ಕೋವ್ಯಾಕ್ಸಿನ್‌ ಪಡೆದ 30% ಜನರಿಗೆ ಆರೋಗ್ಯ ಸಮಸ್ಯೆ..!

By Kannadaprabha News  |  First Published May 17, 2024, 6:51 AM IST

ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಕಂಪನಿ ಉತ್ಪಾದಿಸಿದ್ದ ಕೋವ್ಯಾಕ್ಸಿನ್‌ ಲಸಿಕೆಯನ್ನು ಸ್ವೀಕರಿಸಿದ ಮೂರನೇ ಒಂದರಷ್ಟು ಮಂದಿಯಲ್ಲಿ ‘ವಿಶೇಷ ಹಿತಾಸಕ್ತಿಯ ಪ್ರತಿಕೂಲ ಘಟನಾವಳಿಗಳು’ (ಎಇಎಸ್‌ಐ) ಕಂಡುಬಂದಿವೆ. ಬನಾರಸ್‌ ಹಿಂದು ವಿಶ್ವವಿದ್ಯಾಲಯದ ಸಂಶೋಧಕರ ತಂಡ ಒಂದು ವರ್ಷ ನಡೆಸಿದ ಅಧ್ಯಯನದಲ್ಲಿ ಇದು ಗೋಚರವಾಗಿದೆ.


ನವದೆಹಲಿ(ಮೇ.17):  ಬ್ರಿಟನ್‌ ಮೂಲದ ಆಸ್ಟ್ರಾಜೆನೆಕಾ ಕಂಪನಿ ತಯಾರಿಸಿದ ಹಾಗೂ ಭಾರತದಲ್ಲಿ ಸೀರಂ ಇನ್ಸ್‌ಟಿಟ್ಯೂಟ್‌ ಮಾರಾಟ ಮಾಡಿದ್ದ ಕೋವಿಶೀಲ್ಡ್‌ ಲಸಿಕೆಯಲ್ಲಿ ಅಪರೂಪದ ಅಡ್ಡಪರಿಣಾಮಗಳಿರುವುದನ್ನು ಸ್ವತಃ ಕಂಪನಿಯೇ ಒಪ್ಪಿಕೊಂಡಿದ್ದಾಯ್ತು. ಇದೀಗ ಸ್ವದೇಶಿ ಕೋವಿಡ್‌ ಲಸಿಕೆ ಎಂತಲೇ ಜನಪ್ರಿಯವಾಗಿದ್ದ ಕೋವ್ಯಾಕ್ಸಿನ್‌ ಲಸಿಕೆಯಿಂದಲೂ ಒಂದು ವರ್ಷದ ಬಳಿಕ ಅಡ್ಡ ಪರಿಣಾಮಗಳು ಉಂಟಾದ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ.

ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಕಂಪನಿ ಉತ್ಪಾದಿಸಿದ್ದ ಕೋವ್ಯಾಕ್ಸಿನ್‌ ಲಸಿಕೆಯನ್ನು ಸ್ವೀಕರಿಸಿದ ಮೂರನೇ ಒಂದರಷ್ಟು ಮಂದಿಯಲ್ಲಿ ‘ವಿಶೇಷ ಹಿತಾಸಕ್ತಿಯ ಪ್ರತಿಕೂಲ ಘಟನಾವಳಿಗಳು’ (ಎಇಎಸ್‌ಐ) ಕಂಡುಬಂದಿವೆ. ಬನಾರಸ್‌ ಹಿಂದು ವಿಶ್ವವಿದ್ಯಾಲಯದ ಸಂಶೋಧಕರ ತಂಡ ಒಂದು ವರ್ಷ ನಡೆಸಿದ ಅಧ್ಯಯನದಲ್ಲಿ ಇದು ಗೋಚರವಾಗಿದೆ. ಅಧ್ಯಯನದಲ್ಲಿ 926 ಮಂದಿ ಭಾಗಿಯಾಗಿದ್ದು, ಆ ಪೈಕಿ ಶೇ.50ರಷ್ಟು ಮಂದಿ ತಮಗೆ ವಿವಿಧ ಬಗೆಯ ಸೋಂಕುಗಳು ಕಾಣಿಸಿಕೊಂಡಿದ್ದನ್ನು ಹೇಳಿದ್ದಾರೆ. ಅದರಲ್ಲಿ ಹೆಚ್ಚಿನವರು ಉಸಿರಾಟ ನಾಳದ ಸೋಂಕು ಕಾಣಿಸಿಕೊಂಡಿತ್ತೆಂದು ತಿಳಿಸಿದ್ದಾರೆ.

Tap to resize

Latest Videos

ಕೋವಿಶೀಲ್ಡ್‌ ಅಡ್ಡಪರಿಣಾಮ ಬಗ್ಗೆ ಪ್ಯಾಕ್‌ ಮೇಲೇ ಸ್ಪಷ್ಟನೆ ನೀಡಿದ್ದೇವು: ಸೀರಂ

ಗಂಭೀರ ಎಇಎಸ್‌ಐ ಪ್ರಕರಣಗಳಾದ ಪಾರ್ಶ್ವವಾಯು ಹಾಗೂ ಗುಯಿಲ್ಲೈನ್‌ ಬ್ಯಾರೆ ಸಿಂಡ್ರೋಮ್‌ (ನರ ಮಂಡಲ ಸಮಸ್ಯೆ) ಶೇ.1ರಷ್ಟು ಮಂದಿಯಲ್ಲಿ ಕಂಡುಬಂದಿದೆ. ಈ ಅಧ್ಯಯನ ವರದಿ ‘ಸ್ಪ್ರಿಂಗರ್‌ ನೇಚರ್‌’ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. ಲಸಿಕೆ ಪಡೆದ ಮೂರನೇ ಒಂದರಷ್ಟು ಮಂದಿಯಲ್ಲಿ ‘ವಿಶೇಷ ಹಿತಾಸಕ್ತಿಯ ಪ್ರತಿಕೂಲ ಘಟನಾವಳಿಗಳು’ (ಎಇಎಸ್‌ಐ) ಕಾಣಿಸಿಕೊಂಡಿವೆ. ಹೊಸ ಚರ್ಮ ಸಮಸ್ಯೆ, ಸಾಮಾನ್ಯ ಸಮಸ್ಯೆಗಳು ಹಾಗೂ ನರಮಂಡಲ ಸಮಸ್ಯೆಗಳು ಪ್ರಮುಖವಾಗಿ ಕಂಡುಬಂದಿರುವ ಮೂರು ಆರೋಗ್ಯ ಸಮಸ್ಯೆಗಳಾಗಿವೆ ಎಂದು ಅಧ್ಯಯನ ವರದಿ ತಿಳಿಸಿದೆ.

2022ರ ಜನವರಿಯಿಂದ 2023ರ ಆಗಸ್ಟ್‌ವರೆಗೆ ಈ ಅಧ್ಯಯನ ನಡೆದಿದೆ. 635 ಹದಿಹರೆಯದವರು ಹಾಗೂ 291 ವಯಸ್ಕರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಲಸಿಕೆ ಪಡೆದ ಒಂದು ವರ್ಷದ ಬಳಿಕ ಆದ ಪ್ರತಿಕೂಲ ಪರಿಣಾಮಗಳ ಬಗ್ಗೆ ದೂರವಾಣಿ ಮೂಲಕ ಸಂದರ್ಶಿಸಲಾಗಿದೆ.

ಕೋವಿಶೀಲ್ಡ್‌ ಆತಂಕದ ನಡುವೆ, ಜಾಗತಿಕವಾಗಿ ಕೋವಿಡ್ ಲಸಿಕೆ ಹಿಂಪಡೆಯುತ್ತಿರುವ ಅಸ್ಟ್ರಾಜೆನೆಕಾ ಕಂಪೆನಿ!

ಶೇ.10.5ರಷ್ಟು ಮಂದಿಯಲ್ಲಿ ಹೊಸ ಚರ್ಮ ಸಮಸ್ಯೆ, ಶೇ.10.2ರಷ್ಟು ಮಂದಿಯಲ್ಲಿ ಸಾಮಾನ್ಯ ಸಮಸ್ಯೆಗಳು ಹಾಗೂ ಶೇ.4.7ರಷ್ಟು ಮಂದಿಯಲ್ಲಿ ನರಮಂಡಲ ಸಮಸ್ಯೆ, ಶೇ.4.6 ಮಹಿಳೆಯರಲ್ಲಿ ಋತುಚಕ್ರ ಸಮಸ್ಯೆ ಕಾಣಿಸಿಕೊಂಡಿದೆ. 4 ಸಾವುಗಳು ಕೂಡ ಸಂಭವಿಸಿವೆ. ಆ ಪೈಕಿ ಮೂವರು ಮಹಿಳೆಯರು ಎಂದು ವರದಿ ತಿಳಿಸಿದೆ.

ಏನು ಆರೋಗ್ಯ ಸಮಸ್ಯೆ?

- ಕೋವ್ಯಾಕ್ಸಿನ್‌ ಪಡೆದ 926 ಜನರನ್ನು ಅಧ್ಯಯನಕ್ಕೆ ಒಳಪಡಿಸಿದ್ದ ಬನಾರಸ್‌ ವಿವಿ
- ಅವರಲ್ಲಿ ಶೇ.50ರಷ್ಟು ಜನರಿಂದ ಬೇರೆ ಬೇರೆ ಅನಾರೋಗ್ಯ ಅನುಭವಿಸಿದ ಹೇಳಿಕೆ
- ಒಂದು ವರ್ಷದ ಬಳಿಕವೂ ಶೇ.30ರಷ್ಟು ಜನರಿಗೆ ಬೇರೆ ಬೇರೆ ರೀತಿ ಅನಾರೋಗ್ಯ
- ಹೆಚ್ಚಿನವರಿಗೆ ಶ್ವಾಸಕೋಶದ ಸಮಸ್ಯೆ, ನರ ಸಮಸ್ಯೆ, ಚರ್ಮಸಂಬಂಧಿ ಸಮಸ್ಯೆಗಳು
- ಕೆಲ ಮಹಿಳೆಯರಲ್ಲಿ ಋತುಚಕ್ರದ ಸಮಸ್ಯೆ

click me!