ಕೋವಿಡ್ ಕಾಲದಲ್ಲಿ ಯೋಗದ ಮಹತ್ವ; ಇಂದು 7ನೇ ಅಂತಾರಾಷ್ಟ್ರೀಯ ಯೋಗ ದಿನ!

By Kannadaprabha NewsFirst Published Jun 21, 2021, 8:55 AM IST
Highlights

ಕೋವಿಡ್ ಸಾಂಕ್ರಾಮಿಕದಿಂದ ಜಗತ್ತು ತತ್ತರಿಸಿರುವ ದಿನಮಾನದಲ್ಲೇ ಅಂತಾರಾಷ್ಟ್ರೀಯ ಯೋಗ ದಿನ ಬಂದಿದೆ. ಈ ಹೊತ್ತಿನ ಸಂಕಟ, ದುಮ್ಮಾನಗಳಿಗೆ ಯೋಗ ಉತ್ತರದಂತೆಯೂ ಇದೆ. ಈ ಹಿನ್ನೆಲೆಯಲ್ಲಿ ಯೋಗ ಮಹತ್ವ, ಶಕ್ತಿಯ ಕುರಿತಾಗಿ ನಾವಿಂದು ಚಿಂತಿಸಬೇಕಿದೆ.
 

ಅಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮ ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗ. ನೂರಾರು ವರ್ಷಗಳಿಂದಲೂ ಭಾರತದಲ್ಲಿ ಆಚರಿಸಲ್ಪಡುತ್ತಿರುವ ‘ಯೋಗವಿದ್ಯೆಯು’ ಋಷಿ ಮುನಿಗಳಾದಿ ಸಾಧಕರಿಂದ ವಿದ್ಯೆ ಮತ್ತು ಜೀವನ ಶೈಲಿಯಾಗಿ ಹರಿದು ಬಂದಿದೆ. ಯೋಗದಲ್ಲಿ ದೇಹದ ಜೊತೆ ಮನಸ್ಸು, ಬುದ್ಧಿ, ಭಾವನೆ, ಆತ್ಮದ ಕುರಿತಾದ ಅಭ್ಯಾಸ ಮಾಡಲಾಗುತ್ತದೆ. ಆಧ್ಯಾತ್ಮದ ದೃಷ್ಟಿಯಲ್ಲಿ ಯೋಗವೆಂದರೆ ಆತ್ಮನೊಂದಿಗೆ ಪರಮಾತ್ಮನನ್ನು ಸೇರಿಸುವುದು. ಸದ್ಯ ಕೋವಿಡ್ ಸಾಂಕ್ರಾಮಿಕದ ಅಬ್ಬರದಿಂದ ಇಡೀ ಜಗತ್ತು ತತ್ತರಿಸುತ್ತಿದೆ. ಈ ಸಂದರ್ಭದಲ್ಲಿ ಯೋಗ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

ಭಾರತದ ಯೋಗಕ್ಕೆ ವಿಶ್ವಸಂಸ್ಥೆಯಿಂದ ಮಾನ್ಯತೆ!

2014ರ ಡಿಸೆಂಬರ್ 14ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ಯೋಗದ ಪ್ರಾಮುಖ್ಯತೆ ಕುರಿತು ಮಾತನಾಡಿ, ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುವ ಪ್ರಸ್ತಾಪ ಮುಂದಿಟ್ಟಿದ್ದರು. ಅನಂತರ ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಅಶೋಕ್ ಕುಮಾರ್ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕರಡು ಪ್ರಸ್ತಾವನೆ ಮಂಡಿಸಿದರು. ವಿಶ್ವಸಂಸ್ಥೆಗೆ ಇದು ಐತಿಹಾಸಿಕ ಕ್ಷಣವಾಗಿದ್ದು ಅದರ ಸದಸ್ಯ ರಾಷ್ಟ್ರಗಳು ಅಭೂತಪೂರ್ವ ಬೆಂಬಲ ಸೂಚಿಸಿದವು. ವಿಶ್ವಸಂಸ್ಥೆಯ 193 ರಾಷ್ಟ್ರಗಳ ಪೈಕಿ 177 ದೇಶಗಳು ಇದಕ್ಕೆ ಅನುಮೋದನೆ ನೀಡಿದವು. 2015ರ ಜೂನ್ 21ರಂದು ಮೊಟ್ಟ ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಯಿತು. ಅಲ್ಲಿಂದ ಪ್ರತಿ ವರ್ಷ ಜೂ.21ರಂದು ಅಂತಾರಾಷ್ಟ್ರೀಯ ಯೋಗದಿನವನ್ನಾಗಿ ಆಚರಿಸಲಾಗುತ್ತಿದೆ. ಇದಕ್ಕೆ ವಿಶ್ವಸಂಸ್ಥೆಯ ಮಾನ್ಯತೆ ಇದೆ.

ಕೊರೋನಾ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದ ಯೋಗ: ಪಿಎಂ ಮೋದಿ 

ಜೂನ್ 21ರಂದೇ ಯೋಗ ದಿನಾಚರಣೆ ಏಕೆ?

ವರ್ಷದಲ್ಲಿ ಉತ್ತರ ಗೋಳಾರ್ಧದ ಅತಿ ಉದ್ದದ ಹಾಗೂ ದಕ್ಷಿಣ ಗೋಳಾರ್ಧದ ಅತಿ ಚಿಕ್ಕ ದಿನವನ್ನು ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ. ಇದನ್ನು ಬೇಸಿಗೆ ಅಯನ ಸಂಕ್ರಾಂತಿ ದಿನವೆಂದು (ವರ್ಷದಲ್ಲಿನ ಅತ್ಯಂತ ಹೆಚ್ಚು ಹಗಲುಳ್ಳ ದಿನ) ಕರೆಯಲಾಗುತ್ತದೆ. ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿದೆ. ಇದು ದಕ್ಷಿಣಾಯನಕ್ಕೆ ಪರಿವರ್ತನೆ ಎಂದು ಗುರುತಿಸಲಾಗುತ್ತದೆ. ದಕ್ಷಿಣಾಯನವನ್ನು ಆಧ್ಯಾತ್ಮಿಕ ಅಭ್ಯಾಸಗಳಿಗೆ ನೈಸರ್ಗಿಕ ಬೆಂಬಲವೆಂದು ಪರಿಗಣಿಸಲಾಗುತ್ತದೆ. ಆದಿ ಕಾಲದಲ್ಲಿ ಸೂರ್ಯಾಭಿಮುಖವಾಗಿ ದೃಷ್ಟಿ ನೆಟ್ಟು ಆದಿ ಶಕ್ತಿ ಉದ್ದೀಪನಗೊಳಿಸುತ್ತಿದ್ದ ದಿನ ಇದಾಗಿದೆ ಎಂದು ನಂಬಲಾಗಿದೆ. ಹಾಗಾಗಿ ಈ ಪರಿವರ್ತನೆಯು ಯೋಗ ಅಭ್ಯಾಸಿಗರಿಗೆ ಪೂರಕ ಎಂಬ ನಂಬಿಕೆಯಿದೆ.

ಶ್ವಾಸಕೋಶಗಳನ್ನು ಬಲಪಡಿಸುವ ಯೋಗಾಸನಗಳು (ಸಪರೇಟ್ ಬಾಕ್‌ಸ್)

ಕಳೆದ ಎರಡು ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕ ರೋಗ ಇಡೀ ಜಗತ್ತಿಗೆ ಆವರಿಸಿ ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ. ಈ ಸಾಂಕ್ರಾಮಿಕ ಶ್ವಾಸಕೋಶಕ್ಕೇ ದಾಳಿ ಮಾಡುತ್ತಿರುವುದರಿಂದ ಈ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸುವ ಅಗತ್ಯವಿದೆ. ಶ್ವಾಸಕೋಶ ಬಲಪಡಿಸಲು ವ್ಯಾಯಾಮಕ್ಕಿಂತ ಯೋಗಾಸನಗಳೇ ರಾಮಬಾಣ. ಕೆಲವು ಯೋಗಾಭ್ಯಾಸಗಳು ನಮ್ಮ ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ ಮತ್ತು ನಿಮ್ಮ ಶ್ವಾಸನಾಳಗಳು ಮತ್ತು ಮೂಗಿನ ನಾಳಗಳನ್ನು ಹೆಚ್ಚು ಸ್ಪಷ್ಟಗೊಳಿಸುತ್ತವೆ.

ಚಕ್ರಾಸನ (ಚಕ್ರದ ಭಂಗಿ)

ಈ ಆಸನವನ್ನು ನಿರ್ವಹಿಸಲು ಮೊದಲು ಬೆನ್ನ ಮೇಲೆ ಮಲಗಿ ಹಾಗೂ ಕಾಲುಗಳನ್ನು ಮಡಿಚಬೇಕು, ಪಾದಗಳು ನೆಲದ ಮೇಲೆ ಚಪ್ಪಟೆಯಾಗಿರುವಂತಿರಲಿ. ಈಗ ಕೈಗಳನ್ನು ಕಿವಿಗಳ ಪಕ್ಕದ ನೆಲದ ಮೇಲೆ ಇರಿಸಿ, ಮೊಣಕೈ ಆಕಾಶ ನೋಡುವಂತಿರಲಿ. ಈಗ ನಿಧಾನವಾಗಿ ಉಸಿರು ಎಳೆದುಕೊಳ್ಳುತ್ತಾ ಕೈಗಳನ್ನು ಒತ್ತಿ ನೆಟ್ಟಗಾಗಿಸಿ ಪೂರ್ತಿ ದೇಹವನ್ನು ನೆಲದಿಂದ ಮೇಲೆತ್ತಿ. ಇದಕ್ಕಾಗಿ ಕಾಲುಗಳ ಸ್ನಾಯು ಹಾಗೂ ಕೈಗಳ ಸ್ನಾಯುಗಳ ಮೇಲೆ ಒತ್ತಡವನ್ನು ಹೇರಬೇಕಾಗುತ್ತದೆ. ಈಗ ನಿಮ್ಮ ದೇಹ ಒಂದು ಚಕ್ರದಂತೆ ಬಾಗಬೇಕು. ತಲೆ ಆದಷ್ಟೂ ಹಿಂದೆ ಹೋಗುವಂತೆ ಬಗ್ಗಿಸಿ. ಈ ಹಂತದಲ್ಲಿ ನೀವು ಗರಿಷ್ಠ ಉಸಿರು ಎಳೆದುಕೊಂಡಿರಬೇಕು. ಗರಿಷ್ಠ ಹಂತದಲ್ಲಿ ಕೆಲವು ಕ್ಷಣ ಉಸಿರು ಕಟ್ಟಿಕೊಂಡಿದ್ದು ನಿಧಾನವಾಗಿ ಉಸಿರು ಬಿಡುತ್ತಾ ಮೊದಲ ಹಂತಕ್ಕೆ ಬನ್ನಿ.

ಹಸ್ತ ಉತ್ತನಾಸನ (ಹಿಂದಕ್ಕೆ ತಂದ ಕೈಗಳ ಭಂಗಿ)

ಮೊದಲು ನೇರವಾಗಿ ಸಮಸ್ಥಿತಿಯಲ್ಲಿ ನಿಂತುಕೊಳ್ಳಿ. ಅಂದರೆ ಎರಡೂ ಪಾದಗಳನ್ನು ಒಂದು ಪಾದದ ಅಳತೆಯಷ್ಟು ದೂರವಿರಿಸಿ ಪಾದಗಳನ್ನು ಕೊಂಚವೇ ಅಗಲಿಸಿ ಬೆನ್ನು ಮೂಳೆ ನೆಟ್ಟಗಿರುವಂತೆ ನಿಂತುಕೊಳ್ಳಿ. ಎರಡೂ ಹಸ್ತಗಳನ್ನು ಜೋಡಿಸಿ ತೋರು ಬೆರಳುಗಳು ಮಾತ್ರವೇ ನೆಟ್ಟಗಿರುವಂತೆ ಮಾಡಿ ಉಳಿದ ಬೆರಳುಗಳನ್ನು ಪರಸ್ಪರ ಜೋಡಿಸಿ. ಈಗ ಉಸಿರನ್ನು ಎಳೆದುಕೊಳ್ಳುತ್ತಾ ಕೈಗಳನ್ನು ಮೇಲೆತ್ತಿ ತಲೆಯನ್ನು ಹಿಂದಕ್ಕೆ ಬಾಗಿ. ಮೊಣಕಾಲುಗಳನ್ನು ಮಡಚದೇ ನೇರವಾಗಿಯೇ ಇರಿಸಿ. ತಲೆ ಎರಡೂ ಕೈಗಳ ನಡುವೆ ಇರುವಂತೆ ನಿಮ್ಮಿಂದ ಸಾಧ್ಯವಿದ್ದಷ್ಟೂ ಹಿಂದಕ್ಕೆ ಬಾಗಿ. ಅಂತಿಮ ಹಂತಕ್ಕೆ ಬರುವಾಗ ನೀವು ಗರಿಷ್ಠ ಉಸಿರು ಎಳೆದುಕೊಂಡಿರಬೇಕು. ಈ ಹಂತದಲ್ಲಿ ಉಸಿರು ಕಟ್ಟಿ ಕೆಲವು ಕ್ಷಣ ಹಾಗೇ ಇರಿ. ಬಳಿಕ ನಿಧಾನವಾಗಿ ಉಸಿರು ಬಿಡುತ್ತಾ ಮೊದಲ ಹಂತಕ್ಕೆ ಬನ್ನಿ. ಈ ಕ್ರಮವನ್ನು ಇನ್ನೂ ಕೆಲವಾರು ಬಾರಿ ನಿರ್ವಹಿಸಿ.

ಅರ್ಧ ಚಂದ್ರಾಸನ

ಇದಕ್ಕಾಗಿ ಮೊದಲು ಪಾದ ಹಸ್ತಾಸನ ಭಂಗಿಯಿಂದ ಪ್ರಾರಂಭಿಸಬೇಕಾಗುತ್ತದೆ. ಬಲಗಾಲು ನೆಲದ ಮೇಲಿರುವಂತೆಯೇ ಎಡಗಾಲನ್ನು ಹಿಂದಕ್ಕೆ ತಂದು ಮಡಚದೇ ನೆಲದ ಮೇಲಿರಿಸಿ. ಇದೇ ಸಮಯದಲ್ಲಿ ಬಲಗೈಯನ್ನು ನೆಲಕ್ಕೆ ಊರುವಂತೆ ಇರಿಸಿ ಎಡಗೈಯನ್ನು ಮೇಲಕ್ಕೆತ್ತಿ. ತಲೆಯನ್ನು ಎಡಕ್ಕೆ, ಅಂದರೆ ಆಕಾಶ ನೋಡುವಂತೆ ಆದಷ್ಟೂ ವಾಲಿಸಿ. ಬಲಗೈ ನೆಲಕ್ಕೆ ಊರಿದ್ದು ಎಡಗೈ ಆಕಾಶದತ್ತ ಇರುವಂತೆ ಬಲಗಾಲನ್ನು ಆದಷ್ಟೂ ಮೇಲಕ್ಕೆತ್ತಿ. ಈ ಹಂತದಲ್ಲಿ ಗರಿಷ್ಠ ಉಸಿರು ಎಳೆದುಕೊಂಡು ಕೊಂಚ ಹೊತ್ತು ಹಾಗೇ ಇರಿ. ಬಳಿಕ ನಿಧಾನವಾಗಿ ಉಸಿರು ಬಿಡುತ್ತಾ ಮೊದಲ ಹಂತಕ್ಕೆ ಬನ್ನಿ, ಇದೇ ಕ್ರಮವನ್ನು ಇನ್ನೊಂದು ಕಾಲಿಗೂ ನಿರ್ವಹಿಸಿ.

ಧನುರಾಸನ (ಬಿಲ್ಲಿನ ಆಕಾರ)

ಮೊದಲು ನಿಮ್ಮ ಯೋಗಾಭ್ಯಾಸದ ಚಾಪೆಯ ಮೇಲೆ ಹೊಟ್ಟೆ ಕೆಳಗೆ ಬರುವಂತೆ ಮಲಗಿ. ಈಗ ನಿಮ್ಮ ಮೊಣಕಾಲುಗಳನ್ನು ಬಗ್ಗಿಸಿ ನಿತಂಬಗಳ ಬಳಿ ಬರುವಂತೆ ಮಾಡಿ. ನಿಮ್ಮ ಕೈಗಳನ್ನು ಸೊಂಟದ ಬದಿಯಿಂದ ಹಿಂದೆ ತಂದು ಪಾದಗಳನ್ನು ಹಿಡಿರಿ. ಈಗ ಉಸಿರನ್ನು ಪೂರ್ಣವಾಗಿ ಎಳೆದುಕೊಳ್ಳುತ್ತಾ ಕಾಲುಗಳನ್ನು ನೆಟ್ಟಗಾಗಿಸಲು ಯತ್ನಿಸಿ. ಈ ಯತ್ನದಲ್ಲಿ ನಿಮ್ಮ ದೇಹ ಕಮಾನಿನಂತೆ ಬಾಗಬೇಕು. ತಲೆಯನ್ನು ಆದಷ್ಟೂ ಮೇಲಕ್ಕೆತ್ತಿ. ಗರಿಷ್ಠ ಸೆಳೆತ ಬರುವಾಗ ನೀವು ಪೂರ್ತಿ ಉಸಿರು ಎಳೆದುಕೊಂಡಿರಬೇಕು. ಈ ಹಂತದಲ್ಲಿ ಉಸಿರು ಕಟ್ಟಿ ಕೊಂಚ ಹೊತ್ತು ಹಾಗೇ ಇರಿ. ಬಳಿಕ ನಿಧಾನವಾಗಿ ಉಸಿರು ಬಿಡುತ್ತಾ ಮೊದಲ ಹಂತಕ್ಕೆ ಬನ್ನಿ.

ಉಷ್ಟ್ರಾಸನ (ಒಂಟೆಯ ಭಂಗಿ)

ಇದಕ್ಕಾಗಿ ಯೋಗಾಭ್ಯಾಸದ ಚಾಪೆಯ ಮೇಲೆ ಮೊಣಕಾಲ ಮೇಲೆ ಭಾರ ಬರುವಂತೆ ಕುಳಿತುಕೊಳ್ಳಿ. ಕೈಗಳನ್ನು ನಿತಂಬಗಳ ಮೇಲಿರಿಸಿ. ಈಗ ನಿಧಾನವಾಗಿ ಉಸಿರೆಳೆದುಕೊಳ್ಳುತ್ತಾ ಹಿಂದಕ್ಕೆ ಬಾಗಿ ಹಸ್ತವನ್ನು ಕಾಲುಗಳ ಹಿಂದೆ ಅಂದರೆ ಪಾದಗಳ ಮೇಲೆ ಬರುವಷ್ಟು ಹಿಂದಕ್ಕೆ ಬಾಗಿ. ಕೈಗಳು ನೇರವಾಗಿರಬೇಕು. ಕುತ್ತಿಗೆಗೆ ನೋವಾಗದಷ್ಟು ಮಾತ್ರವೇ ಹಿಂದಕ್ಕೆ ಬಗ್ಗಿಸಿ. ಈ ಹಂತದಲ್ಲಿ ಪೂರ್ಣ ಉಸಿರು ಎಳೆದುಕೊಂಡಿರಬೇಕು. ಹೀಗೇ ಎರಡು ಬಾರಿ ಪೂರ್ಣ ಉಸಿರು ಎಳೆದುಕೊಂಡು ಪೂರ್ಣವಾಗಿ ಬಿಡುವವರೆಗೂ ಹಾಗೇ ಇರಿ. ಬಳಿಕ ನಿಧಾನವಾಗಿ ಉಸಿರು ಬಿಡುತ್ತಾ ಮೊದಲ ಹಂತಕ್ಕೆ ಬನ್ನಿ.

click me!