
ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ಅತುಲ್ ಸುಭಾಷ್ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ನ್ಯಾಯಾಂಗದ ವ್ಯವಸ್ಥೆಯನ್ನು ಅಣಕಿಸುವ ರೀತಿಯಲ್ಲಿ, ಅವರು ತಮ್ಮ ನೋವನ್ನು ಸುದೀರ್ಘ ಪತ್ರದಲ್ಲಿ ತೆರೆದಿಟ್ಟು ಸಾವಿನ ಮೊರೆ ಹೋಗಿದ್ದಾರೆ. ನ್ಯಾಯ ಕೇಳಲು ಹೋದಾಗ ತಮ್ಮ ಪರವಾಗಿ ನ್ಯಾಯ ದೊರಕಿಸಿಕೊಡಲು ನ್ಯಾಯಾಧೀಶೆ ರೀಟಾ ಅವರು ಲಂಚ ಕೇಳಿದರು ಎನ್ನುವ ಗಂಭೀರ ಆರೋಪವನ್ನೂ ಅತುಲ್ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾರೆ. ಈ ಶಾಕಿಂಗ್ ವಿಚಾರದ ಬೆನ್ನಲ್ಲೇ ಇದೀಗ ನ್ಯಾಯಾಧೀಶರ ವಿರುದ್ಧ ಇನ್ನೊಂದು ಲಂಚದ ಕೇಸ್ ದಾಖಲಾಗಿದೆ!
ಮಹಾರಾಷ್ಟ್ರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು/ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧನಂಜಯ್ ನಿಕಮ್ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಬಂದಿದ್ದು, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪ್ರಕರಣ ದಾಖಲು ಮಾಡಿಕೊಂಡಿದೆ. ಜಾಮೀನು ನೀಡುವಂತೆ ಕೋರಿ ಮೂವರು ಸಲ್ಲಿಸಿದ್ದ ಅರ್ಜಿಯ ಪರವಾಗಿ ಆದೇಶ ನಿಡಲು 5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟ ಆರೋಪ ಇವರ ಮೇಲಿದೆ. ನ್ಯಾಯಾಧೀಶರ ಆದೇಶದ ಮೇರೆಗೆ ಇಬ್ಬರು ವ್ಯಕ್ತಿಗಳಾದ ಕಿಶೋರ್ ಖಾರತ್ ಮತ್ತು ಆನಂದ್ ಖಾರತ್ ಲಂಚದ ಮೊತ್ತವನ್ನು ಕೇಳಿದ್ದಾರೆ ಎಂದು ಎಸಿಬಿ ಮಾಹಿತಿ ನೀಡಿದೆ.
ನ್ಯಾಯ ಕೇಳಿದ್ರೆ ನ್ಯಾಯಾಧೀಶೆ ನಕ್ಕರು, ಲಂಚದ ಬೇಡಿಕೆ ಇಟ್ಟರು: ಸಾವಿಗೂ ಮುನ್ನದ ಪತ್ರದಲ್ಲಿ ಟೆಕ್ಕಿ ಹೇಳಿದ್ದೇನು?
ಇದರ ಘಟನೆ ಏನೆಂದರೆ, ಮಹಿಳೆಯೊಬ್ಬರು ನೀಡಿರುವ ದೂರು ಇದಾಗಿದೆ. ಇವರ ತಂದೆಯನ್ನು ವಂಚನೆ ಪ್ರಕರಣದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಬಂಧಿಸಲಾಗಿತ್ತು. ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ ಮತ್ತು ಅವರ ಜಾಮೀನು ಅರ್ಜಿ ನ್ಯಾಯಾಧೀಶ ಧನಂಜಯ್ ನಿಕಮ್ ಅವರ ಮುಂದೆ ವಿಚಾರಣೆಗೆ ಬಂದಿತ್ತು. ನ್ಯಾಯಾಧೀಶರ ನಿರ್ದೇಶನದ ಮೇರೆಗೆ, ಆನಂದ್ ಮತ್ತು ಕಿಶೋರ್ ಖಾರತ್ ತಮ್ಮ ತಂದೆಗೆ ಜಾಮೀನು ನೀಡಲು ನ್ಯಾಯಾಧೀಶರು 5 ಲಕ್ಷ ರೂಪಾಯಿ ಬೇಡಿಕೆ ಇಟ್ಟಿರುವುದಾಗಿ ಹೇಳಿದ್ದಾರೆ ಎಂದು ಮಹಿಳೆ ಎಸಿಬಿಗೆ ದೂರು ನೀಡಿದ್ದರು.
ದೂರು ಪರಿಶೀಲನೆಯ ಸಮಯದಲ್ಲಿ, ನ್ಯಾಯಾಧೀಶ ನಿಕಮ್, ಖರತ್‌ಗಳು ಮತ್ತು ಅಪರಿಚಿತ ವ್ಯಕ್ತಿಯ ಮೂಲಕ ದೂರುದಾರರಿಂದ 5 ಲಕ್ಷ ರೂ.ಗಳನ್ನು ಕೇಳಿದ್ದಾರೆ ಮತ್ತು ಇಬ್ಬರು ಆರೋಪಿಗಳ ಮೂಲಕ ಅದನ್ನು ಸ್ವೀಕರಿಸಲು ಪ್ರಯತ್ನಿಸಿದ್ದಾರೆ ಎಂಬ ಆರೋಪ ನಿಜ ಎನ್ನುವುದು ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ, ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಎರಡು ಘಟನೆಗಳು ಸದ್ಯ ಇಡೀ ನ್ಯಾಯಾಂಗ ವ್ಯವಸ್ಥೆಯನ್ನು ಪ್ರಶ್ನಿಸುವಂತಾಗಿದೆ. ಎಲ್ಲಿಯೂನ್ಯಾಯ ಸಿಗದಿದ್ದಾಗ ನ್ಯಾಯಾಲಯವೇ ಕೊನೆಯ ಬಾಗಿಲು ಎಂದು ಹೇಳುವ ಜನರಿಗೆ ಇಂಥ ಘಟನೆಗಳಿಂದ ಆಘಾತವಾಗುತ್ತಿರುವುದಂತೂ ದಿಟ.
ಮನೆಯವರನ್ನು ವಿರೋಧಿಸಿ ಮದ್ವೆಯಾದ್ವಿ: ಆದ್ರೆ ಕೊನೆಗೆ ಸಾಯುವ ಹಂತಕ್ಕೆ ಬಂದೆ... ಕಿರಿಕಿ ಕೀರ್ತಿ ಓಪನ್ ಮಾತು...
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ