
ಬೆಂಗಳೂರು(ಮೇ.17): ಮಳೆ ಬೆನ್ನಲ್ಲೇ ಡೆಂಘೀ ಜ್ವರ ಪ್ರಕರಣಗಳು ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಸಾವಿರಾರು ಮಂದಿಯಲ್ಲಿ ಜ್ವರ ಕಾಣಿಸಿಕೊಂಡಿದೆ. ಅಲ್ಲದೆ ಡೆಂಘೀ ಪಾಸಿಟಿವಿಟಿ ದರ ಶೇ.21ಕ್ಕೆ ಏರಿಕೆಯಾಗಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಜ್ವರದ ಪ್ರಕರಣಗಳು ಹೆಚ್ಚಾಗುತ್ತಿದ್ದು ಇವುಗಳಲ್ಲಿ ಬಹುತೇಕರಿಗೆ ಡೆಂಘೀ ಜ್ವರ ದೃಢಪಡುತ್ತಿದೆ. ಆರೋಗ್ಯ ಇಲಾಖೆಯ ಅಂಕಿ-ಅಂಶಗಳ ಪ್ರಕಾರವೇ ಪ್ರಸಕ್ತ ಸಾಲಿನಲ್ಲಿ ಕಳೆದ ನಾಲ್ಕೂವರೆ ತಿಂಗಳಲ್ಲಿ ಒಟ್ಟು 2,877 ಮಂದಿಗೆ ಡೆಂಘೀ ಜ್ವರ ದೃಢಪಟ್ಟಿದೆ. ಕಳೆದ ವರ್ಷ ಈ ಅವಧಿಯಲ್ಲಿ ಕೇವಲ 1,724 ಪ್ರಕರಣ ವರದಿಯಾಗಿತ್ತು.
ಕಾಫಿನಾಡು ಚಿಕ್ಕಮಗಳೂರಲ್ಲಿ ಡೆಂಗ್ಯೂ ಭೀತಿ; 88 ಪ್ರಕರಣಗಳು ಪತ್ತೆ!
ಇನ್ನು ಕಳೆದ ಒಂದು ವಾರದಲ್ಲಿ 879 ಮಂದಿಗೆ ಪರೀಕ್ಷೆ ನಡೆಸಿದ್ದರೆ 186 ಮಂದಿಗೆ ಡೆಂಘೀ ದೃಢಪಟ್ಟಿದೆ. ಹೀಗಾಗಿ ಡೆಂಘೀ ವ್ಯಾಪಕವಾಗಿ ಹರಡುವ ಲಕ್ಷಣ ಕಾಣಿಸುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಡೆಂಘೀ ಜ್ವರವು ವೈರಲ್ ಸೋಂಕುಗಳಲ್ಲಿ ಒಂದಾಗಿದ್ದು, ಸೊಳ್ಳೆಯಿಂದ ಹರಡುವ ಕಾಯಿಲೆ. ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್ ಜಾತಿಯ ಸೊಳ್ಳೆಗಳಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.
ರೋಗ ಲಕ್ಷಣಗಳೇನು?:
ಸೊಳ್ಳೆ ಕಚ್ಚಿದ ನಾಲ್ಕರಿಂದ ಹತ್ತು ದಿನಗಳ ಒಳಗೆ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು. ದೇಹದ ತಾಪಮಾನ ವಿಪರೀತ ಹೆಚ್ಚಾಗಿ ಹಠಾತ್ತನೆ ಜ್ವರ ಕಾಣಿಸಿಕೊಳ್ಳುತ್ತದೆ. ಕಣ್ಣಿನ ಗುಡ್ಡೆಯ ಹಿಂಭಾಗದಲ್ಲಿ ನೋವು, ತಲೆ ನೋವು, ಮೈ-ಕೈ ನೋವು ಸಾಮಾನ್ಯ ಲಕ್ಷಣಗಳು. ಡೆಂಘೀ ಜ್ವರಕ್ಕೆ ನಿರ್ದಿಷ್ಟ ಚಿಕಿತ್ಸೆ ಹಾಗೂ ಲಸಿಕೆ ಇಲ್ಲದಿರುವುದಿಂದ ರೋಗ ಲಕ್ಷಣಗಳಿಗೆ ಅನುಸಾರವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ನಿರ್ಲಕ್ಷ್ಯ ಮಾಡಿದರೆ ಜೀವಕ್ಕೇ ಅಪಾಯಕಾರಿ
ಡೆಂಘೀ ಸಾಮಾನ್ಯ ಜ್ವರವಾದರೂ ನಿರ್ಲಕ್ಷ್ಯ ಮಾಡಿದರೆ ಜೀವಕ್ಕೇ ಅಪಾಯಕಾರಿ. ಡೆಂಘೀ ಜ್ವರವು ರಕ್ತದಲ್ಲಿನ ಪ್ಲೇಟ್‌ಲೆಟ್ ಸಂಖ್ಯೆ ಕ್ಷೀಣಿಸಲು ಕಾರಣವಾಗುತ್ತದೆ. ಒಂದೊಮ್ಮೆ ಪ್ಲೇಟ್‌ಲೆಟ್ ಸಂಖ್ಯೆ ಗಣನೀಯವಾಗಿ ಕಡಿಮೆಯಾದರೆ ಪ್ರಾಣಕ್ಕೇ ಕುತ್ತುಂಟಾಗಬಹುದು. ಹೀಗಾಗಿ ರೋಗ ಲಕ್ಷಣ ಕಂಡ ತಕ್ಷಣ ಚಿಕಿತ್ಸೆ ಪಡೆಯಬೇಕು ಎಂದು ಸಾಂಕ್ರಾಮಿಕ ರೋಗಗಳ ಯೋಜನಾ ನಿರ್ದೇಶಕ ಡಾ.ಅನ್ಸರ್ ಅಹಮದ್ ತಿಳಿಸಿದ್ದಾರೆ.
ಮುನ್ನೆಚ್ಚರಿಕಾ ಕ್ರಮಕ್ಕೆ ಸೂಚನೆ:
ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಮಾತನಾಡಿ, ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುತ್ತಿರುವುದರಿಂದ ಡೆಂಘೀ ನಿಯಂತ್ರಣ ಕ್ರಮಗಳನ್ನು ತೀವ್ರಗೊಳಿಸಲು ಸೂಚಿಸಲಾಗಿದೆ. ಈಡಿಸ್ ಸೊಳ್ಳೆಯ ಉತ್ಪತ್ತಿಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ನಿಗದಿತ ಸಂಖ್ಯೆಯ ಮನೆಗಳಿಗೆ ಪ್ರತಿದಿನ ಭೇಟಿ ನೀಡಿ ಲಾರ್ವಾ ಉತ್ಪತ್ತಿ ತಾಣ ನಾಶ ಮಾಡುವ ಜತೆಗೆ ಜಾಗೃತಿ ಮೂಡಿಸಬೇಕು. ಜಿಲ್ಲಾಸ್ಪತ್ರೆಗಳಿಗೆ ದಾಖಲಾಗುವ ಖಚಿತ ಡೆಂಘೀ ಪ್ರಕರಣಗಳ ಮಾಹಿತಿಯನ್ನು ಪಡೆದು ವರದಿ ನೀಡಬೇಕು. ಹೆಚ್ಚು ಪ್ರಕರಣ ವರದಿಯಾಗಿರುವ ಗ್ರಾಮ, ವಾರ್ಡ್‌ಗಳಿಗೆ ಆರೋಗ್ಯ ಸಿಬ್ಬಂದಿ ಭೇಟಿ ನೀಡಿ ಶಂಕಿತ ಪ್ರಕರಣಗಳಿದ್ದಲ್ಲಿ ಪರೀಕ್ಷಿಸಿ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿರುವುದಾಗಿ ತಿಳಿಸಿದ್ದಾರೆ.
ಸೊಳ್ಳೆಗಳೇಕೆ ಕೆಲವರಿಗೆ ಮಾತ್ರ ಜಾಸ್ತಿ ಕಚ್ಚುತ್ತವೆ? 6 ಕಾರಣಗಳು ಇಲ್ಲಿವೆ..
ಔಷಧಿಗಳ ವ್ಯವಸ್ಥೆಗೆ ಸೂಚನೆ:
ಶಂಕಿತ ಡೆಂಘೀ ಜ್ವರ ಪ್ರಕರಣಗಳ ಪರೀಕ್ಷೆಗಾಗಿ ಎಲ್ಲಾ ಪ್ರಮುಖ ಲ್ಯಾಬ್‌ಗಳಲ್ಲಿ ಪರೀಕ್ಷಾ ಕಿಟ್, ಆಸ್ಪತ್ರೆಗಳಲ್ಲಿ ಅಗತ್ಯ ಔಷಧ ಲಭ್ಯ ಇಟ್ಟುಕೊಳ್ಳಬೇಕು. ಪರೀಕ್ಷೆ ಹಾಗೂ ಚಿಕಿತ್ಸೆಯು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಸಿಗುವಂತೆ ಮಾಡಲಾಗಿದೆ ಎಂದು ರಂದೀಪ್ ತಿಳಿಸಿದರು.
ಸಾರ್ವಜನಿಕರು ಏನು ಮಾಡಬೇಕು?
ನೀರು ಸಂಗ್ರಾಹಕಗಳನ್ನು ಸ್ವಚ್ಛವಾಗಿಡಬೇಕು. ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆಯುವವರು ವಿಶೇಷವಾಗಿ ವೃದ್ಧರು, ಗರ್ಭಿಣಿಯರು ಹಾಗೂ ಮಕ್ಕಳು ಸೊಳ್ಳೆ ಪರದೆಯನ್ನು ಬಳಸಬೇಕು. ಡೆಂಘೀ, ಚಿಕುನ್‌ಗುನ್ಯ ರೋಗಿಗಳೂ ಸಹ ತಪ್ಪದೇ ಸೊಳ್ಳೆಯ ಪರದೆಯನ್ನು ಉಪಯೋಗಿಸಬೇಕು. ಸೊಳ್ಳೆಗಳು ಕಚ್ಚದಂತೆ ಮೈ ತುಂಬಾ ಬಟ್ಟೆ ಧರಿಸಿ ಸೊಳ್ಳೆ ಪರದೆ, ಸೊಳ್ಳೆ ಬತ್ತಿ, ಮುಲಾಮು, ದ್ರಾವಣ ಉಪಯೋಗಿಸಬೇಕು. ಕಾಯಿಲೆ ಲಕ್ಷಣ ಕಂಡರೆ ಕೂಡಲೇ ವೈದ್ಯರನ್ನು ಭೇಟಿ ಮಾಡಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ