108 ಅಂಬ್ಯುಲೆನ್ಸ್ ಸಿಬ್ಬಂದಿಗಳು ತಮ್ಮ ಮುಷ್ಕರದಿಂದ ಹಿಂದೆ ಸರಿದಿದ್ದಾರೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಹಾಗೂ ಜಿವಿಕೆ ಇಎಂಆರ್ ಸಂಸ್ಥೆಯವರೊಂದಿಗೆ ಚರ್ಚೆ ನಡೆಸಲಾಗಿದೆ. ಸರ್ಕಾರದಿಂದ ಯಾವುದೇ ವೇತನವನ್ನ ಬಾಕಿ ಉಳಿಸಿಕೊಂಡಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಬೆಂಗಳೂರು (ಮೇ.7) : 108 ಅಂಬ್ಯುಲೆನ್ಸ್ ಸಿಬ್ಬಂದಿಗಳು ತಮ್ಮ ಮುಷ್ಕರದಿಂದ ಹಿಂದೆ ಸರಿದಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಹಾಗೂ ಜಿವಿಕೆ ಇಎಂಆರ್ ಸಂಸ್ಥೆಯವರೊಂದಿಗೆ ಚರ್ಚೆ ನಡೆಸಿದ್ದಾರೆ. ಸರ್ಕಾರದಿಂದ ಯಾವುದೇ ವೇತನವನ್ನ ಬಾಕಿ ಉಳಿಸಿಕೊಂಡಿಲ್ಲ ಎಂದರು.
ಸರ್ಕಾರದ ಬಳಿ ಹಣಕಾಸಿನ ಕೊರತೆಯಿಲ್ಲ. 108 ಅಂಬ್ಯುಲೆನ್ಸ್ ಸಿಬ್ಬಂದಿಗಳಿಗೆ ನೀಡಬೇಕಾದ ವೇತನವನ್ನ ನಿಯಮನುಸಾರ ಪಾವತಿಸಲಾಗಿದೆ. 108 ಅಂಬ್ಯುಲೆನ್ಸ್ ಸಿಬ್ಬಂದಿಗಳಿಗೆ ಯೋಜನೆಯನ್ನ ನಿರ್ವಹಿಸುತ್ತಿರುವ ಸಂಸ್ಥೆ ಜಿವಿಕೆ ಇಎಂಆರ್ ನವರು ವೇತನ ನೀಡಬೇಕು. ಸಂಸ್ಥೆಯವರೊಂದಿಗೆ ಒಡಂಬಡಿಕೆಯ ಪ್ರಕಾರ ಸರ್ಕಾರದಿಂದ ಕೊಡಬೇಕಾದ ಅನುದಾನವನ್ನ ಪಾವತಿಸಲಾಗಿದೆ. ಅನಗತ್ಯವಾಗಿ ವಿಪಕ್ಷಗಳು ಸರ್ಕಾರದ ಮೇಲೆ ಬೊಟ್ಟು ಮಾಡಿ ತೋರಿಸುವುದು ಸರಿಯಲ್ಲ. ಏಜನ್ಸಿಯವರಿಂದ ಸಿಬ್ಬಂದಿಗಳಿಗೆ ವೇತನ ಪಾವತಿಯಲ್ಲಿ ವ್ಯತ್ಯಾಸಗಳಾಗಿದ್ದರೆ ಅದನ್ನು ಸರಿಪಡಿಸುವಂತೆ ಸಂಸ್ಥೆಯವರಿಗೆ ತಿಳಿಸಲಾಗಿದೆ. 108 ಸಿಬ್ಬಂದಿಗಳ ಇನ್ನತರ ಕೆಲವು ಬೇಡಿಕೆಗಳಿವೆ. ಅದನ್ನು ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಚರ್ಚಿಸೋಣ ಎಂದು ಮನವರಿಕೆ ಮಾಡಿಕೊಡಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಕೋವಿಡ್ ಶೀಲ್ಡ್ ಲಸಿಕೆ ಅಡ್ಡಪರಿಣಾಮ; ಜನರು ಭಯ ಭೀತರಾಗಬಾರದು - ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಅಂಬ್ಯುಲೆನ್ಸ್ ಸಿಬ್ಬಂದಿಗಳ ಮುಷ್ಕರ ನಡೆಸುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಕೇಳಿಬಂದ ಹಿನ್ನೆಲೆಯಲ್ಲಿ ಸಮಸ್ಯೆ ಬಗ್ಗೆ ಪರಿಶೀಲಿಸುವಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದರು. ಸಚಿವರ ಸೂಚನೆ ಮೇರೆಗೆ ಆರೋಗ್ಯ ಇಲಾಖೆ ಆಯುಕ್ತರಾದ ರಂದೀಪ್ 108 ಸಿಬ್ಬಂದಿಗಳ ಜೊತೆ ಚರ್ಚೆ ನಡೆಸಿದ್ದು, ಆರೋಗ್ಯ ಇಲಾಖೆಯಿಂದ ಕೊಡಬೇಕಾಗಿರುವ ಯಾವುದೇ ವೇತನ ಬಾಕಿ ಉಳಿಸಿಕೊಂಡಿಲ್ಲ ಎಂಬುದನ್ನ ಮನವರಿಕೆ ಮಾಡಿಕೊಟ್ಟರು. ಸಿಬ್ಬಂದಿಗಳಿಗೆ ವೇತನ ಪಾವತಿ ಮಾಡಿಬೇಕಾರುವ ಜಿವಿಕೆ ಇಎಂಆರ್ ಸಂಸ್ಥೆಯಿಂದ ಸಮಸ್ಯೆಗಳಾಗಿದ್ದರೆ, ಅದನ್ನ ಸಂಸ್ಥೆಯವರೊಂದಿಗೆ ಚರ್ಚಿಸಿ ಸರಿಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರದಿಂದ ಅಗತ್ಯ ಸಹಕಾರ ದೊರೆಯಲಿದೆ ಎಂದು ಅಂಬ್ಯುಲೆನ್ಸ್ ಸಿಬ್ಬಂದಿಗಳಿಗೆ ಸ್ಪಷ್ಟಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ 108 ಸಿಬ್ಬಂದಿಗಳು ಮುಷ್ಕರದಿಂದ ಹಿಂದೆ ಸರಿದಿದ್ದಾರೆ.