ಅಯೋಧ್ಯೆ ಶ್ರೀರಾಮಮಂದಿರದ ಗರ್ಭಗುಡಿಯ ಕೆಲಸಗಳು ಭರದಿಂದ ಸಾಗುತ್ತಿವೆ. ಗರ್ಭಗುಡಿಯ ನಿರ್ಮಾಣದ ಕೆಲಸ ಸಾಗುತ್ತಿರುವ ಚಿತ್ರವನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಬಿಡುಗಡೆ ಮಾಡಿದ್ದಾರೆ.
ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯವು ವಾಸ್ತುಶಿಲ್ಪಿ ಮತ್ತು ನಿರ್ಮಾಣ ಶೈಲಿಯ ಅದ್ಭುತ ಸಂಯೋಜನೆಯಾಗಿದೆ, ರಾಮಮಂದಿರ ನಿರ್ಮಾಣದಲ್ಲಿ ವಿಜ್ಞಾನಿಗಳು ಸಹ ದೊಡ್ಡ ಪಾತ್ರವನ್ನು ವಹಿಸಿದ್ದಾರೆ.
ಇವರೆಲ್ಲರ ಸಮನ್ವಯದಿಂದ ಅಂತಹ ಅದ್ಭುತ ಕಾಮಗಾರಿಗಳ ದೃಶ್ಯವನ್ನು ಕಾಣಬಹುದಾಗಿದೆ. ಶ್ರೀರಾಮ ಜನ್ಮಭೂಮಿ ಸಂಕೀರ್ಣದ 70 ಎಕರೆ ಜಾಗದಲ್ಲಿ 20 ಎಕರೆಯಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
ಉಳಿದಂತೆ ರಾಮಜನ್ಮಭೂಮಿ ಸಂಕೀರ್ಣದ 50 ಎಕರೆ ಪ್ರದೇಶದಲ್ಲಿ ಉದ್ಯಾನವನವನ್ನು ನಿರ್ಮಾಣ ಮಾಡಲಾಗುತ್ತದೆ. ವಾಲ್ಮೀಕಿ ರಾಮಾಯಣದಲ್ಲಿ ಪ್ರಸ್ತಾಪ ಮಾಡಲಾಗಿರುವ ಗಿಡಗಳನ್ನು ಈ ಉದ್ಯಾನವನದಲ್ಲಿ ನೆಡಲಾಗುತ್ತದೆ. ರಾಮಜನ್ಮಭೂಮಿ ಉದ್ಘಾಟನೆ ಆಗುವ ವೇಳೆ ಎಷ್ಟು ಪ್ರಮಾಣದ ಗಿಡಗಳನ್ನು ಇಲ್ಲಿ ನೆಡಲು ಸಾಧ್ಯವಾಗುತ್ತದೆ ಎನ್ನುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ರಾಮಜನ್ಮಭೂಮಿ ಸಂಪೂರ್ಣವಾಗಿ ನಿರ್ಮಾಣವಾಗುವ ವೇಳೆ, ಇಡೀ ಪ್ರದೇಶ ಹಚ್ಚಹಸುರಿನಿಂದ ಕಂಗೊಳಿಸಬೇಕು. ಅದರ ನಡುವೆ ಶ್ರೀರಾಮನ ಭವ್ಯಮಂದಿರ ಕಾಣಬೇಕು ಎನ್ನುವ ಗುರಿಯಲ್ಲಿ ಟ್ರಸ್ಟ್ ಇದೆ.
ಮುಂದಿನ ರಾಮನವಮಿ ವೇಳೆಗೆ ಗರ್ಭಗುಡಿಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯಾಗಬೇಕು. ಸರಿಯಾಗಿ ರಾಮನವಮಿಯಂದು ಉದಯವಾಗುವ ಸೂರ್ಯ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಿರುವ ರಾಮಲಲ್ಲಾನ ಮುಖದ ಮೇಲೆ ಸೂರ್ಯನ ಬೆಳಕು ಬೀಳಬೇಕು ಆ ನಿಟ್ಟಿನಲ್ಲಿ ಖಗೋಳ ವಿಜ್ಞಾನಿಗಳನ್ನೂ ಬಳಸಿಕೊಂಡು, ಗರ್ಭಗುಡಿಯ ನಿರ್ಮಾಣ ಕಾರ್ಯ ನಡೆಯುತ್ತಿದೆ.
ರಾಮಮಂದಿರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಮಾತನಾಡಿ, 70 ಎಕರೆ ಜಮೀನಿನೊಳಗೆ ಶೇ.70ರಷ್ಟು ಅಂದರೆ 50 ಎಕರೆವರೆಗೆ ಹಸಿರಿನಿಂದ ಕಂಗೊಳಿಸಲಿದೆ ಎಂದಿದ್ದಾರೆ.
ಸಂಶೋಧನೆಯ ಸಮಯದಲ್ಲಿ, ಬಾಹ್ಯಾಕಾಶ ವಿಜ್ಞಾನಿಗಳು ಸೂರ್ಯನ ಮಾರ್ಗವು 19 ವರ್ಷಗಳವರೆಗೆ ಬದಲಾಗುವುದಿಲ್ಲ ಎಂದು ಹೇಳಿದ್ದಾರೆ. ಅಂದರೆ, ಸೂರ್ಯನ ಕಿರಣಗಳನ್ನು ತಿರುಗಿಸುವ ವಿಧಾನವನ್ನು ಬಳಸಲಾಗುವುದು, ಅದರಲ್ಲಿ ಬದಲಾವಣೆಯ ಅಗತ್ಯವು 19 ವರ್ಷಗಳ ನಂತರ ಮಾತ್ರ ಅಗತ್ಯವಾಗಿರುತ್ತದೆ. ಬಾಹ್ಯಾಕಾಶ ವಿಜ್ಞಾನಿಗಳು ಮತ್ತು ಎಲ್ಲಾ ತಾಂತ್ರಿಕ ತಜ್ಞರು ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ
ಈ ಕಾರಣಕ್ಕಾಗಿ ಗರ್ಭಗುಡಿಯ ನಿರ್ಮಾಣ ಕಾರ್ಯದಲ್ಲಿ ವಿನ್ಯಾಸಕಾರರೊಂದಿಗೆ, ಖಗೋಳ ವಿಜ್ಞಾನಿಗಳು ಕೂಡ ಇದಕ್ಕೆ ಸಹಾಯ ಮಾಡಿದ್ದಾರೆ. ಸೂರ್ಯನ ಬೆಳಕು ಗರ್ಭಗುಡಿಯ ಒಳಗೆ ಹೋಗಬೇಕು ಎನ್ನುವ ನಿಟ್ಟಿನಲ್ಲಿ ಕನ್ನಡಿಯನ್ನೂ ಅಳವಡಿಸಲಾಗುತ್ತಿದೆ. ಈ ಪ್ರಕ್ರಿಯೆಗೆ ಸೂರ್ಯ ತಿಲಕ ಎನ್ನುವ ಹೆಸರನ್ನೂ ಇಡಲಾಗಿದೆ.