ ಕುಡಿಯುವುದರಿಂದ ಗ್ಯಾಸ್‌ ನಿಲ್ಲಿಸಬಹುದು. ಅಸಹಜವಾಗಿ ಹೂಸು ಬಿಡುತ್ತಿದ್ದರೆ ಹೊಟ್ಟೆ ಉಬ್ಬುವುದು ಮತ್ತು ಅಧಿಕ ತೇಗು ಜೊತೆಗೆ ನೀವು ನೋವು ಮತ್ತು ಅಸ್ವಸ್ಥತೆಯನ್ನು ಅನುಭವಿಸಿದರೆ, ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ,

click me!