ಇತ್ತೀಚೆಗೆ ಜನ ಆರೋಗ್ಯಕ್ಕೆ ಹೆಚ್ಚು ಮಹತ್ವ ಕೊಡ್ತಿದ್ದಾರೆ. ಹೀಗಾಗಿ ವ್ಯಾಯಾಮದಲ್ಲಿ ಆಸಕ್ತಿ ತೋರಿಸುವವರ ಸಂಖ್ಯೆ ಹೆಚ್ಚಾಗಿದೆ. ಇದರ ನಡುವೆ ವ್ಯಾಯಾಮ ಮಾಡುತ್ತಲೇ ಸಾವು ಕಂಡಂತಹ ಅನೇಕ ಘಟನೆಗಳು ನಡೆದಿವೆ. ಇದು ಜಿಮ್‌ಗೆ ಹೋಗಿ ವರ್ಕೌಟ್ ಮಾಡುವವರಲ್ಲಿ ಹೊಸ ಆತಂಕ ಸೃಷ್ಟಿಯಾಗಿದೆ. ಹೀಗಾಗಿ ಸುದೀರ್ಘ ಸಮಯದವರೆಗೆ ವ್ಯಾಯಾಮ ಮಾಡೋದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಾ ಎಂಬ ಪ್ರಶ್ನೆ ಮೂಡಿದೆ.
ವ್ಯಾಯಾಮದಿಂದ ಸಾಯುವವರ ಸಂಖ್ಯೆ ಪುರುಷರಲ್ಲಿ ಹೆಚ್ಚಿದೆ. ಇತ್ತೀಚೆಗೆ ಸೇಲಂ ಜಿಲ್ಲೆಯ ಮಹದೀರ್ ಮೊಹಮ್ಮದ್ ಜಿಮ್‌ನಲ್ಲಿ ವ್ಯಾಯಾಮ ಮಾಡ್ತಿದ್ರು. ಜಿಮ್‌ನಲ್ಲಿ ಬೇರೆಯವರು ವ್ಯಾಯಾಮ ಮುಗಿಸಿ ಹೋದ ಮೇಲೂ ಮೊಹಮ್ಮದ್ ವ್ಯಾಯಾಮ ಮುಂದುವರಿಸಿದ್ರು. ಆದರೆ ನಂತರ ಸ್ನಾನಕ್ಕೆ ಹೋದವರು ವಾಪಸ್ ಬರಲಿಲ್ಲ. ಬಹಳ ಹೊತ್ತು ಆದ್ರೂ ಮೊಹಮ್ಮದ್ ಬಾರದ ಕಾರಣ ಅವರ ಚಾಲಕ ಒಳಗೆ ಹೋಗಿ ನೋಡಿದಾಗ ಅವರು ಕುಸಿದು ಬಿದ್ದಿದ್ದರು. ಅವರನ್ನು ಮೇಲೆತ್ತಿ ತಕ್ಷಣ ಆಸ್ಪತ್ರೆಗೆ ಕರ್ಕೊಂಡು ಹೋದ್ರೆ ಅಲ್ಲಿ ವೈದ್ಯರು ಅವರು ಈಗಾಗಲೇ ಸತ್ತಿದ್ದಾರೆ ಅಂತ ಘೋಷಿಸಿದ್ದರು.
ಈ ಸಾವು ಹೆಚ್ಚು ವ್ಯಾಯಾಮದಿಂದ ಆಯ್ತು ಅಂತ ಒಂದು ಕಡೆ ಹೇಳ್ತಿದ್ರೆ, ಇನ್ನೊಂದು ಕಡೆ ವ್ಯಾಯಾಮ ಸಾವಿಗೆ ಕಾರಣ ಆಗಲ್ಲ ಅಂತ ಬಾಡಿ ಬಿಲ್ಡರ್ಸ್ ಹೇಳ್ತಿದ್ದಾರೆ. ನಿಜ ಏನು ಅಂತ ನೋಡೋಣ. ಮನೆಯಲ್ಲಿ ವ್ಯಾಯಾಮ ಮಾಡಿದ್ರೂ, ಜಿಮ್‌ನಲ್ಲಿ ವ್ಯಾಯಾಮ ಮಾಡಿದ್ರೂ ಮೊದಲು ಗಮನಿಸಬೇಕಾದ ವಿಷಯ ನಿಮ್ಮ ಆರೋಗ್ಯ. ನಿಮ್ಮ ದೇಹಕ್ಕೆ ತಕ್ಕಂತೆ ವ್ಯಾಯಾಮ ಮಾಡೋದು ಬಹಳ ಮುಖ್ಯ. ಈಗಾಗಲೇ ನಿಮಗೆ ರಕ್ತದೊತ್ತಡ, ಹೃದಯ ಸಮಸ್ಯೆ ಇದ್ದರೆ ಅದಕ್ಕೆ ತಕ್ಕಂತೆ ವ್ಯಾಯಾಮ ಮಾಡಬೇಕು.
ಜಿಮ್ ಶುರು ಮಾಡಿದ ತಕ್ಷಣ ಸರಿಯಾದ ಮಾರ್ಗದರ್ಶನ ಇಲ್ಲದೆ ವ್ಯಾಯಾಮ ಮಾಡೋದು ತಪ್ಪು. ದೇಹದ ಸ್ಥಿತಿಗೆ ತಕ್ಕಂತೆ ವ್ಯಾಯಾಮ ಮಾಡಬೇಕು. ಕಠಿಣ ವ್ಯಾಯಾಮಗಳನ್ನು ಒಮ್ಮೆಗೆ ಶುರು ಮಾಡಬಾರದು. ಜಿಮ್‌ಗೆ ನಿಗದಿತ ಸಮಯವನ್ನು ಮೀಸಲಿಟ್ಟು ನಿರಂತರವಾಗಿ ಜಿಮ್‌ಗೆ ಹೋಗಬೇಕು. ಮನಸ್ಸಿಗೆ ಬಂದಾಗ ಮಾತ್ರ ಜಿಮ್‌ಗೆ ಹೋಗುವುದು ತಪ್ಪು ಹೋದ ದಿನ ನಿರಂತರ ವ್ಯಾಯಾಮ ಮಾಡುವುದು ಮತ್ತೆ ಮೂರು ದಿನ ಮಾಡದೇ ಇರುವುದು ಇಂತಹ ಎಲ್ಲಾ ತಪ್ಪುಗಳು ಹೃದಯ ಸಮಸ್ಯೆಗಳನ್ನು ಹೆಚ್ಚಿಸಿ ಹೃದಯಾಘಾತಕ್ಕೆ ಕಾರಣವಾಗುತ್ತವೆ. ಮುಖ್ಯವಾಗಿ ವ್ಯಾಯಾಮ ಮಾಡುವವರು ಚೆನ್ನಾಗಿ ನಿದ್ರೆ ಮಾಡಬೇಕು. ಸರಿಯಾದ ನಿದ್ರೆ ಇಲ್ಲದವರು ಕಠಿಣ ವ್ಯಾಯಾಮ ಮಾಡೋದು ಹೃದಯಾಘಾತಕ್ಕೆ ಕಾರಣವಾಗುತ್ತೆ ಅಂತ ಸಂಶೋಧಕರು ಹೇಳ್ತಾರೆ.
ವ್ಯಾಯಾಮ ಮಾಡುವಾಗ ನಿಮ್ಮ ಉಸಿರಾಟ, ಹೃದಯ ಬಡಿತ ಎಲ್ಲವೂ ಬದಲಾಗುತ್ತೆ. ಇದರಿಂದ ರಕ್ತದೊತ್ತಡ ಹೆಚ್ಚಾಗೋದು ಸಾಮಾನ್ಯ. ಈ ಸ್ಥಿತಿ ವ್ಯಾಯಾಮ ಮುಗಿದ ನಂತರ ಕೂಲ್ ಡೌನ್ ಆಗುತ್ತೆ. ಆದರೆ ವ್ಯಾಯಾಮದ ವೇಳೆ ಏರಿದ ರಕ್ತದೊತ್ತಡ ಪ್ರಮಾಣ ಕಡಿಮೆಯಾಗದಿದ್ದರೆ ದೇಹದಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಹೀಗಾದಾಗ ವೈದ್ಯಕೀಯ ಸಹಾಯ ಪಡೆಯಬೇಕು. ನಿಮ್ಮ ದೇಹಕ್ಕೆ ಮಿತಿ ಮೀರಿ ವ್ಯಾಯಾಮ ಮಾಡೋದೂ ಅಪಾಯ. ಸ್ಟೀರಾಯ್ಡ್ ತೆಗೆದುಕೊಳ್ಳುವವರು ವೈದ್ಯಕೀಯ ಮಾರ್ಗದರ್ಶನ ಪಡೆಯಬೇಕು. ಆಗಾಗ ರಕ್ತದೊತ್ತಡ, ಮಧುಮೇಹ ಪರೀಕ್ಷೆ ಮಾಡಿಸಿಕೊಳ್ಳಬೇಕು. ವ್ಯಾಯಾಮ ದೇಹವನ್ನು ಬಲಪಡಿಸುತ್ತೆಯೇ ಹೊರತು ದೇಹವನ್ನು ಕೆಟ್ಟ ಸ್ಥಿತಿಗೆ ತಳ್ಳಲ್ಲ. ಆದರೆ ಸರಿಯಾದ ಕ್ರಮ ಮಾರ್ಗದರ್ಶನ ಬಹಳ ಅಗತ್ಯ.
ಒಂದು ದಿನದಲ್ಲಿ ಎಷ್ಟು ಹೊತ್ತು ವ್ಯಾಯಾಮ ಮಾಡಬಹುದು?
ನೀವು ಮಾಡುವ ವ್ಯಾಯಾಮವನ್ನು ಅವಲಂಬಿಸಿ ಸಮಯ ಬದಲಾಗುತ್ತೆ. ನೀವು ಪ್ರತಿದಿನ ವಾಕಿಂಗ್ ಮಾಡಿದ್ರೆ 40 ನಿಮಿಷ ನಡೆಯಬಹುದು. ಓಟದ ವ್ಯಾಯಾಮ ಮಾಡಿದ್ರೆ 30 ನಿಮಿಷ ಓಡೋದು ಒಳ್ಳೆಯದು. ಪ್ರತಿದಿನ ಓಡದೆ ವಾರದಲ್ಲಿ ಮೂರು ದಿನ ಓಟದ ವ್ಯಾಯಾಮ ಮಾಡಬಹುದು. ಒಂದು ದಿನ ಬಿಟ್ಟು ಒಂದು ದಿನ ಓಟದ ವ್ಯಾಯಾಮ, ಮತ್ತು ಕಾಲುಗಳಿಗೆ ಬಲ ನೀಡುವ ವ್ಯಾಯಾಮ (Strength training), ಇತರ ಕಾರ್ಡಿಯೋ ವ್ಯಾಯಾಮಗಳನ್ನು ಮಾಡೋದು ದೇಹಕ್ಕೆ ಒಳ್ಳೆಯದು.
ಜಿಮ್‌ನಲ್ಲಿ ಅಥವಾ ಮನೆಯಲ್ಲಿ ಮಧ್ಯಮ ವ್ಯಾಯಾಮ ಮಾಡಿದ್ರೆ 40 ನಿಮಿಷ ಮಾಡಬಹುದು. ದೇಹದಲ್ಲಿ ಗಟ್ಟಿಮುಟ್ಟಾಗಿರುವವರು, ಬಹಳ ಕಾಲ ವ್ಯಾಯಾಮ ಮಾಡುವವರು 1 ಗಂಟೆ ವ್ಯಾಯಾಮ ಮಾಡಬಹುದು. ಸ್ವಂತವಾಗಿ ಮಾಡುವುದಕ್ಕಿಂತ ಮಾರ್ಗದರ್ಶನದೊಂದಿಗೆ ಮಾಡೋದು ಬಹಳ ಒಳ್ಳೆಯದು. ಮುಖ್ಯವಾಗಿ ಕಠಿಣ ವ್ಯಾಯಾಮ ಮಾಡಿದ ನಂತರ ತಕ್ಷಣ ಬಿಸಿ ನೀರಿನಲ್ಲಿ ಸ್ನಾನ ಮಾಡಬೇಡಿ. ಸರಿಯಾದ ಆಹಾರ ಪದ್ಧತಿ, ಉತ್ತಮ ನಿದ್ರೆ ಇದ್ದರೆ ಮಾತ್ರ ವ್ಯಾಯಾಮ ಉತ್ತಮ ಫಲಿತಾಂಶ ನೀಡುತ್ತೆ. ಮನಸ್ಸನ್ನು ಹಗುರವಾಗಿ ಇಟ್ಟುಕೊಳ್ಳಿ.